ಮೂವರು ಕೊಲೆ ಆರೋಪಿಗಳಿಗೆ ನ್ಯಾಯಾಂಗ ಬಂಧನ
ದೊಡ್ಡಬಳ್ಳಾಪುರ: ಕಳೆದ ತಿಂಗಳು ತಾಲೂಕಿನ ಮೆಳೇಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಾಸುದೇವನಹಳ್ಳಿ ಬಳಿ ಸಂಭವಿಸಿದ್ದ ಭೀಕರ ಕೊಲೆ ಪ್ರಕರಣ ಭೇದಿಸುವಲ್ಲಿ ದೊಡ್ಡಬಳ್ಳಾಪುರ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ 3 ಮಂದಿ ಆರೋಪಿಗಳನ್ನು ಬಂಧಿಸಿರುವ ಗ್ರಾಮಾಂತರ ಠಾಣೆ ಪೊಲೀಸರು ಆರೋಪಿಗಳನ್ನು ತೀವ್ರ ವಿಚಾರಣೆಗೊಳಪಡಿಸಿದ್ದಾರೆ. ಬಲ್ಲ ಮೂಲಗಳ ಪ್ರಕಾರ ಇನ್ನೂ ಮೂವರು ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ.
ಬಂಧಿತರನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಅರಕೆರೆ ಗ್ರಾಮದ ಅಶ್ವತ್ಥಪ್ಪ, ಚಿಂತಾಮಣಿಯ ಚಾಲಕ ಚಂದ್ರ ಮತ್ತು ಕೊಲೆಯಾದ ಹನುಮಂತಪ್ಪನ ಅಣ್ಣನ ಮಗ ಪ್ರವೀಣ ಎಂದು ಗುರುತಿಸಲಾಗಿದೆ. ಕೊಲೆಗೆ ಬಳಕೆ ಮಾಡಿಕೊಂಡಿದ್ದ 4 ಮಚ್ಚುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಪ್ರಕರಣಕ್ಕೆ ಬಳಕೆ ಮಾಡಿಕೊಂಡಿದ್ದ ಕಾರು ಇನ್ನೂ ಪತ್ತೆಯಾಗಿಲ್ಲ. ಆರೋಪಿಗಳು ಮಾರಕಾಸ್ತ್ರಗಳಿಂದ ಕತ್ತು ಕತ್ತರಿಸಿ ಬರ್ಬರವಾಗಿ ಕೊಲೆ ಮಾಡಿದ್ದರು. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಮೃತನ ಅಣ್ಣನ ಮಗನೇ ಕೊಲೆ ಆರೋಪಿಯಾಗಿದ್ದಾನೆ. ಪಿತ್ರಾರ್ಜಿತ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ನಡೆಯುತ್ತಿದ್ದ ಶೀಥಲ ಸಮರ, ವಾಗ್ವಾದ, ಗೊಂದಲಗಳು ಘಟನೆಗೆ ಕಾರಣ ಎನ್ನಲಾಗಿದೆ.