ಅರ್ಜಿ ಹಾಕಿ 5 ತಿಂಗಳಾದರೂ ಸಿಗದ ರೇಷನ್ ಕಾರ್ಡ್
ಕ.ಪ್ರ.ವಾರ್ತೆ ಸೂಲಿಬೆಲೆ ಡಿ.12
ಹೊಸದಾಗಿ ರೇಷನ್ ಕಾರ್ಡ್ ಬೇಕೆಂದು ಅರ್ಜಿ ಹಾಕಿ ಐದು ತಿಂಗಳು ಕಳೆದರೂ ಇನ್ನೂ ರೇಷನ್ ಕಾರ್ಡ್ ಸಿಗದೇ ಅನ್ನಭಾಗ್ಯದಿಂದ ವಂಚಿತರಾಗಿದ್ದೇವೆ ಎಂದು ಆರೋಪಿಸಿ ಸೂಲಿಬೆಲೆ ಹೋಬಳಿಯ ಭುವನಹಳ್ಳಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.
ಹೊಸಕೋಟೆ ತಾ.26 ಗ್ರಾಪಂಗಳಲ್ಲಿ ಹೊಸದಾಗಿ ರೇಷನ್ ಕಾರ್ಡ್ಗೆ ಅರ್ಜಿಯನ್ನು ಆನ್ಲೈನ್ನಲ್ಲಿ ಸಲ್ಲಿಸಲಾಗಿತ್ತು. ದಾಖಲೆಗಳ ಪರಿಶೀಲನೆಯನ್ನು ಹೊಸಕೋಟೆ ತಾ.ಕೇಂದ್ರದಲ್ಲಿ ಮಾಡುವಾಗ ಫಲಾನುಭವಿಗಳ ಸಂಖ್ಯೆ ಹೆಚ್ಚಾಗಿ ಲಾಠಿ ಚಾರ್ಜಿಗೆ ಕಾರಣವಾಗಿ ರೇಷನ್ ಕಾರ್ಡ್ ನೀಡುವುದನ್ನು ಸ್ಥಗಿತಮಾಡಿದರು. ಸರ್ಕಾರದವರು ಅರ್ಜಿ ಹಾಕಿದ ಫಲಾನುಭವಿಗಳ ಮನೆಗೆ ಕಂದಾಯ ಹಾಗೂ ಗ್ರಾಪಂ ಅಧಿಕಾರಿಗಳು ಬಂದು ಪರಿಶೀಲನೆ ಮಾಡಿ ಹೊಸ ರೇಷನ್ ಕಾರ್ಡ್ ಅನ್ನು ಒಂದರೆಡು ತಿಂಗಳಲ್ಲಿ ನೀಡುತ್ತಾರೆ ಎಂದುಹೇಳಿ ತಿಂಗಳುಗಳ ಕಳೆದರೂ ಮನೆ ಹತ್ತಿರ ಯಾವೊಬ್ಬ ಅಧಿಕಾರಿ ಬಂದು ಪರಿಶೀಲನೆ ಮಾಡಿಲ್ಲ. ಪರಿಣಾಮ ಅಧಿಕಾರಿಗಳು ಬರುತ್ತಾರೋ, ಎಂದು ನಮ್ಮಗೆ ರೇಷನ್ ಕಾರ್ಡು ಸಿಗುತ್ತೋ ಎಂದು ಕಾಯುವಂತಾಗಿದೆ ಎಂದು ಪ್ರತಿಭಟನಕಾರರು ಆರೋಪಿಸಿದ್ದಾರೆ.
ಅನ್ನಭಾಗ್ಯವಿಲ್ಲ: ಅರ್ಜಿ ಹಾಕಿದ ನಂತರ ನೀಡುವ ಸ್ವೀಕೃತಿ ಪತ್ರಗಳನ್ನು ಹಿಡಿದು ಪ್ರತಿಭಟನೆಗೆ ಇಳಿದ ಫಲಾನುಭವಿಗಳು ಕಳೆದ 5 ತಿಂಗಳಿದ ಕಾರ್ಡ್ ನೀಡದ ಕಾರಣ ನಮ್ಮಗೆ ಅನ್ನಭಾಗ್ಯ ಇಲ್ಲದಂತಾಗಿದೆ. ಕೂಲಿ ಮಾಡಿ ಜೀವನ ಸಾಗಿಸುವ ಕುಟುಂಬಗಳಿಗೆ ಅನ್ನಭಾಗ್ಯವಿಲ್ಲದಂತಾಗಿದೆ. ಗ್ರಾಮದಲ್ಲಿರುವ 120 ಕುಟುಂಬಗಳಿಗೆ ಸುಮಾರು 50 ಕುಟುಂಬದ ಕಾರ್ಡ್ಗಳನ್ನು ರದ್ದು ಮಾಡಿದ್ದಾರೆ. ಅರ್ಜಿ ಹಾಕಿ 5 ತಿಂಗಳಾದರೂ ಕಾರ್ಡ್ ನೀಡಿಲ್ಲ, ಭಾಗ್ಯ ಲಕ್ಷ್ಮೀ ಯೋಜನೆಗೂ ಸಹ ಪಡಿತರ ಕಾರ್ಡ್ ಇಲ್ಲದಂತಾಗಿದೆ. ಈ ಬಗ್ಗೆ ಅಧಿಕಾರಿಗಳನ್ನು ಕೇಳಿದರೆ, ನಿಮ್ಮೂರಿನ ಕಂದಾಯ, ಗ್ರಾಪಂ ಅಧಿಕಾರಿಗಳು ಹತ್ತಿರ ಹೋಗಿ ಅಂತಾರೆ. ಅಲ್ಲಿ ಹೋಗಿ ವಿಚಾರಣಿ ಮಾಡಿದರೆ ಯಾವ ಅರ್ಜಿ ಇಲ್ಲಿ ಬಂದಿಲ್ಲ ಅಂತಾರೆ. ಕಾರ್ಡ್ ಇಲ್ಲ, ಅನ್ನಭಾಗ್ಯವೂ ಇಲ್ಲದಂತಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.