ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಒಕ್ಕಲಿಗರ ಸಂಘಕ್ಕೆ ಎನ್.ಹನುಮಂತೇಗೌಡ ನಾಮಪತ್ರ

Srinivasa Murthy VN
Updated On : 13 Dec 2013, 12:08 pm

ದೊಡ್ಡಬಳ್ಳಾಪುರ: ರಾಜ್ಯ ಒಕ್ಕಲಿಗರ ಸಂಘದ ಚುನಾವಣೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಮತ್ತು ಬಮೂಲ್ ನಿರ್ದೇಶಕ ಎನ್.ಹನುಮಂತೇಗೌಡ ಬುಧವಾರ ನಾಮಪತ್ರ ಸಲ್ಲಿಸಿದರು. ಬೆಂಗಳೂರಿನ ಒಕ್ಕಲಿಗರ ಸಂಘದ ಚುನಾವಣಾ ಕಚೇರಿಯಲ್ಲಿ ಅವರು ಅಪ್ಪಾಜಿಗೌಡರ ಸಿಂಡಿಕೇಟ್ನ ಬಹುತೇಕ ಸದಸ್ಯರೊಂದಿಗೆ ಸಿಂಡಿಕೇಟ್ನ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಈ ವೇಳೆ ಮಾತನಾಡಿದ ಅವರು ರಾಜ್ಯ ಒಕ್ಕಲಿಗರ ಸಂಘದಲ್ಲಿ ಬದಲಾವಣೆಯ ಹೊಸಪರ್ವ ಆರಂಭವಾಗಬೇಕಿದೆ. ಪ್ರಜ್ಞಾವಂತರು ಮತ್ತು ಸಾಮಾಜಿಕ ಕಳಕಳಿಯುಳ್ಳ ಜನ ಸಂಘವನ್ನು ಬಲಿಷ್ಠವಾಗಿ ಕಟ್ಟಬೇಕಿದೆ. ರಾಜ್ಯದ ಪ್ರಮುಖ ಜನಾಂಗಗಳಲ್ಲಿ ಒಂದಾಗಿದ್ದರೂ ಕೂಡ ಸಂಘಟಿತ ಹೋರಾಟಗಳಲ್ಲಿ ಒಕ್ಕಲಿಗರು ಇನ್ನೂ ಒಂದಾಗಿಲ್ಲ. ಎಲ್ಲ ಒಕ್ಕಲಿಗ ಉಪಜಾತಿಗಳೂ ಒಂದಾಗಿ ನಿಂತಾಗ ಮಾತ್ರ ಸಾಮಾಜಿಕ ಮುನ್ನಡೆ ಸಾಧ್ಯ. ಈ ನಿಟ್ಟಿನಲ್ಲಿ ಜನ ನಮ್ಮ ಸಿಂಡಿಕೇಟ್ ಬೆಂಬಲಿಸಲಿದ್ದಾರೆ ಎಂದು ಪ್ರತಿಕ್ರಿಸಿದರು. ದೊಡ್ಡಬಳ್ಳಾಪುರ, ಬೆಂಗಳೂರು ಗ್ರಾಮಾಂತರದ ಹಲವು ತಾಲೂಕುಗಳು, ಬೆಂಗಳೂರು ನಗರದ ಅನೇಕ ಬೆಂಬಲಿಗರು ಉಪಸ್ಥಿತರಿದ್ದರು.

ಅಂಬೇಡ್ಕರ್ ಕೇವಲ ಒಂದು ವರ್ಗಕ್ಕೆ ಸೀಮಿತರಲ್ಲ
ಚನ್ನಪಟ್ಟಣ:
ಅಂಬೇಡ್ಕರ್ ಕೇವಲ ಒಂದು ವರ್ಗಕ್ಕೆ ಮೀಸಲಾಗದೆ ಸಮಾಜದ ಎಲ್ಲಾ ನೊಂದ ವರ್ಗದವರಿಗೂ ನ್ಯಾಯ ದೊರಕಿಸಿ ಕೊಡಬೇಕೆಂದು ಹೋರಾಡಿದ ಮಹಾನ್ ಮಾನವತಾ ವಾದಿ ಎಂದು ವಿಚಾರವಾದಿ ಜಯಸೇನ ಅಭಿಪ್ರಾಯಪಟ್ಟರು. ತಾಲೂಕಿನ ಅಪ್ಪಗೆರೆ ಗ್ರಾಮದಲ್ಲಿ ಬಹುಜನ ವಿದ್ಯಾರ್ಥಿ ಸಂಘ ಹಮ್ಮಿ ಕೊಂಡಿದ್ದ ಅಂಬೇಡ್ಕರ್ ಮಹಾ ಪರಿನಿಬ್ಬಾಣ ದಿನದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಮಾನವೀಯ ನೆಲೆಗಟ್ಟಿನ ಸಮಾಜ ನಿರ್ಮಾಣ ಮಾಡಬೇಕೆಂದು ತಮ್ಮ ಜೀವನವನ್ನೇ ಪಣವಾಗಿಟ್ಟು ಹೋರಾಡಿದ ಅಂಬೇಡ್ಕರ್ ಈ ದೇಶ ಕಂಡ ಸರ್ವಶ್ರೇಷ್ಠನಾಯಕ ಎಂದು ಬಣ್ಣಿಸಿದರು. ಕಾರ್ಯಕ್ರಮದಲ್ಲಿ ಅಪ್ಪಗೆರೆ ಗ್ರಾ.ಪಂ ಸದಸ್ಯೆ ಡಿ.ಕುಮಾರಿ,ಗ್ರಾಮದ ಮುಖಂಡರಾದ ಮುನಿಯಪ್ಪ, ವೆಂಕಟೇಶ್, ವೆಂಕಟಾಚಲ, ಗ್ರಾ.ಪಂ ಮಾಜಿ ಸದಸ್ಯವೆಂಕಟರಾಮು, ಬಹುಜನ ವಿದ್ಯಾರ್ಥಿ ಸಂಘದ ಜಿಲ್ಲಾ ಉಪಾಧ್ಯಕ್ಷ ಮಂಜುನಾಥ.ಡಿ, ಪ್ರದೀಪ್ ಕುಮಾರ್, ನಾರಾಯಣ ಕುಮಾರ್, ನವೀನ್ ಕುಮಾರ್ ಮುಂತಾದವರು ಉಪಸ್ಥಿತರಿದ್ದರು.

ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ
ದೊಡ್ಡಬಳ್ಳಾಪುರ:
ಇಲ್ಲಿನ ಕನ್ನಡ ಜಾಗೃತ ಪರಿಷತ್ತಿನ ವತಿಯಿಂದ ಡಿ.29ರಂದು ನಡೆಯಲಿರುವ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕ್ಕೆ ತಾಲೂಕಿನಲ್ಲಿ 2010 ರಿಂದ 2013ನೇ ಸಾಲಿನಲ್ಲಿ ಐಎಎಸ್, ಕೆಎಎಸ್, ಐಪಿಎಸ್ ಹಾಗೂ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತೇರ್ಗಡೆಯಾಗಿರುವವರು ಮತ್ತು ಪ್ರಸಕ್ತ ಸಾಲಿನಲ್ಲಿ ಪಿಎಚ್ಡಿ ಪದವಿಯನ್ನು ಪಡೆದಿರುವವರಿಂದ ಅರ್ಜಿ ಆಹ್ವಾನಿಸಿದೆ. ಅರ್ಹ ವಿದ್ಯಾರ್ಥಿಗಳು ತಮ್ಮ ಹೆಸರು-ವಿವರಗಳ ಮಾಹಿತಿ ಒಳಗೊಂಡ ಪರಿಚಯ, ಸ್ವವಿವರವನ್ನು ಡಿ.18ರ ಒಳಗೆ ಕನ್ನಡ ಜಾಗೃತ ಪರಿಷತ್ತಿನ ಕಚೇರಿಗೆ ತಲುಪಿಸಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗೆ ಕನ್ನಡ ಜಾಗೃತ ಪರಿಷತ್ತು, ಡಾ.ಅಂಬೇಡ್ಕರ್ ರಸ್ತೆ, ಹೊಸ ಬಸ್ ನಿಲ್ದಾಣ ಪಕ್ಕ, ದೊಡ್ಡಬಳ್ಳಾಪುರ-561203 ಇಲ್ಲಿಗೆ ಸಂಪರ್ಕಿಸಬಹುದು.

7 ದಿನಗಳ ಕಾಲ ಎನ್ಎಸ್ಎಸ್ ಶಿಬಿರ
ಕನಕಪುರ:
ಕನಕಪುರ ತಾಲೂಕು ಕೋಡಿಹಳ್ಳಿಯ ಶ್ರೀಮತಿ ಗೌರಮ್ಮ ಕೆಂಪೇಗೌಡ ಸರ್ಕಾರಿ ಪದವಿ (ಡಿಗ್ರಿ) ಕಾಲೇಜು ವತಿಯಿಂದ ಬೆಂಗಳೂರು ವಿವಿ ರಾಷ್ಟ್ರೀಯ ಸೇವಾಯೋಜನೆಯ ವಿಶೇಷ ವಾರ್ಷಿಕ ಶಿಬಿರ ಡಿ.13 ರಿಂದ ಡಿ.19ರ ವರೆಗೆ ಏಳು ದಿನಗಳ ಕಾಲ ಕಾಲೇಜಿನ ನೂತನ ಕಟ್ಟಡದ ಆವರಣದಲ್ಲಿ ಆಯೋಜಿಸಲಾಗಿದೆ. ಶಿಬಿರದಲ್ಲಿ 50 ಕ್ಕೂ ಹೆಚ್ಚು ವಿದ್ಯಾರ್ಥಿ ವಿದ್ಯಾರ್ಥಿನಿಯರು ಶ್ರಮದಾನದ ಮೂಲಕ ಸಸಿನೆಡುವ ಕಾರ್ಯಕ್ರಮ, ಮಿನಿ ಉದ್ಯಾನವನ ನಿರ್ಮಾಣ, ಜೈವಿಕ ಗೊಬ್ಬರಗುಂಡಿ ನಿರ್ಮಾಣ, ಆಟದ ಮೈದಾನ ನಿರ್ಮಾಣ ಮಾಡಲಿದ್ದಾರೆ  ಎಂದು ಶಿಬಿರಾಧಿಕಾರಿ ಪ್ರೊ.ಎನ್.ಪಿ.ಕೃಷ್ಣಮೂರ್ತಿ ತಿಳಿಸಿದ್ದಾರೆ. ಎನ್ಎಸ್ಎಸ್ ಶಿಬಿರದ ಉದ್ಘಾಟನೆಯನ್ನು ಶಾಸಕ ಡಿ.ಕೆ.ಶಿವಕುಮಾರ್ ನೆರವೇರಿಸಲಿದ್ದಾರೆ.

ನಾಳೆ ಸಂಘಗಳ ವಾರ್ಷಿಕೋತ್ಸವ
ನೆಲಮಂಗಲ:
ಪ್ರತಿಭಾರಂಗ ಹಾಗೂ ಶ್ರೀ ವಾಣಿ ಕಲಾಸಂಘ ಸಂಯುಕ್ತಾಶ್ರಯದಲ್ಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ ಡಿ. 14ರ ಶನಿವಾರದಂದು ಸಂಜೆ 6-30ಕ್ಕೆ ಸುಭಾಷ್ ನಗರದ ವಿಜಯನಗರ ಬಡಾವಣೆಯಲ್ಲಿರುವ ಶ್ರೀ ಗಣಪತಿ ರಂಗ ಮಂದಿರದಲ್ಲಿ ಸಂಘಗಳ ವಾರ್ಷಿಕೋತ್ಸವವನ್ನು ಏರ್ಪಡಿಸಲಾಗಿದೆ. ಪ್ರಾಂಶುಪಾಲ ಎಂ.ವಿ. ನೆಗಳೂರ್ ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಗಳಾಗಿ ರಂಗಭೂಮಿ ನಿರ್ದೇಶಕ  ಎನ್.ಜಿ. ಗೋಪಾಲ್, ರಂಗ ಶಿಕ್ಷಣ ಕೇಂದ್ರದ ಸಿದ್ಧರಾಜು, ತಾ.ಕ.ಸಾ.ಪ.ಅಧ್ಯಕ್ಷ ಎನ್. ರಾಜಶೇಖರ್, ಮಾಜಿ ಅಧ್ಯಕ್ಷ ಡಾ. ಲಕ್ಷ್ಮೀನಾರಾಯಣಶೆಟ್ಟಿ, ರಂಗಭೂಮಿ, ಧಾರವಾಹಿ ನಟ ಮಂಜುನಾಥ್, ಪುರಸಭಾ ಸದಸ್ಯ ರಾಜು,  ರಘು ಭಾಗವಹಿಸಲಿದ್ದಾರೆ. ಪ್ರತಿಭಾ ರಂಗ ಕಲಾವಿದರಿಂದ ಬಿ.ರಾಮಯ್ಯ ರಚಿಸಿ ನಿರ್ದೇಶಿಸಿರುವ ಗಲಾಟೆ ಸಂಸಾರ ಎಂಬ ಸಾಮಾಜಿಕ ನಾಟಕ, ಶ್ರೀ ವಾಣಿ ಕಲಾ ಸಂಘದ ಕಲಾವಿದರಿಂದ ಮೈಸೂರು ರಮಾನಂದ್ ಅವರ ಆಸ್ಪತ್ರೆಯ ಅವಾಂತರ ಎಂಬ ಹಾಸ್ಯ ನಾಟಕವನ್ನು ಪ್ರದರ್ಶಿಸಲಾಗುತ್ತದೆ ಎಂದು ವ್ಯವಸ್ಥಾಪಕಿ ಕಮಲ ತಿಳಿಸಿದ್ದಾರೆ.

ಬೆಟ್ಟಹಳ್ಳಿ ಕಾಲೋನಿ ಶಾಲೆಗೆ ಅಧಿಕಾರಿಗಳ ಭೇಟಿ, ಪ್ರಶಂಸೆ
ಮಾಗಡಿ:
ತಾಲೂಕಿನ ಕುದೂರು ಹೋಬಳಿ ಬೆಟ್ಟಹಳ್ಳಿ ಕಾಲೋನಿ ಶಾಲೆಗೆ ವಂಡರ್ ಲಾ ಪಾರ್ಕಿನ ಅಧಿಕಾರಿಗಳ  ತಂಡ ಭೇಟಿ ನೀಡಿ ಶಾಲೆಯ ಪ್ರಗತಿ ಮತ್ತು ಪರಿಸರ  ನಿರ್ವಹಣೆ ಜಾಗೃತಿ ಕುರಿತು ಪ್ರಶಂಸೆ ವ್ಯಕ್ತಪಡಿಸಿತು.  ಈ ಶಾಲೆಗೆ ಆಗಮಿಸಿದ ಮೂರು ಮಂದಿ ಅಧಿಕಾರಿಗಳ ತಂಡ ಶಾಲಾ ಸ್ವಚ್ಛತೆ, ಪರಿಸರ ನಿರ್ವಹಣೆ, ಕಸ ವಿಲೇವಾರಿ, ಸೌರಶಕ್ತಿ ಬಳಕೆ ಪರಿಸರ ಕಾಳಜಿ ಕುರಿತು ಅನೇಕ ವಿಚಾರಗಳನ್ನು ಶಿಕ್ಷಕರು ಮತ್ತು ಶಾಲಾ ಮಕ್ಕಳಿಂದ ಕಲೆಹಾಕಿದರಲ್ಲದೆ ಶಾಲಾ ಅಂಗಳದಲ್ಲಿದ್ದ ಕಲ್ಲಿನ ಮತ್ತು ಬಿದಿರಿನ ಕಲಾಕೃತಿಯನ್ನು ನೋಡಿ ಸಂತಸ ಪಟ್ಟರು. ಈ ಅಧಿಕಾರಿಗಳ ತಂಡ ರಾಜ್ಯದ ವಿವಿಧ ಜಿಲ್ಲೆಗಳ 80 ಶಾಲೆಗಳಿಗೆ ಭೇಟಿ ನೀಡಿದ್ದು, ಶಾಲಾ ಪರಿಸರ ಜಾಗೃತಿ ವೀಕ್ಷಿಸಿದ್ದಾಗಿ ತಿಳಿಸಿದತು. ಇದೇ ಸಂದರ್ಭದಲ್ಲಿ ಪರಿಸರ ಮಿತ್ರ ಪ್ರಶಸ್ತಿ ವಿಜೇತ ಶಿಕ್ಷಕ ರಘುಪತಿ ಮಾತನಾಡಿ, ನಮ್ಮ ಶಾಲಾ ಪರಿಸರವನ್ನು ನೋಡಲು ಅನೇಕ ತಂಡಗಳು ಒಂದೊಂದಾಗಿ ಆಗಮಿಸುತ್ತಿದ್ದು, ಈ ಶಾಲೆ ಪ್ರೇಕ್ಷಣೀಯ ಸ್ಥಳವಾಗುತ್ತಿರುವುದು ಸಂತಸ ತಂದಿದೆ. ಶಿಕ್ಷಕರ ಮತ್ತು ಮಕ್ಕಳ ಶ್ರಮ ಸಾರ್ಥಕ ಫಲವಾಗಿದ್ದು, ಇತರೆ ಶಾಲೆಗೆ ಮಾದರಿಯಾದರೆ ನಮ್ಮ ಪಯತ್ನ ಫಲ ಸಿಕ್ಕಿದಂತೆ ಎಂದರು. ಸಿ.ಆರ್.ಸಿ.ಗಂಗರಾಜು, ಶಿಕ್ಷಕಿ ಜಯಶ್ರೀ, ಎಸ್.ಡಿ.ಎಂ.ಸಿ. ಅಧ್ಯಕ್ಷೆ ಕಮಲಮ್ಮ, ಪಾತರಾಜು ಇತರರು ಹಾಜರಿದ್ದರು.

ಅಧಿಕಾರಿಗಳೇ ಅರ್ಹ ಫಲಾನುಭವಿಗಳನ್ನು ಗುರುತಿಸಲಿ
ನೆಲಮಂಗಲ:
ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಬಡವರು ಹಾಗೂ ಅರ್ಹ ಫಲಾನುಭವಿಗಳಿಗೆ ಅಧಿಕಾರಿಗಳೇ ಗುರುತಿಸಿ ನೀಡಬೇಕು ಎಂದು ಶಾಸಕ ಡಾ.ಕೆ. ಶ್ರೀನಿವಾಸಮೂರ್ತಿ ಹೇಳಿದರು. ಅವರು ಮಂಗಳವಾರ ಪಟ್ಟಣದ ತಾಲೂಕು ಕಚೇರಿ ಅವರಣದಲ್ಲಿ ನಡೆದ ಪಿಂಚಣಿ ಅದಾಲತ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ  ಬಡ ಜನತೆಗೆ ಅಗತ್ಯ ಸೌಲಭ್ಯಗಳು ದೊರೆತಾಗ ಮಾತ್ರ ಅವರ ಜೀವನದಲ್ಲಿ ಸರ್ಕಾರ ನಮ್ಮ ಜೊತೆಗೆ ಇದೆ ಎಂಬ ನಂಬಿಕೆ ಮೂಡುತ್ತದೆ. ಯಾವ ಯೋಜನೆಯಡಿ ಫಲಾನುಭವಿ ಅರ್ಹನಾಗುತ್ತಾನೆ ಎಂದು ತಿಳುವಳಿಕೆ ಮೂಡಿಸುವುದರೊಂದಿಗೆ ಅಗತ್ಯ ದಾಖಲೆಗಳನ್ನು ಪಡೆಯುವಂತೆ ಸೂಕ್ತ ಸಲಹೆಗಳನ್ನು ವಿದ್ಯಾವಂತರು ನೀಡಬೇಕು ಎಂದರು.  ಫಲಾನುಭವಿಗಳ ಅರ್ಜಿಗಳನ್ನು ಸ್ವೀಕರಿಸಿ ನಂತರ ಪರಿಶೀಲಿಸಿ ಶೀಘ್ರವೇ ಪ್ರಮಾಣ ಪತ್ರಗಳನ್ನು ನೀಡುತ್ತೇವೆ. ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಹಸೀಲ್ದಾರ್ ಡಾ.ಗೀತಾ ತಿಳಿಸಿದರು. ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ನೂರಾರು ಅರ್ಜಿಗಳನ್ನು ತಾಲೂಕು ಅಧಿಕಾರಿಗಳು ಸ್ವೀಕರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement