ನಿಯೋಗ ಕೊಂಡೊಯ್ಯುವುದು ಬೇಡ: ಡಿ.ಕೆ.ಶಿವಕುಮಾರ್ ಮನವಿ
ಕನಕಪುರ: ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕೆಂದು ಕೋರಿ ಒಕ್ಕಲಿಗ ಸಮುದಾಯದ ಮುಖಂಡರು ಕೇಂದ್ರದ ಕಾಂಗ್ರೆಸ್ ಮುಖಂಡರಲ್ಲಿ ಮನವಿ ಸಲ್ಲಿಸಲು ನಿಯೋಗ ಹೊರಟಿರುವುದಾಗಿ ಮಾಧ್ಯಮಗಳಲ್ಲಿ ಪ್ರಕಟವಾಗಿದ್ದು ಸಮುದಾಯದ ಮುಖಂಡರುಗಳ ಪ್ರೀತಿ ವಿಶ್ವಾಸಗಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಶಾಸಕ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಈ ಕುರಿತು ಹೇಳಿಕೆ ಬಿಡುಗಡೆ ಮಾಡಿದ ಅವರು ಸಚಿವ ಸಂಪುಟದಲ್ಲಿ ಸ್ಥಾನ ನೀಡುವುದು ಮುಖ್ಯಮಂತ್ರಿಗಳ ಪರಮಾಧಿಕಾರವಾಗಿದ್ದು, ನಾನು ಯಾವಾಗ ಮಂತ್ರಿಮಂಡಲ ಸೇರಬೇಕು ಎಂಬುದನ್ನು ನಿರ್ಧರಿಸಲು ಪಕ್ಷದ ವರಿಷ್ಠ ಮಂಡಳಿ ಇದೆ. ಪಕ್ಷವು ತನ್ನ ನಿಲುವನ್ನು ಪ್ರಕಟಿಸುವವರೆಗೆ ಒಕ್ಕಲಿಗ ಸಮುದಾಯದ ಹೆಸರಿನಲ್ಲಿ ಯಾವುದೇ ಒತ್ತಡ ಹೇರುವುದು ಅಥವಾ ನಿಯೋಗ ಕೊಂಡೊಯ್ಯುವುದು ಸರ್ವಥಾ ಸರಿಯಲ್ಲಾ. ಒಕ್ಕಲಿಗ ಸಮುದಾಯದ ಹೆಸರಿನಲ್ಲಿ ನಾವು ಯಾರನ್ನೂ ಬೇಡುವ ಅಗತ್ಯವಿಲ್ಲ, ಆದ್ದರಿಂದ ಸಮುದಾಯದವರು ನಿಯೋಗ ಕೊಂಡೊಯ್ದು ಒತ್ತಾಯಿಸುವ ಕಾರ್ಯದಿಂದ ವಿಮುಖರಾಗಬೇಕೆಂದು ಡಿ.ಕೆ.ಶಿವಕುಮಾರ್ ಮನವಿ ಮಾಡಿದ್ದಾರೆ.
ಇಂದು ಮಾನವ ಹಕ್ಕುಗಳ ದಿನಾಚರಣೆ
ರಾಮನಗರ: ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ವಕೀಲರ ಸಂಘದಿಂದ ಡಿ.13ರ ಬೆಳಗ್ಗೆ 10ಕ್ಕೆ ನಗರದ ಗೌಸಿಯಾ ಎಂಜಿನಿಯರಿಂಗ್ ಕಾಲೇಜಿನ ಸಭಾಂಗಣದಲ್ಲಿ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮವನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಂ.ಕೆ.ಪ್ರಹ್ಲಾದ್ ಉದ್ಘಾಟಿಸುವರು. ಜಿಲ್ಲಾಧಿಕಾರಿ ಡಾ.ಡಿ.ಎಸ್.ವಿಶ್ವನಾಥ್ ಅಧ್ಯಕ್ಷತೆ ವಹಿಸುವರು. ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಎಸ್.ಎಚ್. ಹೊಸಗೌಡರ್, ಜಿ.ಪಂ. ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ.ಎಂ.ವಿ.ವೆಂಕಟೇಶ್, ಎಸ್ಪಿ ಅನುಪಮ್ ಅಗ್ರವಾಲ್, ವಕೀಲರ ಸಂಘದ ಅಧ್ಯಕ್ಷ ಎಂ.ಎಚ್.ಕುಮಾರ್, ಡಾ.ಮಹಮದ್ ಅನೀಫ್, ಎಚ್.ಡಿ.ಲಿಂಗರಾಜು, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಪ್ರಹ್ಲಾದಗೌಡ ಭಾಗವಹಿಸುವರು. ಮಾನವ ಹಕ್ಕುಗಳು ಮತ್ತು ರಕ್ಷಣೆ ಕುರಿತು ವಕೀಲ ಚಾನ್ ಪಾಷ ಉಪನ್ಯಾಸ ನೀಡುವರು.