ಶಾಶ್ವತ ನೀರಾವರಿ ಯೋಜನೆ ಅನುಷ್ಠಾನ ಕೇವಲ ಭಜನೆ
ಮಾಗಡಿ: ಕ್ಷೇತ್ರದಲ್ಲಿ ಸ್ವಯಂ ಘೋಷಿತ ಶಾಸಕರೊಬ್ಬರು ಹಳ್ಳಿ, ಹಳ್ಳಿಗಳಿಗೆ ತೆರಳಿ ಕಾಂಗ್ರೆಸ್ ಸರ್ಕಾರದ ನೇತೃತ್ವದಲ್ಲಿ ಶಾಶ್ವತ ನೀರಾವರಿ ಯೋಜನೆ ಅನುಷ್ಠಾನಗೊಳಿಸುವುದಾಗಿ ಭಜನೆ ಮಾಡುತ್ತಿದ್ದಾರೆ. ಇಂತಹ ಮಾತಿಗೆ ಮರುಳಾಗಬೇಡಿ, ಹೇಮಾವತಿಯೂ ಬರುವುದಿಲ್ಲ, ಏತ್ತಿನಹೊಳೆಯೂ ಹರಿಯುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕೆಪಿಸಿಸಿ ಎ.ಮಂಜು ವಿರುದ್ಧ ಪರೋಕ್ಷವಾಗಿ ಹರಿಹಾಯ್ದರು.
ಅವರು ತಾಲೂಕಿನ ಕುದೂರು ಹೋಬಳಿ ಶ್ರೀಗಿರಿಪುರದಲ್ಲಿ ಪುರಾತನ ಶ್ರೀನಿವಾಸಸ್ವಾಮಿ ದೇವರ ಪುನರ್ ಪ್ರತಿಷ್ಠಾಪನೆ ಹಾಗೂ ಜೀಣೋದ್ಧಾರಗೊಂಡಿರುವ ದೇವಾಲಯದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡುತ್ತಾ ಸರ್ಕಾರ ನೀರಾವರಿ ಯೋಜನೆಗೆ 5 ಕೋಟಿ ಹಣ ಬಜೆಟ್ ಪುಸ್ತಕಕಷ್ಟೆ ಸಮೀತವಾಗಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಸ್ಪರ್ಧಿಸಿ ಗೆಲ್ಲವ ತಂತ್ರಗಾರಿಕೆಗೆ ಕೇಂದ್ರ ಸಚಿವ, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರದು ಎಂದು ಎಚ್ಡಿಕೆ ಟೀಕಿಸಿದರು.
ಶಾಸಕ ಎಚ್.ಸಿ. ಬಾಲಕೃಷ್ಣ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಿದ್ದಗಂಗಾ ಮಠಾಧೀಶ ಡಾ.ಶಿವಕುಮಾರ ಸ್ವಾಮೀಜಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಕಿರಿಯ ಸಿದ್ದಲಿಂಗಸ್ವಾಮೀಜಿ, ಕೆಂಗೇರಿ ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನದ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ ಆಶೀರ್ವಚನ ನೀಡಿದರು. ಶ್ರೀಗಿರಿಪುರ ಗ್ರಾ.ಪಂ. ಅಧ್ಯಕ್ಷ ಎಚ್.ಎಸ್. ಪ್ರಕಾಶ್ ಪ್ರಾಸ್ತಾವಿಕವಾಗಿ ಮತನಾಡಿದರು. ಇದೇ ವೇಳೆ ದಾನಿಗಳನ್ನು ಎಚ್.ಡಿ.ಕುಮಾರಸ್ವಾಮಿ ಸನ್ಮಾನಿಸಿದರು. ಜಿಲ್ಲಾ ಪಂಚಾಯ್ತಿ ಸದಸ್ಯ ಹಂಸಕುಮಾರಿ, ತಾ.ಪಂ. ಮಾಜಿ ಉಪಾಧ್ಯಕ್ಷರಾದ ಕೆ.ಜಿ. ಉದ್ದೀಶ್, ಅನಿಸಾ ಖಾನಂ, ಸದಸ್ಯೆ ಚಂದ್ರಕಲಾ ಪ್ರಭು, ಬೆಂಗಳೂರು ಹಾಲು ಒಕ್ಕೂಟ ನಿರ್ದೇಶಕ ನರಸಿಂಹಮೂರ್ತಿ, ದಾನಿ ನವಕೋಟಿ ನಾರಾಯಣ, ಟಿಎಪಿಸಿಎಂಎಸ್ ಅಧ್ಯಕ್ಷ ರಾಜಣ್ಣ, ಮಂಜುನಾಥ್, ಸಿದ್ದಲಿಂಗಪ್ಪ ಇತರರು ಇದ್ದರು.