ಸಂಭಾಜಿ ಪಾಟೀಲ್, ಉಮೇಶ್ ಕತ್ತಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ, ಪ್ರತಿಭಟನೆ
ಕ.ಪ್ರ.ವಾರ್ತೆ ರಾಮನಗರ ಡಿ.12
ಕನ್ನಡ ಭಾಷೆ ಮತ್ತು ಕರ್ನಾಟಕದ ಅಖಂಡತೆಗೆ ಧಕ್ಕೆ ತರುತ್ತಿರುವ ಶಾಸಕದ್ವಯರಾದ ಸಂಭಾಜಿ ಪಾಟೀಲ್, ಉಮೇಶ್ ಖತ್ತಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಯಿತು.
ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಕಸಾಪ ಸದಸ್ಯರು ಶಾಸಕದ್ವಯರ ವಿರುದ್ಧ ಘೋಷಣೆ ಕೂಗಿದರು. ಬಳಿಕ ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿ, ಶಾಸಕರ ಅನರ್ಹತೆ ಆಗ್ರಹಿಸಿದರು.
ಬೆಳಗಾವಿ ಅಧಿವೇಶನದಲ್ಲಿ ಕನ್ನಡ ಭಾಷೆ ಮತ್ತು ಕರ್ನಾಟಕದ ಬಗ್ಗೆ ಅವಹೇಳನ, ಅಸಂಬದ್ಧ ಮಾತುಗಳನ್ನಾಡಿರುವ ಶಾಸಕ ಸಂಭಾಜಿ ಪಾಟೀಲ್ ಅವರು ಈ ನೆಲದಲ್ಲಿ ಜನಪ್ರತಿನಿಧಿಯಾಗಿ ಒಂದು ಕ್ಷಣವೂ ಮುಂದುವರೆಯಲು ಅರ್ಹರಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಉತ್ತರ ಕರ್ನಾಟಕ ಅಭಿವೃದ್ಧಿಯಾಗಿಲ್ಲ ಎನ್ನುವ ಕುಂಟುನೆಪವೊಡ್ಡಿ ಪ್ರತ್ಯೇಕ ರಾಜ್ಯದ ಕೂಗು ಹಾಕುವ ಮೂಲಕ ಕರ್ನಾಟಕದ ಅಖಂಡತೆಗೆ ಶಾಸಕ ಉಮೇಶ್ ಖತ್ತಿ ಧಕ್ಕೆ ಉಂಟು ಮಾಡಿದ್ದಾರೆ. ಅವರನ್ನೂ ಶಾಸಕ ಸ್ಥಾನದಿಂದ ವಜಾಗೊಳಿಸಿ ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಕಸಾಪ ಅಧ್ಯಕ್ಷ ಬಿ.ಟಿ.ನಾಗೇಶ್, ಪದಾಧಿಕಾರಿಗಳಾದ ಚಕ್ಕಲೂರು ರಾಜಶೇಖರ್, ಶಿವಮಾದು, ಪುಟ್ಟಸ್ವಾಮಿ, ವಿಜಯ್ರಾಂಪುರ, ಮಹೇಶ್, ಶಿವಲಿಂಗಯ್ಯ, ಯೋಗೇಶ್, ರಿಯಾಜ್ ಉದ್ದೀನ್, ರೈತ ಸಂಘದ ಜಿಲ್ಲಾಧ್ಯಕ್ಷ ಲಕ್ಷ್ಮಣಸ್ವಾಮಿ ಭಾಗವಹಿಸಿದ್ದರು.