ಹಾಡಹಗಲೇ ಮನೆಗೆ ನುಗ್ಗಿ ಚಿನ್ನಾಭರಣ ಲೂಟಿ
ಸೂಲಿಬೆಲೆ: ಇಲ್ಲಿಗೆ ಸಮೀಪದ ಸೊಣ್ಣಳೀಪುರ ಗ್ರಾಮದಲ್ಲಿ ಹಾಡು ಹಗಲೇ ಮನೆಯೊಂದಕ್ಕೆ ನುಗ್ಗಿದ ದುಷ್ಕರ್ಮಿಗಳು ಬೀರುವಿನಲ್ಲಿದ್ದ ನಗದು ಸೇರಿದಂತೆ ಸುಮಾರು ರು.2.75 ಲಕ್ಷದಷ್ಟು ಬೆಲೆ ಬಾಳುವ ಚಿನ್ನಾಭರಣಗಳನ್ನು ದೋಚಿಕೊಂಡು ಪರಾರಿಯಾಗಿರುವ ಘಟನೆ ಡಿ.11 ರಂದು ಬೆಳಿಗ್ಗೆ ನಡೆದಿದೆ. ಗ್ರಾಮದಲ್ಲಿ ವಾಸವಾಗಿರುವ ಶ್ರೀನಿವಾಸ್ ಎಂಬುವರು ಪ್ರತಿನಿತ್ಯದಂತೆ ಕೆಲಸಕ್ಕೆ ಹೋಗಿದ್ದು, ಈತನ ಪತ್ನಿ ಹೊಲದ ಹತ್ತಿರ ಹೋಗಿದ್ದಳು ಎನ್ನಲಾಗಿದೆ. ಈ ವೇಳೆ ಮನೆಯಲ್ಲಿದ್ದ ಮಕ್ಕಳು ಮನೆಗೆ ಬೀಗ ಹಾಕಿ ಪಕ್ಕದ ಮನೆಗೆ ತೆರೆಳಿದ್ದರು. ಮನೆಗೆ ಬೀಗ ಹಾಕಿದ ಮೇಲೆ ಇದರ ಕೀ ಅನ್ನು ಅಲ್ಲೇ ಬಿಟ್ಟಿದ್ದರು ಎನ್ನಲಾಗಿದೆ. ಈ ಅವಕಾಶವನ್ನು ಬಳಿಸಿಕೊಂಡ ದುಷ್ಕರ್ಮಿಗಳು ಮನೆಯೊಳಗೆ ಪ್ರವೇಶಿಸಿ ಬೀರುವಿನಲ್ಲಿದ್ದ ನಕ್ಲೇಸ್ ಸೇರಿದಂತೆ ಸುಮಾರು ರು.2 ಲಕ್ಷ 25 ಸಾವಿರದಷ್ಟು ಬೆಲೆಬಾಳುವ ಚಿನ್ನಾಭರಣ ಹಾಗೂ ರು.50 ಸಾವಿರ ನಗದು ದೋಚಿಕೊಂಡು ಪರಾರಿಯಾಗಿದ್ದಾರೆ. ಶ್ರೀನಿವಾಸ ಅವರ ಪತ್ನಿ ಹೊಲದಿಂದ ಬಂದ ನಂತರ ಮನೆಯ ಬೀರು ತೆಗೆದಿರುವುದನ್ನು ಕಂಡು ಪರಿಶೀಲನೆ ನಡೆಸಿದಾಗ ಕಳ್ಳತನದ ಕೈ ಚಳಕ ನಡೆದಿರುವುದು ಬೆಳಕಿಗೆ ಬಂದಿದೆ. ಘಟನೆ ತಿಳಿದ ತಕ್ಷಣ ಸೂಲಿಬೆಲೆ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಶ್ವಾನದಳವನ್ನು ಕರೆಯಿಸಿ ಶೋಧ ನಡೆಸಿದರು. ಸೂಲಿಬೆಲೆ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಡೆಗೋಡೆಗೆ ಲಾರಿ ಡಿಕ್ಕಿ: ವ್ಯಕ್ತಿ ಸಾವು
ನೆಲಮಂಗಲ: ಲಾರಿಯೊಂದು ತಡೆಗೋಡೆಗೆ ಡಿಕ್ಕಿ ಹೊಡೆದು ಹಳ್ಳವೊಂದಕ್ಕೆ ಬಿದ್ದ ಪರಿಣಾಮ ವ್ಯಕ್ತಿಯೋರ್ವ ಮೃತಪಟ್ಟು, ಮೂವರು ಗಾಯಗೊಂಡಿರುವ ಘಟನೆ ಪಟ್ಟಣದ ರಾಷ್ಟ್ರೀಯ ಹೆದ್ದಾರಿ 4ರ ವಿಶ್ವೇಶ್ವರಪುರ ಗ್ರಾಮದ ಬಳಿ ಘಟನೆ ಗುರುವಾರ ಸಂಜೆ ಸಂಭವಿಸಿದೆ. ಮೃತನನ್ನು ಎಂ.ಬಿ.ಟಿ.ಪಿ.ಎಲ್ ಕಂಪನಿ ನೌಕರ ಲೋವರಾಜು (35) ಎಂದು ಗುರುತಿಸಲಾಗಿದೆ. ಈತ ಬೆಂಗಳೂರು-ಹಾಸನ ರೈಲು ಮಾರ್ಗದ ಪ್ರಗತಿ ಕಾಮಗಾರಿಯಲ್ಲಿ ಕಂಪನಿ ವತಿಯಿಂದ ಸರ್ವೆಯರ್ ಆಗಿ ಕಾಮಗಾರಿ ಪರಿಶೀಲಿಸುತ್ತಿದ್ದಾಗ ತುಮಕೂರು ಕಡೆಯಿಂದ ಬೆಂಗಳೂರು ಕಡೆಗೆ ರಾಷ್ಟ್ರೀಯ ಹೆದ್ದಾರಿ 4 ರಸ್ತೆಗೆ ಅಡ್ಡವಾಗಿ ಹಾಕಿದ ತಡೆಗೋಡೆಗೆ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಈತನ ಸಹಿತ ರೇಲ್ವೆ ಕಾಮಗಾರಿಯಾಗುತ್ತಿದ್ದ 25 ಅಡಿ ಆಳದ ಹಳ್ಳಕ್ಕೆ ಬಿದ್ದದ್ದರಿಂದ ಓರ್ವ ಸಾವನ್ನಪ್ಪಿದ್ದಾನೆ. ಘಟನೆಯಲ್ಲಿ ಲಾರಿ ಚಾಲಕರಾದ ರಾಮಚಂದ್ರಯಾದವ್, ದಿಲೀಪ್ ಹಾಗೂ ಮತ್ತೊಬ್ಬ ಕಾರ್ಮಿಕ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.