ಅಕ್ಷರದ ಅರವಿಗಿಂತ ಆರೋಗ್ಯದ ಅರಿವೂ ಮುಖ್ಯ
ಚನ್ನಪಟ್ಟಣ: ಮನುಷ್ಯನಿಗೆ ಅಕ್ಷರದ ಅರವಿನಿಂತೆ ಆರೋಗ್ಯದ ಅರಿವೂ ಮುಖ್ಯವಾಗಿದ್ದು, ಗ್ರಾಮೀಣ ಭಾಗದ ಜನತೆಯಲ್ಲಿ ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಕಾರ್ಯ ಹೆಚ್ಚಿನ ಸಂಖ್ಯೆಯಲ್ಲಿ ನಡೆಯಬೇಕಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಬಿ.ಟಿ.ನಾಗೇಶ್ ಕರೆ ನೀಡಿದರು.
ತಾಲೂಕು ಚುಟುಕುಸಾಹಿತ್ಯ ಪರಿಷತ್ ತಾಲೂಕಿನ ಮೈಲನಾಯ್ಕನ ಹೊಸಹಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗಾಗಿ ಎಚ್‌ಐವಿ ಕುರಿತ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ನಾಡು ನುಡಿಗಾಗಿ ಸೇವೆ ಸಲ್ಲಿಸುತ್ತಿರುವ ಚುಟುಕ ಸಾಹಿತ್ಯ ಪರಿಷತ್ತು ವಿದ್ಯಾರ್ಥಿಗಳಲ್ಲಿ ಎಚ್‌ಐವಿ ಯಂತಹ ಮಾರಕ ಕಾಯಿಲೆ ಬಗ್ಗೆ ಅರಿವು ಮೂಡಿಸಲು ಮುಂದಾಗಿರುವುದು ಉತ್ತಮ ಬೆಳವಣಿಗೆ ಎಂದರು.
ಯೌವನದ ಹೊಸ್ತಿಲಲ್ಲಿ ಕೆಲ ಮಂದಿ ತಿಳಿದೋ ತಿಳಿಯದೆಯೋ ಮಾಡುವ ಪ್ರಮಾದದಿಂದ ಮಾರಕ ಕಾಯಿಲೆಗಳಿಗೆ ಸಿಲುಕಿ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಇಂತಹ ಮಂದಿಗೆ ವಿದ್ಯಾರ್ಥಿ ದೆಸೆಯಲ್ಲೇ ಸೂಕ್ತವಾದ ಜ್ಞಾನ ಸಿಕ್ಕಲ್ಲಿ ಇಂತಹ ಅಪಾಯದಿಂದ ತಪ್ಪಿಸಿ ಕೊಳ್ಳ ಬಹುದಾಗಿದೆ ಎಂದರು.
ಚುಟುಕು ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಡಿ.ಪುಟ್ಟಸ್ವಾಮಿ ಗೌಡ ಮಾತನಾಡಿ, ಒಂದು ಕ್ಷಣದಲ್ಲಿ ಸಂಭವಿಸಿದ ಪ್ರಮಾದಕ್ಕಾಗಿ ಜೀವನವನ್ನೇ ಬಲಿತೆಗದು ಕೊಳ್ಳುವ ಅಪಾಯಕಾರಿ ರೋಗವೆನಿಸಿರುವ ಏಡ್ಸ್ ಬಗ್ಗೆ ನಾವೆಲ್ಲ ಎಚ್ಚರಿಕೆಯಿಂದ ಇರಬೇಕೆಂದು ತಿಳಸಿದರಲ್ಲದೆ, ವಿದ್ಯಾರ್ಥಿಗಳಲ್ಲಿ ಈ ಸಂಬಂಧ ಅರಿವು ಮೂಡಿಸಿ ಅವರ ಜೀವನವನ್ನು ಉತ್ತಮ ಪಡಿಸುವ ಉದ್ದೇಶದಿಂದ ನಮ್ಮ ಪರಿಷತ್ ಉಪನ್ಯಾಸ ಕಾರ್ಯಕ್ರಮ ಹಮ್ಮಿ ಕೊಳ್ಳುತ್ತಿದೆ ಎಂದರು.
ರೈತ ಜನಜಾಗೃತಿ ಸಂಘದ ನಗರಾಧ್ಯಕ್ಷ ಟಿ. ರಮೇಶ್ ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ಸಂಸ್ಕಾರ ಸಂಸ್ಕೃತಿ ರೂಡಿಸಿಕೊಂಡು ಮಾರಕ ರೋಗಗಳಿಂದ ದೂರವಿರಬೇಕು, ದುಶ್ಚಟ, ದುಸ್ಸಂಘಗಳಿಗೆ ಬಲಿಯಾಗದೆ ಶಿಕ್ಷಣದಲ್ಲಿ ತೊಡಗಿಸಿ ಕೊಂಡು ಜೀವನದಲ್ಲಿ ಉತ್ತಮ ವ್ಯಕ್ತಿಗಳಾಗಿ ತಮ್ಮ ಪೋಷಕರಿಗೆ ಹಿರಿಮೆ ತರಬೇಕೆಂದರು.
ಪ್ರಭಾರ ಪ್ರಾಂಶುಪಾಲರಾದ ಬಿ.ಎಸ್. ನಾಗರಾಜ, ಇತಿಹಾಸ ಉಪನ್ಯಾಸಕ ಬಿ.ಎಲ್. ನಾಗರಾಜು, ಅಧ್ಯಕ್ಷ ಶಂಕರೇಗೌಡ ಹೇಮಾವತಿ, ಚೇತನ್ ಕುಮಾರ್, ಎಸ್.ಜಿ.ಶಂಕರ್, ಎಚ್.ಆರ್. ವಾಸವಾಂಭ, ಎಸ್. ಪುಷ್ಪ, ಕೆ.ಸತ್ಯಮ್ಮ, ಶ್ರೀನಿವಾಸ್ ಮೂರ್ತಿ, ಪಲ್ಲವಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಚುಟುಕು ಕವಿಗಳಾದ ಎಂ.ಟಿ.ನಾಗರಾಜು, ಕುಮಾರಿ ಚಂದನ, ಶಿವನಂದ, ದರ್ಶನ್, ಕವಿತೆ ವಾಚನ ಮಾಡಿದರು. ಕಾರ್ಯದರ್ಶಿ ಮುಖ್ಯ ಶಿಕ್ಷಕ ಹನುಮಂತಚಾರ್ ಸ್ವಾಗತಿಸಿದರು. ಎಂ.ಟಿ.ಸುಂದರ ಮೂರ್ತಿ ನಿರೂಪಿಸಿದರೆ, ಶಂಕರ್ ವಂದಿಸಿದರು.