ಅಧಿಕಾರಿಗಳ ವೈಫಲ್ಯ: ಸುರೇಶ್
ಕ.ಪ್ರ.ವಾರ್ತೆ ಕನಕಪುರ ಡಿ.15
ಬರಗಾಲ ಪೀಡಿತವಾಗಿರುವ ಕನಕಪುರ ತಾಲೂಕಿನಲ್ಲಿ ಸರ್ಕಾರದ ಸವಲತ್ತುಗಳನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಅಧಿಕಾರಿಗಳು ವಿಫಲರಾಗುತ್ತಿದ್ದಾರೆ. ಅವರ ಕಾರ್ಯವೈಖರಿ ತಮಗೆ ಸಮಾಧಾನ ತಂದಿಲ್ಲ ಎಂದು ಲೋಕಸಭಾ ಸದಸ್ಯ ಡಿ.ಕೆ. ಸುರೇಶ್ ಹೇಳಿದ್ದಾರೆ. ಅವರು ಮರಳವಾಡಿ ಹೋಬಳಿಯ ಗ್ರಾಮಗಳಲ್ಲಿ ಜನಸಂಪರ್ಕ ಸಭೆಗಳಲ್ಲಿ ಮಾತನಾಡುತ್ತಿದ್ದರು.
ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿದ ಸಂಸದ ಸುರೇಶ್ ಜನರ ಅಹವಾಲುಗಳನ್ನು ಸ್ವೀಕರಿಸಿ ತೊಂದರೆಗಳನ್ನು ಪರಿಹರಿಸುವಂತೆ ಸ್ಥಳದಲ್ಲಿಯೇ ಇದ್ದ ಅಧಿಕಾರಿಗಳಿಗೆ ಆದೇಶಿಸಿದರು. ಕಾಂಗ್ರೆಸ್ ಮುಖಂಡರಾದ ಮರಿದೇವರು, ಬೈರೇಗೌಡ, ಎಂ.ಎನ್. ನಾಗರಾಜು, ಸಬ್ದರ್ ಹುಸೇನ್, ಜಿಪಂ ಸದಸ್ಯ ಇಕ್ಬಾಲ್ ಹುಸೇನ್, ಗೀತಾ ಈಶ್ವರ್, ಸೌಭಾಗ್ಯ, ತಹಸೀಲ್ದಾರ್ ಡಾ.ದಾಕ್ಷಾಯಣಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಜಿ.ಜೆ.ನಾಯಕ್ ಪಾಲ್ಗೊಂಡಿದ್ದರು.
ಜನಸಂಪರ್ಕ ಸಭೆಗಳ ಅಂಗವಾಗಿ ಸಂಸದ ಸುರೇಶ್ ಮರಳವಾಡಿ ಹೋಬಳಿಯ ಚಿಕ್ಕಣ್ಣನಕೆರೆ,ಅರಳಗಡಕಲು, ತಟ್ಟೇಕೆರೆ, ಬನವಾಸಿ, ಕಲ್ಲನಕುಪ್ಪೆ, ಯಲಚವಾಡಿ, ಲಿಂಗಣಾಪುರ, ತೇರುಬೀದಿ, ದೊಡ್ಡಮರಳವಾಡಿ, ಚಿಕ್ಕಸಾದೇನಹಳ್ಳಿ, ತೋಕಸಂದ್ರ, ಮಣಿಯಂಬಾಳ್, ಮಲ್ಲಿಗೆಮೆಟ್ಲು, ಪಡುವಣಗೆರೆ, ಕೀರಣಗೆರೆ, ಮೊದಲಾದ ಗ್ರಾಮಗಳಿಗೆ ಭೇಟಿನೀಡಿ ಸಾರ್ವಜನಿಕರೊಂದಿಗೆ ಸಮಾಲೋಚನೆ ನಡೆಸಿದರು.
ತಾಲೂಕಿನಲ್ಲಿ ಪಡಿತರ ಚೀಟಿ ವಿತರಣೆಯಲ್ಲಿ ವ್ಯಾಪಕ ಅವ್ಯವಹಾರಗಳು ನಡೆಯುತ್ತಿದ್ದು ಆಹಾರ ಇಲಾಖೆ ಅಧಿಕಾರಿಗಳು ಜನರಿಂದ ಸಾವಿರಾರು ರು. ಲಂಚವನ್ನು ಪಡೆಯುತ್ತಿರುವ ಬಗ್ಗೆ ಬಂದ ವ್ಯಾಪಕ ದೂರುಗಳಿಗೆ ಸ್ಪಂದಿಸಿದ ಸಂಸದ ಡಿ.ಕೆ.ಸುರೇಶ್ ಲಂಚಕೋರ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ತಹಸೀಲ್ದಾರರಿಗೆ ಆದೇಶಿಸಿದರು. ಸರ್ಕಾರದ ಯೋಜನೆಗಳಾದ ಅನ್ನಭಾಗ್ಯ, ಆರೋಗ್ಯಭಾಗ್ಯ, ಕ್ಷೀರಭಾಗ್ಯ, ಮನಸ್ವಿನಿ, ಪಡಿತರ ಚೀಟಿಗಳ ವಿತರಣೆ, ವೃದ್ಧಾಪ್ಯ ವೇತನ ಮೊದಲಾದವುಗಳನ್ನು ಸಮರ್ಪಕವಾಗಿ ವಿತರಿಸುವಂತೆ ಅಧಿಕಾರಿಗಳಿಗೆ ಸುರೇಶ್ ಆದೇಶಿಸಿದರು.