ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಕನಸಾದ ಕ್ರೀಡಾಂಗಣ

Srinivasa Murthy VN
Updated On : 16 Dec 2013, 12:44 pm

-ಸು.ನಾ.ನಂದಕುಮಾರ್
ಕ.ಪ್ರ. ವಾರ್ತೆ  ಚನ್ನಪಟ್ಟಣ ಡಿ.15

ತಾಲೂಕಿನ ಕ್ರೀಡಾಪಟುಗಳ ಬಹುವರ್ಷದ ಕನಸಾದ ಕ್ರೀಡಾಂಗಣ ನಿರ್ಮಾಣ ಇನ್ನೂ ಗಗನ ಕುಸುಮವಾಗೇ ಉಳಿದಿದೆ. ಜಿಲ್ಲಾಉಸ್ತುವಾರಿ ಸಚಿವರಾಗಿದ್ದ ಯೋಗೇಶ್ವರ್ ತಟ್ಟೇಕೆರಿಯ ಬಳೀ ಕ್ರೀಡಾಂಗಣ ನಿರ್ಮಾಣಕ್ಕೆ 14 ಎಕರೆ ಜಮೀನು ಗುರುತಿಸಿ ಭೂಸ್ವಾಧೀನಕ್ಕೆ ಚಾಲನೆ ನೀಡುವ ಮೂಲಕ ಕ್ರೀಡಾಂಗಣ ನಿರ್ಮಾಣಕ್ಕೆ ಹಿಡಿದಿದ್ದ ಗ್ರಹಣ ಬಿಡಿಸಲು ಮುಂದಾದರಾದರೂ, ಕೆಲ ಕಾನೂನು ಅಡಚಣೆಯಿಂದಾಗಿ ಭೂಸ್ವಾಧೀನ ಪ್ರಕ್ರಿಯೆ ನೆನೆಗುದಿಗೆ ಬೀಳುವ ಮೂಲಕ ಕ್ರೀಡಾಂಗಣ ಎಂಬುದು ಮರೀಚಿಕೆಯಾಗೇ ಉಳಿಯುವ ಮೂಲಕ ತಾಲೂಕಿನ ಸಾವಿರಾರು ಕ್ರೀಡಾಪಟುಗಳ ನಿರೀಕ್ಷೆಗೆ ತಣ್ಣೀರೆರಚಿದಂತಾಗಿದೆ.
ಕೈಗೆ ಬಂದಿದ್ದು ಬಾಯಿಗೆ ಬರಲಿಲ್ಲ: ಪಟ್ಟಣದ ತಟ್ಟೆಕರೆ ಬಳಿಯ 78, 79 ಹಾಗೂ 100 ಸರ್ವೆ ನಂಬರಿನ ಒಟ್ಟು 14ಎಕರೆ ಜಮೀನನ್ನು ಅಂದಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ  ಸ್ಥಳೀಯ ಶಾಸಕ ಸಿ.ಪಿ.ಯೋಗೇಶ್ವರ್ ಉಲ್ಲೇಖದ ಮೇರೆಗೆ ಜಿಲ್ಲಾಧಿಕಾರಿಗಳು ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಗೆ ಮಂಜೂರು ಮಾಡಿದ್ದರು. ಈ ಹಿಂದೆ ಅದೇ ಸ್ಥಳವನ್ನು ಖಾಸಗಿ ಸಂಸ್ಥೆಗಳಿಗೆ ಹಂಚಿಕೆ ಮಾಡಲಾಗಿತ್ತಾದರೂ, ಆ ಎಲ್ಲಾ ಆದೇಶವನ್ನು ರದ್ದುಗೊಳಿಸಿ ಮಂಜೂರು ಮಾಡಲಾಗಿತ್ತು.
ಸರ್ವೆ ನಂ. 78ರ 10 ಎಕರೆ ಜಮೀನನ್ನು ಕೆಂಗಲಲ್ಶ್ರೀ ಆಂಜನೇಯಸ್ವಾಮಿ ದೇವಾಲಯಕ್ಕೆ, ಸರ್ವೆ ನಂ. 79ರ 1.18ಎಕರೆ ಜಮೀನನ್ನು ಅಗ್ನಿಶಾಮಕ ಇಲಾಖೆಗೆ, ಸರ್ವೆ ನಂ. 100ರ 10 ಗುಂಟೆ ಜಮೀನನ್ನು ಯೋಗ ಕೇಂದ್ರವೊಂದಕ್ಕೆ ನೀಡಲಾಗಿತ್ತು. ಕ್ರೀಡಾಂಗಣ ನಿರ್ಮಾಣದ ಉದ್ದೇಶಕ್ಕಾಗಿ ಈ ಎಲ್ಲರಿಗೂ ಮಂಜೂರಾಗಿದ್ದ ಆದೇಶವನ್ನು ರದ್ದುಪಡಿಸಿತ್ತಾದರೂ, ದೇವಾಲಯದ ಆಡಳಿತ ಮಂಡಳಿ ನ್ಯಾಯಾಲಯದ ಮೊರೆಹೋಗಿ, ದೇವಾಲಯದ ಪರವೇ ತೀರ್ಪು ಬಂದಿರುವುದರಿಂದ ಜಮೀನು ವಿವಾದ ಕಗ್ಗಂಟಾಗಿ ಪರಿಣಮಿಸಿದೆ.
ಹಾಕಿ ಆಟಕ್ಕೆ ಅಂಕಣ: ಜಮೀನು ತನ್ನ ವಶಕ್ಕೆ ಬರುವ ಮುಂಚೆಯೇ, ಕ್ರೀಡಾಂಗಣ ನಿರ್ಮಾಣ ಮಾಡಲು ಮುಂದಾಗಿದ್ದ ಕ್ರೀಡಾ ಇಲಾಖೆ, ಉದ್ದೇಶಿತ ಜಾಗದಲ್ಲಿ ಹೊರಾಂಗಣ ಹಾಗೂ ಒಳಾಂಗಣ ಕ್ರೀಡಾಂಗಣ ರೂಪಿಸಲು ಯೋಜಿಸಿತ್ತು. 400 ಮೀಟರ್ ಉದ್ದದ ಸಿಂಥೆಟಿಕ್ ಟ್ರ್ಯಾಕ್, ಕಬಡ್ಡಿ, ಷಟಲ್ ಕಾಕ್, ಖೋಖೋ, ಅಥ್ಲೆಟಿಕ್ ಕ್ರೀಡಾಂಗಣವನ್ನು ನಿರ್ಮಾಣ ಮಾಡಲು ಇಲಾಖೆ ಆಸಕ್ತಿ ತೋರಿತ್ತು. ಇದರ ಜತೆಗೆ ಹೊರಾಂಗಣದಲ್ಲಿ ಫುಟ್‌ಬಾಲ್ ಹಾಗೂ ಹಾಕಿ ಆಟಕ್ಕೆ ಅಂಕಣ ಮಾಡಲು ಮುಂದಾಗಿತ್ತು.
ಕ್ರೀಡಾಂಗಣ ನಿರ್ಮಾಣಕ್ಕೆ ಮಂಜೂರಾಗಿರುವ ಜಮೀನಿನಲ್ಲಿನ ತೊಡಕು ಇಷ್ಟಕ್ಕೇ ಮುಗಿದಿಲ್ಲ. ಖಾಸಗಿ ವ್ಯಕ್ತಿಯೊಬ್ಬರು ಈ ಜಾಗದಲ್ಲಿ ಮನೆಯನ್ನೂ ನಿರ್ಮಿಸಿಕೊಂಡು ಹಲವು ವರ್ಷಗಳಿಂದ ವಾಸವಾಗಿದ್ದು, ಅವರೂ  ನ್ಯಾಯಾಲಯದ ಮೊರೆ ಹೋಗಿರುವುದು ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ. ಕಂದಾಯ ಇಲಾಖೆಯ ಉನ್ನತಾಧಿಕಾರಿಯಾಗಿರುವ ಜಿಲ್ಲಾಧಿಕಾರಿಗಳೇ ಜಾಗವನ್ನು ಮಂಜೂರು ಮಾಡಿದ್ದರೂ, ಇದುವರೆಗೂ ಜಮೀನು ಮಾತ್ರ ಕ್ರೀಡಾ ಇಲಾಖೆಗೆ ದಕ್ಕಿಲ್ಲ.
ಕ್ರಮ ಕೈಗೊಳ್ಳುವರೇ: ಕ್ರೀಡಾಂಗಣ ನಿರ್ಮಾಣ ಕನಸು ಹೊತ್ತು ಕಾಯುತ್ತಿರುವ ತಾಲೂಕಿನ ನೂರಾರು ಮಂದಿ ಕ್ರೀಡಾಪಟುಗಳ ಬವಣೆ ತಪ್ಪಿಸಲು ಈಗಲಾದರೂ ಸಾಧ್ಯವಾಯಿತಲ್ಲ ಎಂದು ನಿಟ್ಟುಸಿರು ಬಿಡುವಷ್ಟರಲ್ಲೇ ಮೂಲ ಉದ್ದೇಶವೇ ತಣ್ಣಗಾದದ್ದು ಕ್ರೀಡಾಪಟುಗಳ ನಿರಾಸೆಗೆ ಕಾರಣವಾಗಿದೆ. ಈ ಬಗ್ಗೆ ಸಂಬಂಧಿಸಿದ ಜಿಲ್ಲಾಡಳಿತ, ತಾಲೂಕು ಆಡಳಿತ ಹಾಗೂ ಕ್ರೀಡಾ ಇಲಾಖೆ ಗಮನಹರಿಸಿ, ಸಮಸ್ಯೆಗಳನ್ನು ಸರಿಪಡಿಸಿ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣ ಮಾಡಲು ಮುಂದಾಗಬೇಕಿದೆ.

ಅಧಿಕಾರಿಗಳ ನಿರ್ಲಕ್ಷ್ಯ, ಶಾಸಕರ ರಾಜಕೀಯ ಇಚ್ಛಾಶಕ್ತಿಯ ಕೊರತೆ ಕ್ರೀಡಾಂಗಣಕ್ಕೆ ನಿಗದಿಪಡಿಸಿರುವ ಜಮೀನು ಸ್ವಾಧೀನಪಡಿಸಿಕೊಳ್ಳಲು ಇದುವರೆಗೂ ಆಗಿಲ್ಲ. ನೀಡಿರುವ 10 ಎಕರೆ ಜಮೀನು ಕೆಂಗಲ್ ದೇವಾಲಯಕ್ಕೆ ಸೇರಿದ ಕೊಡುಗೆ ಜಮೀನಾಗಿರುವುದರಿಂದ ನ್ಯಾಯಾಲಯದಲ್ಲಿ ಹೂಡಿದ್ದ ಮೊಕದ್ದಮೆ ದೇವಾಲಯದವರ ಕಡೆಗೇ ಆಗಿದೆ. ಹಾಗಾಗಿ ಜಿಲ್ಲಾಧಿಕಾರಿ ಆದೇಶ ರದ್ದಾಗಿದೆ, ಇದರ ವಿರುದ್ಧ ನ್ಯಾಯಾಲಯದಲ್ಲಿ ಅಧಿಕಾರಿಗಳು ಮೇಲ್ಮನವಿ ಸಲ್ಲಿಸದಿರುವುದು ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಶಾಸಕರಿಗೆ ನಿಜಕ್ಕೂ ಕ್ರೀಡಾಕ್ಷೇತ್ರದ ಬಗ್ಗೆ ಆಸಕ್ತಿಯಿದ್ದರೆ ಮೇಲ್ಮನವಿ ಸಲ್ಲಿಸಲು ಸೂಚಿಸಿ, ಜಮೀನು ವಶಕ್ಕೆ ಮುಂದಾಗಬೇಕು.
- ಪಿ.ಜೆ.ಗೋವಿಂದರಾಜು, ಕ್ರೀಡಾಪಟು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement