ಗುಣಮಟ್ಟದ ರಸ್ತೆ ನಿರ್ಮಿಸಿ: ಶಾಸಕ ಬಿ. ಶಿವಣ್ಣ
ಕ.ಪ್ರ.ವಾರ್ತೆ ಆನೇಕಲ್ಲು ಡಿ.15
ತಾಲೂಕಿನ ರಸ್ತೆ ಜನರ ಆಸ್ತಿಯಾಗಿದ್ದು ಗುತ್ತಿಗೆದಾರರು ಗುಣ ಮಟ್ಟದ ಕಾಮಗಾರಿಗೆ ಆದ್ಯತೆ ನೀಡಬೇಕೆಂದು ಶಾಸಕ ಬಿ. ಶಿವಣ್ಣ ತಿಳಿಸಿದ್ದಾರೆ.
ಅವರು ತಾಲೂಕಿನ ರಾ.ಹೆ. 4 ರಿಂದ ಹುಸ್ಕೂರು-ಹಣ್ಣು ಮಾರುಕಟ್ಟೆ ನಡುವಿನ 4 ಕಿ.ಮೀ ಉದ್ದದ ರೂ. 5.8 ಕೋಟಿ ವೆಚ್ಚದ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ ಜನಪ್ರತಿನಿಧಿಗಳು ರಸ್ತೆ ಡಾಂಬರೀಕರಣ ಕಾಮಗಾರಿಯ ನಿಗಾವಣೆ ವಹಿಸಿ ಗುಣಮಟ್ಟ ಕಾಮಗಾರಿ ನಡೆಯಲು ಉತ್ತೇಜನ ನೀಡಬೇಕೆಂದರು.
ಆನೇಕಲ್ - ಚಂದಾಪುರ ರಸ್ತೆ: ಆನೇಕಲ್ ಚಂದಾಪುರ ನಡುವಿನ 11 ಕಿಮೀ ರಸ್ತೆಯ ಪೈಕಿ 6 ಕಿಮೀ ರಸ್ತೆ ಪೂರ್ಣವಾಗಿದ್ದು ಉಳಿಕೆ 5 ಕೀಮೀ ಕಾಮಗಾರಿಗೆ ಮಂಜೂರಾತಿ ದೊರಕಿದೆ. ತಾಲೂಕಿನ ಹಲವು ಹೋಬಳಿಗಳ ರಸ್ತೆ ಕಾಮಗಾರಿ ಪ್ರಗತಿಯಲ್ಲಿದೆ. ಆದ್ಯತೆ ಅನುಸಾರ ಸಂಪರ್ಕ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು ಎಂದರು.
ಕಾವೇರಿ ನೀರು: ಆನೇಕಲ್ ತಾಲೂಕಿನ 100 ಕಿಮೀ ವ್ಯಾಪ್ತಿಯಲ್ಲಿ ಜಲಾನಯನ ಪ್ರದೇಶವಿಲ್ಲ. ನೀರಿನ ಸೆಲೆಯೂ ಇಲ್ಲ. ಹಾಗಾಗಿ ತಾಲೂಕಿಗೆ ಕಾವೇರಿ ನೀರು ಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ ಎಂದಿದ್ದಾರೆ. ಹೆಬ್ಬಗೋಡಿ ಬಳಿಯ ಬಯೋಕಾನ್ವರೆಗೆ ಕಾವೇರಿ ನೀರು ಬರುತ್ತಿದ್ದು 15 ಕಿ.ಮೀ ವ್ಯ್ಪಾಪ್ತಿಯ ಆನೇಕಲ್ಲಿಗೆ ಕಾವೇರಿ ನೀರು ಸಂಪರ್ಕ ಬರಬೇಕಿದೆ. ಸೂರ್ಯ ನಗರ ಬಡಾವಣೆಗಳ 3 ಹಂತಗಳಿಗೆ ಕಾವೇರಿ ನೀರು ಅನಿವಾರ್ಯವಾಗಿದ್ದು ಈ ಬಗ್ಗೆ ಚರ್ಚೆ ನಡೆದಿದೆ ಎಂದರು. ಜಿಪಂ ಸದಸ್ಯ ಪ್ರಭಾಕರ ಬಾಬು, ಸವಿತಾ ವೆಂಕಟೇಶ್, ತಾಪಂ ಅಧ್ಯಕ್ಷ ಮುರಳೀಕೃಷ್ಣ, ಮುಖಂಡರಾದ ಗಟ್ಟಳ್ಳಿ ಸೀನಪ್ಪ, ಮದ್ದೂರಪ್ಪ, ನಾಗರಾಜು, ಇಂಜಿನೀರ್ಪ್ರ್ಸನ್ನ ಕುಮಾರ್, ಇಒ ಡಾ. ವೀರಭದ್ರಪ್ಪ ಇದ್ದರು.