ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ರಾಮನಗರದಲ್ಲಿ ಏಕತಾ ಓಟ, ಪ್ರಮುಖರು ಭಾಗಿ

Srinivasa Murthy VN
Updated On : 16 Dec 2013, 12:45 pm

ಕ.ಪ್ರ.ವಾರ್ತೆ ರಾಮನಗರ ಡಿ.15
ಭಾರತದ ಉಕ್ಕಿನ ಮನುಷ್ಯ ಎಂದೇ ಪ್ರಖ್ಯಾತರಾಗಿರುವ ಸರ್ದಾರ್ ವಲ್ಲಭ ಭಾಯಿ ಪಟೇಲ್ ಅವರ ಏಕತಾ ಪ್ರತಿಮೆ ಸ್ಥಾಪನೆಗೆ ರಾಮನಗರ ಜಿಲ್ಲೆಯ ಲೋಕ ಸಂಗ್ರಹಣಾ ಸಮಿತಿಯು ಹಮ್ಮಿಕೊಂಡಿದ್ದ ಏಕತಾ ಓಟ ನಗರದಲ್ಲಿ ಭಾನುವಾರ ನಡೆಯಿತು.
ನಗರದ ವಿವೇಕಾನಂದನಗರದಲ್ಲಿರುವ ಸ್ವಾಮಿ ವಿವೇಕಾನಂದ ಪ್ರತಿಮೆ ಬಳಿಯಿಂದ ಪ್ರಾರಂಭವಾದ ಏಕತಾ ಓಟ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಕಂದಾಯ ಭವನದ ಬಳಿ ಕೊನೆಗೊಂಡಿತು. ವಿವಿಧ ಶಾಲೆಯ ಮಕ್ಕಳು ಸೇರಿದಂತೆ ನೂರಾರು ಮಂದಿ ಈ ಓಟದಲ್ಲಿ ಪಾಲ್ಗೊಂಡಿದ್ದರು.
ದೇಶ ರಕ್ಷಣೆಗಾಗಿ ತನ್ನ ಪ್ರಾಣವನ್ನೇ ಅರ್ಪಿಸಿದ ಯೋಧ ತಿರುಮಲೇಶ್ ಅವರ ತಂದೆ ಜಯರಾಮಯ್ಯ ಅವರು ಸ್ವಾಮಿ ವಿವೇಕಾನಂದ ಅವರ ಪುತ್ಥಳಿಗೆ ಪುಷ್ಪಮಾಲೆ ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬಹು ಮುಖ್ಯ: ಈ ಸಂದರ್ಭದಲ್ಲಿ ಲೋಹ ಸಂಗ್ರಹಣಾ ಸಮಿತಿಯ ಜಿಲ್ಲಾ ಸಂಚಾಲಕ ಶಿವಮಾಧು ಮಾತನಾಡಿ, ಸ್ವಾತಂತ್ರ್ಯಾನಂತರದಲ್ಲಿ ಸುಮಾರು 458 ರಾಜರ ಆಳ್ವಿಕೆಗೊಳಪಟ್ಟಿದ್ದ ದೇಶವನ್ನು ಒಂದುಗೂಡಿಸಿ ಅಖಂಡ ಭಾರತವನ್ನು ನಿರ್ಮಾಣ ಮಾಡುವ ನಿಟ್ಟಿನಲ್ಲಿ ಸರ್ದಾರ್ ವಲ್ಲಭಭಾಯಿ ಅವರ ಕಾರ್ಯ ಬಹುಮುಖ್ಯವಾದುದು ಎಂದು ತಿಳಿಸಿದರು.
ಹಲವಾರು ರಾಜರು ಸ್ವಇಚ್ಛೆಯಿಂದ ಪ್ರಜಾಪ್ರಭುತ್ವಕ್ಕೆ ಸಮ್ಮತಿಸಿದರು. ಮತ್ತೆ ಕೆಲವರನ್ನು ಸರ್ದಾರ್ ವಲ್ಲಭಭಾಯಿ ಪಟೇಲರು ಮನವೊಲಿಸಿದರು. ಆದರೆ, ಹೈದರಾಬಾದಿನ ನಿಜಾಮ ಸೇರಿದಂತೆ ಕೆಲವರು ಇದಕ್ಕೆ ಪ್ರತಿರೋಧ ತೋರಿದ್ದರು. ಅಂತಹವರ ವಿರುದ್ಧ ಸೇನೆಯನ್ನು ನುಗ್ಗಿಸಿ, ವಶಪಡಿಸಿಕೊಳ್ಳುವ ಮೂಲಕ ಅಖಂಡ ಭಾರತವನ್ನು ನಿರ್ಮಾಣ ಮಾಡಿದರು ಎಂದರು.  ಇಂತಹ ಮಹತ್ಕಾರ್ಯವನ್ನು ಸಾಧಿಸಿದ ಸರ್ದಾರ್ ವಲ್ಲಭಭಾಯಿ ಪಟೇಲರನ್ನು ಇದುವರೆಗೂ ಆಳ್ವಿಕೆ ನಡೆಸಿದ ಸರ್ಕಾರಗಳು ಕಡೆಗಣಿಸಿವೆ. ಇಂತಹ ಮಹಾನ್ ವ್ಯಕ್ತಿಯನ್ನು ನೆನಪಿಸಿಕೊಳ್ಳುವ ದೃಷ್ಟಿಯಿಂದ ಗುಜರಾತ್‌ನಲ್ಲಿ 598 ಅಡಿ ಎತ್ತರದ ಉಕ್ಕಿನ ಪ್ರತಿಮೆಯನ್ನು ನಿರ್ಮಿಸಲು ಅಲ್ಲಿನ ಮುಖ್ಯಮಂತ್ರಿ ನರೇಂದ್ರ ಮೋದಿ ತೀರ್ಮಾನಿಸಿದ್ದಾರೆ ಎಂದು ತಿಳಿಸಿದರು.
ಜೈ ಜವಾನ್, ಜೈ ಕಿಸಾನ್ ಎಂಬುದನ್ನೇ ಧ್ಯೇಯೋದ್ದೇಶವನ್ನಾಗಿಸಿಕೊಂಡಿದ್ದ ಪಟೇಲರ ಆಶಯದಂತೆ ಪ್ರತಿಮೆ ಸ್ಥಳದಲ್ಲಿ ಕೃಷಿ ವಿಶ್ವ ವಿದ್ಯಾಲಯ ಸ್ಥಾಪನೆಯಾಗಲಿದೆ. ಇಲ್ಲಿ ಕೃಷಿಗೆ ಸಂಬಂಧಪಟ್ಟ ಸಂಶೋಧನೆಗಳು ನಡೆಯಲಿವೆ. ಈ ಪ್ರತಿಮೆ ನಿರ್ಮಾಣಕ್ಕೆ ದೇಶದ ಎಲ್ಲಾ ಕೃಷಿಕರಿಂದ ತಾವು ಕೃಷಿಗಾಗಿ ಉಪಯೋಗಿಸುತ್ತಿರುವ ಉಕ್ಕಿನ ಸಲಕರಣೆಗಳನ್ನು ಕೊಡುಗೆ ನೀಡಬೇಕು ಎಂದು ಮನವಿ ಮಾಡಿದರು.
ಏಕತಾ ಓಟದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಬಿ.ನಾಗರಾಜು, ಪ್ರಧಾನ ಕಾರ್ಯದರ್ಶಿ ರವಿಕುಮಾರ್‌ಗೌಡ, ಮುಖಂಡರಾದ ರುದ್ರದೇವರು, ಬಿ.ಕೆ.ಕೃಷ್ಣಮೂರ್ತಿ, ಪದ್ಮನಾಭ, ಬದ್ರಿಪ್ರಸಾದ್, ಪುಣ್ಯವತಿ, ರಾಮಣ್ಣ, ಚಂದನ್ ಮೋರೆ, ಅನಿಲ್‌ಬಾಬು, ರಾಮಾಂಜನೇಯ ಮತ್ತಿತರರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement