ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಸರ್ವ ಶಿಕ್ಷಣ ಯೋಜನೆಯಡಿ ಹೊಸಕೋಟೆ ತಾಲೂಕಿಗೆ ರು. 10 ಕೋಟಿ ಬಿಡುಗಡೆ

Srinivasa Murthy VN
Updated On : 16 Dec 2013, 12:46 pm

ಹೊಸಕೋಟೆ: ಪ್ರಸಕ್ತ ಸಾಲಿನಲ್ಲಿ ಸರ್ವ ಶಿಕ್ಷಣ ಅಭಿಯಾನ ಯೋಜನೆಯಡಿ ತಾಲೂಕಿಗೆ 10 ಕೋಟಿ ರು. ಮಂಜೂರಾಗಿದೆ. ಈ ಹಣದಲ್ಲಿ ಅಗತ್ಯವಿರುವ ಶಾಲೆಗಳಿಗೆ  ಸವಲತ್ತುಗಳನ್ನು ಒದಗಿಸಲಾಗುವುದು ಎಂದು ಶಾಸಕ ಎನ್.ನಾಗರಾಜ್ ಹೇಳಿದರು.
ಪಟ್ಟಣದ ಸರಕಾರಿ ಕನ್ನಡ ಮಾದರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಏರ್ಪಡಿಸಿದ್ದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿ, ಡಿ.27ರಂದು ಪಟ್ಟಣದಲ್ಲಿ ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗಳನ್ನು ನಡೆಸಲಾಗುವುದು ಎಂದು ತಿಳಿಸಿದರು.
ತಾಲೂಕಿನ ಸರಕಾರಿ ಶಾಲೆಗಳಿಗೆ  ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ಆದ್ಯತೆ ನೀಡಲಾಗುತ್ತಿದೆ ಎಂದು ಹೇಳಿದರು. ಉದ್ಯೋಗವಕಾಶ ಪಡೆಯಲು ಆಂಗ್ಲ ಭಾಷೆಯ ಜ್ಞಾನ ಅತ್ಯವಶ್ಯವಾಗಿದ್ದು, ಸರಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವವರು ಅವಕಾಶ ಪಡೆಯಲು ಅನುವಾಗುವಂತೆ ಇಂಗ್ಲಿಷ್ ಭಾಷೆ ಕಲಿಯಲು ತಜ್ಞರಿಂದ ತರಬೇತಿ ಶಿಬಿರ ಹಮ್ಮಿಕೊಳ್ಳಲು ಅಗತ್ಯ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.
ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ವಿ.ನಾರಾಯಣಸ್ವಾಮಿ ಮಾತನಾಡಿ, ರಾಷ್ಟ್ರದಲ್ಲಿಯೇ ಅತ್ಯುತ್ತಮ ಪರಂಪರೆಯುಳ್ಳ ಹೆಗ್ಗಳಿಕೆಯನ್ನು ಹೊಂದಿರುವ ರಾಜ್ಯದ ಶ್ರೇಷ್ಠವಾದ ಕಲೆ, ಸಂಸ್ಕೃತಿಯ ಬಗ್ಗೆ ವಿದ್ಯಾರ್ಥಿಗಳು ತಿಳುವಳಿಕೆ,ಆಸಕ್ತಿ ಹೊಂದಲು ಇಂತಹ ಚಟುವಟಿಕೆಗಳು ಪರಿಣಾಮಕಾರಿಯಾಗಿವೆ ಎಂದರು. ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ಬೈಲಾಂಜಿನಪ್ಪ ಮಾತನಾಡಿದರು.
ಸ್ಪರ್ಧೆಗಳನ್ನು ವೈಯಕ್ತಿಕ, ಗುಂಪು ಚಟುವಟಿಕೆಗಳನ್ನು  ಒಳಗೊಂಡ ಒಟ್ಟು 63 ವಿಭಾಗಗಳಲ್ಲಿ 1ರಿಂದ 4ನೇ  ತರಗತಿಯವರೆಗೂ 17, 5ರಿಂದ 7ನೇ ತರಗತಿಯವರೆಗು 18, 8 ರಿಂದ 10ನೇ ತರಗತಿಯವರೆಗು 3 ಹಂತದಲ್ಲಿ ಏರ್ಪಡಿಸಲಾಗುತ್ತಿದೆ. ತಾಲೂಕಿನ ಸುಮಾರು 379 ಶಾಲೆಗಳಿಂದ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದಾರೆ ಎಂದು ತಿಳಿಸಿದರು.
ಸರಕಾರದೊಂದಿಗೆ ದಾನಿಗಳ ಸಹಕಾರದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು 60 ತೀರ್ಪುಗಾರರು ಕಾರ್ಯನಿರ್ವಹಿಸುತ್ತಿದ್ದಾರೆ. ವಿಜೇತರಿಗೆ ನಗದು ಬಹುಮಾನ ನೀಡಿ ಪ್ರಥಮ ಸ್ಥಾನ ಗಳಿಸಿದವರನ್ನು ಜಿಲ್ಲಾ ಮಟ್ಟಕ್ಕೆ ಆಯ್ಕೆ ಮಾಡಲಾಗುವುದು. ಇದೇ ಸಂದರ್ಭದಲ್ಲಿ ಸಕಾಲ ಕಾರ್ಯಕ್ರಮದ ಜಾಗೃತಿ ಸ್ಪರ್ಧೆಗಳಿಗೆ  ತಾಲೂಕು ಪಂಚಾಯಿತಿ ಅಧ್ಯಕ್ಷೆ ರಾಣಿ ರಾಮಚಂದ್ರ ಚಾಲನೆ ನೀಡಿದರು.
ಇನ್ಸ್‌ಫೈರ್ ಅವಾರ್ಡ್ ವಿಜೇತರಿಗೆ ಚೆಕ್, ಅಲ್ಪಸಂಖ್ಯಾತರ ವಿದ್ಯಾರ್ಥಿ ವೇತನ, ದ್ವಿತೀಯ ಹಂತದ ಉಚಿತ ಸಮವಸ್ತ್ರಗಳನ್ನು ವಿತರಿಸಲಾಯಿತು. ಕ್ಷೇತ್ರ ಸಮನ್ವಯಾಧಿಕಾರಿ ಬಿ. ಪವಿತ್ರಾದೇವಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಶ್ರೀನಿವಾಸ್, ಪುರಸಭೆ ಸದಸ್ಯರಾದ ಎನ್.ಟಿ. ಹೇಮಂತ್‌ಕುಮಾರ್, ಡಿ.ಕೆ.ನಾಗರಾಜ್, ಮುಖಂಡರಾದ ಕಲ್ಲಪ್ಪ ಅರುಣ್‌ಕುಮಾರ್, ಸಮೀಉಲ್ಲಾ ಮತ್ತಿತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement