ಸಹಕಾರ ಸಂಘಗಳ ಜಾಗೃತಿ ಶಿಬಿರ
ಕನಕಪುರ: ಕರ್ನಾಟಕ ಸಹಕಾರ ಕಾನೂನಿನ ತಿದ್ದುಪಡಿ ಕಾಯಿದೆ ಬಗ್ಗೆ ಸಹಕಾರ ಸಂಘಗಳ ಪ್ರತಿನಿಧಿಗಳಿಗೆ ಜಾಗೃತಿ ಶಿಬಿರ ಕನಕಪುರದ ರೋಟರಿ ಭವನದಲ್ಲಿ ನಡೆಯಿತು. ಸಮಾರಂಭದ ಉದ್ಘಾಟನೆಯನ್ನು ಸಹಕಾರಸಂಘಗಳ ರಾಮನಗರ ಉಪವಿಭಾಗದ ಸಹಾಯಕ ನಿರ್ದೇಶಕಿ ಸಯೀದಾ ಅಂಜಿದಾ ಪರ್ವೀನ್ ನೆರವೇರಿಸಿದರು. ಲೆಕ್ಕಪರಿಶೋಧನಾ ಉಪನಿರ್ದೇಶಕ ಎಂ. ರವಿ ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಹಿರಿಯ ಲೆಕ್ಕಪರಿಶೋಧಕ ಕೆ.ಎಂ. ಉಮೇಶ್ಕುಮಾರ್, ಸಹಕಾರಿ ಕಾಯ್ದೆಯ ಹಲವಾರು ಕಲಂಗಳು ತಿದ್ದುಪಡಿಗೆ ಒಳಪಟ್ಟಿದ್ದು ಸಂಘಗಳ ಆಡಳಿತ, ಆಂತರಿಕ ಲೆಕ್ಕಪರಿಶೋಧನೆ ಮೊದಲಾದ ವಿಚಾರಗಳಲ್ಲಿ ಗಣನೀಯ ಬದಲಾವಣೆಗಳಾಗಿವೆ. ಸಹಕಾರ ಸಂಘಗಳು, ವ್ಯವಸಾಯ, ಹಾಲು ಉತ್ಪಾದಕ, ಸ್ತ್ರೀಶಕ್ತಿ ಸಂಘಗಳು, ಸಹಕಾರಿ ಬ್ಯಾಂಕುಗಳ ಪದಾಧಿಕಾರಿಗಳು ಅತ್ಯಗತ್ಯವಾಗಿ ನೂತನ ನಿಯಮಾವಳಿಗಳ ಬಗ್ಗೆ ತಿಳಿವಳಿಕೆ ಹೊಂದುವುದು ಅಗತ್ಯವಾಗಿದೆ ಎಂದರು. ಹಾಲು ಒಕ್ಕೂಟದ ಉಪವ್ಯವಸ್ಥಾಪಕ ಡಾ.ವೆಂಕಟರಮಣ ರೆಡ್ಡಿ ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು. ಅರ್ಬನ್ ಬ್ಯಾಂಕ್ ಕಾರ್ಯದರ್ಶಿ ರಾಮಚಂದ್ರ ವಂದಿಸಿದರು.
ಹನುಮ ಜಯಂತಿ: ವಿಶೇಷ ಪೂಜೆ
ವಿಜಯಪುರ: ಶ್ರೀ ಹನುಮಂತ ಜಯಂತಿ ಪ್ರಯುಕ್ತ ಪಟ್ಟಣದಲ್ಲಿ ಶ್ರೀ ರಾಮ ಹಾಗೂ ಹನುಮಂತ ದೇವಾಲಯಗಳಲ್ಲಿ ವಿಶೇಷ ಹೋಮ ಹವನ ಹಾಗೂ ಪೂಜಾ ಧಾರ್ಮಿಕ ಕಾರ್ಯಗಳು ನಡೆದವು. ಗಾಂಧಿಚೌಕದ ಕೋದಂಡ ರಾಮ ಸ್ವಾಮಿ ದೇವಾಲಯ, ಮೂಡಲಾಂಜನೇಯ ಸ್ವಾಮಿ ದೇವಾಲಯಗಳಲ್ಲಿ ಹೋಮ ಹವನ ಹಾಗೂ ಶ್ರೀ ರಾಮ ಕೋಟಿ ಭಜನಾ ಮುಕ್ತಾಯ ನಡೆದರೆ, ಅಶೋಕನಗರದ ವಿಜಯ ವೀರಾಂಜನೇಯ ಸ್ವಾಮಿ ದೇವಾಲಯ, ಅನೇಕಲ್ ಭಕ್ತಾಂಜನೇಯ ಶ್ರೀ ರಾಮ ದೇವಾಲಯಗಳಲ್ಲಿ ವಿಶೇಷ ಹೂವಿನ ಅಲಂಕಾರ, ಅನ್ನ ಸಂತರ್ಪಣೆ ಕಾರ್ಯಕ್ರಮಗಳು ನಡೆದವು.
ಪಲ್ಟಿ: ಬಾಲಕಿ ಸಾವು, ಮೂವರಿಗೆ ಗಾಯ
ನೆಲಮಂಗಲ ಡಿ.15
ಬುಲೇರೋ ಜೀಪೊಂದು ಪಲ್ಟಿ ಹೊಡೆದು ಹಳ್ಳಕ್ಕೆ ಬಿದ್ದ ಪರಿಣಾಮ ಜೀಪಿನಲ್ಲಿದ್ದ ಬಾಲಕಿ ಮೃತಪಟ್ಟಿದ್ದು, ಮೂರು ಜನ ಗಾಯಗೊಂಡಿರುವ ಘಟನೆ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 48ರ ಮಹದೇವಪುರ ಗ್ರಾಮದ ಬಳಿ ಭಾನುವಾರ ನಡೆದಿದೆ. ಬಾಲಕಿಯನ್ನು ಅಪೂರ್ವ(10) ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಗಾಯಗೊಂಡ ಬಾಲಕಿಯ ತಂದೆ ಗಿರೀಶ್, ತಾಯಿ ಉಷಾ, ತಂಗಿ ಅಪೇಕ್ಷ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಜೀಪಿನಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ ಸಂಬಂಧಿಕರ ಮದುವೆಗೆ ಬರುತ್ತಿದ್ದಾಗ ಮಾರ್ಗ ಮಧ್ಯೆ ಈ ದುರ್ಘಟನೆ ಸಂಭವಿಸಿದೆ. ಈ ಬಗ್ಗೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸೈಕಲ್ ವಿತರಣೆ ಕಾರ್ಯಕ್ರಮ
ಸೂಲಿಬೆಲೆ: ಪಟ್ಟಣದ ಜನತಾ ಕಾಲೋನಿಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಡಿ.16 ರಂದು ಸೈಕಲ್ ವಿತರಣಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮುಖ್ಯ ಶಿಕ್ಷಕರು ಪ್ರಕಟಣಿಯಲ್ಲಿ ತಿಳಿಸಿದ್ದಾರೆ. ಸೂಲಿಬೆಲೆ ಗ್ರಾಪಂ ಅಧ್ಯಕ್ಷ ಕೆ.ನಾರಾಯಣಪ್ಪ,ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮೌಲ ಮೊದಲಾದವರು ಭಾಗವಹಿಸಲಿದ್ದಾರೆ. ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಮಕ್ಕಳ ಸೈಕಲ್ ವಿತರಣಿ ಕಾರ್ಯಕ್ರಮವನ್ನು ಯಶಸ್ವಿಮಾಡಬೇಕೆಂದು ಕೋರಿದ್ದಾರೆ.