ಉದ್ಭವ ಬಯಲು ವಿನಾಯಕ ಸ್ವಾಮಿ ಬ್ರಹ್ಮರಥೋತ್ಸವ
ನೆಲಮಂಗಲ: ಪಟ್ಟಣದ ಸೊಂಡೆಕೊಪ್ಪ ರಸ್ತೆಯಲ್ಲಿರುವ ಇತಿಹಾಸ ಪ್ರಸಿದ್ಧ ಶ್ರೀ ಉದ್ಭವ ಬಯಲು ವಿನಾಯಕ ಸ್ವಾಮಿಯ ಬ್ರಹ್ಮರಥೋತ್ಸವ ಹಾಗೂ ಕಡಲೆಕಾಯಿ ಪರಿಷೆ ವಿಜೃಂಭಣೆಯಿಂದ 5 ಸಾವಿರಕ್ಕೂ ಹೆಚ್ಚು ಜನ ಭಕ್ತರ ಸಮ್ಮುಖದಲ್ಲಿ ನಡೆಯಿತು.
ಪ್ರತಿ ವರ್ಷ ಮಾರ್ಗಶಿರ ಮಾಸದ ಡಿಸೆಂಬರ್ ತಿಂಗಳಿನ ಪೌರ್ಣಮಿ ದಿನದಂದು ಬಯಲು ವಿಘ್ನೇಶ್ವರನ ಜಾತ್ರೆ ನಡೆಯುತ್ತಿದ್ದು, ಅರವಂಟಿಕೆ, ದೀಪೋತ್ಸವ, ಹೂವಿನ ಪಲ್ಲಕ್ಕಿ ಸೇರಿದಂತೆ ಪಟ್ಟಣದ ಎಲ್ಲಾ ಜಾತಿ ವರ್ಗ, ಬಡವ ಬಲ್ಲಿದರು ನಾ ಮುಂದು ತಾ ಮುಂದು ಎಂದು ಜಾತ್ರೆ ಸುಸೂತ್ರವಾಗಿ ಜರುಗಿ ಪ್ರಸಾದ
ವಿತರಿಸಲು ಕಾರ್ಯ ನಿರ್ವಹಿಸುತ್ತಾರೆ. ಈ ಪವಿತ್ರ ಕ್ಷೇತ್ರ ಈ ಭಾಗದ ಜನತೆಗೆ ಅತ್ಯಂತ ಭಕ್ತಿಭಾವದ ಕ್ಷೇತ್ರ . ತಾಲೂಕಿನಲ್ಲಿ ಜನರು ಯಾವುದೇ ಪುಣ್ಯ ಸ್ಥಳ ಪ್ರವಾಸಕ್ಕೆ ಹೊರಡಲಿ, ಯಾವುದೇ ನೂತನ ವಾಹನ ಖರೀದಿಸುವ ಮೊದಲು ಈ ಬಯಲು ವಿಘ್ನೇಶ್ವರನಿಗೆ ಪೂಜೆ ಸಲ್ಲಿಸಿ ಆರಂಭಿಸುವ ಪದ್ಧತಿ ಮೊದಲಿನಿಂದಲೂ ಆಚರಣೆಯಲ್ಲಿದೆ.
ಕಡಲೆಕಾಯಿ ಪರಿಷೆಗೆ ಪಟ್ಟಣದ ಎಲ್ಲಾ ಕುಟುಂಬದವರು ಕುಟುಂಬ ಸಮೇತರಾಗಿ ಆಗಮಿಸಿ ದೇವರಿಗೆ ಪೂಜೆ ಸಲ್ಲಿಸಿ ದರ್ಶನ ಭಾಗ್ಯ ಪಡೆದು ಪ್ರಸಾದ ಸ್ವೀಕರಿಸಿ ಕಡಲೆಕಾಯಿ, ಪುರಿ ಇನ್ನಿತರ ತಿಂಡಿ ತಿನಿಸು ತೆಗೆದುಕೊಂಡು ಸಂಜೆವರೆಗೂ ಜಾತ್ರೆಯಲ್ಲಿ ಆಟಗಳನ್ನು ಆಡುತ್ತಾ ನೋಡುತ್ತಾ ಕಾಲಕಳೆಯುವ ದೃಶ್ಯ ಕಂಡು ಬಂತು.
ಜಾತ್ರೆಯಲ್ಲಿ ವಿವಿಧ ಸಂಘ ಸಂಸ್ಥೆಗಳ ಕಾರ್ಯಕರ್ತರು ಪಾನಕ, ಮಜ್ಜಿಗೆ, ಹೆಸರುಬೇಳೆ, ತಂಪು ಪಾನೀಯ ವಿತರಿಸಿದರು. ವಿವಿಧ ಬಗೆಯ ಆಟೋಪಕರಣಗಳನ್ನು ಮಕ್ಕಳಿಗೆ ಪೋಷಕರು ಖರೀದಿಸುತ್ತಿದ್ದರು.
ರಸ್ತೆಯಲ್ಲಿ ಸುಮಾರು 1 ಕಿ.ಮೀ.ದೂರದವರೆಗೂ ವಾಹನಗಳ ಸಂಚಾರ ದಟ್ಟನೆಯಿಂದ ಕೂಡಿತ್ತು. ತಾಲೂಕಿನ ಪೊಲೀಸ್ ಇಲಾಖೆ ಜಾತ್ರೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಹಾಗೂ ಸಂಚಾರ ದಟ್ಟಣೆಯನ್ನು ನಿಯಂತ್ರಿಸುವಲ್ಲಿ ಸಫಲರಾದರು. ಶಾಸಕ ಡಾ. ಕೆ.ಶ್ರೀನಿವಾಸಮೂರ್ತಿ, ತಾ.ಪಂ.ಮಾಜಿ ಅಧ್ಯಕ್ಷ ರಂಗಸ್ವಾಮಿ ಸೇರಿದಂತೆ ಅನೇಕ ಗಣ್ಯರು ದೇವರ ದರ್ಶನ ಭಾಗ್ಯ ಪಡೆದರು.