ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಎಲ್‌ಪಿಜಿಗೆ ಆಧಾರ್ ಕಡ್ಡಾಯ ಬೇಡ

Srinivasa Murthy VN
Updated On : 18 Dec 2013, 12:27 pm

ಆನೇಕಲ್ಲು: ಕೇಂದ್ರ ಸರ್ಕಾರ ಅಡುಗೆ ಅನಿಲ ಗ್ರಾಹಕರಿಗೆ ನೇರ ಸಬ್ಸಿಡಿ ನೀಡುವುದಕ್ಕಾಗಿ ಆಧಾರ್ ಕಾರ್ಡ್ ಕಡ್ಡಾಯ ನೀಡಬೇಕೆಂದು ಎಸ್‌ಎಂಎಸ್ ಕಳಿಸುತ್ತಿರುವುದು ನ್ಯಾಯ ಸಮ್ಮತವಲ್ಲ. ಅನಿಲ ವಿತರಕರು ಆಧಾರ್ ಕಾರ್ಡ್ ಕಡ್ಡಾಯ ಬೇಡಿಕೆಯನ್ನು ಕೈ ಬಿಡಬೇಕೆಂದು ಸಿಪಿಐ (ಎಂ) ಆನೇಕಲ್ ಘಟಕದ ಕಾರ್ಯಕರ್ತರು ಆನೇಕಲ್ ಅಡುಗೆ ಅನಿಲ ವಿತರಕ ಕಚೇರಿ ಮುಂದೆ ಧರಣಿ ನಡೆಸಿದರು.
ತಾಲೂಕು ಕಾರ್ಯದರ್ಶಿ ವಕೀಲ ಮಂಜುನಾಥ್ ಮಾತನಾಡಿ ತೈಲ ಕಂಪನಿಗಳಿಗೆ ಕೇಂದ್ರ ಸರ್ಕಾರ ಇದುವರೆವಿಗೂ ಸಬ್ಸಿಡಿ ನೀಡುತ್ತಾ ಬಂದಿದೆ. ಇನ್ನು ಮುಂದೆಯೂ ಅದೇ ನೀತಿಯನ್ನು ಮುಂದುವರಿಸಿಕೊಂಡು ಹೋಗಲಿ. ಗ್ರಾಹಕರಿಗೆ ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ತೆರೆಯಬೇಕೆಂಬ ಷರತ್ತು ವಿಧಿಸುವುದು ಕಾನೂನಿನ ಉಲ್ಲಂಘನೆಯಾಗುತ್ತದೆ. ಈ ಬಗ್ಗೆ ಸುಪ್ರೀಂ ಕೋರ್ಟ್ ತನ್ನ  ಆದೇಶದಲ್ಲಿ ಯಾವುದೇ ರೀತಿಯ ಸೇವೆಗಳಿಗೂ ಆಧಾರ್ ಕಾರ್ಡ್ ಕಡ್ಡಾಯ ಮಾಡಬಾರದೆಂದು ತೀರ್ಪು ನೀಡಿದೆ. ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವರು ಸಹ ಆಧಾರ್ ಕಾರ್ಡ್ ಕಡ್ಡಾಯವಲ್ಲ ಎಂಬ ಹೇಳಿಕೆ ನೀಡಿದ್ದಾರೆ.
ಆಧಾರ್ ಕಾರ್ಡ್ ಪದ್ಧತಿ ಜಾರಿ ಬಗ್ಗೆ ಹಲವಾರು ಸಂಘ ಸಂಸ್ಥೆ ಮತ್ತು ರಾಜಕೀಯ ಪಕ್ಷಗಳು ಸಂವಿಧಾನಾತ್ಮಕ ಕಾರಣಗಳಿಗಾಗಿ ಅಪಸ್ವರ ತೆಗೆದಿದೆ. ಸಂಸತ್ತಿನಲ್ಲೂ ಈ ಬಗ್ಗೆ ಚರ್ಚೆಯಾಗಿ ಅಂಗೀಕಾರವಾಗಬೇಕಿದ್ದು ತೈಲ ಕಂಪನಿಗಳು ಗ್ರಾಹಕರ ಹಿತದೃಷ್ಟಿಯಿಂದ ವಿತರಕರಿಗೆ ಸೂಕ್ತ ನಿರ್ದೇಶನ ನೀಡಬೇಕೆಂದರು.
ಸಿಲಿಂಡರ್ ಬುಕ್ ಮಾಡಿದ 15 ದಿನಗಳಲ್ಲಿ ಮನೆ ಬಾಗಿಲಿಗೆ ಸಿಲಿಂಡರ್ ವಿತರಣೆ ಮಾಡಬೇಕು. ಹೆಚ್ಚಿನ ಹಣಕ್ಕಾಗಿ ಒತ್ತಾಯಿಸಬಾರದು. ವಿಮೆಗಾಗಿ ಪಾವತಿಸಿದ ಹಣದ ಬಗ್ಗೆ ಮಾಹಿತಿ ನೀಡಬೇಕು ಸೇರಿದಂತೆ ಹಲವು ಬೇಡಿಕೆಗಳುಳ್ಳ ಮನವಿ ಪತ್ರವನ್ನು ತೈಲ ಕಂಪನಿಗೆ ರವಾನಿಸಲು ನೀಡಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement