ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಕ್ರಿಸ್‌ಮಸ್-2013ರ ಉದ್ಘಾಟನೆ

Srinivasa Murthy VN
Updated On : 18 Dec 2013, 12:29 pm

ನೆಲಮಂಗಲ: ಭಾರತೀಯರಾದ ನಾವೆಲ್ಲರೂ ಒಂದೇ ಎಂಬ ಭಾವನೆಯಿಂದ ಪ್ರತಿಯೊಬ್ಬರು  ಸಹಕರಿಸುತ್ತಾ ಬಾಳಬೇಕು  ಎಂದು ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ಹೇಳಿದರು. ಅವರು ಸೋಮವಾರ ಪಟ್ಟಣದ ಗುರುಭವನದ ಅವರಣದಲ್ಲಿ ಕರ್ನಾಟಕ ಕ್ರೈಸ್ತರ ಶ್ರೇಯೋಭಿವೃದ್ಧಿ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಕ್ರಿಸ್‌ಮಸ್-2013ರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ಯೇಸುಕ್ರಿಸ್ತರ ಶಾಂತಿ, ಪ್ರೀತಿ, ಮಹಾತ್ಯ ಗಾಂದಿಯವರ ಮತ್ತು ಬಸವಣ್ಣನವರ ಆದರ್ಶ ಜೀವನವು ನಮ್ಮೆಲ್ಲರಿಗೂ ಸ್ಫೂರ್ತಿದಾಯಕವಾಗಬೇಕು. 2014ರ ವರ್ಷವೂ ಸಮಾಜದಲ್ಲಿರುವ ಅಸಮತೋಲನವನ್ನು ಹೋಗಲಾಡಿಸಿ, ಸಮಾಜದಲ್ಲಿ ಶಾಂತಿ ನೆಲಸಲಿ, ಪ್ರತಿಯೊಬ್ಬರಿಗೂ ಕೀರ್ತಿ ಯಶಸ್ಸು ದೊರಕಿ ಅಭಿವೃದ್ಧಿ ಹೊಂದಬೇಕೆಂದು ದೇವರಿಗೆ ಪ್ರಾರ್ಥಿಸುತ್ತೇನೆ ಎಂದರು.

ಐಜೂರಿನ ಶಾಲಾ ವಿದ್ಯಾರ್ಥಿಗಳಿಗೆ ಪ್ರಥಮ ಸ್ಥಾನ
ರಾಮನಗರ:
ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ನಗರದ ಬಾಲಕರ ಪದವಿ ಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ಜಿಲ್ಲಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಐಜೂರಿನ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳಾದ ಅರುಣ್ ಚಕ್ರವರ್ತಿ ಹಾಗೂ ಮೋಹನ್ ಕುಮಾರ್ ತಯಾರಿಸಿದ್ದ ವಿಜ್ಞಾನದ ಮಾದರಿಗೆ ಪ್ರಥಮ ಸ್ಥಾನ ಲಭಿಸಿದ್ದು, ಹಾಸನದಲ್ಲಿ ನಡೆಯುವ ರಾಜ್ಯ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನಕ್ಕೆ ಆಯ್ಕೆಯಾಗಿದ್ದಾರೆ. ಕೈಗಾರಿಕೀಕರಣದಿಂದ ಹೆಚ್ಚಾಗುತ್ತಿರುವ ಪರಿಸರ ಮಾಲಿನ್ಯದಿಂದ ಸೂರ್ಯನಿಂದ ಬರುವ ಅತಿನೇರಳೆ ಕಿರಣಗಳನ್ನು ತಡೆಯುವ ಓಜೋನ್ ಪದರಕ್ಕೆ ಹಾನಿಯಾಗುತ್ತಿದೆ. ಓಜೋನ್ ಪದರಕ್ಕೆ ಹಾನಿಯಾದರೆ ಜೀವ ಕೋಟಿಯ ಮೇಲಾಗುವ ಪರಿಣಾಮದ ಬಗ್ಗೆ ವಿಜ್ಞಾನದ ಮಾದರಿಯನ್ನು ತಯಾರಿಸಿ, ವಿಜ್ಞಾನ ವಸ್ತು  ಪ್ರದರ್ಶನದಲ್ಲಿ ಪ್ರದರ್ಶಿಸಿದ್ದರು. ರಾಜ್ಯ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನಕ್ಕೆ ಆಯ್ಕೆಯಾಗಿರುವ ವಿದ್ಯಾರ್ಥಿಗಳನ್ನು ಶಾಲೆಯ ವಿಜ್ಞಾನ ಶಿಕ್ಷಕಿ ಎಂ.ಆರ್.ಮೀನಾ,  ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕೃಷ್ಣೇಗೌಡ, ತಾಲೂಕು ಪ್ರಭಾರ ದೈಹಿಕ ಶಿಕ್ಷಣಾಧಿಕಾರಿ ನೀಲಕಂಠಸ್ವಾಮಿ ಅಭಿನಂದಿಸಿದ್ದಾರೆ.

23ಕ್ಕೆ ತ್ರೈಮಾಸಿಕ ಪರಿಶೀಲನಾ ಸಭೆ
ರಾಮನಗರ:
ತ್ರೈಮಾಸಿಕ ಪರಿಶೀಲನಾ ಸಭೆಯು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಅವರ ಅಧ್ಯಕ್ಷತೆಯಲ್ಲಿ ಡಿ.23ರ ಬೆಳಗ್ಗೆ 11ಕ್ಕೆ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಡಾ.ಡಿ.ಎಸ್. ವಿಶ್ವನಾಥ್ ತಿಳಿಸಿದ್ದಾರೆ.

ತಾಲೂಕು ಮಟ್ಟದ ಪ್ರತಿಭಾ ಕಾರಂಜಿ
ರಾಮನಗರ:
ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಡಿ.20ರ ಬೆಳಗ್ಗೆ 10ಕ್ಕೆ ನಗರದ ಗುರುಭವನದಲ್ಲಿ 2013-14ನೇ ಸಾಲಿನ ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯ ಉದ್ಘಾಟನಾ ಸಮಾರಂಭ ನಡೆಯಲಿದೆ. ಕಾರ್ಯಕ್ರಮವನ್ನು ಮಾಗಡಿಯ ಶಾಸಕ ಎಚ್.ಸಿ. ಬಾಲಕೃಷ್ಣ ಉದ್ಘಾಟಿಸುವರು. ವಿರೋಧ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಅಧ್ಯಕ್ಷತೆ ವಹಿಸುವರು. ವಿಧಾನ ಪರಿಷತ್ ಸದಸ್ಯರಾದ ಪುಟ್ಟಣ್ಣ, ರಾಮಚಂದ್ರಗೌಡ, ಸೈಯದ್ ಮದೀರ್ ಆಗಾ, ಇ.ಕೃಷ್ಣಪ್ಪ, ಜಿ.ಪಂ. ಅಧ್ಯಕ್ಷ ಎಚ್.ಸಿ.ರಾಜು, ಉಪಾಧ್ಯಕ್ಷೆ ಎಸ್.ಬಿ.ಗೌರಮ್ಮ, ತಾ.ಪಂ. ಅಧ್ಯಕ್ಷೆ ಲಕ್ಷ್ಮಿಮಂಜುನಾಥ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ  ಪ್ರಹ್ಲಾದಗೌಡ, ಡಯಟ್‌ನ ಉಪ ನಿರ್ದೇಶಕಿ ಡಾ.ಡಿ.ಇಂದ್ರಾಣಿ ಭಾಗವಹಿಸುವರು.

ಹೊಸಕೋಟೆ ತಾಲೂಕಿಗೆ 2406 ಬೈಸಿಕಲ್
ಹೊಸಕೋಟೆ:
ತಾಲೂಕಿಗೆ ಪ್ರಸಕ್ತ ವರ್ಷದಲ್ಲಿ 8ನೇ ತರಗತಿಯ ವಿದ್ಯಾರ್ಥಿಗಳಿಗಾಗಿ 2406 ಬೈಸಿಕಲ್‌ಗಳು ಮಂಜೂರಾಗಿವೆ ಎಂದು ಪಿ.ಬೈಲಾಂಜಿನಪ್ಪ ತಿಳಿಸಿದರು. ಇಲ್ಲಿ ನಡೆದ ಬೈಸಿಕಲ್ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು. ತಾಲೂಕಿನಲ್ಲಿ 19 ಸರಕಾರಿ, ಅನುದಾನಿತ 6 ಪ್ರೌಢಶಾಲೆ, 8ನೇ ತರಗತಿ ಹೊಂದಿರುವ 12 ಉನ್ನತೀಕರಿಸಿದೆ ಹಿರಿಯ ಪ್ರಾಥವಿಕ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಬೈಸಿಕಲ್ ವಿತರಿಸಲಾಗುವುದು. ಸೈಕಲ್‌ಗಳ ಜೋಡಣೆ ಕಾರ್ಯ ಮುಕ್ತಾಯಗೊಂಡಿದ್ದು ಈಗಾಗಲೇ ಹಂತಹಂತವಾಗಿ ಶಾಲೆಗಳಿಗೆ ರವಾನಿಸಲಾಗುವುದು. ಸ್ಥಳೀಯ ಜನಪ್ರತಿನಿಧಿಗಳು, ಶಾಲಾಭಿವೃದ್ಧಿ ಸಮಿತಿ ಸದಸ್ಯರ ಸಮ್ಮುಖದಲ್ಲಿ ಇವುಗಳನ್ನು ವಿತರಿಸಲು ಮುಖ್ಯ ಶಿಕ್ಷಕರಿಗೆ ಸೂಚಿಸಲಾಗಿದೆ. ಬೈಸಿಕಲ್‌ಗಳ ದುರುಪಯೋಗ ಪ್ರಕರಣಗಳು ಕಂಡುಬಂದಲ್ಲಿ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಲು ಸಹ ಸೂಚಿಸಲಾಗಿದೆ ಎಂದು ತಿಳಿಸಿದರು. ಶಾಸಕ.ಎನ್. ನಾಗರಾಜ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ವಿ. ನಾರಾಯಣಸ್ವಾಮಿ ಅವರು ಸಾಂಕೇತಿಕವಾಗಿ ವಿದ್ಯಾರ್ಥಿಗಳಿಗೆ ಬೈಸಿಕಲ್ ವಿತರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement