ಕ್ಷುಲ್ಲಕ ಕಾರಣಕ್ಕೆ ಯುವಕನನ್ನು ಕೊಚ್ಚಿ ಕೊಲೆ
ರಾಮನಗರ: ಕ್ಷುಲ್ಲಕ ಕಾರಣಕ್ಕೆ ಯುವಕನನ್ನು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿರುವ ಘಟನೆ ನಗರದ ರೆಹಮಾನಿಯಾ ನಗರ ಬಡಾವಣೆಯಲ್ಲಿ ಸೋಮವಾರ ರಾತ್ರಿ ಸಂಭವಿಸಿದೆ. ರೆಹಮಾನಿಯಾ ನಗರ ಬಡಾವಣೆ ನಿವಾಸಿ ಮುದಾಸಿರ್ ಪಾಷ(20) ಕೊಲೆಯಾದ ಯುವಕ.
ಘರ್ಷಣೆ ವೇಳೆ ಮೃತನ ಸಂಬಂಧ ನದೀಮ್ ಪಾಷ ತೀವ್ರ ಗಾಯಗೊಂಡಿದ್ದು, ಆತನನ್ನು ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮುದಾಸಿರ್ ಪಾಷ ತನ್ನ ಮನೆಯಲ್ಲಿ ಮಲಗಿದ್ದನು. ಮಧ್ಯರಾತ್ರಿ ಅಲ್ಲಿಗೆ ತೆರಳಿದ ವಸೀಂ, ಗೌಸ್ ಮತ್ತು ಅಫ್ರೀದ್ ಈ ಮೂವರು ಮುದಾಸಿರ್ ಪಾಷನನ್ನು ಮನೆಯಿಂದ ಹೊರಗೆ ಕರೆದು, ಏಕಾಏಕಿ ಲಾಂಗ್ಗಳಿಂದ ಹಲ್ಲೆ ನಡೆಸಿದ್ದಾರೆ. ಬಿಡಿಸಲು ಬಂದ ನದೀಂ ಪಾಷಗೂ ಪೆಟ್ಟಾಗಿದೆ.
ಗಾಯಗೊಂಡಿದ್ದ ಮುದಾಸಿರ್ ಮತ್ತು ನದೀಂ ಪಾಷ ಅವರಿಬ್ಬರನ್ನೂ ಜಿಲ್ಲಾಸ್ಪತ್ರೆಗೆ ಕರೆತರಲಾಯಿತು. ಅಷ್ಟರಲ್ಲಿ ಮುದಾಸಿರ್ ಕೊನೆಯುಸಿರೆಳೆದಿದ್ದನು. ನದೀಂ ಪಾಷಗೆ ಪ್ರಥಮ ಚಿಕಿತ್ಸೆ ನೀಡಿ, ಬೆಂಗಳೂರಿನ ಆಸ್ಪತ್ರೆಗೆ ಕಳುಹಿಸಲಾಯಿತು.
ಹಳೆಯ ವೈಷಮ್ಯ : ಮೃತ ಮುದಾಸಿರ್ ಮತ್ತು ಕೊಲೆ ಆರೋಪಿ ವಾಸೀಂ ಸ್ನೇಹಿತರಾಗಿದ್ದರು. 6 ತಿಂಗಳ ಹಿಂದೆ ಸಣ್ಣಪುಟ್ಟ ವಿಷಯಕ್ಕೆ ಹೊಡೆದಾಡಿದ್ದರು. ಹೀಗೆ ಮುಂದುವರೆದ ದ್ವೇಷದಿಂದ ಅವರಿಬ್ಬರು ಆಗಾಗ್ಗೆ ಜಗಳವಾಡುತ್ತಲೇ ಇದ್ದರು.
ಇದೀಗ ಆ ದ್ವೇಷ ಕೊಲೆಯಲ್ಲಿ ಪರ್ಯಾವಸನಗೊಂಡಿದೆ. ಸೋಮವಾರ ಸಂಜೆಯೂ ಮುದಾಸಿರ್ ಜಿಮ್ನಲ್ಲಿ ವ್ಯಾಯಾಮ, ಕಸರತ್ತು ಮುಗಿಸಿ ಬಂದಿದ್ದನು. ಆತನನ್ನು ಮುಗಿಸಲು ಸಂಚು ರೂಪಿಸಿದ್ದ ವಾಸಿಂ ತನ್ನಿಬ್ಬರು ಸ್ನೇಹಿತರನ್ನು ಕರೆತಂದಿದ್ದನು. ಮೂವರೂ ಲಾಂಗ್ನಿಂದ ಹಲ್ಲೆ ನಡೆಸಿ, ಪರಾರಿಯಾಗಿದ್ದಾರೆ.
ಕೊಲೆಯಲ್ಲಿ ಹಣಕಾಸಿನ ವ್ಯವಹಾರದ ಭಿನ್ನಾಭಿಪ್ರಾಯವೂ ಇತ್ತೆಂದು ಹೇಳಲಾಗಿದೆ. ಜಿಲ್ಲಾಸ್ಪತ್ರೆಯಲ್ಲಿ ಮುದಾಸಿರ್ ಶವ ಪರೀಕ್ಷೆ ನಡೆಸಿ, ಶವವನ್ನು ವಾರಸುದಾರರ ವಶಕ್ಕೆ ಒಪ್ಪಿಸಲಾಯಿತು. ಘಟನೆ ಸಂಬಂಧ ಮೃತನ ಸಂಬಂಧಿ ಫೈರೋಜ್ ಪಾಷ ನೀಡಿರುವ ದೂರಿನ ಮೇರೆಗೆ ರಾಮನಗರ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.