ನರೇಗ ಯೋಜನೆ: ಜಾಗೃತಿ ಮಾಡಿಸಿ
ಮಾಗಡಿ: ಡಿಸೆಂಬರ್ ತಿಂಗಳೊಳಗೆ ನರೇಗ ಯೋಜನೆ ಅರಿವು ಕಾರ್ಯಕ್ರಮವನ್ನು ಗ್ರಾಮಾಂದೋಲನಗೊಳಿಸುವ ಮೂಲಕ ಜನಜಾಗೃತಿಗೊಳಿಸುವಂತೆ ತಾಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಕೆ.ಬಿ. ಅಕ್ಕೋಜಿ ಕರೆ ನೀಡಿದರು.
ಅವರು ಇಲ್ಲಿನ ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ತಾಲೂಕಿನ ಎಲ್ಲಾ ಗ್ರಾ.ಪಂ. ಅಧ್ಯಕ್ಷರ, ಪಿಡಿಓಗಳ ಮತ್ತು ಕಾರ್ಯದರ್ಶಿಗಳಿಗೆ ಹಾಗೂ ಕಾಯಕ ಬಂಧುಗಳಿಗೆ ಏರ್ಪಡಿಸಿದ್ದ ನರೇಗ ಯೋಜನೆ ಅರಿವು ಕಾರ್ಯಗಾರದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ತಾಲೂಕಿಗೆ ಸುಮಾರು ಆರು ಸಾವಿರ ಶೌಚಾಲಯದ ನಿರ್ಮಾಣದ ಗುರಿ ಹೊಂದಿದ್ದು, ಪ್ರತಿ ಗ್ರಾ.ಪಂ.ಗಳು ಕನಿಷ್ಠ 200 ಶೌಚಾಲಯಗಳನ್ನು ಕಡ್ಡಾಯವಾಗಿ ನಿರ್ಮಾಣ ಗೊಳಿಸಲು ಕಾರ್ಯಪ್ರವೃತ್ತರಾಗಬೇಕು. ಪಂಚಾಯ್ತಿಗಳ ಅಧ್ಯಕ್ಷರು ಹಾಗೂ ಜನಪ್ರತಿನಿಧಿಗಳ ಪಿಡಿಓಗಳ ಸಹಕಾರದೊಂದಿಗೆ ಜನರಲ್ಲಿ ಕಡ್ಡಾಯ ಶೌಚಾಲಯ, ಸುಚಿತ್ವ ಹಾಗೂ ಗ್ರಾಮ ನೈರ್ಮಲ್ಯ ಕಾಪಾಡುವಂತೆ ಮನವರಿಕೆ ಮಾಡಿಕೊಡಬೇಕು. ಮಹಾತ್ಮ ಗಾಂಧೀಜಿ ಕಂಡ ರಾಮ ರಾಜ್ಯದ ಕನಸು ನನಸು ಮಾಡಬೇಕು. ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಗ್ರಾಮಗಳು ಮುಂದುವರೆಯಲು ಇದೊಂದು ಸುವರ್ಣಾವಕಾಶ. ನರೇಗ ಯೋಜನೆ ಅನುಷ್ಠಾನಕ್ಕೆ ಕಾರ್ಯಕ ಬಂಧುಗಳು ಪ್ರತಿ ಪಂಚಾಯ್ತಿ ವ್ಯಾಪ್ತಿಯಲ್ಲಿ ವಿಶೇಷ ಕಾರ್ಯಕ್ರಮ ಹಾಕಿಕೊಳ್ಳುವಂತೆ ತಾಕೀತು ಮಾಡಿದರು.
ದುರುಪಯೋಗಕ್ಕೆ ಅವಕಾಶವಿಲ್ಲ: ತಾಲೂಕು ವ್ಯಾಪ್ತಿಯಲ್ಲಿ ನರೇಗ ಯೋಜನೆ ಕಾರ್ಯಕ್ರಮಗಳನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ಇಲ್ಲಿಯವರೆವಿಗೂ ದುರುಪಯೋಗಕ್ಕೆ ಅವಕಾಶ ನೀಡಿಲ್ಲ. ಎಲ್ಲರ ಸಹಕಾರ ಹಾಗೂ ಪ್ರಾಮಾಣಿಕ ಪ್ರಯತ್ನದಿಂದ ಉತ್ತಮ ರೀತಿಯಲ್ಲಿ ಅನುಷ್ಠಾನಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ನರೇಗ ಯೋಜನೆ ಹೆಚ್ಚೆಚ್ಚು ಅನುಷ್ಠಾನಗೊಳಿಸಲು ಸರ್ಕಾರ ಪ್ರೋತ್ಸಾಹಿಸುತ್ತಿದೆ ಎಂದರು. ಪಿಡಿಓ ಗಳೊಂದಿಗೆ ಉತ್ತಮ ಸಂಪರ್ಕ ಹೊಂದಿರಬೇಕು. ನರೇಗ ಯೋಜನೆ ಅನುಷ್ಠಾನ ಕುರಿತು ವಾರಕ್ಕೊಮ್ಮೆ ಪಿಡಿಓಗೆ ಮಾಹಿತಿ ನೀಡಬೇಕು. ಪ್ರತಿ ಪಂಚಾಯ್ತಿಯಲ್ಲಿಯೂ ವೈಯಕ್ತಿಕ ಹಾಗೂ ಸಮೂಹ ಕಾರ್ಯಕ್ರಮಗಳನ್ನು ಕೈಗೊಳ್ಳಲು ಜಾಬ್ ಕಾರ್ಡ್ ಕಡ್ಡಾಯ. ಜಾಬ್ ಕಾರ್ಡ್ ಹೊಂದಿರುವ ಅರ್ಹರಿಗೆ ಗರಿಷ್ಠ ನೂರು ದಿನ ಕೆಲಸ ಕೊಡಬೇಕು. ಗ್ರಾಮಾಭಿವೃದ್ಧಿಯ ಮಹತ್ಕಾರ್ಯಕ್ಕೆ ಜನಾಂದೋಲನಗೊಳಿಸಬೇಕೆಂದು ತಾ.ಪಂ. ಡಿ.ಸಿ.ಒ.ಪರಶಿವಮೂರ್ತಿ ವಿವರಿಸಿದರು. ತಾಲೂಕು 32 ಗ್ರಾಮ ಪಂಚಾಯ್ತಿಗಳ ಅಧ್ಯಕ್ಷರು, ಪಿಡಿಓಗಳು, ಕಾರ್ಯದರ್ಶಿಗಳು ಕಾಯಕಬಂಧುಗಳು ನರೇಗ ಅರಿವು ಕಾರ್ಯಗಾರದಲ್ಲಿ ಭಾಗವಹಿಸಿದ್ದರು.