ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಸಿಬ್ಬಂದಿಯಿಂದಲೇ ಅಕ್ರಮ ಪಂಪ್‌ಸೆಟ್: ಆರೋಪ

Srinivasa Murthy VN
Updated On : 18 Dec 2013, 12:28 pm

ಚನ್ನಪಟ್ಟಣ: ಗ್ರಾಮದಲ್ಲಿ ಸರ್ಕಾರಿ ಆಸ್ತಿಗಳನ್ನು ರಕ್ಷಣೆ ಮಾಡಬೇಕಾದ ಸರ್ಕಾರಿ ಸಿಬ್ಬಂದಿಯೇ ಅಕ್ರಮವಾಗಿ ಪಂಪ್ ಸೆಟ್ ಅಳವಡಿಸಿ ಕೆರೆಯ ನೀರನ್ನು ಖಾಲಿ ಮಾಡುವ ಮೂಲಕ ಗ್ರಾಮಕ್ಕೆ ನಷ್ಟ ಉಂಟು ಮಾಡುತ್ತಿದ್ದಾರೆ ಎಂದು ಆರೋಪಿಸಿ ತಾಲೂಕಿನ ಕುಂತೂರು ದೊಡ್ಡಿ ಗ್ರಾಮದ ಸಾರ್ವಜನಿಕರು ತಹಸೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಸೋಮವಾರ ಬೆಳಿಗ್ಗೆ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು ಗ್ರಾಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಅರಳಾಳು ಸಂದ್ರದ ಗ್ರಾಮಸಹಾಯಕ ರಾಜು ಎಂಬುವರು ಗ್ರಾಮದ ಕುಂಟಮುದ್ದನ ಕೆರೆಗೆ ಪಂಪ್ ಸೆಟ್ ಹಾಕಿ ಕೊಂಡು ತಮ್ಮ ಜಮೀನಿಗೆ ನೀರು ಪೂರೈಕೆ ಮಾಡುತ್ತಿದ್ದು ಇದರಿಂದಾಗಿ ಗ್ರಾಮದ ದನಕರುಗಳಿಗೆ, ಅಂತರಜಲಕ್ಕೆ ಸಮಸ್ಯೆಯಾಗಿದೆ ಎಂದು ಕಿಡಿಕಾರಿದರು.
ಈ ಬಗ್ಗೆ ಸಾರ್ವಜನಿಕರು ಪ್ರಶ್ನಿಸಿದರೆ ನನ್ನನ್ನು ಯಾರೂ ಏನು ಮಾಡಲು ಸಾಧ್ಯವಿಲ್ಲ, ನನಗೆ ಎಲ್ಲರ ಬೆಂಬಲವಿದೆ ಎಂದು ಧಮಕಿ ಹಾಕುವ ಜತೆಗೆ ವಾಚಾಮ ಗೋಚರ ನಿಂದಿಸುತ್ತಿದ್ದು, ಕೆರೆಯಲ್ಲಿರುವ ನೀರು ಖಾಲಿಯಾದರೆ ಮತ್ತೆ ಕೆರೆ ತುಂಬುವುದಿಲ್ಲ. ಬೇಸಿಗೆಯಲ್ಲಿ ದನಕರುಗಳಿಗೆ, ಕೆರೆಯಂಚಿನಲ್ಲಿರುವ ದೇವಾಲಯದ ದೇವತಾ ಕಾರ್ಯಗಳಿಗೆ ನೀರನ್ನು ಬಳಸುವುದು ಹೇಗೆ ಎಂಬ ಆತಂಕ ಎದುರಾಗಿದೆ ಎಂದು ತಹಸೀಲ್ದಾರರ ಮುಂದೆ ತಮ್ಮ ಅಹವಾಲು ತೋಡಿ ಕೊಂಡರು.
ತಹಸೀಲ್ದಾರ್ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳ ಬೆಂಬಲ ನನಗಿದೆ ಎಂದು ನೀರನ್ನು ಅಕ್ರಮವಾಗಿ ತಮ್ಮ ಜಮೀನಿಗೆ ಬಳಸಿಕೊಳ್ಳುತ್ತಿದ್ದಾರೆ. ಈಬಗ್ಗೆ ಪ್ರಶ್ನಿಸಿದ ಗ್ರಾಮದ ಗಿರಿಯಪ್ಪ, ಕತ್ತಗಪ್ಪ, ಸುರೇಶ, ತಿರುಮಲಯ್ಯ ಅವರುಗಳ ಮೇಲೆ ಹಲ್ಲೆ ನಡೆಸಿದ್ದೂ ಅಲ್ಲದೆ ಪ್ರಾಣ ಬೆದರಿಕೆ ಹಾಕಿದ್ದಾರೆ, ಇವರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಘಟನೆ ನಡೆದ ಸಂದರ್ಭದಲ್ಲಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಲು ಮುಂದಾದರೂ ಪೊಲೀಸರು ದೂರು ಸ್ವೀಕರಿಸಲು ನಿರಾಕರಿಸಿದರು, ಇಬ್ಬರು ಪೇದೆಗಳನ್ನು ಕಳುಹಿಸಿ ಸುಮ್ಮನಾಗಿದ್ದು ಬಿಟ್ಟರೆ ರಾಜು ವಿರುದ್ಧ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಪೊಲೀಸರೂ ಅವರ ಬೆಂಬಲಕ್ಕೆ ನಿಂತಿದ್ದಾರೆ. ಹಾಗಾಗಿ ತಾಲೂಕು ಆಡಳಿತ ನಮಗೆ ನ್ಯಾಯ ದೊರಕಿಸಕೊಡಬೇಕೆಂದು ಆಗ್ರಹಿಸಿದರು.
ಕೂಡಲೇ ಅಕ್ರಮವೆಸಗಿದ, ಹಲ್ಲೆ ನಡೆಸಿದ ರಾಜು ಅವರನ್ನು ಅಮಾನತುಗೊಳಿಸಿ, ಬಂಧಿಸಬೇಕು ಹಾಗೂ ಕೆರೆಗೆ ಅವರ ಖರ್ಚಿನಿಂದಲೇ ನೀರು ತುಂಬಿಸಲು ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಪ್ರತಿಭಟನಾಕಾರರನ್ನು ಸಂತೈಸಿದ ತಹಸೀಲ್ದಾರ್ ಶಿವರುದ್ರಪ್ಪ ಹಾಗೂ ಸಿಪಿಐ ನಾಗರಾಜು, ಈ ಬಗ್ಗೆ ವರದಿ ತರಿಸಿ ಅಕ್ರಮವಾಗಿ ಬಳಸಿದ್ದಲ್ಲಿ ಅವರಿಂದಲೇ ನೀರು ತುಂಬಿಸಲು ಹಾಗೂ ತಪ್ಪಿತಸ್ತರ ವಿರುದ್ಧ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದರು. ನಂತರ ಪ್ರತಿಭಟನಾಕಾರರು ಪ್ರತಿಭಟನೆ ಕೈಬಿಟ್ಟರು.
ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಡಿ.ಕೆ.ಕಾಂತರಾಜು, ಕಾರ್ಯನಿರ್ವಹಣಾಧಿಕಾರಿ ರವಿಕುಮಾರ್ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement