ಒಕ್ಕಲಿಗರ ಸಂಘ ಕೆಲವರ ಕಪಿ ಮುಷ್ಟಿಗೆ ಸಿಲುಕಿದೆ
ಕ.ಪ್ರ.ವಾರ್ತೆ ರಾಮನಗರ ಡಿ.19
ರಾಜ್ಯದ ಒಕ್ಕಲಿಗ ಜನಾಂಗದ ಅಭಿವೃದ್ಧಿಗೆ ಶ್ರಮಿಸಬೇಕಿದ್ದ ರಾಜ್ಯ ಒಕ್ಕಲಿಗರ ಸಂಘವು ಸರ್ವಾಧಿಕಾರಿ ಧೋರಣೆ ಹೊಂದಿರುವ ಕೆಲವರ ಕಪಿ ಮುಷ್ಟಿಗೆ ಸಿಲುಕಿದೆ. ಇದರಿಂದಾಗಿ ಒಕ್ಕಲಿಗರ ಸಂಘ ಸ್ಥಾಪನೆಯ ಉದ್ದೇಶ ಈಡೇರಿಲ್ಲ ಎಂದು ಒಕ್ಕಲಿಗರ ಸಂಘದ ಚುನಾವಣೆಗೆ ಸ್ಪರ್ಧಿಸಿರುವ ಎಚ್.ಬಿ.ಚಂದ್ರಶೇಖರ್ ತಿಳಿಸಿದರು.
ಜನಾಂಗದ ಎಲ್ಲರನ್ನೂ ಒಗ್ಗೂಡಿಸಿಕೊಂಡು ಅಭಿವೃದ್ಧಿ ನಿಟ್ಟಿನಲ್ಲಿ ಹೆಜ್ಜೆ ಇಡಬೇಕಿದ್ದವರೇ ಜನಾಂಗದಲ್ಲಿರುವ ಒಳ ಪಂಗಡಗಳಲ್ಲಿ ದ್ವೇಷದ ಭಾವನೆ ಬಿತ್ತುವ ಮೂಲಕ ಸ್ವಾರ್ಥ ಸಾಧನೆಗೆ ಮುಂದಾಗಿದ್ದಾರೆ ಎಂದು ನಗರದಲ್ಲಿ ನಡೆದ ಸುದ್ದಿ ಗೋಷ್ಠಿಯಲ್ಲಿ ಹೇಳಿದರು.
ಒಕ್ಕಲಿಗರ ಸಂಘಕ್ಕೆ ದಾನವಾಗಿ ಬಂದಿರುವ ಆಸ್ತಿಯು ಪರರ ಪಾಲಾಗಲು ಈ ಹಿಂದೆ ಸಂಘದ ಅಧ್ಯಕ್ಷರು ಮತ್ತು ಕೆಲ ಸದಸ್ಯರೇ ಕಾರಣರಾಗಿದ್ದಾರೆ. ಸಂಘಕ್ಕೆ ಸೇರಿದ ಆಸ್ತಿಯನ್ನು ರಕ್ಷಿಸಬೇಕಿದ್ದವರೇ ಆಸ್ತಿ ಕಬಳಿಸಲು ಹೊರಟಿದ್ದಾರೆ. ಇಂತಹವರಿಂದ ಸಂಘದ ಬೆಳವಣಿಗೆ ಅಸಾಧ್ಯ ಎಂದರು.
ಒಕ್ಕಲಿಗ ಸಂಘದ ಒಟ್ಟಾರೆ ಆಸ್ತಿ ಎಷ್ಟು. ಸಂಘದಿಂದ ಜನಾಂಗಕ್ಕೆ ಯಾವ ಪ್ರಯೋಜನಗಳಿವೆ. ಇದುವರೆಗೂ ಆಡಳಿತ ನಡೆಸಿದವರ ಸಾಧನೆ ಏನು. ಸಂಘಕ್ಕೆ ರಂಗಮ್ಮ ಎಂಬುವರು ದಾನವಾಗಿ ನೀಡಿದ್ದ ಸಜ್ಜೆ ಪಾಳ್ಯದ ಆಸ್ತಿ ಸ್ಥಿತಿಗತಿ ಏನು ಎಂಬುದರ ಬಗ್ಗೆ ಒಕ್ಕಲಿಗರ ಪತ್ರಿಕೆಯಲ್ಲಿ ಪ್ರಕಟಿಸಬೇಕು ಎಂದು ಹೇಳಿದರು.
ವೈದ್ಯಕೀಯ ಸೀಟುಗಳನ್ನು ಪ್ರತಿ ವರ್ಷ 60-70 ಲಕ್ಷ ಹಣ ನೀಡುವ ಶ್ರೀಮಂತರಿಗೆ ಆಡಳಿತ ಮಂಡಳಿ ಸದಸ್ಯರು ಮಾರಿಕೊಳ್ಳುತ್ತಿದ್ದಾರೆ. ಜನಾಂಗದ ಬಡವರಿಗೆ ಎಷ್ಟು ವೈದ್ಯಕೀಯ, ಎಂಜಿನಿಯರಿಂಗ್ ಸೀಟುಗಳನ್ನು ನೀಡಿದ್ದೀರಿ. ಎಷ್ಟು ಮಂದಿ ಒಕ್ಕಲಿಗ ವಿದ್ಯಾರ್ಥಿಗಳು ಡಾಕ್ಟರ್, ಎಂಜಿನಿಯರ್‌ಗಳಾಗಿದ್ದಾರೆ ಎಂದು ಪ್ರಶ್ನಿಸಿದರು.
ಸಂಘಕ್ಕೆ ಸೇರಿದ ರು.30 ಕೋಟಿ ಹಣವನ್ನು ಯಾವುದೋ ಬ್ಯಾಂಕ್‌ನಲ್ಲಿ ಠೇವಣಿ ಇಡಲಾಗಿದೆ. ಕೆಂಪೇಗೌಡರ ಹೆಸರಿನಲ್ಲಿ ಒಂದು ಬ್ಯಾಂಕ್ ಪ್ರಾರಂಭಿಸಿ, ಕಷ್ಟದಲ್ಲಿರುವ ಜನಾಂಗದವರಿಗೆ ಸಾಲವನ್ನು ಏಕೆ ನೀಡಬಾರದು. ಕೆಂಪೇಗೌಡ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರವನ್ನು ಸ್ಥಾಪಿಸಿ ಪ್ರತಿಭಾವಂತ ಬಡ ಒಕ್ಕಲಿಗ ವಿದ್ಯಾರ್ಥಿಗಳಿಗೆ ಉತ್ತಮ ತರಬೇತಿ ನೀಡುವ ಮೂಲಕ ಅವರನ್ನು ಕೇಂದ್ರ ಹಾಗೂ ರಾಜ್ಯದ ಆಡಳಿತ ಸೇವೆಗೆ ಸೇರಿಸುವ ಕೆಲಸ ಮಾಡಬೇಕು ಎಂದರು.
ಈ ಬಾರಿಯ ಚುನಾವಣೆಯಲ್ಲಿ ತಮ್ಮ ಅಮೂಲ್ಯ ಮತಗಳನ್ನು ನೀಡಿ, ಎಲ್ಲಾ ಚಿಂತನೆಗಳನ್ನು ಕಾರ್ಯರೂಪಕ್ಕೆ ತಂದು, ಸಮುದಾಯದ ಬೆಳವಣಿಗೆಗೆ ಹಾಗೂ ಸೇವೆ ಮಾಡಲು ಒಂದು ಅವಕಾಶ ನೀಡಬೇಕು ಎಂದು ವಿನಂತಿಸಿದರು.