ಕೋಟ್ಯಂತರ ರು. ಬೆಲೆ ಬಾಳುವ ಸರ್ಕಾರಿ ಜಮೀನು ವಶಕ್ಕೆ
ನೆಲಮಂಗಲ: ಪಟ್ಟಣದ ಅಂಬೇಡ್ಕರ್ ಸರ್ಕಲ್ ಬಳಿ ಇದ್ದ ಕೋಟ್ಯಂತರ ರು. ಬೆಲೆ ಬಾಳುವ ಸರ್ಕಾರಿ ಜಮೀನನ್ನು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಶಂಕರ್ ವಶಪಡಿಸಿಕೊಂಡ ಘಟನೆ ಗುರುವಾರ ನಡೆದಿದೆ. ನೆಲಮಂಗಲ ಗ್ರಾಮದ ಸರ್ವೆ ನಂಬರ್ 246ರ 1 ಎಕರೆ 2 ಗುಂಟೆ ಜಮೀನು ಬಂಡಿಜಾಡು ಎಂದು ಕಂದಾಯ ದಾಖಲೆಗಳಲ್ಲಿ ನೂರಾರು ವರ್ಷಗಳಿಂದ ಇದ್ದರೂ ಖಾಸಗಿಯವರ ಹೆಸರಿನಲ್ಲಿ ಪುರಸಭೆಯಲ್ಲಿ ಖಾತೆ ಮಾಡಿಸಿಕೊಂಡಿರುವುದು ಗಮನಕ್ಕೆ ಬಂದಿದ್ದರಿಂದ ಕ್ರಮ ಕೈಗೊಂಡ ತಹಸೀಲ್ದಾರ್ ಡಾ.ಗೀತಾ ಭೂ ಮಾಪಕರಾದ ಜಯಪ್ಪ ಅವರಿಂದ ಜಮೀನನ್ನು ಸರ್ವೆ ಮಾಡಿಸಿ ವಶಪಡಿಸಿಕೊಂಡರು. ರಾಜಸ್ವ ನಿರೀಕ್ಷಕ ನಂಜಪ್ಪ, ಅಶ್ವತ್ಥಕುಮಾರ್, ಗ್ರಾಮ ಲೆಕ್ಕಾಧಿಕಾರಿ ರವಿ, ಸುಧೀಪ್, ಭೂಮಾಪಕರಾದ ಭದ್ರೇಶ್, ನಾಗರಾಜ್, ಪುರಸಭೆ ಮುಖ್ಯಾಧಿಕಾರಿ ಸಬ್‌ಇನ್ಸ್‌ಪೆಕ್ಟರ್ ಬಾಲಾಜಿ ಇದ್ದರು.
ಮಾರಕಾಸ್ತ್ರ ಹಿಡಿದು ಓಡಾಡುತ್ತಿದ್ದ ವ್ಯಕ್ತಿ ಬಂಧನ
ಕ.ಪ್ರ.ವಾರ್ತೆ ಕನಕಪುರ ಡಿ.19
ನಡುರಾತ್ರಿಯಲ್ಲಿ ಮಾರಕಾಸ್ತ್ರಗಳನ್ನು ಇರಿಸಿಕೊಂಡು ಅನುಮಾನಾಸ್ಪದವಾಗಿ ವಾಹನದಲ್ಲಿ ಸಂಚರಿಸುತ್ತಿದ್ದ ವ್ಯಕ್ತಿಗಳ ಮೇಲೆ ಸಾತನೂರು ಠಾಣಾ ಪೊಲೀಸರು ದಾಳಿ ನಡೆಸಿ ಒಬ್ಬನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತನ್ನು ಬಾಚಳ್ಳಿದೊಡ್ಡಿ ತಾಂಡ್ಯಾದ ರಾಜುನಾಯ್ಕ ಎಂದು ಗುರುತಿಸಲಾಗಿದ್ದು, ಪರಾರಿಯಾಗಿರುವ ಮತ್ತೊಬ್ಬ ಇದೇ ಗ್ರಾಮದ ಗೋಪಾಲನಾಯ್ಕ ಎಂದು ತಿಳಿದು ಬಂದಿದೆ. ಅರೋಪಿಗಳು ಅಕ್ರಮ ಬೇಟೆಗಾರರಾಗಿದ್ದು ಅರಣ್ಯ ಪ್ರದೇಶಗಳಲ್ಲಿ ರಾತ್ರಿಬೇಟೆ ನಡೆಸಲು ತೆರಳುತ್ತಿದ್ದರು ಎಂದು ಪೋಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ.