'ಶಿಕ್ಷಣದ ಹಕ್ಕ್ನು ಕಸಿಯಲು ಮುಂದಾದ ರಾಜ್ಯ ಸರ್ಕಾರ'
ಚನ್ನಪಟ್ಟಣ: ಕೆಲ ಖಾಸಗಿ ಶಿಕ್ಷಣ ಸಂಸ್ಥೆಯ ಲಾಬಿಗೆ ಮರುಳಾಗಿರುವ ರಾಜ್ಯ ಸರ್ಕಾರ ವೃತ್ತಿಶಿಕ್ಷಣ ಪ್ರವೇಶ ಮತ್ತು ಶುಲ್ಕ ನಿಗದಿ ಕಾಯಿದೆಯನ್ನು ಜಾರಿಗೆ ತರುವ ಮೂಲಕ ರಾಜ್ಯದ ಅಸಂಖ್ಯಾತ ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳ ಶಿಕ್ಷಣದ ಹಕ್ಕನ್ನು ಕಸಿದುಕೊಳ್ಳಲು ಮುಂದಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಬಿ.ಟಿ. ನಾಗೇಶ್ ಆಕ್ರೋಶ ವ್ಯಕ್ತಪಡಿಸಿದರು.
ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಪಟ್ಟಣದ ಖಾಸಗಿ ಬಸ್ ನಿಲ್ದಾಣದ ವೃತ್ತದಲ್ಲಿ ಕಾಯಿದೆ ಜಾರಿವಿರೋಧಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿ, ಸರ್ಕಾರದ ನೀತಿಯಿಂದ ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಶಿಕ್ಷಣ ಮತ್ತೆ ಉಳ್ಳವರ ಪಾಲಾಗಲಿದೆ. ಭಾರತದ ಸಂವಿಧಾನದ ಆಶಯಗಳಿಗೆ ವ್ಯತಿರಿಕ್ತವಾಗಿ ಸರ್ಕಾರ ಈ ಕಾಯಿದೆಯನ್ನು ಜಾರಿಗೆ ತರಲು ಮುಂದಾಗಿದೆ ಎಂದರು.
ಪ್ರಸ್ತುತ ಕಾಯಿದೆಯಲ್ಲಿ ಸರ್ಕಾರ ಎಂಜಿನಿಯರಿಂಗ್, ಮೆಡಿಕಲ್ ಮತ್ತು ದಂತ ವೈದ್ಯಕೀಯ ಸೀಟುಗಳನ್ನು ನಿಗದಿತ ಪ್ರಮಾಣದಂತೆ ಹಂಚಿಕೆ ಮಾಡುತ್ತಿದೆ. ನೂತನ ಕಾಯಿದೆ ಜಾರಿಗೆ ಬಂದಿದ್ದೇ ಆದಲ್ಲಿ ಖಾಸಗಿ ವಿದ್ಯಾಸಂಸ್ಥೆಗೆ ಸ್ವಾಯತ್ತತೆ ದೊರಕಿ ಉನ್ನತ ಶಿಕ್ಷಣದ ವ್ಯಾಪಾರಿಕರಣಕ್ಕೆ ಕಾರಣವಾಗುತ್ತದೆ ಎಂದು ಕಿಡಿಕಾರಿದರು.
ಪ್ರತಿಭಟನಾ ಕಾರರನ್ನುದ್ದೇಶಿಸಿ ಮಾತನಾಡಿದ ಪ್ರಗತಿಪರ ಚಿಂತಕ ಧರಣೀಶ್ ರಾಂಪುರ ಸಿಇಟಿ ವ್ಯವಸ್ಥೆಯಿಂದಾಗಿ ಎಲ್ಲಾ ವರ್ಗದವರಿಗೂ ಉನ್ನತ ಶಿಕ್ಷಣ ದೊರಕುವಂತಾಗಿತ್ತು. ಆದರೆ ಇದಕ್ಕೆ ಕಲ್ಲುಹಾಕುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಬಹುಜನ ಹಿತಕ್ಕಾಗಿ ಆಡಳಿತ ನಡೆಸುತ್ತಿದ್ದಾರೋ, ಇಲ್ಲ ಕೆಲವೇ ಕೆಲವು ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರ ಮರ್ಜಿಗೆ ಒಳಗಾಗಿ ಸರ್ಕಾರ ನಡೆಸುತ್ತಿದ್ದಾರೋ ಎಂಬ ಗುಮಾನಿ ಕಾಡುತ್ತಿದೆ ಎಂದು ಲೇವಡಿ ಮಾಡಿದರು.
ಸರ್ಕಾರದ ಈ ಅವೈಜ್ಞಾನಿಕ ನೀತಿಯನ್ನು ತಾಲೂಕಿನ ಎಲ್ಲಾ ವಿದ್ಯಾರ್ಥಿಗಳು ಉಗ್ರವಾಗಿ ಖಂಡಿಸಬೇಕಿದ್ದು ರಾಜ್ಯಾದ್ಯಂತ ವ್ಯಾಪಕ ಹೋರಾಟ ನಡೆಸ ಬೇಕೆಂದು ತಿಳಿಸಿದ ಅವರು ಸರ್ಕಾರ ಕೂಡಲೇ ವಿದ್ಯಾರ್ಥಿಗಳಿಗೆ ಮಾರಕವಾಗಿರುವ ಈ ಕಾಯಿದೆಯನ್ನು ಹಿಂದಕ್ಕೆ ಪಡೆಯಬೇಕೆಂದು ಆಗ್ರಹಿಸಿದರು. ಮುಖ್ಯಮಂತ್ರಿಗಳ ಮನೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಬೇಕಾದೀತೆಂದು ಜನಪರ ವೇದಿಕೆ ಅಧ್ಯಕ್ಷ ಬೇವೂರು ಯೋಗೇಶ್ ಎಚ್ಚರಿಸಿದರು.
ಜನಪರ ವೇದಿಕೆಯ ಮಂಗಳಮ್ಮ, ಪದಾಧಿಕಾರಿಗಳಾದ ಮರಿಅಂಕೇಗೌಡ, ಕೃಷ್ಣೇಗೌಡ ಜಗದಾಪುರ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.