ಕೊಲೆ ಮಾಡಿ ಪರಾರಿಯಾಗಿದ್ದ 3 ಆರೋಪಿಗಳ ಸೆರೆ
ರಾಮನಗರ: ಇಲ್ಲಿನ ರೆಹಮಾನಿಯಾನಗರ ಬಡಾವಣೆಯಲ್ಲಿ ಯುವಕನನ್ನು ಕೊಲೆ ಮಾಡಿ ಪರಾರಿಯಾಗಿದ್ದ ಮೂವರು ಆರೋಪಿಗಳನ್ನು ರಾಮನಗರ ಪುರ ಠಾಣೆ ಪೊಲೀಸರು ಬುಧವಾರ ಸಂಜೆ ಬಂಧಿಸಿದ್ದಾರೆ.
ರೆಹಮಾನಿಯ ನಗರದ ವಾಸಿಂ ಖಾನ್, ಗೌಸ್ ಖಾನ್ ಮತ್ತು ಅಫ್ರಿದಿ ಬಂಧಿತ ಆರೋಪಿಗಳು. ಇವರು ಡಿ.16ರ ರಾತ್ರಿ ಮುದಸ್ಸೀರ್ ಪಾಷ ಎಂಬಾತನನ್ನು ಮಾರಕಾಸ್ತ್ರಗಳಿಂದ ಕೊಲೆ ಮಾಡಿ, ನದೀಮ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದರು.
ಆರೋಪಿಗಳ ಪತ್ತೆಗಾಗಿ ಸರ್ಕಲ್ ಇನ್ಸ್ಪೆಕ್ಟರ್ ಸುಬ್ರಹ್ಮಣ್ಯ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಆರೋಪಿಗಳ ಚಲನವಲನದ ಮೇಲೆ ತೀವ್ರ ನಿಗಾ ಇರಿಸಿದ್ದ ಪೊಲೀಸರ ತಂಡವು ಬುಧವಾರ ರಾತ್ರಿ ತಾಲೂಕಿನ ಕೈಲಾಂಚ ಗ್ರಾಮದ ಬಳಿ ಬಂಧಿಸಿದ್ದಾರೆ.
ಕೊಲೆಯಾದ ಮುದಸ್ಸೀರ್ ಪಾಷ ಮತ್ತು ಬಂಧಿತ ಆರೋಪಿಗಳು ಸ್ನೇಹಿತರಾಗಿದ್ದರು. ಸಣ್ಣಪುಟ್ಟ ವಿಷಯಗಳಿಗೆ ಸ್ನೇಹಿತರ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು. ಕೊಲೆಯಾದ ದಿನ ಮೃತ ಮುದಸ್ಸೀರ್ ಪಾಷ 1ನೇ ಆರೋಪಿ ವಾಸಿಂ ಖಾನ್ ಮೇಲೆ ಹಲ್ಲೆ ನಡೆಸಿದ್ದನು.
ಇದರಿಂದ ಆಕ್ರೋಶಗೊಂಡ ವಾಸಿಂ ಖಾನ್ ಮನೆಗೆ ತೆರಳಿ ಗೌಸ್ ಖಾನ್ ಮತ್ತು ಅಫ್ರಿದಿಯೊಂದಿಗೆ ಮಾರಕಾಯುಧಗಳೊಂದಿಗೆ ಮುದಸ್ಸೀರ್ ಪಾಷನ ಮನೆ ಬಳಿ ಆಗಮಿಸಿದ್ದನು. ಸ್ವಲ್ಪ ಮಾತುಕತೆ ಇದೆ ಎಂದು ಹೇಳಿ ಮೂವರು ಮುದಸ್ಸೀರ್ ಪಾಷನನ್ನು ಮನೆಯಿಂದ ತುಸು ದೂರಕ್ಕೆ ಕರೆದೊಯ್ದಿದ್ದರು.
ಅಲ್ಲಿ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿತು. ಮುದಸ್ಸೀರ್ ಪಾಷನೊಂದಿಗೆ ಕ್ಯಾತೆ ತೆಗೆದ ವಾಸಿಂ ತನ್ನೊಂದಿಗೆ ಕರೆದೊಯ್ದಿದ್ದ ಇಬ್ಬರ ನೆರವಿನೊಂದಿಗೆ ಕೊಲೆ ಮಾಡಿದ್ದಾನೆ. ಘಟನೆ ಸಂಭವಿಸಿದ 48
ತಾಸಿನಲ್ಲೇ ಆರೋಪಿಗಳನ್ನು ಬಂಧಿಸಿರುವುದಕ್ಕೆ ಸರ್ಕಲ್ ಇನ್ಸ್ಪೆಕ್ಟರ್ ಸುಬ್ರಹ್ಮಣ್ಯ, ಪೇದೆಗಳಾದ ದೇವೇಂದ್ರ, ಶರತ್ ಅವರನ್ನು ಡಿವೈಎಸ್ಪಿ ರಾಮಲಿಂಗಪ್ಪ ಅಭಿನಂದಿಸಿದ್ದಾರೆ.