ಆರ್ಥಿಕ ಬೆಳೆಗಳತ್ತ ಗಮನ ಹರಿಸಿ
ಕ.ಪ್ರ.ವಾರ್ತೆ ರಾಮನಗರ ಡಿ.21
ರೈತ ಸಮುದಾಯವು ಸಾಂಪ್ರದಾಯಿಕ ಕೃಷಿ ಪದ್ಧತಿಗೆ ಜೋತು ಬೀಳದೆ, ಆರ್ಥಿಕ ಬೆಳೆಗಳತ್ತ ಗಮನ ಹರಿಸುವುದು ಅಗತ್ಯ. ಈ ನಿಟ್ಟಿನಲ್ಲಿ ವೈನ್ ದ್ರಾಕ್ಷಿ ಬೇಸಾಯ ಅವಲಂಬನೆಯೂ ಸೂಕ್ತವಾಗಿದೆ ಎಂದು ಮಾಜಿ ಸಚಿವ ಹಾಗೂ ಶಾಸಕ ಸಿ.ಪಿ.ಯೋಗೇಶ್ವರ್ ಕರೆ ನೀಡಿದರು.
ಚನ್ನಪಟ್ಟಣ ತಾಲೂಕಿನ ಬೈರಾಪಟ್ಟಣ ತೋಟಗಾರಿಕೆ ಫಾರಂ ಎದುರು ಕರ್ನಾಟಕ ದ್ರಾಕ್ಷಾರಸ ಮಂಡಳಿ, ತೋಟಗಾರಿಕೆ ಇಲಾಖೆ, ಜಿ.ಪಂ. ಹಾಗೂ ವೈನ್ ಹೆರಿಟೇಜ್ ಸಹಯೋಗದಲ್ಲಿ ಆಯೋಜಿಸಿರುವ ಎರಡು ದಿನದ ಕರ್ನಾಟಕ ವೈನ್ ಟೂರಿಸಂ, ದ್ರಾಕ್ಷಾರಸ ಉತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ವೈನ್ ಟೂರಿಸಂ ಮತ್ತು ದ್ರಾಕ್ಷಾ ರಸ ಉತ್ಸವವು ಕೃಷಿ ಕ್ಷೇತ್ರದಲ್ಲಿನ ನಷ್ಟದಿಂದ ಸಂಕಷ್ಟದಲ್ಲಿರುವ ಈ ಜಿಲ್ಲೆಯ ರೈತ ವರ್ಗದ ಜನರ ಆರ್ಥಿಕಾಭಿವೃದ್ಧಿಗೆ ಪೂರಕವಾಗಿದೆ. ಇಲ್ಲಿ ದೊರೆಯುವ ಉಪಯುಕ್ತ ಮಾಹಿತಿಗಳನ್ನು ಅನುಸರಿಸಿ, ರೈತರು ತಮ್ಮ ಆರ್ಥಿಕ ಸ್ವಾವಲಂಬನೆಗೆ ಮುಂದಾಗಬೇಕು ಎಂದರು.
ದ್ರಾಕ್ಷಿ ಪರ್ಯಾಯ ಬೆಳೆ: ಸಾಂಪ್ರದಾಯಿಕ ಕೃಷಿ ಪದ್ಧತಿಯಲ್ಲಿ ನಷ್ಟವನ್ನು ಅನುಭವಿಸುತ್ತಿರುವುದರಿಂದ ಪರ್ಯಾಯ ವಾಣಿಜ್ಯ ಬೆಳೆಗಳಿಗೆ ಹೊರಳುವುದು ಇಂದಿನ ಅವಶ್ಯಕತೆಯಾಗಿದೆ. ಜಿಲ್ಲೆಯ ವಾತಾವರಣವು ದ್ರಾಕ್ಷಿ ಬೆಳೆಗೆ ಪೂರಕವಾಗಿದ್ದು, ರೈತರಿಗೆ ಆರ್ಥಿಕವಾಗಿ ಲಾಭ ಗಳಿಕೆಗೆ ದ್ರಾಕ್ಷಿ ಬೆಳೆಯಲು ಮುಂದಾಗಬೇಕು ಎಂದು ಯೋಗೇಶ್ವರ್ ಹೇಳಿದರು.
ದ್ರಾಕ್ಷಾ ರಸದಲ್ಲಿ ಅಲ್ಕೋಹಾಲ್ ಅಂಶ ಕಡಿಮೆ ಇರುವುದರಿಂದ ಗ್ರಾಹಕರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುವುದಿಲ್ಲ. ರೈತರಿಗೆ ದ್ರಾಕ್ಷಿ ಬೆಳೆಯಲ್ಲಿ ವಿವಿಧ ತಳಿಗಳನ್ನು ಪರಿಚಯಿಸುವಲ್ಲಿ ವೈನರಿಗಳು ಮತ್ತು ಸರ್ಕಾರದ ಸಂಸ್ಥೆಗಳು ಮುಂದಾಗಿವೆ. ಅದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು.
ಗ್ರಾಹಕರ ಸೆಳೆತಕ್ಕೆ ಯತ್ನ: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಈ ಮೇಳ ಆಯೋಜಿಸಿರುವುದರಿಂದ ಹೆಚ್ಚಿನ ಸಂಖ್ಯೆಯ ಗ್ರಾಹಕರನ್ನು ಸೆಳೆಯಲು ಪೂರಕವಾಗಿದೆ. ವೈನ್ ಬಗ್ಗೆ ಜನಸಾಮಾನ್ಯರಿಗೆ ಹಾಗೂ ರೈತರಿಗೆ ತಿಳುವಳಿಕೆ ನೀಡಲು ಸಹಕಾರಿಯಾಗಿದೆ. ರೈತ ಹಾಗೂ ಗ್ರಾಹಕ ಸ್ನೇಹಿಯಾಗಿ ಈ ಮೇಳವು ಸಂಘಟನೆಯಾಗಿದೆ ಎಂದು ಯೋಗೇಶ್ವರ್ ಪ್ರಶಂಸೆ ವ್ಯಕ್ತಪಡಿಸಿದರು.
ಕೃಷ್ಣ ಕುರಿತು ಶ್ಲಾಘನೆ: ಕೃಷಿಕ ಸಮಾಜವು ಬಹುಕಾಲದಿಂದ ನಿರ್ಲಕ್ಷ್ಯ ಮತ್ತು ತುಳಿತಕ್ಕೆ ಒಳಗಾಗಿದೆ. ಎಲ್ಲ ರೀತಿಯ ನೋವನ್ನು ಅನುಭವಿಸಿ ಕೃಷಿಕರು ಸಂಕಷ್ಟದಲ್ಲಿದ್ದಾರೆ. ಸಾಂಪ್ರದಾಯಿಕ ಕೃಷಿಯು ರೈತರನ್ನು ಸಂಕಷ್ಟಕ್ಕೆ ದೂಡಿದೆ. ಹೊಸ ಬೆಳೆ ಪದ್ಧತಿ ಅಳವಡಿಸಿಕೊಳ್ಳುವುದು ಅನಿವಾರ್ಯವೇ ಆಗಿದೆ ಎಂದು ಜಿ.ಪಂ. ಅಧ್ಯಕ್ಷ ಎಚ್.ಸಿ.ರಾಜು ಅಭಿಪ್ರಾಯಪಟ್ಟರು.
ಜಿಲ್ಲೆಯು ದ್ರಾಕ್ಷಿ ಬೆಳೆಗೆ ಉತ್ಕೃಷ್ಟ ವಾತಾವರಣ ಹೊಂದಿದೆ. ದ್ರಾಕ್ಷಿಯಿಂದ ತಯಾರಾಗುವ ದ್ರಾಕ್ಷಾ ರಸವು ಕೃತಕ ಅಲ್ಕೋಹಾಲ್ ಹೊಂದದೆ, ನೈಸರ್ಗಿಕವಾಗಿ ತಯಾರಿಸಲ್ಪಟ್ಟಿದೆ. ಹೀಗಾಗಿ ಗ್ರಾಹಕ ಸ್ನೇಹಿಯೂ ಆಗಿದೆ. ಇಂಥದ್ದೊಂದು ಮೇಳ ಆಯೋಜನೆ ಮೂಲಕ ಕರ್ನಾಟಕ ದ್ರಾಕ್ಷಾ ರಸ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಡಾ.ಬಿ.ಕೃಷ್ಣ ಉತ್ತಮ ಕೆಲಸ ಮಾಡಿದ್ದಾರೆ ಎಂದು ಅವರು ಶ್ಲಾಘಿಸಿದರು.
ಪೂರಕ ವಾತಾವರಣ ಅಗತ್ಯ: ಕೇವಲ ವೈನ್ ಮೇಳದಿಂದ ವೈನ್ ಉದ್ಯಮವನ್ನು ಲಾಭದಾಯಕಗೊಳಿಸಲು ಸಾಧ್ಯವಿಲ್ಲ. ಗ್ರಾಹಕರನ್ನು ಸೆಳೆದು ಉದ್ಯಮದ ಬೆಳವಣಿಗೆಗೆ ಪೂರಕ ವಾತಾವರಣ ಕಲ್ಪಿಸಲು ವೈನ್ ಪ್ರವಾಸೋದ್ಯಮ ಎಂಬ ಸಿದ್ಧಾಂತದಿಂದ ಗ್ರಾಹಕರಿಗೆ ಪರಿಚಯಿಸಲಾಗುತ್ತಿದೆ ಎಂದು ಕರ್ನಾಟಕ ದ್ರಾಕ್ಷಾ ರಸ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಡಾ.ಬಿ. ಕೃಷ್ಣ ತಿಳಿಸಿದರು.
ಎರಡು ದಿನಗಳ ಈ ಮೇಳದಲ್ಲಿ ಗ್ರಾಹಕರಿಗೆ ನೇರವಾಗಿ ಉತ್ಪಾದಕರಿಂದ ಶೇಕಡ 10 ರ ರಿಯಾಯಿತಿ ದರದಲ್ಲಿ ವೈನ್ ಮಾರಾಟ ಮಾಡಲಾಗುತ್ತಿದೆ. ವೈನ್ಟೂರಿಸಂ ವಿವಿಧ ದೇಶಗಳಲ್ಲಿ ಇದ್ದು, ನಮ್ಮ ದೇಶಕ್ಕೆ ಇದೀಗ ಕಾಲಿರಿಸಿದೆ. ವೈನ್ ಬಗ್ಗೆ ಸಾರ್ವಜನಿಕರಿಗೆ, ಗ್ರಾಹಕರಿಗೆ ತಿಳವಳಿಕೆ ನೀಡುವ ಪ್ರಯತ್ನ ಇದಾಗಿದೆ ಎಂದರು.
ಹೆರಿಟೇಜ್ ವೈನರಿಯ ವ್ಯವಸ್ಥಾಪಕ ನಿರ್ದೇಶಕ ಕೆ.ಎಲ್.ವೆಂಕಟರಾಮರೆಡ್ಡಿ, ಜಿ.ಪಂ. ಉಪಾಧ್ಯಕ್ಷೆ ಗೌರಮ್ಮ, ಸಿಇಒ ಡಾ.ಎಂ.ವಿ. ವೆಂಕಟೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ರಘುಕುಮಾರ್, ವಿಜಯಕುಮಾರ್, ಸದಸ್ಯರಾದ ಎಂ.ಕೆ. ಧನಂಜಯ, ಹಂಸಕುಮಾರಿ, ಚನ್ನಪಟ್ಟಣ ತಾಲೂಕು ಪಂಚಾಯತಿ ಅಧ್ಯಕ್ಷೆ ಪವಿತ್ರ ಕೃಷ್ಣೇಗೌಡ,ಹೆರಿಟೇಜ್ ವೈನ್ ಸಲಹೆಗಾರ ಜೆ. ಮೋಹನ್ ರಾವ್ ಭಾಗವಹಿಸಿದ್ದರು.