ವಿದ್ಯುತ್ ಟ್ರಾನ್ಸ್ಫಾರಂಗೆ ಹಬ್ಬಿದ ಗಿಡಗಂಟಿ: ಅಪಾಯ
ಮಾಗಡಿ : ತಾಲೂಕಿನ ಹೇಳಿಗೆಹಳ್ಳಿ ಕಾಲೋನಿಯಲ್ಲಿರುವ ವಿದ್ಯುತ್ ಟ್ರಾನ್ಸ್ಫಾರಂಗೆ ಗಿಡಗಂಟಿಗಳು ಹಬ್ಬಿದ್ದು,ಅಪಾಯದ ಗಂಟೆ ಭಾರಿಸುತ್ತಿದೆ. ಟ್ರಾನ್ಸ್ಫಾರಂಗೆ ಹಬ್ಬಿರುವ ಗಿಡಗಂಟಿಗಳು ಬೆಳೆದಿರುವುದು ನೋಡಿದರೆ ಎಂತಹವರಿಗೂ ತಿಳಿಯುತ್ತದೆ. ಬೆಸ್ಕಾಂ ಸಿಬ್ಬಂದಿಗಳ ಕಾರ್ಯ ವೈಖರಿ. ಇಷ್ಟೊಂದು ನಿರ್ಲಕ್ಷ್ಯ ವಹಿಸುವ ಸಿಬ್ಬಂದಿಗಳು, ಕನಿಷ್ಠ ವರ್ಷಕ್ಕೆ ಎರಡು ಬಾರಿಯಾದರೂ ಕಾಲೋನಿಗಳಿಗೆ ಹಿಂದಿರುಗಿ ನೋಡದ ಬೆಸ್ಕಾಂ ಸಿಬ್ಬಂದಿಗಳ ಬಗ್ಗೆ ಮೇಲಾಧಿಕಾರಿಗಳು ಶಿಸ್ತಿನ ಕ್ರಮ ಜರುಗಿಸಿಲ್ಲ ಎಂಬ ದೂರುಗಳು ಕೇಳಿ ಬರುತ್ತಿದೆ ಎಂದರು. ಹೇಳಿಗೆಹಳ್ಳಿ ಕಾಲೋನಿಯ ನಾಗರಿಕರು ಬೆಸ್ಕಾಂ ಸಿಬ್ಬಂದಿಗಳ ವಿರುದ್ಧ ಶಾಸಕ ಎಚ್.ಸಿ. ಬಾಲಕೃಷ್ಣ ಅವರಲ್ಲಿಯೂ ದೂರಿದ್ದಾರೆ. ಈ ಸಂಬಂಧ ಶಾಸಕರು ಬೆಸ್ಕಾಂ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡಿದ್ದು, ಕೂಡಲೆ ಟ್ರಾನ್ಫಾರಂಗೆ ಹಬ್ಬಿರುವ ಗಿಡಗಂಟಿಗಳನ್ನು ಕೂಡಲೇ ತೆಗೆಯುವಂತೆ ಸೂಚಿಸಿರುವುದಾಗಿ ಹೇಳಿ ಹಳ್ಳಿ ಕಾಲೊನಿ ನಾಗರಿಕರು ವಿವರಿಸಿದರು. ಆದರೂ ಗಿಡಗಂಟಿ ತೆಗೆದಿಲ್ಲ. ಇದರಂತೆ ಎಷ್ಟೋ ಹಳ್ಳಿಗಳಿಗೆ ಬೆಸ್ಕಾಂ ಸಿಬ್ಬಂದಿಗಳು ಭೇಟಿ ನೀಡುವುದಿಲ್ಲ, ಅಲ್ಲಿನ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದ ಆರೋಪ ಕೇಳಿ ಬಂದಿದೆ. ಸಂಬಂಧಪಟ್ಟ ಎಂಜಿನಿಯರ್ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ ಎಂದು ನಾಗರಿಕರು ಆಗ್ರಹವಾಗಿದೆ.
ಕೊಲೆ-ದರೋಡೆ ಆರೋಪಿಗಳಿಗೆ ಸಜೆ
ದೊಡ್ಡಬಳ್ಳಾಪುರ: ಇಲ್ಲಿನ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಗಡ್ಡಂಬಚಹಳ್ಳಿ ಬಳಿ ಕಳೆದ 2011ರಲ್ಲಿ ನಡೆದಿದ್ದ ಕೊಲೆ ಮತ್ತು ದರೋಡೆ ಪ್ರಕರಣದ ನಾಲ್ವರು ಆರೋಪಿಗಳಿಗೆ ಇಲ್ಲಿನ 4ನೇ ಅಪರ ಜಿಲ್ಲಾ ಸತ್ರ ನ್ಯಾಯಾಲಯ 10 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು 5 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಸಿಪಿಐ ಶಿವಾರೆಡ್ಡಿ, ಗಡ್ಡಂಬಚಹಳ್ಳಿಯಲ್ಲಿ ತೋಟದ ಮನೆಗೆ ನುಗ್ಗಿ ದರೋಡೆ ಮಾಡಿ ಪರಮೇಶ್ವರ(45) ಎಂಬುವವರನ್ನು ಕೊಲೆ ಮಾಡಿದ್ದ ಆರೋಪದಲ್ಲಿ ಬಂಧಿತರಾಗಿದ್ದ ಕಾಳಪ್ಪ(37), ಶಿವರಾಜ್ (24), ರಾಜ (30), ಕೋಡಿರಾಜ (32) ಎಂಬುವವರಿಗೆ ಈಗ ಶಿಕ್ಷೆ ಪ್ರಕಟವಾಗಿದೆ. ಕಾಳಪ್ಪ, ರಾಜ ಮತ್ತು ಶಿವರಾಜ ಬೆಂಗಳೂರಿನ ಬನಶಂಕರಿ ನಿವಾಸಿಗಳಾಗಿದ್ದಾರೆ. ಕೋಡಿರಾಜ ರಾಮನಗರದ ಕೆರೆಕೋಡಿ ಗ್ರಾಮದ ನಿವಾಸಿಯಾಗಿದ್ದು, ದೀರ್ಘ ವಿಚಾರಣೆಯ ಬಳಿಕ ತೀರ್ಪು ಹೊರಬಿದ್ದಿದೆ ಎಂದು ತಿಳಿಸಿದ್ದಾರೆ.
ಗ್ರಾಮೀಣ ಮಕ್ಕಳಿಗೆ ಪ್ರೋತ್ಸಾಹಿಸುವ ಕಲಿಕೋತ್ಸವ
ಸೂಲಿಬೆಲೆ: ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಲ್ಲಿರುವ ವಿದ್ಯಾರ್ಥಿಗಳ ಕಲಿಕೆಯನ್ನು ಪ್ರತಿಬಿಂಬಿಸುವ ಕಲಿಕೋತ್ಸವ ಕಾರ್ಯಕ್ರಮಗಳು ಉತ್ಸವದಂತೆ ನಡೆದು ಕಲಿಕೆಗೆ ಉತ್ತೇಜನ ನೀಡುವ ಅಗತ್ಯವಿದೆ ಎಂದು ಶಿಕ್ಷಕ ಸಂಯೋಜಕ ಚಿನ್ನಸ್ವಾಮಿಗೌಡ ಹೇಳಿದ್ದಾರೆ. ಸೂಲಿಬೆಲೆಯಲ್ಲಿ ನಡೆದ ಕ್ಲಸ್ಟರ್ ಮಟ್ಟದ ಕಲಿಕೋತ್ಸವದಲ್ಲಿ ಕಾರ್ಯಕ್ರಮದಲ್ಲಿ ಶಿಕ್ಷಕರನ್ನು ಉದ್ದೇಶಿಸಿ ಮಾತನಾಡಿದರು. ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ನಿರ್ದೇಶಕ ಚಂದ್ರಶೇಖರ್ ಮಾತನಾಡಿ, ಚಟುವಟಿಕೆ ಆಧಾರಿತ ಕಲಿಕೆಯಲ್ಲಿ ಬಹುಮುಖ ವ್ಯಕ್ತಿತ್ವದ ಪ್ರದರ್ಶನವನ್ನು ವಿದ್ಯಾರ್ಥಿಗಳಿಂದ ನಿರೀಕ್ಷೆ ಮಾಡಲು ಸಾಧ್ಯ. ಇದನ್ನು ಸದ್ಬಳಕೆ ಮಾಡಿಕೊಂಡು ತಮ್ಮ ಸಾರ್ಮಥ್ಯವನ್ನು ಹೆಚ್ಚಿಸಿಕೊಳ್ಳಬೇಕು ಎಂದರು. ಗ್ರಾಪಂ ಮಾಜಿ ಅಧ್ಯಕ್ಷ ಆರ್. ಮುನಿರಾಜ್ ಮಾತನಾಡಿ, ಮಕ್ಕಳ ಕಲಿಕಾ ಗುಣಮಟ್ಟವನ್ನು ಪರೀಕ್ಷೆಮಾಡುವಂತ ಈ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ಚೈತನ್ಯವನ್ನು ನೀಡಲಿವೆ. ಕ್ರಿಯಾಶೀಲತೆ ಮತ್ತು ಚಟುವಟಿಕೆ ಗುಣವನ್ನು ಬೆಳೆಸಲಿದೆ. ಶಾಲಾ ಮಕ್ಕಳಿಗೆ ಮಾತ್ರವಲ್ಲದೆ ಈಗಿನ ಪರಿಸ್ಥಿತಿಯಲ್ಲಿ ಗ್ರಾಪಂ ಸದಸ್ಯರಿಗೂ ಕಲಿಕೋತ್ಸವ ನಡೆಸುವ ಅಗತ್ಯವಿದ್ದು, ಪಂಚಾಯಿತ್ ರಾಜ್ ಇಲಾಖೆ ಈ ನಿಟ್ಟಿನಲ್ಲಿ ಪ್ರಯತ್ನಿಸಬೇಕು ಎಂದು ಹೇಳಿದರು.