ಶತಮಾನ ಸಂಭ್ರಮ: ನಗೆ ಹಬ್ಬ ಕಾರ್ಯಕ್ರಮ
ರಾಮನಗರ: ಚನ್ನಪಟ್ಟಣ ತಾಲೂಕಿನ ಮತ್ತೀಕೆರೆ-ಶೆಟ್ಟಿಹಳ್ಳಿ ಅವಳಿ ಗ್ರಾಮದಲ್ಲಿರುವ ಕುವೆಂಪು ಶತಮಾನೋತ್ಸವ ಶಾಲೆಯ ಶತಮಾನ ಸಂಭ್ರಮಾಚರಣೆ, ಪ್ರೊ.ಎಂ. ಕೃಷ್ಣೇಗೌಡ ಮತ್ತು ತಂಡದಿಂದ ನಗೆಹಬ್ಬ ಕಾರ್ಯಕ್ರಮ ಡಿ.26ರಂದು ನಡೆಯಲಿದೆ ಎಂದು ಮುಖ್ಯ ಶಿಕ್ಷಕ ಆರ್. ರಾಜೇಶ್ ತಿಳಿಸಿದರು. ಶಾಲಾ ಆವರಣದಲ್ಲಿ ಮಧ್ಯಾಹ್ನ 3ಕ್ಕೆ ಶತಮಾನ ಸಂಭ್ರಮಾಚರಣೆ, ಸಂಜೆ 6ಕ್ಕೆ ನಗೆ ಹಬ್ಬ ನಡೆಸಲಾಗುವುದು. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಶಾಲೆಯ 20ಕ್ಕೂ ಹೆಚ್ಚು ಹಳೆಯ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು ಎಂದು ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು. ಶಾಸಕ ಸಿ.ಪಿ.ಯೋಗೇಶ್ವರ್ ಕಾರ್ಯಕ್ರಮ ಉದ್ಘಾಟಿಸುವರು. ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್, ಸಂಸದ ಡಿ.ಕೆ.ಸುರೇಶ್, ಜಿ.ಪಂ. ಅಧ್ಯಕ್ಷ ಎಚ್.ಸಿ.ರಾಜು ಮತ್ತಿತರರು ಭಾಗವಹಿಸಲಿದ್ದರೆ. ಸಮಿತಿಯ ಉಮೇಶ್, ಎಂ.ಎನ್. ಶ್ರೀಹರ್ಷ, ಎಂ.ಸಿ.ಎಚ್. ಮೆಹರೀಶ್, ಕೃಷ್ಣೇಗೌಡ, ಎಂ.ಶಿವರಾಮಯ್ಯ ಇದ್ದರು.
ನಾಳೆ ಜಾರ್ಜ್ ನೇತೃತ್ವದಲ್ಲಿ ಕೆಡಿಪಿ ಸಭೆ
ರಾಮನಗರ: ಈ ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಕೆ.ಜೆ.ಜಾರ್ಜ್ ಮಾಡಿದ ಸಾಧನೆ, ತೋರಿದ ಕಾಳಜಿ ಅಷ್ಟಕ್ಕಷ್ಟೇ. ಹೊಣೆ ಹೊತ್ತ ನಂತರ ಇದೀಗ ಅವರು ತಮ್ಮ ಅಧ್ಯಕ್ಷತೆಯಲ್ಲಿ ಎರಡನೇ ಪ್ರಗತಿ ಪರಿಶೀಲನಾ ಸಭೆಯನ್ನು ಡಿ.23ಕ್ಕೆ ನಿಗದಿಪಡಿಸಿದ್ದಾರೆ. ಗೃಹ ಸಚಿವರ ಉಸ್ತುವಾರಿಯಲ್ಲಿರುವ ಈ ಜಿಲ್ಲೆಯಲ್ಲಿ ಮರಳು ಮಾಫಿಯಾ ಎಗ್ಗಿಲ್ಲದೆ ದಂಧೆಯನ್ನು ಮುಂದುವರೆಸಿದೆ. ಜಿಲ್ಲಾಡಳಿತ, ಜಿ.ಪಂ. ಸಹಿತ ಸ್ಥಳೀಯ ಆಡಳಿತದಲ್ಲಿ ಅರಾಜಕತೆ ಎದುರಾಗಿದೆ. ರಾಮನಗರಕ್ಕೆ ಬರಲು ಪುರುಸೊತ್ತಿಲ್ಲದ ಸಚಿವ ಜಾರ್ಜ್ ಕೆಲ ದಿನಗಳ ಹಿಂದೆ ಇಲ್ಲಿನ ಅಧಿಕಾರಿಗಳನ್ನು ಬೆಂಗಳೂರಿಗೇ ಕರೆಸಿಕೊಂಡು ಸಭೆ ನಡೆಸಿದ್ದರು. ಜಾರ್ಜ್ ಅವರ ಚೊಚ್ಚಲ ಪ್ರಗತಿ ಪರಿಶೀಲನಾ ಸಭೆಗೆ ವಿಪಕ್ಷ ನಾಯಕ ಎಚ್.ಡಿ.ಕುಮಾರಸ್ವಾಮಿ, ಸಂಸದ ಡಿ.ಕೆ.ಸುರೇಶ್, ಶಾಸಕರಾದ ಡಿ.ಕೆ.ಶಿವಕುಮಾರ್, ಬಾಲಕೃಷ್ಣ ಹಾಜರಾಗಿದ್ದರು. ಈ ಬಾರಿ ಅವರೆಲ್ಲರ ಹಾಜರಾತಿ ಇನ್ನೂ ಖಾತ್ರಿಯಾಗಿಲ್ಲ.
ಸಿದ್ಧ ಉಡುಪು ತಯಾರಿಕಾ ತರಬೇತಿ
ರಾಮನಗರ: ನೆಲಮಂಗಲ ತಾಲೂಕು ಅರಿಶಿನಕುಂಟೆಯ ರುಡ್ ಸೆಟ್ ಸಂಸ್ಥೆಯಿಂದ ಬೆಂಗಳೂರು ನಗರ, ಗ್ರಾಮಾಂತರ, ರಾಮನಗರ ಮತ್ತು ತುಮಕೂರು ಜಿಲ್ಲೆಗಳ ವ್ಯಾಪ್ತಿಯ ನಿರುದ್ಯೋಗಿ ಮಹಿಳೆಯರಿಗಾಗಿ ಸಿದ್ಧ ಉಡುಪು ತಯಾರಿಕೆ ಮತ್ತು ಬ್ಯೂಟಿ ಪಾರ್ಲರ್ ಮ್ಯಾನೇಜ್ಮೆಂಟ್ ತರಬೇತಿ ಆಯೋಜಿಸಲಾಗಿದೆ. ತರಬೇತಿಯು 2014ರ ಜನವರಿ ಮಾಹೆಯಲ್ಲಿ ಪ್ರಾರಂಭವಾಗಲಿದೆ. 18 ರಿಂದ 45 ವಯೋವುತಿಯಲ್ಲಿರುವ, ಅಭ್ಯರ್ಥಿಗಳು ಅರ್ಜಿಯನ್ನು ನಿರ್ದೇಶಕರು, ರುಡ್ಸೆಟ್ ಸಂಸ್ಥೆ, ಅರಿಶಿನಕುಂಟೆ-ಅಂಚೆ, ನೆಲಮಂಗಲ ತಾಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಈ ವಿಳಾಸಕ್ಕೆ ಸಲ್ಲಿಸಬಹುದಾಗಿದೆ. ತರಬೇತಿಗೆ ಆಯ್ಕೆಯಾದವರಿಗೆ ಭತ್ಯೆ, ಸ್ವಂತ ಉದ್ಯೋಗ ಕೈಗೊಳ್ಳಲು ಅಗತ್ಯ ನೆರವು ಒದಗಿಸುವ ನಿಟ್ಟಿನಲ್ಲಿ ಪ್ರಾಯೋಜಕತ್ವ ಸಂಸ್ಥೆ ಮುಂದಾಗಲಿದೆ. ವಿವರಗಳಿಗಾಗಿ ಮೊಬೈಲ್ 9481778047, 9741129429 ಸಂಪರ್ಕಿಸಿ.
ಮಿನಿ ಟ್ಯಾಂಕ್ ಉದ್ಘಾಟನೆ
ದಂಡಿಗೆಪುರದಲ್ಲಿ ಕುಡಿಯುವ ನೀರಿನ ನೂತನ ಮಿನಿ ಟ್ಯಾಂಕ್ ಅನ್ನು ಶಾಸಕ ಎಚ್.ಸಿ.ಬಾಲಕೃಷ್ಣ ಉದ್ಘಾಟಿಸಿದರು. ತಾ.ಪಂ. ಅಧ್ಯಕ್ಷ ಜಿ.ಕೃಷ್ಣ, ಸ್ಥಾಯಿ ಸಮಿತಿ ಅಧ್ಯಕ್ಷ ಎಸ್. ಕಾಂತರಾಜು, ಗಂಗಾಧರ್ ಇತರರು ಇದ್ದಾರೆ.
ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳ
ರಾಮನಗರ: ಜಿಲ್ಲಾಡಳಿತ, ಜಿ.ಪಂ., ಮಹಿಳಾ ಅಭಿವೃದ್ಧಿ ನಿಗಮ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿವಿಧ ಮಹಿಳಾ ಉದ್ದಿಮೆದಾರರಿಂದ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ನಗರದಲ್ಲಿ ಡಿ.23 ರಿಂದ 27ರವರೆಗೆ ಆಯೋಜಿಸಲಾಗಿದೆ. ಡಿ.23 ರಂದು ಬೆಳಗ್ಗೆ 11ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಉದ್ಘಾಟಿಸುವರು. ವಿಧಾನಸಭೆ ವಿಪಕ್ಷ ನಾಯಕ ಎಚ್.ಡಿ.ಕುಮಾರಸ್ವಾಮಿ ಅಧ್ಯಕ್ಷತೆ ವಹಿಸುವರು. ಸಂಸದ ಡಿ.ಕೆ.ಸುರೇಶ್, ಶಾಸಕರಾದ ಡಿ.ಕೆ.ಶಿವಕುಮಾರ್, ಸಿ.ಪಿ.ಯೋಗೇಶ್ವರ್, ಎಚ್.ಸಿ.ಬಾಲಕೃಷ್ಣ, ಕೆ.ಶ್ರೀನಿವಾಸಮೂರ್ತಿ, ವಿಧಾನ ಪರಿಷತ್ ಸದಸ್ಯರಾದ ರಾಮಚಂದ್ರಗೌಡ, ಎಂ.ವಿ.ರಾಜಶೇಖರನ್, ಪುಟ್ಟಣ್ಣ, ಇ.ಕೃಷ್ಣಪ್ಪ, ಸೈಯದ್ ಮದೀರ್ ಆಗಾ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಜಿ.ಪಂ. ಅಧ್ಯಕ್ಷ ಎಚ್.ಸಿ.ರಾಜು, ಎಸ್.ಬಿ.ಗೌರಮ್ಮ, ಲಕ್ಷ್ಮೀ ಮಂಜುನಾಥ್, ಕೆ.ಎಸ್.ಶಂಕರಯ್ಯ ಭಾಗವಹಿಸಲಿದ್ದಾರೆ.
ಕಂಪ್ಯೂಟರ್ ತರಬೇತಿಗೆ ಆಹ್ವಾನ
ಮಂಡ್ಯ: 2013-14ನೇ ಸಾಲಿನಲ್ಲಿ ಅಲ್ಪಸಂಖ್ಯಾತರ (ಮುಸ್ಲಿಂ, ಕ್ರಿಶ್ಚಿಯನ್,ಜೈನ್,ಬೌದ್ಧರು, ಪಾರ್ಸಿಗಳು) ವಿದ್ಯಾವಂತ ನಿರುದ್ಯೋಗಿ ಯುವಕ ಯುವತಿಯರಿಗೆ ಕೌಶಲ್ಯ ಅಭಿವೃದ್ಧಿ ಯೋಜನೆಯಡಿ ಕಂಪ್ಯೂಟರ್ ತರಬೇತಿ ನೀಡಲು ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿಯನ್ನು ಸಲ್ಲಿಸಲು ಡಿ.30 ಸಂಜೆ 5 ಗಂಟೆಯೊಳಗೆ ಸಲ್ಲಿಸುವುದು. ಹೆಚ್ಚಿನ ವಿವರಗಳಿಗೆ ಜಿಲ್ಲಾ ಅಧಿಕಾರಿಗಳು ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಮಂಡ್ಯ ಜಿಲ್ಲೆ, ಮಂಡ್ಯ. ಈ ಕಚೇರಿಯಿಂದ ಅರ್ಜಿ ಪಡೆದು ಜಾತಿ ಆದಾಯ ದೃಢೀಕರಣ ಪತ್ರ , ಎಸ್ಸೆಸ್ಸೆಲ್ಸಿ , ಪದವಿ, ಡಿಪ್ಲೋಮ ಅಂಕಪಟ್ಟಿಯನ್ನು ಅರ್ಜಿಯ ಜೊತೆ ಸಲ್ಲಿಸಲು ತಿಳಿಸಿದೆ. ಹೆಚ್ಚಿನ ಮಾಹಿತಿಗೆ ಕಚೇರಿ ವೇಳೆಯಲ್ಲಿ ಪಡೆಯಬಹುದಾಗಿದೆ. ದೂ-08232-220835ನ್ನು ಸಂಪರ್ಕಿಸಬಹುದು.
ಅತಿಕ್ರಮಣ ತೆರವಿಗಾಗಿ ಧರಣಿ
ಆನೇಕಲ್ಲು ತಾಲೂಕು ನೆರಿಗಾ-ಹಲಸಳ್ಳಿಯ ಸರ್ಕಾರಿ ಜಮೀನು ಬಸ್ ನಿಲ್ಧಾಣಕ್ಕೆ ಮೀಸಲಿದ್ದು ಖಾಸಗಿ ವ್ಯಕ್ತಿಯಿಂದ ಅತಿಕ್ರಮಣ ತೆರವು ಮಾಡಬೇಕೆಂದು ಗ್ರಾಮಸ್ಥರು ಧರಣಿ ನಡೆಸಿದರು. ಗ್ರಾಪಂ ಅಧ್ಯಕ್ಷ ಹಾಗೂ ಸದಸ್ಯರಿದ್ದಾರೆ.
ಮಲಗಿದ್ದ ಸ್ಥಿತಿಯಲ್ಲಿಯೇ ಅಪರಿಚಿತ ವ್ಯಕ್ತಿ ಸಾವು
ಮಂಡ್ಯ: ನಗರದ ಮಧುಪ್ರಕಾಶ ಹೋಟೆಲ್ ಹಿಂಭಾಗಕ್ಕಿರುವ ಮಹದೇವ ಟೀಸ್ಟಾಲ್ ಅಂಗಡಿ ಮುಂಭಾಗ ಮಲಗಿದ್ದ ಸ್ಥಿತಿಯಲ್ಲಿಯೇ ಅಪರಿಚಿತ ವ್ಯಕ್ತಿ ಮೃತಪಟ್ಟಿರುವ ಘಟನೆ ನಡೆದಿದೆ. ಮಧುಪ್ರಕಾಶ ಹೋಟೆಲ್ ಮಾಲೀಕ ರವಿ ಈ ಕುರಿತು ಮಂಡ್ಯ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಪರಿಚಿತ ವ್ಯಕ್ತಿಗೆ ಸುಮಾರು 45 ರಿಂದ 50 ವರ್ಷವಯಸ್ಸಾಗಿದೆ. 168 ಸೆ.ಮೀ ಎತ್ತರ, ಕಪ್ಪುಬಣ್ಣ, ಕೋಲು ಮುಖ. ಮೈಮೇಲೆ ನಶೆ ಕಲರ್ ಜರ್ಕಿನ್ ಒಂದು ಬಿಳಿ ತುಂಬು ತೋಳಿನ ಶರ್ಟ್ ಮತ್ತು ಒಂದು ಬೂದು ಬಣ್ಣದ ಪ್ಯಾಂಟ್, ಒಂದು ಹಸಿರು ಬಣ್ಣದ ನಿಕ್ಕರ್ ಧರಿಸಿರುತ್ತಾರೆ. ಅಲ್ಲದೆ ಸದರಿ ಅಪರಿಚಿತನ ಬಲಗೈನಲ್ಲಿ ಕನ್ನಡದಲ್ಲಿ ಆಶಾ, ರಾಧಿಕ, ರಾಜಮ್ಮ ಎಂದು ಹಸಿರಚ್ಚೆ ಇರುತ್ತದೆ. ಈ ಬಗ್ಗೆ ಮಾಹಿತಿ ದೊರೆತಲ್ಲಿ ಕೂಡಲೇ ಜಿಲ್ಲಾ ಪೊಲೀಸ್ ಅಧೀಕ್ಷಕರು, ಮಂಡ್ಯರವರಿಗಾಗಲಿ ಅಥವಾ ಪಿಎಸ್ಐ ಮಂಡ್ಯ ಇವರಿಗೆ ಸಂಪಕಿಸಲು ಕೋರಿದೆ.
ಸರ್ವೋತ್ತಮ ಸೇವಾ ಪ್ರಶಸ್ತಿಗೆ ನಾಮ ನಿರ್ದೇಶನಗಳ ಆಹ್ವಾನ
ಮಂಡ್ಯ: ಪ್ರಸಕ್ತ ಸಾಲಿನಲ್ಲಿ ಅತ್ಯುನ್ನತ ಸೇವೆ ಸಲ್ಲಿಸಿದ ರಾಜ್ಯ ಸರ್ಕಾರಿ ನೌಕರರಿಗೆ ಸರ್ವೋತ್ತಮ ಸೇವಾ ಪ್ರಶಸ್ತಿ ನೀಡಲು ನೌಕರರು ಹಾಗೂ ಸಾರ್ವಜನಿಕರಿಂದ ಈ ಪ್ರಶಸ್ತಿಗೆ ಮಂಡ್ಯ ಜಿಲ್ಲಾಧಿಕಾರಿಗಳು ನಾಮ ನಿರ್ದೇಶನಗಳನ್ನು ಆಹ್ವಾನಿಸಿದ್ದಾರೆ. ಗೃಹ ಇಲಾಖೆ, ಶಿಕ್ಷಣ ಇಲಾಖೆ ಮತ್ತು ಭಾರತೀಯ ಸೇವಾ ಅಧಿಕಾರಿಗಳನ್ನು ಹೊರತು ಪಡಿಸಿ ಉಳಿದ ಎಬಿಸಿಡಿ ವೃಂದದ ಅಧಿಕಾರಿ, ನೌಕರರನ್ನು ಈ ಪ್ರಶಸ್ತಿಗೆ ಪರಿಗಣಿಸಲಾಗುತ್ತದೆ. ಆಯ್ಕೆಯಾದ ಅಧಿಕಾರಿಗಳು ಹಾಗೂ ನೌಕರರಿಗೆ ಪ್ರತಿವರ್ಷ ಜನವರಿ 26ರ ನಡೆಯುವ ಗಣರಾಜ್ಯೋತ್ಸವ ಸಮಾರಂಭದಲ್ಲಿ ಪ್ರದಾನ ಮಾಡಲಾಗುತ್ತದೆ. ಈ ಪ್ರಶಸ್ತಿಗೆ ನಾಮನಿರ್ದೇಶನವನ್ನು ಸ್ವೀಕರಿಸಲು ನೋಡೆಲ್ ಅಧಿಕಾರಿಯಾಗಿ ಮಂಡ್ಯ ಉಪವಿಭಾಗಾಧಿಕಾರಿಗಳನ್ನು ನೇಮಿಸಲಾಗಿದೆ. ಇವರಿಗೆ ಡಿ.30 ರೊಳಗೆ ತಲುಪುವಂತೆ ಖುದ್ದಾಗಿ ಅಥವಾ ಅಂಚೆ ಮೂಲಕ ನಾಮ ನಿರ್ದೇಶನಗಳನ್ನು ಸಲ್ಲಿಸಬಹುದು.
ಪೊಲೀಸ್ ಕ್ರೀಡಾಕೂಟ
ಮಂಡ್ಯದ ಪೊಲೀಸ್ ಕವಾಯಿತು ಮೈದಾನದಲ್ಲಿ ನಡೆಯುತ್ತಿರುವ ಪೊಲೀಸರ ವಾರ್ಷಿಕ ಕ್ರೀಡಾಕೂಟದಲ್ಲಿ ಶನಿವಾರ ಪೊಲೀಸ್ ಸಿಬ್ಬಂದಿಗೆ ಲಾಂಗ್ ಜಂಪ್ ಸ್ಪರ್ಧೆ ನಡೆಯಿತು.
ಎಲ್ಲ ಶಾಲೆಗಳಿಗೂ ಪ್ರೋತ್ಸಾಹ ಧನ ನೀಡಿ
ಭಾರತೀನಗರ: ಪ್ರೋತ್ಸಾಹ ಧನದಿಂದ 6 ಶಾಲೆ ವಂಚಿತ, ಜಿಲ್ಲಾ ಸಾರ್ವಜನಿಕ ಶಿಕ್ಷ ಇಲಾಖೆ ಉಪನಿರ್ದೇಶಕರ (ಆಡಳಿತ) ಮಂಡಳಿ ನಿರ್ಲಕ್ಷ್ಯ ಶಿರ್ಷಿಕೆಯಡಿ ಶನಿವಾರ ಪ್ರಕಟಗೊಂಡ ವರದಿಗೆ ವಿವಿಧ ಖಾಸಗಿ, ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳೆಂದು ತಾರತಮ್ಯ ನೀಡದೆ ಶೇ.100 ರಷ್ಟು ಫಲಿತಾಂಶ ಬಂದ ಎಲ್ಲಾ ಶಾಲೆಗಳಿಗೂ ಸರಿಸಮವಾಗಿ 10 ಸಾವಿರ ಪ್ರೋತ್ಸಾಹ ಧನ ಹಾಗೂ ಪಾರಿತೋಷಕವನ್ನು ನೀಡಬೇಕೆಂದು ಒತ್ತಾಯಿಸಿದ್ದಾರೆ.
ಎಲ್ಲಾ ಶಾಲೆಗಳಿಗೂ 3 ಸಾವಿರ ಪ್ರೋತ್ಸಾಹ ಧನ ಹಾಗೂ ಪಾರಿತೋಷಕ ವಿಭಾಗೀಯ ಹಂತದಲ್ಲಿ ನೀಡಿದ್ದರು. ಆದರೆ ಪ್ರಸ್ತುತ ಸರ್ಕಾರ 30 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಇರುವ ಸರ್ಕಾರಿ ಪ್ರೌಢಶಾಲೆಗಳಿಗೆ ಮಾತ್ರ ಎಂದು ಘೋಷಿಸಿ 30 ಕ್ಕಿಂತ ಕಡಿಮೆ ವಿದ್ಯಾರ್ಥಿಗಳಿರುವ ಸರ್ಕಾರಿ ಪ್ರೌಢಶಾಲೆಗೆ ಪ್ರೋತ್ಸಾಹ ಧನ ನೀಡದಿರುವುದರ ಜೊತೆಗೆ ಖಾಸಗಿ ಅನುದಾನ ರಹಿತ ಶಾಲೆಗಳಿಗೂ ಪ್ರೋತ್ಸಾಹ ಧನ ಹಾಗೂ ಪಾರಿತೋಷಕವನ್ನು ನೀಡದಿರುವುದು ಮತ್ತಷ್ಟು ದ್ರೋಹವೆಸಗಿದೆ ಎಂದು ನಗರಕೆರೆ ಪೂರ್ಣಿಮಾ ಪ್ರೌಢಶಾಲೆ ಮುಖ್ಯಶಿಕ್ಷಕ ಶಿವಪ್ಪ ಒತ್ತಾಯಿಸಿದ್ದಾರೆ.
ಇಸಾನ್ ಧೂಮಕೇತುವಿನ ಕುರಿತು ಉಪನ್ಯಾಸ
ಮಂಡ್ಯ: ತಾಲೂಕಿನ ಹನಕೆರೆ ಗ್ರಾಮದ ರೈತರ ಶಿಕ್ಷಣ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ಇಸಾನ್ ಧೂಮಕೇತುವಿನ ಕುರಿತು ಉಪನ್ಯಾಸವನ್ನು ಶಾಲೆಯ ವಿಜ್ಞಾನ ಸಂಘದ ವತಿಯಿಂದ ಏರ್ಪಡಿಸಲಾಗಿತ್ತು.
ವಿಜ್ಞಾನ ಶಿಕ್ಷಕ ಎಂ. ಚನ್ನಕೃಷ್ಣೇಗೌಡ ಧೂಮಕೇತುವಿನ ಬಗೆಗೆ ಉಪನ್ಯಾಸ ನೀಡಿದರು. ಹಿರಿಯ ಶಿಕ್ಷಕ ಆರ್.ಡಿ. ಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದ ಅಂಗವಾಗಿ ವಿಜ್ಞಾನ ರಸಪ್ರಶ್ನೆ ಹಮ್ಮಿಕೊಳ್ಳಲಾಗಿತ್ತು. ಶಿಕ್ಷಕರಾದ ಎಂ. ಶಂಕರ್, ರಾಮಾಂಜನೇಯ, ಎಚ್.ಆರ್. ರಾಜನ್, ಸುದನ್ ಹಾಜರಿದ್ದರು.
ಪೊಲೀಸ್ ವಾರ್ಷಿಕ ಕ್ರೀಡಾಕೂಟದ ವಿಜೇತರು
ಮಂಡ್ಯ: ನಗರದ ಪೊಲೀಸ್ ಕವಾಯಿತು ಮೈದಾನದಲ್ಲಿ ಆರಂಭಗೊಂಡ ಮೂರು ದಿನಗಳ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರ ವಿವರ ಇಂತಿದೆ. ಕ್ರೀಡಾಕೂಟದಲ್ಲಿ 1,500 ಮೀ. ಓಟ ರಾಜು ಕೆರಗೋಡು ಪ್ರಥಮ, ಕೆ.ಎನ್. ನವೀನ್ (ಡಿಎಆರ್) ದ್ವಿತೀಯ, ಎಸ್. ಚೇತನ್ ಕುಮಾರ್ (ಮಂಡ್ಯ ಪಶ್ಚಿಮ) ತೃತೀಯ. ಗುಂಡು ಎಸೆತ ಪುರುಷ ಅಧಿಕಾರಿಗಳು ವಿರೂಪಾಕ್ಷೇಗೌಡ (ಆರ್ಪಿಐಡಿಎಆರ್) - ಪ್ರಥಮ, ಸೋಮಣ್ಣ (ಆರ್ಪಿಐಡಿಎಆರ್) - ದ್ವಿತೀಯ, ಪ್ರಕಾಶ್ (ಸಿಪಿಐ, ಪಾಂಡವಪುರ) -ತೃತೀಯ. ಮಹಿಳಾ ಅಧಿಕಾರಿಗಳು ಎಂ.ಎಸ್. ಗೀತಾ (ಡಿವೈಎಸ್ಪಿ, ಶ್ರೀರಂಗಪಟ್ಟಣ) - ಪ್ರಥಮ, ಶಾಂತಾ ಎಲ್. ಹುಲ್ಮನಿ (ಮಂಡ್ಯ ಉಪ ವಿಭಾಗಾಧಿಕಾರಿ) - ದ್ವಿತೀಯ, ಡಾ.ವಿ.ಜೆ. ಶೋಭಾರಾಣಿ (ಡಿವೈಎಸ್ಪಿ, ಮಂಡ್ಯ) - ತೃತೀಯ. ಮುಕ್ತ ವಿಭಾಗದಲ್ಲಿ ಕುಮಾರ್ - ಪ್ರಥಮ, ಜಿಲ್ಲಾಧಿಕಾರಿ ಬಿ.ಎನ್. ಕೃಷ್ಣಯ್ಯ - ದ್ವಿತೀಯ, ಎಸ್ಪಿ ಭೂಷಣ್ ಜಿ. ಬೊರಸೆ - ತೃತೀಯ.
ವಿದ್ಯಾರ್ಥಿಗಳಿಗೆ ಬೈಸಿಕಲ್ ವಿತರಣೆ
ಭಾರತೀನಗರ: ಗ್ರಾಮೀಣ ಮಕ್ಕಳಲ್ಲಿ ಉತ್ತಮ ಫಲಿತಾಂಶ ಬರುತ್ತಿರುವುದು ಶ್ರಮಕ್ಕೆ ಪ್ರತಿಫಲ ಸಿಕ್ಕಿದಂತಾಗಿದೆ ಎಂದು ಶಾಸಕ ಡಿ.ಸಿ. ತಮ್ಮಣ್ಣ ಶ್ಲಾಘಿಸಿದರು.ಇಲ್ಲಿನ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಬೈಸಿಕಲ್ ವಿತರಿಸಿ ಮಾತನಾಡಿ, ದೂರದ ಊರುಗಳಿಂದ ಬರುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಯೋಜನೆಯನ್ನು ಜಾರಿಗೆ ತಂದಿದೆ ಎಂದರು. ಸರ್ಕಾರ ನೀಡುತ್ತಿರುವ ಸೌಲಭ್ಯಗಳನ್ನು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಂಡು ಉತ್ತಮ ವಿದ್ಯಾಭ್ಯಾಸದಲ್ಲಿ ತೊಡಗಬೇಕೆಂದು ತಿಳಿಸಿದರು. ಮುಖ್ಯಶಿಕ್ಷಕಿ ಸತ್ಯಭಾಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸರ್ಕಾರ ಬಡಮಕ್ಕಳ ಅನುಕೂಲಕ್ಕಾಗಿ ಇಂತಹ ಅನೇಕ ಯೋಜನೆಗಳನ್ನು ರೂಪಿಸಿ ಅನುಕೂಲ ಮಾಡಿಕೊಡುತ್ತಿವೆ. ಇದನ್ನು ಬಳಸಿಕೊಂಡು ಓದಿನ ಕಡೆಗೆ ಹೆಚ್ಚು ಕಾಳಜಿ ವಹಿಸಬೇಕೆಂದು ಕರೆ ನೀಡಿದರು.
ರು. 4 ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಚಾಲನೆ
ಮದ್ದೂರು: ಮುಖ್ಯಮಂತ್ರಿಗಳ ನಿಧಿಯಿಂದ ಕೈಗೊಂಡಿರುವ ನಗರೋತ್ಥಾನ 2ನೇ ಹಂತದ ಕಾಮಗಾರಿ 9 ತಿಂಗಳಲ್ಲಿ ಪೂರ್ಣಗೊಂಡು ಸಾರ್ವಜನಿಕರ ಸೇವೆಗೆ ಸಮರ್ಪಣೆಯಾಗಲಿದೆ ಎಂದು ಶಾಸಕ ಡಿ.ಸಿ. ತಮ್ಮಣ್ಣ ಹೇಳಿದರು. ಪಟ್ಟಣದ ಕೆಮ್ಮಣ್ಣುನಾಲೆ ವೃತ್ತದಲ್ಲಿ ನಗರೋತ್ಥಾನ ಯೋಜನೆಯಡಿ 4 ಕೋಟಿ ರು. ವೆಚ್ಚದಲ್ಲಿ ಹಳೇ ಎಂ.ಸಿ. ರಸ್ತೆಯಿಂದ ಕೊಲ್ಲಿ ವೃತ್ತದವರೆಗಿನ ರಸ್ತೆ ಅಭಿವೃದ್ಧಿಗೆ ಚಾಲನೆ ನೀಡಿ ಅವರು ಮಾತನಾಡಿ, ನಗರೋತ್ಥಾನ 2ನೇ ಹಂತದ ಯೋಜನೆಯಲ್ಲಿ ರಸ್ತೆ ಹಾಗೂ ಒಳಚರಂಡಿ ನಿರ್ಮಾಣಕ್ಕಾಗಿ ಸರ್ಕಾರ 5 ಕೋಟಿ ರು. ಅನುದಾನ ಬಿಡುಗಡೆ ಮಾಡಿದೆ ಎಂದರು. ವಿಧಾನ ಪರಿಷತ್ ಸದಸ್ಯ ಬಿ. ರಾಮಕೃಷ್ಣ, ಪುರಸಭೆ ಅಧ್ಯಕ್ಷ ಪರ್ವೇಜ್ ಪಾಷ, ಉಪಾಧ್ಯಕ್ಷೆ ಎಂ. ವಿಜಯಕುಮಾರಿ, ನಿಂಗಯ್ಯ, ಪಿ. ಮಹೇಶ್, ರಘು, ಅಜಯ್ ಪಿ.ಗೌಡ, ಲತಾ, ಭಾಗ್ಯ ಸತೀಶ್, ಅಸ್ಲಂ ಪಾಷ, ಮನ್ಸೂರ್ ಖಾನ್, ಗಂಗಾಧರ್, ಮೋಹನ್ ಇದ್ದರು.
ರೈತ ಸಮಾವೇಶಕ್ಕೆ ಪಯಣ
ಭಾರತೀನಗರ ಸಮೀಪದ ಅಂತರವಳ್ಳಿ ರೈತಸಂಘದ ಗ್ರಾಮ ಘಟಕದ ಕಾರ್ಯಕರ್ತರು ಶಿವಮೊಗ್ಗ ಜಿಲ್ಲೆಯಲ್ಲಿ ನಡೆಯಲಿರುವ ರೈತಸಮಾವೇಶಕ್ಕೆ ಪಾಲ್ಗೊಳ್ಳಲು ತೆರಳಿದರು.
ರೈತರ ಸಮಸ್ಯೆ ಅಧ್ಯಯನ ಮಾಡಲು ಕಾರ್ಯಕ್ರಮ
ನಾಗಮಂಗಲ: ಪ್ರತಿ ಗ್ರಾಮಗಳಿಗೆ ತೆರಳಿ ರೈತರ ಸಮಸ್ಯೆಗಳ ಬಗ್ಗೆ ಅಧ್ಯಯನ ಮಾಡಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಎನ್.ಚಲುವರಾಯಸ್ವಾಮಿ ತಿಳಿಸಿದರು.
ತಾಲೂಕಿನ ಬೆಳ್ಳೂರು ಹೋಬಳಿಯ ನೆಲ್ಲಿಗೆರೆ ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿ ಜನಸಂಪರ್ಕ ಸಭೆಯಲ್ಲಿ ಮಾತನಾಡಿ, ರೈತರು ತಮ್ಮ ಕೆಲಸಗಳ ನಿಮಿತ್ತ ಸರ್ಕಾರಿ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಲು ಅಧಿಕಾರಿಗಳೊಂದಿಗೆ ಅಧ್ಯಯನ ಪ್ರವಾಸ ಮಾಡುತ್ತೇನೆ ಎಂದರು.
ತಾಲೂಕಿನ ನೆಲ್ಲಿಗೆರೆ ಗ್ರಾಪಂ ವ್ಯಾಪ್ತಿಯ ಹಾಲಾಳು, ಕಂಚಿನಕೋಟೆ, ಕಾರಬೈಲು, ಎಲೆಕೊಪ್ಪ, ಗಾಣಸಂದ್ರ, ವಡ್ಡರಹಳ್ಳಿ, ಕೋಟೆರಾಮನಕೊಪ್ಪಲು ಗ್ರಾಮಗಳಲ್ಲಿ ಶಾಸಕರು ಜನಸಂಪರ್ಕ ಸಭೆ ನಡೆಸಿದರು. ತಾಪಂ ಅಧ್ಯಕ್ಷ ಬಸವಯ್ಯ, ತಹಸೀಲ್ದಾರ್-2 ಶಿವಲಿಂಗಮೂರ್ತಿ, ಉಪ ತಹಸೀಲ್ದಾರ್ ಉದಯಕುಮಾರ್, ತಾಪಂ ಇಒ ಚಂದ್ರಹಾಸ್, ತಾಯಮ್ಮ ಇದ್ದರು.
ಎಂಇಎಸ್ ಶಾಸಕರ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹ
ಮಳವಳ್ಳಿ: ಎಂಇಎಸ್ ಶಾಸಕರ ಉದ್ದಟತನದ ವಿರುದ್ಧ ಕ್ರಮಕೈಗೊಳ್ಳದಿರುವುದು ನಾಚಿಕೆಗೇಡಿನ ಸಂಗತಿ ಎಂದು ಕನ್ನಡ ಸೇನೆ ಕರ್ನಾಟಕ ಸಂಘಟನೆಯ ರಾಜ್ಯಾಧ್ಯಕ್ಷ ಕೆ.ಆರ್. ಕುಮಾರ್ ಆರೋಪಿಸಿದ್ದಾರೆ.
ಸಂಘಟನೆಯ ತಾಲೂಕು ಸಮಿತಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ನಟ ದ್ರುವಸರ್ಜಾ ನೃತ್ಯದ ಮೂಲಕ ನೆರೆದಿದ್ದ ಜನರನ್ನು ರಂಜಿಸಿದರು, ಬಿಜಿ ಪುರ ಹೊರಮಠದ ಚಂದ್ರಶೇಖರಸ್ವಾಮಿ ಅವರು ಸಾನ್ನಿಧ್ಯ ವಹಿಸಿದ್ದರು. ಬಾಣಸಮುದ್ರದ ಮಹೇಶ್ ಗೌಡ ಅಧ್ಯಕ್ಷತೆ ವಹಿಸಿದ್ದರು.
ಸಂಘಟನೆ ಜಿಲ್ಲಾಧ್ಯಕ್ಷ ಎಚ್.ಸಿ. ಮಂಜುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿದರು. ನಟರಾದ ಹರೀಶ್, ಮಹೇಶ್, ವಿಶ್ವ, ಕೆಂಬೂತಗೆರೆ ಮೋಹನ್, ಕನ್ನಡ ಗಿರೀಶ್, ನಾಗೇಂದ್ರ, ಕೆ.ಬಿ. ರಾಮಣ್ಣ, ಅಶೋಕ್ ಕುಮಾರ್ ಇದ್ದರು.