ಸಾಕ್ಷ್ಯಾಧಾರಗಳಿಲ್ಲದಿದ್ದರೂ ಪೊಲೀಸರಿಂದ ಕಿರುಕುಳ
ಕ.ಪ್ರ.ವಾರ್ತೆ ರಾಮನಗರ ಡಿ.21
ನನ್ನ ಮೇಲೆ ಯಾವುದೇ ಸಾಕ್ಷ್ಯಧಾರಗಳಿಲ್ಲದೇ ಹಲವು ಪ್ರಕರಣಗಳನ್ನು ಪೊಲೀಸರು ದಾಖಲಿಸುವ ಮೂಲಕ ಕಿರುಕುಳ ನೀಡುತ್ತಿದ್ದಾರೆ. ಇದು ಹೀಗೆಯೇ ಮುಂದುವರೆದರೆ ಹೈಕೋರ್ಟ್ ಇಲ್ಲವೇ ರಾಷ್ಟ್ರಪತಿ ಅವರಲ್ಲಿ ದಯಾಮರಣ ಕೋರಿ ಅರ್ಜಿ ಸಲ್ಲಿಸುವುದಾಗಿ ಆರ್ಟಿಐ ಕಾರ್ಯಕರ್ತ ರವಿಕುಮಾರ್ ತಮ್ಮ ಅಸಹಾಯಕತೆ ವ್ಯಕ್ತಪಡಿಸಿದರು.
ಭ್ರಷ್ಟಾಚಾರ ವ್ಯವಸ್ಥೆಯಲ್ಲಿ ಪ್ರಶ್ನಿಸುವುದೇ ದೊಡ್ಡ ಅಪರಾಧವಾಗಿದೆ. ಸರ್ಕಾರಿ ಕಚೇರಿಗಳಲ್ಲಿ ನಡೆದಿರುವ ಭ್ರಷ್ಟಾಚಾರವನ್ನು, ಅಕ್ರಮಗಳನ್ನು ಬಯಲು ಮಾಡಲು ಮಾಹಿತಿ ಹಕ್ಕು ಅಧಿನಿಯಮದ ಮೂಲಕ ಅರ್ಜಿ ಸಲ್ಲಿಸಿದರೆ ಭ್ರಷ್ಟ ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳು ಸೇರಿ ನನ್ನ ಮೇಲೆ ಸುಳ್ಳು ದೂರನ್ನು ದಾಖಲಿಸುತ್ತಿದ್ದಾರೆ. ನನ್ನದೇನೂ ತಪ್ಪಿರದಿದ್ದರೂ ಪೊಲೀಸರು ಬರುವ ಎಲ್ಲಾ ದೂರುಗಳಿಗೂ ಪ್ರಕರಣ ದಾಖಲಿಸಿಕೊಂಡು ಚಾರ್ಜ್ ಶೀಟ್ ಹಾಕುತ್ತಿದ್ದಾರೆ ಎಂದು ಅವರು ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ನಿರ್ಮೂಲನಾ ಸಂಸ್ಥೆಯ ಜಿಲ್ಲಾ ಘಟಕದಿಂದ ಆಯೋಜಿಸಲ್ಪಟ್ಟ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಕಬ್ಬಾಳು ಗ್ರಾಮಪಂಚಾಯಿತಿ ವ್ಯಾಪ್ತಿಯ ಗುರುವಿನಪುರಕ್ಕೆ ಸಂಬಂಧಪಟ್ಟ ಕೆಲವು ಮಾಹಿತಿಗಳನ್ನು ಕೋರಿ ಆರ್ಟಿಐ ಅರ್ಜಿ ಸಲ್ಲಿಸಿದ್ದೆ. ಆ ಗ್ರಾಮ ಪಂಚಾಯಿತಿಯ ಸದಸ್ಯ ಪುಟ್ಟರಾಜು ಎಂಬುವರು ಆರ್ಟಿಐ ಸಲ್ಲಿಸಿರುವ ಅರ್ಜಿಯನ್ನು ಹಿಂದಕ್ಕೆ ಪಡೆಯುವಂತೆ ಪ್ರಾಣ ಬೆದರಿಕೆ ಹಾಕಿದ್ದರು. ಇದಕ್ಕೆ ಸಂಬಂಧಿಸಿದಂತೆ ಆಡಿಯೋ ಸಿಡಿ ದಾಖಲೆ ಸಮೇತ ಉನ್ನತ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಿದ್ದೆ. ಅದನ್ನು ಅವರು ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ವರ್ಗಾಯಿಸಿ ನಾನು ನೀಡಿರುವ ದೂರಿಗೆ ಸೂಕ್ತ ಕ್ರಮಕೈಗೊಳ್ಳುವಂತೆ ಹಾಗೂ ರಕ್ಷಣೆ ನೀಡುವಂತೆ ಆದೇಶ ನೀಡಿದ್ದಾರೆ. ಆದರೂ ಪ್ರಯೋಜನವಾಗಿಲ್ಲ ಎಂದರು.
ದಾಖಲೆ: ಯಾವುದೇ ಕ್ರಮಕೈಗೊಳ್ಳದ ಪೊಲೀಸ್ ಅಧಿಕಾರಿಗಳು ನನ್ನ ಮೇಲೆ ದಾಖಲೆ ಇಲ್ಲದೆ ನೀಡುವ ದೂರುಗಳಿಗೆ ಪ್ರಕರಣಗಳನ್ನು ದಾಖಲಿಸುತ್ತಲೇ ಇದ್ದಾರೆ. ಪೊಲೀಸರಿಂದಲೂ ನನ್ನ ಮೇಲೆ ದೌರ್ಜನ್ಯ ನಿರಂತರವಾಗಿ ನಡೆಯುತ್ತಿದೆ. ಇದು ತಕ್ಷಣವೇ ನಿಲ್ಲದಿದ್ದರೆ, ದಯಾಮರಣ ಕೋರುವುದರ ಹೊರತಾಗಿ ನನಗೆ ಅನ್ಯ ಮಾರ್ಗವೇ ಇಲ್ಲ ಎಂದು ತಿಳಿಸಿದರು.
ಹಣ ವಸೂಲಿಗೆ ಬಂದಿದ್ದರು: ಇದಾದ ನಂತರ ನಾಡಕಚೇರಿಯಲ್ಲಿ ಲೋಕಾಯುಕ್ತರ ಹೆಸರೆಳಿಕೊಂಡು ಹಣ ವಸೂಲಿಗೆ ಬಂದಿದ್ದರು ಎಂಬುದಾಗಿ ಗ್ರಾಮ ಲೆಕ್ಕಾಧಿಕಾರಿ ಗಿರಿಯಪ್ಪ ದೂರು ನೀಡಿದ್ದಾರೆ. ಆ ಮೇರೆಗೆ ಸಾತನೂರು ಪೊಲೀಸರು ನನ್ನ ವಿರುದ್ಧ ಪ್ರಕರಣ ದಾಖಲು ಮಾಡಿದ್ದಾರೆ. ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುವುದೇ ತಪ್ಪೇ ಎಂದು ಅವರು ಪ್ರಶ್ನಿಸಿದರು. ಮಾನವ ಹಕ್ಕಗಳು ಮತ್ತು ಭ್ರಷ್ಟಾಚಾರ ನಿರ್ಮೂಲನಾ ಸಂಸ್ಥೆಯ ಜಿಲ್ಲಾ ಘಟಕದ ಅಧ್ಯಕ್ಷ ಮೋಹನ್ ಗೌಡ ಮಾತನಾಡಿ, ಈ ಪ್ರಕರಣದಲ್ಲಿ ಭ್ರಷ್ಟಾಚಾರ ನಿರ್ಮೂಲನೇ ಮಾಡುವುದೇ ಗುರಿಯಾಗಿದೆ. ಕೆಲವು ಚುನಾಯಿತ ಪ್ರತಿನಿಧಿಗಳು ಭ್ರಷ್ಟ ಅಧಿಕಾರಿಗಳ ರಕ್ಷಣೆಗೆ ನಿಂತು ನಮ್ಮ ಹೋರಾಟ ಹತ್ತಿಕ್ಕಲು ಷಡ್ಯಂತ್ರ ನಡೆಸುತ್ತಿದ್ದಾರೆ. ಇದಕ್ಕೆಲ್ಲಾ ಕಾನೂನು ಮೂಲಕವೇ ಉತ್ತರಿಸುವುದಾಗಿ ತಿಳಿಸಿದರು.
ಗೋಷ್ಠಿಯಲ್ಲಿ ಮಾನವ ಹಕ್ಕಗಳು ಮತ್ತು ಭ್ರಷ್ಟಾಚಾರ ನಿರ್ಮೂಲನಾ ಸಂಸ್ಥೆಯ ಜಿಲ್ಲಾ ಘಟಕದ ಉಪಾಧ್ಯಕ್ಷ ಎಸ್.ಬಿ.ಇಶಾಂತ್, ಕಾನೂನು ಸಲಹೆಗಾರ ಜಿ.ರಾಘವೇಂದ್ರ, ಪ್ರಧಾನ ಕಾರ್ಯದರ್ಶಿ ಇಮ್ರಾನ್ ಅಲಿಖಾನ್, ಕಾರ್ಯದರ್ಶಿ ಜಿ.ಕುಮಾರ್, ಖಜಾಂಚಿ ನವೀನ್ ಕುಮಾರ್, ಭರತ್ ಆರ್. ರೆಡ್ಡಿ, ಕೆ.ಎಸ್.ಚಿರಂಜೀವಿ, ಎಸ್.ಸತ್ಯ ಹಾಜರಿದ್ದರು.
ಲಂಚ ನೀಡುವಂತೆ ಒತ್ತಾಯ
ಸಾತನೂರಿನ ನಾಡಕಚೇರಿಯಲ್ಲಿ ರೈತ ಪುಟ್ಟಸ್ವಾಮಿ ಅವರ ಜಮೀನಿನ ಖಾತಾ ಬದಲಾವಣೆಗೆ ಸಂಬಂಧಿಸಿದಂತೆ ಗ್ರಾಮ ಲೆಕ್ಕಾಧಿಕಾರಿ ಗಿರಿಯಪ್ಪ ಅವರು ರು.2 ಸಾವಿರ ಲಂಚ ನೀಡುವಂತೆ
ಒತ್ತಾಯಿಸಿದ್ದರು. ಈ ವಿಷಯವನ್ನು ರೈತ ಪುಟ್ಟಸ್ವಾಮಿ ಅವರು ಆರ್ಟಿಐ ಕಾರ್ಯಕರ್ತನಾದ ನನ್ನ ಗಮನಕ್ಕೆ ತಂದರು. ನಾನು ಇದನ್ನು ಮಾನವ ಹಕ್ಕುಗಳ ಮತ್ತು ಭ್ರಷ್ಟಾಚಾರ ನಿರ್ಮೂಲನಾ ಸಂಸ್ಥೆಯವರ ಗಮನಕ್ಕೆ ತಂದೆ. ಇವರು ಭ್ರಷ್ಟಾಚಾರ ನಿರ್ಮೂಲನೆ ಮಾಡುವ ಉದ್ದೇಶದಿಂದ ರೈತ ಪುಟ್ಟಸ್ವಾಮಿ ಅವರನ್ನು ಕರೆಸಿ ಮಾತನಾಡಿ ಅವರ ಜತೆಗೆ ನಾಡಕಚೇರಿಗೆ ಹೋಗಿದ್ದಾಗಿ ರವಿಕುಮಾರ್ ವಿವರಿಸಿದರು. ಗ್ರಾಮ ಲೆಕ್ಕಿಗ ಗಿರಿಯಪ್ಪ ಅವರು ರೈತ ಪುಟ್ಟಸ್ವಾಮಿ ಅವರಿಂದ ರು.1 ಸಾವಿರ ಲಂಚ ತೆಗೆದುಕೊಂಡರು. ಅದನ್ನು ಚಿತ್ರಿಕರಿಸಲಾಗಿದೆ.
ನಂತರ ನಾನು ಮತ್ತು ಭ್ರಷ್ಟಾಚಾರ ನಿರ್ಮೂಲನಾ ಸಂಸ್ಥೆಯವರು ರೈತರ ಕೆಲಸಗಳಿಗೆ ಲಂಚ ಪಡೆಯದಂತೆ ಬುದ್ಧಿವಾದ ಹೇಳಿದೆವು. ಆಗ ಗ್ರಾಮ ಲೆಕ್ಕಿಗ ಲಂಚದ ಹಣ ವಾಪಸ್ ನೀಡಿ, ತಪ್ಪೊಪ್ಪಿಗೆ ಪತ್ರವನ್ನು ಸಂಸ್ಥೆ ಹೆಸರಿಗೆ ಬರೆದುಕೊಟ್ಟಿದ್ದಾರೆ. ಇದೆಲ್ಲವನ್ನು ಜಿಲ್ಲಾಡಳಿತದ ಗಮನಕ್ಕೂ ತರಲಾಗಿದೆ ಎಂದು ವಿವರಿಸಿದರು.