ಹಸಿರು ಕ್ರಾಂತಿಗಾಗಿ ಬಿಜೆಪಿ ತೊರೆಯುತ್ತಿದ್ದೇನೆ
ಚನ್ನಪಟ್ಟಣ: ಅಂದು ನೀರಾವರಿಗಾಗಿ ಬಿಜೆಪಿಗೆ ಸೇರ್ಪಡೆಗೊಂಡೆ, ಇಂದು ತಾಲೂಕಿನ ಹಸಿರು ಕ್ರಾಂತಿಗಾಗಿ ಬಿಜೆಪಿ ತೊರೆಯುತ್ತಿದ್ದೇನೆ.
ಇದು, ಕಾಂಗ್ರೆಸ್ಗೆ ಹಾರಲು ಸನ್ನದ್ಧವಾಗಿರುವ ವಲಸೆ ಹಕ್ಕಿ ಅರಣ್ಯ ಸಚಿವ ಯೋಗೇಶ್ವರ್ ತಮ್ಮ ಮರು ಪಕ್ಷಾಂತರಕ್ಕೆ ನೀಡಿದ ಮುನ್ನುಡಿ.
ತಾಲೂಕಿನ ಹೊಂಗನೂರು ಗ್ರಾಮದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ತಮ್ಮ ಬಾಷಣದುದ್ದಕ್ಕೂ ಪಕ್ಷಾಂತರ ಅಗತ್ಯ ಎಂಬ ಸಂಗತಿಯನ್ನು ಪ್ರತಿಪಾದಿಸುತ್ತಾ ಸಾಗಿದರು.
ನಾನು ಸ್ವಾರ್ಥಕ್ಕಾಗಿ ರಾಜಕಾರಣಕ್ಕೆ ಬಂದವನಲ್ಲ. ತಾಲೂಕಿನ ಜನಹಿತಕ್ಕಾಗಿ ರಾಜಕೀಯ ಸಂಘರ್ಷ ನಡೆಸಿದವನು. ನನ್ನ ನೀರಾವರಿ ಯೋಜನೆಗಳಿಗೆ ಬಿಜೆಪಿ ಸಾಕಷ್ಟು ಸಹಕಾರ ನೀಡಿದೆಯಾದರೂ ಇದನ್ನೆಲ್ಲ ಮುಂದುವರೆಸಲು ರಾಜಕೀಯವಾಗಿ ಮಹತ್ವದ ನಿರ್ಣಯ ಕೈಗೊಳ್ಳಲೇಬೇಕಿದೆ ಎಂದರು.
ಹೇಮೆಗಾಗಿ ಈ ತೀರ್ಮಾನ: ತಾಲೂಕಿಗೆ ಶಿಂಷಾನದಿಯಿಂದ ನೀರು ತರಲು ಪ್ರಯತ್ನ ಮುಂದುವರೆದಿದೆ. ಈ ಮಧ್ಯೆ ಹೇಮಾವತಿಯ ನೀರನ್ನು ತಾಲೂಕಿಗೆ ಹರಿಸಬೇಕೆಂಬ ಮಹತ್ವಾಕಾಂಕ್ಷೆ ನನ್ನದಾಗಿದ್ದು, ನಾಲ್ಕೈದು ವರ್ಷಗಳಲ್ಲಿ ಕೆಲಸ ಪೂರ್ಣಗೊಳಿಸಲು ರಾಜಕೀಯ ಶಕ್ತಿ ನನಗೆ ಬೇಕಿದೆ ಎಂದು ಯೋಗೇಶ್ವರ್ ಪೀಠಿಕೆ ಹಾಕಿದರು.
ಬೇರೆ ಜಿಲ್ಲೆಯ ತಾಲೂಕುಗಳಲ್ಲಿ ಈ ಯೋಜನೆಯನ್ನು ಕೈಗೆತ್ತಿ ಕೊಳ್ಳಬೇಕಿರುವುದರಿಂದ ಅಲ್ಲಿನ ಜನತೆ ಅಡ್ಡಿಪಡಿಸುವ ಸಾಧ್ಯತೆ ಇದೆ. ಸರ್ಕಾರ ನನ್ನ ಬೆಂಬಲಕ್ಕಿದ್ದರೆ ಈ ಕಾರ್ಯ ಸುಲಭ ಸಾಧ್ಯವಾಗುತ್ತದೆ. ಅದಕ್ಕಾಗಿ ಪರ್ಯಾಯ ರಾಜಕೀಯ ನಿರ್ಧಾರವನ್ನು ತಳೆಯಬೇಕಿದೆ ಎಂದರು.
ನೀವೇ ನಿರ್ಧರಿಸಿ: ನಾನು ಸ್ವಹಿತಕ್ಕಾಗಿ ರಾಜಕಾರಣ ಮಾಡಬೇಕೇ ಅಥವಾ ತಾಲೂಕಿಗಾಗಿ ರಾಜಕಾರಣ ಮಾಡಬೇಕೇ ಎನ್ನುವುದನ್ನು ನೀವೇ ನಿರ್ಧರಿಸಿ ಎಂದು ಸಭೆಯಲ್ಲಿದ್ದ ಬೆಂಬಲಿಗರತ್ತ ಕೈ ತೋರಿ ಯೋಗೇಶ್ವರ್ ಹೇಳಿದರು.
ಇಂದು ನಿಮ್ಮ ಅಪ್ಪಣೆ ಇಲ್ಲದೆ ಮುಂದಿನ ನಿರ್ಣಯ ತಳೆಯುವುದಿಲ್ಲ. ಈ ಸಭೆ ಮುಂದಿನ ರಾಜಕೀಯ ಬದಲಾವಣೆಗೆ ನಾಂದಿ ಹಾಡಬೇಕು ಎಂದು ತಿಳಿಸಿದರು.
ಯೋಗಿ ಯು ಟರ್ನ್: ನಾಲ್ಕು ಚುನಾವಣೆಗಳನ್ನು ಎದುರಿಸಿರುವ ನನಗೆ ಸಾಕಾಗಿ ಹೋಗಿದೆ, ರಾಜಕೀಯ ವಿಶ್ರಾಂತಿ ಪಡೆಯುವ ನಿರ್ಧಾರವನ್ನು ನಾನು ಪ್ರಕಟಿಸಿದ್ದೇ ಆದರೆ ತಾಲೂಕಿನ ಎಲ್ಲಾ ಕೆರೆಗಳಿಗೆ ನೀರು ತುಂಬಿಸಬೇಕೆಂಬುದು ನನ್ನ ಗುರಿ ಈ ಗುರಿ ಮುಟ್ಟುವ ತನಕ ನಾನು ಯಾವುದೇ ಕಾರಣಕ್ಕೂ ವಿರಮಿಸುವುದಿಲ್ಲ ಎಂದು ತಮ್ಮ ವಿಶ್ರಾಂತಿ ಹೇಳಿಕೆಯಿಂದ ಯುಟರ್ನ್ ಪಡೆದರು.
ಪಿತಾಮಹ ಇಂದಿಲ್ಲ: ಈ ತಾಲೂಕಿನ ಜನತೆ ನನಗೆ ನೀಡಿರುವ ಶಕ್ತಿಯನ್ನು ನಾನು ಸಮರ್ಥವಾಗಿ ನಿಬಾಯಿಸಿದ್ದೇನೆ. ಒಂದೂವರೆ ವರ್ಷದಲ್ಲಿ ತಾಲೂಕಿನಲ್ಲಿ ಅಭಿವೃದ್ಧಿಯ ಕ್ರಾಂತಿಯಾಗಿದ್ದು, ನನ್ನನ್ನು ಬಿಜೆಪಿ ಕರೆತಂದವರು ಯಡಿಯೂರಪ್ಪ. ರಾಜ್ಯ ಬಿಜೆಪಿ ಪಾಲಿಗೆ ಪಿತಾಮಹರಾಗಿದ್ದ ಅವರೇ ಇಂದು ಪಕ್ಷದಲ್ಲಿ ಇಲ್ಲ ಎಂದು ಯಡಿಯೂರಪ್ಪ ಗುಣಗಾನ ಮಾಡಿದರು.
ಸದಾನಂದಗೌಡ ಮುಖ್ಯಮಂತ್ರಿಯಾದಾಗ ನನಗೆ ಭರವಸೆ ಮೂಡಿತು. ಆದರೆ ಕೆಲವೇ ತಿಂಗಳಲ್ಲಿ ಜಗದೀಶ್ ಶೆಟ್ಟರ್ಮುಖ್ಯಮಂತ್ರಿಯಾದರು. ಪದೇ ಪದೆ ಮುಖ್ಯ ಮಂತ್ರಿಗಳು ಬದಲಾವಣೆಯಾದ ಪರಿಣಾಮ ಕ್ಷೇತ್ರದ ಅಭಿವೃದ್ಧಿ ಕೆಲಸಗಳು ನಾವಂದುಕೊಂಡ ಪ್ರಮಾಣದಲ್ಲಿ ನಡೆದಿಲ್ಲವಾದರೂ ನನ್ನ ವೈಯಕ್ತಿಕ ಶ್ರಮದಿಂದ ಹಿಂದೆಂದೂ ಕಾಣದ ಅಭಿವೃದ್ಧಿ ಕೆಲಸಗಳಾಗಿವೆ ಎಂದರು.
ಸಭೆಯಲ್ಲಿ ಮುಖಂಡರಾದ ಸಿಂಗರಾಜ ಪುರ ರಾಜಣ್ಣ, ಜಿ.ಪಂ. ಮಾಜಿ ಸದಸ್ಯರಾದ ಸಿದ್ದರಾಮುಮ, ಅಣ್ಣಯ್ಯ, ಶಾರದಾ ಚಂದ್ರಶೇಖರ್, ಕೆ.ವಿ. ಪುಟ್ಟಸ್ವಾಮಿಗೌಡ, ಕೋಕಿಲಾ ರಾಣಿ, ರಾಂಪುರ ಮಲುವೇಗೌಡ ಮತ್ತಿತರರು ಭಾಗವಹಿಸಿದ್ದರು.
ಕಾರ್ಯಕರ್ತರ ಒತ್ತಡ: ತಾಲೂಕಿನ ಹಿತದೃಷ್ಟಿಯಿಂದ ಪಕ್ಷಾಂತರ ಮಾಡಬೇಕೆಂಬುದು ನಮ್ಮ ಕಾರ್ಯಕರ್ತರ ಒತ್ತಾಸೆಯಾಗಿದ್ದು, ಅವರ ತೀರ್ಮಾನಕ್ಕೆ ಕಟಿಬದ್ಧನಾಗುತ್ತೇನೆ. ನಾಳೆ(ಫೆ.21) ಒಳಗಾಗಿ ಸೂಕ್ತ ನಿರ್ಧಾರ ಪ್ರಕಟಿಸುತ್ತೇನೆ ಎಂದು ಸಚಿವ ಯೋಗೇಶ್ವರ್ ತಿಳಿಸಿದರು.
ಯಾವುದೇ ಸರ್ಕಾರ ಸ್ವಂತ ಹಣವನ್ನು ನೀಡುವುದಿಲ್ಲ. ನಮ್ಮ ಕ್ಷೇತ್ರದ ಅಭಿವೃದ್ಧಿಗೆ ಬಂದಿರುವುದು ಜನತೆಯ ತೆರಿಗೆ ಹಣ. ನನಗೆ ಪಕ್ಷ, ಅಧಿಕಾರಕ್ಕಿಂತ ನನನ್ನು ಈ ಹಂತಕ್ಕೆ ತಂದ ಕಾರ್ಯಕರ್ತರೇ ಮುಖ್ಯ ಎಂದು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.
ತಂತ್ರಗಾರಿಕೆಗಳು ರಾಜಕಾರಣದಲ್ಲಿ ಸಾಕಷ್ಟಿವೆ. ಇವೆಲ್ಲವನ್ನು ಬಹಿರಂಗವಾಗಿ ಹೇಳಲಾಗದು. ಒಂದೊಮ್ಮೆ ಹೇಳುವುದಾದರೆ ಅದು ರಾಜಕಾರಣಿಯ ಲಕ್ಷಣವೂ ಅಲ್ಲ. ನಗರಸಭೆ ಚುನಾವಣೆ ಬಂದಿರುವ ಕಾರಣ ನಮ್ಮ ಕಾರ್ಯಕರ್ತರು ಪಕ್ಷಾಂತರ ಮಾಡುವಂತೆ ಹೆಚ್ಚಿನ ಒತ್ತಡ ತರುತ್ತಿದ್ದಾರೆ ಎಂದು ತಿಳಿಸಿದರು.
ಯಾರಿಗೂ ಹೆದರಿಲ್ಲ: ನಾನು ಯಾರಿಗೋ ಹೆದರಿ ಈ ರೀತಿಯ ನಿರ್ಧಾರ ತಳೆಯುತ್ತಿಲ್ಲ, ರಾಜಕೀಯ ಜೀವನದಲ್ಲಿ ನಾನು ಸೋಲು-ಗೆಲುವು ಎರಡನ್ನೂ ಕಂಡಿದ್ದೇನೆ. ಹಿಂದೆ ಕ್ಷೇತ್ರದ ಜನತೆಗೆ ಮುಖ ತೋರಿಸದ ಮಂದಿ ಇದೀಗ ದೇವಾಲಯಗಳಿಗೆ ಹುಡುಕಿಕೊಂಡು ಬಂದು ಹಣ ನೀಡುತ್ತಿದ್ದಾರೆ ಎಂದು ಅನಿತಾಕುಮಾರಸ್ವಾಮಿ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
ವಲಸೆ ಹಕ್ಕಿ ಕಾಂಗ್ರೆಸ್ ಗೂಡು ಸೇರುವುದು ಖಚಿತ
-ಮತ್ತೀಕೆರೆ ಜಯರಾಮ್
ರಾಮನಗರ: ಬೊಂಬೆಯನಾಡಿನ ವಲಸೆ ಹಕ್ಕಿ ಸಿ.ಪಿ.ಯೋಗೇಶ್ವರ್ ಕಾಂಗ್ರೆಸ್ ಗೂಡು ಸೇರುವುದು ನಿಶ್ಚಯವಾಗಿದ್ದು, ಪಕ್ಷ ಸೇರ್ಪಡೆ ಮುಹೂರ್ತ ಮಾತ್ರವೇ ಬಾಕಿ. ಗುರುವಾರ ಸಂಜೆಯೊಳಗೆ ಸಚಿವ ಮತ್ತು ಶಾಸಕ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿ ಅವರು ಬಿಜೆಪಿಗೆ ವಿದಾಯ ಹೇಳಲಿದ್ದಾರೆ.
ಆರೇಳು ತಿಂಗಳಿಂದಲೇ ಕಾಂಗ್ರೆಸ್ ಕದ ತಟ್ಟುತ್ತಿದ್ದ ಯೋಗೇಶ್ವರ್ ಅವರಿಗೆ ಇದೀಗ ಆ ಪಕ್ಷದ ಹೈಕಮಾಂಡ್ನಿಂದ ಹಸಿರು ನಿಶಾನೆ ದೊರೆತಿದೆ. ಬುಧವಾರ ಬೆಂಬಲಿಗರ ಸಭೆಯಲ್ಲಿ ಪಕ್ಷಾಂತರಕ್ಕೆ ಅನುಮತಿ ಪಡೆಯುವ ಶಾಸ್ತ್ರ ಮುಗಿಸಿದ್ದಾರೆ. ಫೆ.23ರೊಳಗೆ ಕಾಂಗ್ರೆಸ್ ಸೇರ್ಪಡೆಯಾಗುವುದು ಖಚಿತ.
ಚನ್ನಪಟ್ಟಣದಲ್ಲಿ ಜೆಡಿಎಸ್ ಪಕ್ಷದಿಂದ ಅನಿತಾ ಕುಮಾರಸ್ವಾಮಿ ಸ್ಪರ್ಧೆ ಘೋಷಣೆ ಬೆನ್ನಲ್ಲೇ ಯೋಗೇಶ್ವರ್ ಪಕ್ಷಾಂತರದ ವದಂತಿ ಹಬ್ಬಿತ್ತು. ಪ್ರಾರಂಭದಲ್ಲಿ ಯೋಗೇಶ್ವರ್ ಜೆಡಿಎಸ್ ಸೇರ್ಪಡೆ ಆಗುತ್ತಾರೆ ಎನ್ನುವ ಗುಸು ಗುಸು ಕೇಳಿ ಬಂದಿತ್ತು. ಇದೀಗ ಅವರು ಕಾಂಗ್ರೆಸ್ಗೆ ಮರಳುತ್ತಿದ್ದಾರೆ.
ಮೌನ ವಹಿಸಿದ ಡಿಕೆಶಿ: ತಮ್ಮ ಕಡುವೈರಿ ಯೋಗೇಶ್ವರ್ ಕಾಂಗ್ರೆಸ್ ಪಕ್ಷಕ್ಕೆ ಮರಳುವುದಕ್ಕೆ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಪ್ರಾರಂಭದಿಂದಲೂ ಅಡ್ಡಗಾಲಾಗಿದ್ದರು. ಅರಣ್ಯ ಗಣಿಗಾರಿಕೆ ವಿಷಯದಲ್ಲಿ ತಮ್ಮ ವಿರುದ್ಧ ಪ್ರತೀಕಾರಕ್ಕೆ ಇಳಿದಿದ್ದ ಯೋಗೇಶ್ವರ್ ಅವರನ್ನು ಹಣಿಯಲು ಶಿವಕುಮಾರ್ ಸಾಕಷ್ಟು ಅಸ್ತ್ರಗಳನ್ನು ಹೂಡಿದ್ದರು.
ಹಾವು-ಮುಂಗುಸಿಯಂತೆ ಕಚ್ಚಾಟದಲ್ಲಿ ತೊಡಗಿದ್ದ ಇಬ್ಬರನ್ನು ಒಂದುಗೂಡಿಸಲು ಮಠಾಧಿಪತಿಯೊಬ್ಬರು ಸಂಧಾನಕ್ಕೆ ಇಳಿದಿದ್ದರು. ಇಷ್ಟಾಗಿಯೂ ಬೆಸುಗೆ ಹಾಕಲಾಗಿರಲಿಲ್ಲ. ಹೈಕಮಾಂಡ್ ಯೋಗೇಶ್ವರ್ ಸೇರ್ಪಡೆಗೆ ಸಮ್ಮತಿಸುವ ಸುಳಿವು ದೊರೆಯುತ್ತಿದ್ದಂತೆಯೇ ಶಿವಕುಮಾರ್ ಮೌನದ ಮೊರೆ ಹೋದರು.
ಯೋಗಿ ಕೈಗೆ ಕಾಂಗ್ರೆಸ್: ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಬೆಂಬಲಿಗರನ್ನು ಬಿಜೆಪಿಯಿಂದ ಕಣಕ್ಕಿಳಿಸಿ ಮಣ್ಣು ಮುಕ್ಕಿದ್ದ ಯೋಗೇಶ್ವರ್ ಪೌರ ಸಂಸ್ಥೆಗಳ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಪಕ್ಷ ಸೇರ್ಪಡೆಗೆ ಮುನ್ನವೇ ಬೆಂಬಲಿಗರಿಂದ ಕಾಂಗ್ರೆಸ್ ಬಿ ಫಾರಂಗೆ ಅರ್ಜಿ ಹಾಕಿಸಿರುವುದು ಬಯಲಾಗಿದೆ.
ಮೂಲಗಳ ಪ್ರಕಾರ, ಪ್ರಸಕ್ತ ಚನ್ನಪಟ್ಟಣ ನಗರಸಭೆ ಚುನಾವಣೆಯಲ್ಲಿ ಎಲ್ಲ 31 ವಾರ್ಡ್ಗಳ ಬಿ ಫಾರಂ ಯೋಗೇಶ್ವರ್ ಕೈ ಸೇರಲಿದೆ. ಅವರ ಸಾರಥ್ಯದಲ್ಲೇ ಚುನಾವಣೆ ನಡೆಯಲಿದ್ದು, ಯೋಗೇಶ್ವರ್ ಸೇರ್ಪಡೆ ವಿಷಯವಾಗಿ ಗೊಂದಲಕ್ಕೆ ಆಸ್ಪದ ನೀಡದಂತೆ ವರಿಷ್ಠರು ಸ್ಥಳೀಯ ಮುಖಂಡರಿಗೆ ತಾಕೀತು ಮಾಡಿದ್ದಾರೆ.
ಕದನ ವಿರಾಮವಿಲ್ಲ: ಮುಂಬರುವ ವಿಧಾನಸಭೆ ಚುನಾವಣೆ ಅಖಾಡಕ್ಕೆ ಇಳಿಯುವುದಿಲ್ಲ. ಲೋಕಸಭೆ ಚುನಾವಣೆವರೆಗೆ ತಾತ್ಕಾಲಿಕ ವಿಶ್ರಾಂತಿ ಬಯಸಿರುವೆ ಎಂದು ಘೋಷಿಸಿದ್ದ ಯೋಗೇಶ್ವರ್ ಇದೀಗ ಯು ಟರ್ನ್ ತೆಗೆದುಕೊಂಡಿದ್ದಾರೆ. ಯಾವ ಕಾರಣಕ್ಕೂ ಸ್ಪರ್ಧೆಯಿಂದ ಹೊರಗುಳಿಯುವುದಿಲ್ಲ ಎಂದು ಹೇಳುವ ಮೂಲಕ ಹಿಂದಿನ ಘೋಷಣೆ ರಾಜಕೀಯ ಗಿಮಿಕ್ ಎನ್ನುವುದನ್ನು ಸಾಬೀತುಪಡಿಸಿದ್ದಾರೆ.
ಬಿಜೆಪಿ ಬಿಡಲ್ಲ
ಯೋಗೇಶ್ವರ್ ಪ್ರತಿನಿಧಿಸುತ್ತಿರುವ ಚನ್ನಪಟ್ಟಣ ಕ್ಷೇತ್ರಕ್ಕೆ ಬಿಜೆಪಿ ಸರ್ಕಾರ ಹಿಂದೆಂದೂ ಕಾಣದಷ್ಟು ಕೊಡುಗೆ ನೀಡಿದೆ. ಯೋಗೇಶ್ವರ್ ಪಕ್ಷಾಂತರ ಮಾಡಲಾರರು. ಬಿಜೆಪಿಯಲ್ಲೇ ಮುಂದುವರೆಯುತ್ತಾರೆ ಎನ್ನುವ ವಿಶ್ವಾಸ ನನಗಿದೆ.
-ಅಶ್ವತ್ಥನಾರಾಯಣ್, ಶಾಸಕ ಮತ್ತು ಬಿಜೆಪಿ ವಕ್ತಾರ