ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಕರೆಂಟ್ 'ಕಟ್‌' ಸಮಸ್ಯೆಗೆ ಸದ್ಯ ಮುಕ್ತಿ

Srinivasa Murthy VN
Updated On : 26 Feb 2013, 11:33 am

-ಮತ್ತೀಕೆರೆ ಜಯರಾಮ್
ರಾಮನಗರ:
ನಗರ ಮತ್ತು ಪಟ್ಟಣ ಪ್ರದೇಶದಲ್ಲಿ ರಾತ್ರಿ ವೇಳೆ ಕಾಡುತ್ತಿದ್ದ ಕರೆಂಟ್ ಕಟ್ ಸಮಸ್ಯೆಗೆ ಸದ್ಯ ಮುಕ್ತಿ ಸಿಕ್ಕಿದೆ.  ಆದರೆ, ಗ್ರಾಮೀಣ ಪ್ರದೇಶದಲ್ಲಿ ಸಮಸ್ಯೆ ಯಥಾ ಸ್ಥಿತಿ ಮುಂದುವರೆದಿದ್ದು, ಇದು ಪೌರ ಸಂಸ್ಥೆಗಳ ಚುನಾವಣೆ ಚುನಾವಣೆ ಮಹಿಮೆ ಎನ್ನುವುದು ಸ್ಪಷ್ಟವಾಗುತ್ತದೆ.
ಲೋಡ್ ಶೆಡ್ಡಿಂಗ್ ಇಲ್ಲವೆಂದು ಸರ್ಕಾರ ಹೇಳುತ್ತಲೇ ಬಂದಿದೆ. ಆದರೆ, ಬೆಸ್ಕಾಂ ಒಂದೂವರೆ ತಿಂಗಳಿಂದ ಅಘೋಷಿತ ಲೋಡ್ ಶೆಡ್ಡಿಂಗ್ ಜಾರಿಗೆ ತಂದು ಭಾರಿ ಪ್ರಮಾಣದಲ್ಲಿ ವಿದ್ಯುತ್ ಕಡಿತ ಪ್ರಾರಂಭಿಸಿದೆ.  10 ದಿನದಿಂದ ನಿರಂತರ ವಿದ್ಯುತ್ ಪೂರೈಕೆ ಆಗುತ್ತಿದ್ದು, ಚುನಾವಣೆ ತರುವಾಯ ಹೀಗೇ ಮುಂದುವರೆಯುತ್ತದೆ ಎನ್ನುವ ಖಾತರಿ ಇಲ್ಲ. 
ಪೂರೈಕೆ ವ್ಯತ್ಯಯ:  ಸಮರ್ಪಕ ವಿದ್ಯುತ್ ಸರಬರಾಜಾಗುತ್ತಿಲ್ಲ ಎನ್ನುವ ನೆಪವೊಡ್ಡಿದ್ದ ಬೆಸ್ಕಾಂ ಜಿಲ್ಲಾ ಕೇಂದ್ರ ರಾಮನಗರ, ಚನ್ನಪಟ್ಟಣ ನಗರಸಭೆ, ಕನಕಪುರ ಮತ್ತು ಮಾಗಡಿ ಪುರಸಭೆಗಳ ವ್ಯಾಪ್ತಿಯಲ್ಲಿ ಹಗಲು 3 ಮತ್ತು ರಾತ್ರಿ 2 ತಾಸು ವಿದ್ಯುತ್ ಕಡಿತ ಮಾಡುತ್ತಿತ್ತು. ಪೌರ ಸಂಸ್ಥೆಗಳ ಚುನಾವಣೆ ಅಧಿಸೂಚನೆ ಬೆನ್ನಲ್ಲೇ ಕಡಿತದ ಪ್ರಮಾಣ ತಗ್ಗಿದೆ.
ರಾತ್ರಿ ವೇಳೆ ನಿರಂತರ ವಿದ್ಯುತ್ ಪೂರೈಸಲಾಗುತ್ತಿದೆ. 5-10 ನಿಮಿಷವೂ ವಿದ್ಯುತ್ಸ್ ಸ್ಥಗಿತಗೊಳಿಸುವ ಗೋಜಿಗೆ ಬೆಸ್ಕಾಂ ಹೋಗುತ್ತಿಲ್ಲ. ಹಗಲು ವಿದ್ಯುತ್ ಪೂರೈಕೆಯಲ್ಲಿ ಗರಿಷ್ಠ 1 ತಾಸು ಮಾತ್ರವೇ ಕಡಿತಗೊಳ್ಳುತ್ತಿದೆ. ಹಗಲಿನ ವಿದ್ಯುತ್ ಕಡಿತ ನಿತ್ಯವೂ ಕಾಡುತ್ತಿಲ್ಲ. ದಿನ ಬಿಟ್ಟು ದಿನ ಎದುರಾದರೆ ಹೆಚ್ಚು. 
ಗ್ರಾಮೀಣರಿಗೆ ಖೋತಾ: ಗ್ರಾಮಾಂತರ ಪ್ರದೇಶದಲ್ಲಿ ತ್ರೀ ಫೇಸ್ ವಿದ್ಯುತ್ ಪೂರೈಕೆ ನಿತ್ಯ 6 ತಾಸು ಬದಲು 5 ತಾಸಿಗೆ ಇಳಿದಿದೆ. ಹಗಲು 4 ಮತ್ತು ರಾತ್ರಿ 1 ತಾಸು ಮಾತ್ರವೇ ತ್ರೀ ಫೇಸ್ ವಿದ್ಯುತ್ ಇದೆ. ಓಪನ್ ಡೆಲ್ಟಾ ವ್ಯವಸ್ಥೆ ತಂದು ಸಂಜೆ 6 ರಿಂದ ರಾತ್ರಿ 10ರವರೆಗೆ ಯಾವುದೇ ಪಂಪ್‌ಸೆಟ್‌ಗಳು ಕೆಲಸ ಮಾಡದಂತೆ ಬೆಸ್ಕಾಂ ದೊಡ್ಡ ಪೆಟ್ಟು ನೀಡಿದೆ.
ಹಗಲಲ್ಲಿ ನೀಡುವ ತ್ರೀ ಫೇಸ್ ವಿದ್ಯುತ್ ಪೂರೈಕೆಯಲ್ಲಿ ಕಣ್ಣಾಮುಚ್ಚಾಲೆ ತಪ್ಪಿದ್ದಲ್ಲ. ಈ 4 ತಾಸು ಅವಧಿಯಲ್ಲಿ ಕನಿಷ್ಠ 2-3 ಬಾರಿ ವಿದ್ಯುತ್ ಹೋಗಿ ಬರುತ್ತದೆ. ಪ್ರತಿ ಬಾರಿ 10 ರಿಂದ 20 ನಿಮಿಷ ವಿದ್ಯುತ್ ಪೂರೈಕೆ ಇಲ್ಲದಂತಾಗುತ್ತದೆ. ಇದೆಲ್ಲವೂ ಸೇರಿದರೆ ತ್ರೀ ಫೇಸ್ ವಿದ್ಯುತ್ ಸಿಗುತ್ತಿರುವುದು ದಿನಕ್ಕೆ 4 ತಾಸು ಮಾತ್ರವೇ.
ಓಲೈಕೆಯ ತಂತ್ರ: ರಾಜ್ಯದಲ್ಲಿ ವಿದ್ಯುತ್ ಕೊರತೆ ಹೆಚ್ಚಿದೆ. ಸ್ಥಳೀಯ ಉತ್ಪಾದನಾ ಘಟಕಗಳು ಪದೇ ಪದೇ ಕೈಕೊಡುತ್ತಿದ್ದು, ಹೊರ ರಾಜ್ಯಗಳಿಂದ ವಿದ್ಯುತ್ ಖರೀದಿಸಲಾಗುತ್ತಿದೆ. ಇಷ್ಟೆಲ್ಲದರ ನಡುವೆಯೂ ಸರ್ಕಾರವು ಪೌರ ಸಂಸ್ಥೆಗಳ ಮತದಾರರನ್ನು ಸೆಳೆಯುವ ಒಂದೇ ಕಾರಣಕ್ಕೆ ನಗರ, ಪಟ್ಟಣಗಳಲ್ಲಿ ನಿರಂತರ ವಿದ್ಯುತ್ ಪೂರೈಕೆಗೆ ಒತ್ತು ನೀಡಿರುವುದು ಗುಟ್ಟಿನ ಸಂಗತಿಯೇನಲ್ಲ.
ಈ ಹಿಂದೆ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ನಡೆದಾಗ ಗ್ರಾಮೀಣ ಭಾಗದಲ್ಲಿ ವಿದ್ಯುತ್ ಬವಣೆ ಎದುರಾಗದಂತೆ ಸರ್ಕಾರ ಕ್ರಮ ಕೈಗೊಂಡಿತ್ತು. ಮತದಾನ ಮುಗಿದ ದಿನದ ರಾತ್ರಿಯಿಂದಲೇ ಮತ್ತೆ ವಿದ್ಯುತ್ ಕಡಿತ ಜಾರಿಗೊಂಡಿತ್ತು. ಪೌರ ಸಂಸ್ಥೆಗಳ ವ್ಯಾಪ್ತಿಯಲ್ಲೂ ಅಂಥದ್ದೇ ಪರಿಸ್ಥಿತಿ ಎದುರಾಗುವ ಸಂಭವವಿದೆ.
ಸರ್ಕಾರ ಇದ್ರೆ ಚೆಂದ: ವಿಧಾನಸಭೆಗೆ ಮೇ ಮಾಹೆಯಲ್ಲಿ ಚುನಾವಣೆ ನಿಶ್ಚಿತ. ಬಿರು ಬೇಸಿಗೆಯಲ್ಲಿ ಬರುವ ಚುನಾವಣೆ ಸಂದರ್ಭಕ್ಕೆ ಸರ್ಕಾರ ಅಧಿಕಾರದಲ್ಲಿದ್ದರೆ ಸೂಕ್ತ ಎನ್ನುವುದು ಹಲವರ ಅನಿಸಿಕೆ. ಬೇಸಿಗೆಯಲ್ಲಿ ವಿದ್ಯುತ್ ಬವಣೆ ತಪ್ಪಿದ್ದಲ್ಲ. ಆ ವೇಳೆ ಸರ್ಕಾರ ಇದ್ದರೆ ಮತ ಬೇರೆ ಉದ್ದೇಶಕ್ಕಾದರೂ ಸಮರ್ಪಕ ವಿದ್ಯುತ್ ನೀಡಬಹುದೆನ್ನುವ ನಿರೀಕ್ಷೆಯ ಮಾತುಗಳು ಕೇಳಿ ಬರುತ್ತಿವೆ.
ಒಂದೊಮ್ಮೆ ಸರ್ಕಾರ ಪತನಗೊಂಡು, ಚುನಾವಣೆ ಎದುರಾದರೆ ಅಧಿಕಾರಿಗಳ ಕಾರುಬಾರು ಜೋರಾಗುತ್ತದೆ. ಜನಪರ ಕಾಳಜಿ ಮತ್ತು ಬದ್ಧತೆ ವಿಷಯದಲ್ಲಿ ಅಧಿಕಾರಿಗಳಿಗಿಂತ ರಾಜಕಾರಣಿಗಳೇ ಮಿಗಿಲು. ರಾಜಕಾರಣಿಗಳು ಓಟಿನ ವಿಷಯದಲ್ಲಾದರೂ ಜನರಿಗೆ ಹೆದರುತ್ತಾರೆ. ಸರ್ಕಾರವಿದ್ದರೆ ಬೇಸಿಗೆಯಲ್ಲಿ ವಿದ್ಯುತ್‌ನ ಭೀಕರ ಬವಣೆ ಬರದೆನ್ನುವ ಅಭಿಪ್ರಾಯ ಹಲವರದ್ದಾಗಿದೆ.

ಹಿಂತೆಗೆತಕ್ಕೆ ರೇಟ್‌ಫಿಕ್ಸ್
ಪೌರ ಸಂಸ್ಥೆಗಳ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳಿಗೆ ಸಡ್ಡು ಹೊಡೆದಿರುವ ಬಂಡುಕೋರರೇ ದೊಡ್ಡ ತಲೆನೋವಾಗಿ ಪರಿಣಮಿಸಿದ್ದಾರೆ. ಉಮೇದುವಾರಿಕೆ ಹಿಂತೆಗೆತಕ್ಕೆ ನಾಳೆ (ಫೆ.27) ಕಡೆಯ ದಿನವಾಗಿದ್ದು, ಇಲ್ಲೂ ಕುದುರೆ ವ್ಯಾಪಾರದ ಭರಾಟೆ ಜೋರಾಗಿದೆ.  ತಮ್ಮ ಪಕ್ಷದ ಸರ್ಕಾರ ಬಂದರೆ ಪುರಪಿತೃ ಇಲ್ಲವೇ ಪ್ರಮುಖ ಹುದ್ದೆಗೆ ನಾಮಕರಣ, ಪಕ್ಷದಲ್ಲಿ ಪದಾಧಿಕಾರತ್ವ ಸೇರಿದಂತೆ ನಾನಾ ಆಮಿಷಗಳನ್ನು ಮುಖಂಡರು ಒಡ್ಡುತ್ತಿದ್ದಾರೆ. ಇದ್ಯಾವುದಕ್ಕೂ ಜಗ್ಗದಿದ್ದವರಿಗೆ ಧಾರಣೆ ಕಟ್ಟಿ, ವ್ಯಾಪಾರ ಕುದುರಿಸುವ ಕೆಲಸ ಎಗ್ಗಿಲ್ಲದೆ ನಡೆಯುತ್ತಿದೆ.  ಪ್ರಮುಖ ಪಕ್ಷಗಳ ಟಿಕೆಟ್ ನಿರೀಕ್ಷೆಯೊಂದಿಗೆ  ಉಮೇದುವಾರಿಕೆ ಸಲ್ಲಿಸಿ, ಪಕ್ಷೇತರರಾಗಿ ಉಳಿದುಕೊಂಡಿರುವ 130ಕ್ಕೂ ಹೆಚ್ಚು ಅಭ್ಯರ್ಥಿಗಳಿದ್ದಾರೆ. ಈ ಪೈಕಿ ಅರ್ಧದಷ್ಟು ಮಂದಿ ಶತಾಯ ಗತಾಯ ಕಣದಲ್ಲಿ ಉಳಿದುಕೊಂಡು, ಪಕ್ಷದ ಅಧಿಕೃತ ಅಭ್ಯರ್ಥಿಯ ಕಾಲೆಳೆಯಬೇಕೆನ್ನುವ ಇರಾದೆ ಹೊಂದಿದವರು.
ಗುಪ್ತ ಸಮಾಲೋಚನೆ: ಬಂಡಾಯ ಅಭ್ಯರ್ಥಿಗಳನ್ನು ರೆಸಾರ್ಟ್ ಇಲ್ಲವೇ ತೋಟದ ಮನೆಗಳಿಗೆ ಕರೆದೊಯ್ದು, ಗುಂಡು-ತುಂಡಿನ ಔತಣಕೂಟ ಆಯೋಜನೆ ಸಮೇತ ಮನವೊಲಿಸುವ ಕೆಲಸ ಎರಡು ದಿನದಿಂದ ನಡೆಯುತ್ತಿದೆ. ಪಕ್ಷಕ್ಕೆ ಮುಳುವಾಗುತ್ತಾರೆ ಎನ್ನುವ ಭೀತಿ ಮೂಡಿಸಿರುವವರಿಗೆ ರೇಟು ಕಟ್ಟಿ, ನಾಮಪತ್ರ ಹಿಂತೆಗೆತಕ್ಕೆ ಒಪ್ಪಿಸುವ ಪ್ರಯತ್ನ ನಡೆದಿದೆ.  ಕೆಲ ಟಿಕೆಟ್ ವಂಚಿತರು ಚುನಾವಣೆ ಘೋಷಣೆ ದಿನದಿಂದ ಇಲ್ಲಿವರೆಗೆ ಮಾಡಿರುವ ಖರ್ಚು-ವೆಚ್ಚದ ಜತೆಗೆ ತಮ್ಮ ಲಾಭಾಂಶವನ್ನೂ ಸೇರಿಸಿಕೊಂಡು ಧಾರಣೆ ಹೇಳುತ್ತಿದ್ದು, ಅವರವರ ಯೋಗ್ಯತಾನುಸಾರ ಬಟವಾಡೆ ಆಗುತ್ತಿದೆ. ವಿರಳ ಸಂಖ್ಯೆಯ ಉಮೇದುವಾರರು ವರಿಷ್ಠರನ್ನು ತರಾಟೆಗೆ ತೆಗೆದುಕೊಂಡು, ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಕಣದಿಂದ ಹಿಂದೆ ಸರಿಯುವ ನಿರ್ಧಾರದೊಂದಿಗೆ ಪಕ್ಷನಿಷ್ಠೆ ತೋರಿದ್ದೂ ಉಂಟು.
ಅತೃಪ್ತರ ಸಮ್ಮಿಲನ: ಕೆಲ ವಾರ್ಡ್‌ಗಳಲ್ಲಿ ವಿವಿಧ ಪಕ್ಷಗಳ ಟಿಕೆಟಟ್ವಂಚಿತರೆಲ್ಲ ಒಂದು ಕೂಟ ಸ್ಥಾಪಿಸಿಕೊಂಡು, ಒಬ್ಬ ಪಕ್ಷೇತರ ಅಭ್ಯರ್ಥಿಯನ್ನು ಕಣದಲ್ಲಿ ಉಳಿಸಿ ಗೆಲ್ಲಿಸುವ ಪಣ ತೊಟ್ಟಿದ್ದಾರೆ. ಈ ಪ್ರಯತ್ನದಲ್ಲಿ ಸಫಲವಾದಲ್ಲಿ ತಮ್ಮ ಸಾಮರ್ಥ್ಯ ಏನೆಂಬುದನ್ನು ಪಕ್ಷದ ಮುಖಂಡರಿಗೆ ತೋರಿಸಿಕೊಟ್ಟಂತಾಗುತ್ತದೆ ಎನ್ನುವ ಗುಂಗಿನಲ್ಲಿ ಟಿಕೆಟ್ ವಂಚಿತರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement