ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಕಲೆಯ ಉಳಿವಿಗೆ ಪ್ರಯತ್ನ ಮುಖ್ಯ

Srinivasa Murthy VN
Updated On : 26 Feb 2013, 11:30 am

ದೊಡ್ಡಬಳ್ಳಾಪುರ: ಕಲೆ ಬದುಕಿನ ಜೀವಂತಿಕೆಯ ಸಂಕೇತ. ಅದರ ಯಶಸ್ಸು, ಉಳಿವಿಗೆ ಸಾಮುದಾಯಿಕ ಪ್ರಯತ್ನ ಮತ್ತು ನಿಸ್ವಾರ್ಥ ಹಿತಾಸಕ್ತಿ ಮುಖ್ಯ ಎಂದು ಹಿರಿಯ ಪತ್ರಕರ್ತ ಪಿ.ಜಿ.ಸುಬ್ಬರಾವ್ ಹೇಳಿದರು.
ಇಲ್ಲಿನ ಶ್ರೀಪ್ರಸನ್ನ ವೆಂಕಟರಮಣಸ್ವಾಮಿ ಜಾತ್ರಾ ಸಾಂಸ್ಕೃತಿಕ ಸಮಿತಿ ನೇತೃತ್ವದಲ್ಲಿ ಆರಂಭವಾದ 2 ದಿನಗಳ ನಾಟಕೋತ್ಸವ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಜಾತ್ರೆಗಳು ಈ ನೆಲದ ಸಂಸ್ಕೃತಿಯ ಜೀವಾಳ. ಎಲ್ಲ ಬಗೆಯ ಜನ, ಎಲ್ಲ ಬಗೆಯ ಸಾಂಸ್ಕೃತಿಕ ಚಿಂತನೆಗಳು ಒಟ್ಟುಗೂಡುವ ಸ್ಥಳವದು. ಇಂತಹ ಸಂದರ್ಭದಲ್ಲಿ ನಾಟಕೋತ್ಸವ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಸುವ ಮೂಲಕ ಸ್ಥಳೀಯ ಕಲಾ ಪ್ರತಿಭೆಗಳಿಗೆ ನಿರಂತರ ಪ್ರೋತ್ಸಾಹ ನೀಡುವುದು ಉತ್ತಮ ಚಿಂತನೆ. ಈ ನಿಟ್ಟಿನಲ್ಲಿ ಸತತವಾಗಿ ನಡೆದುಕೊಂಡು ಬರುತ್ತಿರುವ ಈ ಬಗೆಯ ಕಾರ್ಯಕ್ರಮಗಳು ನೈಜ ಸಾಂಸ್ಕೃತಿಕ ಪ್ರತಿಭೆಗಳ ಪ್ರೋತ್ಸಾಹದ ವೇದಿಕೆಗಳಾಗಿರುತ್ತವೆ ಎಂದರು.
ಯಶಸ್ಸು ಕಟ್ಟಿಟ್ಟಬುತ್ತಿ: ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಕಸಾಪ ಅಧ್ಯಕ್ಷ ಹುಲಿಕಲ್ ನಟರಾಜ್ ಮಾತನಾಡಿ ಕಲೆ ಇಂದು ಮಾರುಕಟ್ಟೆ ಸರಕಾಗುತ್ತಿದೆ. ಕೇವಲ ಲಾಭ-ನಷ್ಟಗಳ ಲೆಕ್ಕಾಚಾರದಲ್ಲಿ ಕಲಾವಂತಿಕೆಯನ್ನು ಅಳೆಯುವ ಕೆಲಸ ಆಗುತ್ತಿರುವುದು ಅಪಾಯಕಾರಿ. ಆಲೋಚನೆಗೆ ಪೂರಕವಾಗಿ ಅಭಿವ್ಯಕ್ತಿಯೂ ಇದ್ದರೆ ಕಲಾವಿದನ ಯಶಸ್ಸು ಕಟ್ಟಿಟ್ಟಬುತ್ತಿ ಎಂದರು.
ಕಾರ್ಯಕ್ರಮದಲ್ಲಿ ತಾ.ಕಸಾಪ ಅಧ್ಯಕ್ಷ ಕೆ.ಆರ್.ರವಿಕಿರಣ್, ತಾ.ಕಲಾವಿದರ ಸಂಘದ ಅಧ್ಯಕ್ಷ ರಾಮಮೂರ್ತಿ, ಲಯನ್ಸ್ ಕ್ಲಬ್ ಅಧ್ಯಕ್ಷ ಪಿ.ಸಿ.ವೆಂಕಟೇಶ್ ಮಾತನಾಡಿದರು. ಇದೇ ಸಂದರ್ಭದಲ್ಲಿ ತಾಲೂಕಿನ ಐವರು ಪ್ರತಿಭಾವಂತ ಹಿರಿಯ ಕಲಾವಿದರನ್ನು ಸನ್ಮಾನಿಸಲಾಯಿತು.
ಕಜಾಪ ಕಾರ್ಯದರ್ಶಿ ತ.ನ.ಪ್ರಭುದೇವ್, ಬಿರ್ಲಾಸೂಪರ್ ಬಲ್ಕ್ ಟರ್ಮಿನಲ್‌ನ ಮಾನವಸಂಪನ್ಮೂಲ ವಿಭಾಗದ ಮಂಜುನಾಥ್, ಗಾಯತ್ರಿ ನೇಕಾರರ ಹಿತರಕ್ಷಣಾ ಸಮಿತಿಯ ಅಶ್ವತ್ಥ್, ಹಿರಿಯ ಕಲಾವಿದ
ಸಂಪತ್‌ಕುಮಾರ್, ಬೆಂ.ಗ್ರಾ.ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ನಾಗಪ್ರಿಯ, ಜಾತ್ರಾ ಸಾಂಸ್ಕೃತಿಕ ಸಮಿತಿಯ ಸಂಚಾಲಕ ಡಿ.ಶ್ರೀಕಾಂತ್, ಕೃಷ್ಣಮೂರ್ತಿ, ನಂದಕುಮಾರ್, ವೆಂಕಟರಾಜು ಸೇರಿದಂತೆ ಅನೇಕ ಕಲಾವಿದರು ಹಾಜರಿದ್ದರು.
ನಂತರ ಹಲವು ನೃತ್ಯಪ್ರತಿಭೆಗಳಿಂದ ಭರತನಾಟ್ಯ, ತಾಲೂಕು ಕಲಾವಿದರ ಸಂಘದ ಕಲಾವಿದರಿಂದ ರಂಗ ದೃಶ್ಯಾವಳಿ, ಶ್ರೀಆಂಜನೇಯ ಕೃಪಾಪೋಷಿತ ನಾಟಕ ಮಂಡಲಿಯಿಂದ ಶ್ರೀಕೃಷ್ಣ ಸಂಧಾನ ಪೌರಾಣಿಕ ನಾಟಕ ನಡೆಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement