ಜಾತ್ರೆಗೆ ಬಂದ ಭಕ್ತರಿಗೆ ವೈದ್ಯ ತಪಾಸಣೆ
ದೊಡ್ಡಬಳ್ಳಾಪುರ: ಇಲ್ಲಿನ ಇತಿಹಾಸ ಪ್ರಸಿದ್ಧ ಶ್ರೀವೆಂಕಟರಮಣಸ್ವಾಮಿ ಜಾತ್ರಾ ಮಹೋತ್ಸವಕ್ಕೆ ಬಂದ ಭಕ್ತಾದಿಗಳಿಗೆ ಉಚಿತ ವೈದ್ಯಕೀಯ ತಪಾಸಣೆ ಮೂಲಕ ಆರೋಗ್ಯದ ಉಚಿತ ಸಲಹೆ ನೀಡುವ ಶಿಬಿರವನ್ನು ವೊಡಾಫೋನ್ ಮೊಬೈಲ್ ನೆಟ್ವರ್ಕ್ ವತಿಯಿಂದ ಹಮ್ಮಿಕೊಳ್ಳಲಾಗಿತ್ತು. ದೇವಾಲಯದ ಆವರಣದಲ್ಲಿ ಸಾವಿರಾರು ಭಕ್ತಾದಿಗಳಿಗೆ ಆರೋಗ್ಯ ತಪಾಸಣೆ ನಡೆಸಿ ವೈದ್ಯಕೀಯ ಸಲಹೆ ಮತ್ತು ಮಾರ್ಗದರ್ಶನ ನೀಡಿದ್ದು ವಿಶೇಷವಾಗಿತ್ತು. ಅದೇ ರೀತಿ ಜಾತ್ರೆಗೆ ಬಂದ ಭಕ್ತಾದಿಗಳಿಗೆ ನೀರಿನ ಪ್ಯಾಕೆಟ್ ವಿತರಣೆ ಮೂಲಕ ಬಾಯಾರಿಕೆ ತಣಿಸುವ ಕೆಲಸವನ್ನು ಮಾಡಲಾಗಿತ್ತು.
ದೊಡ್ಡಬಳ್ಳಾಪುರ ನಗರಸಭೆ 161 ನಾಮಪತ್ರ ಸ್ವೀಕೃತ
ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ನಗರಸಭೆಗೆ ಮಾ.7ರಂದು ನಡೆಯುವ ಚುನಾವಣೆಯಲ್ಲಿ 31 ವಿವಿಧ ವಾರ್ಡುಗಳಿಂದ ಅಭ್ಯರ್ಥಿಗಳು ಸಲ್ಲಿಸಿದ್ದ 184 ನಾಮಪತ್ರಗಳಲ್ಲಿ 161 ನಾಮಪತ್ರಗಳು ಸ್ವೀಕೃತವಾಗಿವೆ. ನಾಮಪತ್ರಗಳನ್ನು ಪರಿಶೀಲನೆ ನಡೆಸಿದ ತಾಲೂಕು ಆಡಳಿತ 1ನೇ ವಾರ್ಡ್ನಲ್ಲಿ 1, 2ನೇ ವಾರ್ಡ್ನಲ್ಲಿ 2, 7ನೇ ವಾರ್ಡ್ನಲ್ಲಿ 1 ಮತ್ತು 11ನೇ ವಾರ್ಡಿನಲ್ಲಿ 2 ನಾಮಪತ್ರಗಳನ್ನು ಅಸಿಂಧುಗೊಳಿಸಿದ್ದಾರೆ. ಉಳಿದಂತೆ ಒಬ್ಬರೇ ಅಭ್ಯರ್ಥಿಗಳು 2-3 ನಾಮಪತ್ರಗಳನ್ನು ಸಲ್ಲಿಸಿದ್ದರು. ಅದನ್ನೂ ಕೂಡ ಅಖೈರುಗೊಳಿಸಲಾಗಿದ್ದು ಒಟ್ಟು 161 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.
ನಾಮಪತ್ರ ವಾಪಸ್: 18ನೇ ವಾರ್ಡಿನಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕೆ.ಆರ್. ದಯಾನಂದ್ ಮಂಗಳವಾರ ತಮ್ಮ ನಾಮಪತ್ರವನ್ನು ವಾಪಸ್ ಪಡೆದರು. ಪರಿಣಾಮವಾಗಿ ಸದ್ಯಕ್ಕೆ 31 ವಾರ್ಡುಗಳಿಂದ 160 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ನಾಮಪತ್ರಗಳನ್ನು ವಾಪಸ್ ಪಡೆಯಲು ಬುಧವಾರ ಕಡೆಯ ದಿನವಾಗಿದೆ. ಬುಧವಾರ ಸಂಜೆ ಅಂತಿಮ ಪಟ್ಟಿ ಬಿಡುಗಡೆಯಾಗುವ ನಿರೀಕ್ಷೆ ಇದೆ.
ಪಕ್ಷವಾರು ಅಭ್ಯರ್ಥಿಗಳು: ಈ ಚುನಾವಣೆಯಲ್ಲಿ ಯಾವ ರಾಜಕೀಯ ಪಕ್ಷವೂ ಎಲ್ಲ 31 ವಾರ್ಡುಗಳಲ್ಲಿ ಸ್ಪರ್ಧಿಸದಿರುವುದು ವಿಶೇಷವಾಗಿದೆ. ಜೆಡಿಎಸ್ 29 ವಾರ್ಡುಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಕಾಂಗ್ರೆಸ್ 28 ಅಭ್ಯರ್ಥಿಗಳನ್ನು ಅಖಾಡಕ್ಕಿಳಿಸಿದ್ದರೆ, ಬಿಜೆಪಿ 27 ವಾರ್ಡುಗಳಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದೆ. ಕೆಜೆಪಿ 20, ಸಿಪಿಐ(ಎಂ) 3 ಮತ್ತು ಕನ್ನಡಪಕ್ಷ 3 ಸ್ಥಾನಗಳಲ್ಲಿ ಕಣಕ್ಕಳಿದಿದೆ. ಸುಮಾರು 50 ಪಕ್ಷೇತರ ಅಭ್ಯರ್ಥಿಗಳು ಕಣದಲ್ಲಿರುವುದು ಈ ಬಾರಿಯ ಹೈಲೈಟ್.
ಅಕ್ರಮ ಚಟುವಟಿಕೆ ನಡೆಸುವವರಿಗೆ ಕ್ರಮ
ಮಾಗಡಿ: ಚುನಾವಣೆಯಲ್ಲಿ ಕಾನೂನು ಉಲ್ಲಂಘನೆ, ಅಕ್ರಮ ಚಟುವಟಿಕೆ ನಡೆಸುವವರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಉಪವಿಭಾಗಾಧಿಕಾರಿ ಡಾ.ಬಿ. ಸ್ನೇಹಾ ಎಚ್ಚರಿಕೆ ನೀಡಿದ್ದಾರೆ. ಅವರು ತಾಲೂಕು ಕಚೇರಿಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರ ಸಭೆ ಕರೆದು ಶಾಂತಿಯುತ ಮತದಾನಕ್ಕೆ ಎಲ್ಲರೂ ಸಹಕರಿಸಬೇಕು. ಯಾವುದೇ ಕಾರಣಕ್ಕೂ ಕಾನೂನು ಉಲ್ಲಂಘನೆ ಮಾಡಬೇಡಿ ಶಾಂತಿಯುತ ಮತದಾನಕ್ಕೆ ಸೂಕ್ತ ವ್ಯವಸ್ಥೆ ಮಾಡಲಾಗಿದೆ ಎಂದರು. ಈಗಾಗಲೇ ಚುನಾವಣೆಗೆ ತಾಲೂಕು ಆಡಳಿತ ಸಜ್ಜಾಗಿದ್ದು, ಎಲ್ಲ ರೀತಿಯ ಕ್ರಮಗಳನ್ನು ಅನುಸರಿಸಲಾಗಿದೆ. ನಾಗರಿಕರು, ಮಾಧ್ಯಮದವರು ಸಹ ಹೆಚ್ಚು ಸಹಕಾರ ನೀಡುವ ಮೂಲಕ ಶಾಂತಿಯುತ ಮತದಾನಕ್ಕೆ ಸಹಕರಿಸಿ ಎಂದು ತಹಸೀಲ್ದಾರ್ ಡಾ. ಬಿ.ಆರ್. ಹರೀಶ್ ನಾಯಕ್ ತಿಳಿಸಿದರು. ವಿವಿಧ ಪಕ್ಷದ ಮುಖಂಡರುಗಳು ಭಾಗವಹಿಸಿದ್ದರು.
ಇಂದು ವಿದ್ಯುತ್ ಸರಬರಾಜಲ್ಲಿ ವ್ಯತ್ಯಯ
ರಾಮನಗರ: ಫೆ.27ರಂದು ಬಿಡದಿಯ 220 ಕೆವಿ ಉಪಕೇಂದ್ರಕ್ಕೆ ಜೋಡಿ ಮಾರ್ಗ ನಿರ್ಮಾಣ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಅಂದು ಬೆಳಗ್ಗೆ 9ರಿಂದ ಸಂಜೆ 6ರವರೆಗೆ ಎಫ್-10 ಶ್ಯಾನುಮಂಗಲ, ಎಫ್-12 ಈಗಲ್ಟನ್, ಎಫ್-16 ಟೊಯೋಟಾ ಮತ್ತು ಎಫ್-9 ಹೆಜ್ಜಾಲ ಹಾಗೂ ಸುತ್ತ ಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ. ಸಾರ್ವಜನಿಕರು ಎಂದಿನಂತೆ ಸಹಕರಿಸಬೇಕೆಂದು ಬೆಸ್ಕಾಂನ ರಾಮನಗರ ವಿಭಾಗದ ಕಾರ್ಯ ನಿರ್ವಾಹಕ ಎಂಜಿನಿಯರ್ ತಿಳಿಸಿದ್ದಾರೆ.
ಆರೋಗ್ಯ ತಪಾಸಣೆ ಶಿಬಿರ
ಸೂಲಿಬೆಲೆ: ಇಲ್ಲಿಗೆ ಸಮೀಪದ ಸತ್ಯವಾರ ಗ್ರಾಮದಲ್ಲಿ ಹೊಸಕೋಟೆ ಎಂವಿಜೆ ಆಸ್ಪತ್ರೆಯಿಂದ ಗ್ರಾಮದ ಜನರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಮಂಗಳವಾರ ನಡೆಸಿದರು.ಗ್ರಾಮದ ಸರ್ಕಾರಿ ಶಾಲೆ ಆವರಣದಲ್ಲಿ ಏರ್ಪಡಿಸಿದ್ದ ಶಿಬಿರವನ್ನು ಗ್ರಾಪಂ ಸದಸ್ಯ ಎಸ್.ಪಿ ಗೋಪಾಲಪ್ಪ ಉದ್ಘಾಟಿಸಿದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎಸ್.ಎಂ. ಬಚ್ಚೇಗೌಡ ವಹಿಸಿದ್ದರು.150ಕ್ಕೂ ಹೆಚ್ಚು ಜನರು ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ಹೆಚ್ಚಿನ ಚಿಕಿತ್ಸೆ ಅಗತ್ಯವಿರುವ ರೋಗಿಗಳನ್ನು ಎಂವಿಜೆ ಆಸ್ಪತ್ರೆಗೆ ಬರುವಂತೆ ಸೂಚಿಸಲಾಯಿತು.
ಜನಸ್ನೇಹಿ ಆಡಳಿತ ವಿಚಾರಗೋಷ್ಠಿ ಇಂದು
ದೊಡ್ಡಬಳ್ಳಾಪುರ: ಇಲ್ಲಿನ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ನೇತೃತ್ವದಲ್ಲಿ ವಾಣಿಜ್ಯ ಸಂಕೀರ್ಣದ ಉದ್ಘಾಟನೆ ಮತ್ತು ಜನಸ್ನೇಹಿ ಆಡಳಿತ ವಿಚಾರಗೋಷ್ಠಿ, ಆರೋಗ್ಯ ತಪಾಸಣೆ ಶಿಬಿರ ಕಾರ್ಯಕ್ರಮ ಫೆ.27ರ ಬುಧವಾರ ಬೆಳಗ್ಗೆ 11 ಗಂಟೆಗೆ ಸರ್ಕಾರಿ ನೌಕರರ ಭವನ ಆವರಣದಲ್ಲಿ ನಡೆಯಲಿದೆ. ವಿವಿಧ ಕಾರ್ಯಕ್ರಮಗಳನ್ನು ತ್ವರಿತ ವಿಲೇವಾರಿ ನ್ಯಾಯಾಧೀಶ ಕೆ.ಎನ್.ಲಕ್ಷ್ಮೀನಾರಾಯಣ್, ಸಿವಿಲ್ ನ್ಯಾಯಾಧೀಶ ಮಲ್ಲಿಕಾರ್ಜುನ ನಾಗರಾಳೆ, ಜಿಲ್ಲಾಧಿಕಾರಿ ಎಂ.ಕೆ.ಅಯ್ಯಪ್ಪ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಲ್. ಭೈರಪ್ಪ, ಜಿ.ಪಂ ಸಿಇಓ ಎನ್.ಕೃಷ್ಣಪ್ಪ ಉದ್ಘಾಟಿಸುವರು. ಅಬಕಾರಿ ಇಲಾಖೆ ಆಯುಕ್ತ ಡಾ.ಸಿ.ಸೋಮಶೇಖರ್ ವಿಶೇಷ ಉಪನ್ಯಾಸ ನೀಡುವರು. ತಾ.ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಿವರಾಜ್ ಅಧ್ಯಕ್ಷತೆ ವಹಿಸಲಿದ್ದಾರೆ. ಉಪವಿಭಾಗಾಧಿಕಾರಿ ಡಾ.ಎಂ.ಮಹೇಶ್, ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಎಂ.ಪಟೇಲ್ ಪಾಂಡು, ಖಜಾಂಚಿ ಡಾ.ಚೌಡಯ್ಯ, ಡಾ.ನರೇಂದ್ರನಾಥ್, ಹೊಂಬಯ್ಯ ಮತ್ತಿತರರು ಭಾಗವಹಿಸಲಿದ್ದಾರೆ.
ಸದಸ್ಯರ ನೇಮಕ ಕಡ್ಡಾಯ
ಸೂಲಿಬೆಲೆ: ಸಹಕಾರ ಸಂಘದ ನೋಂದಣಿ ಕಾಯ್ದೆಯಡಿಯಲ್ಲಿ ನೋಂದಾಯಿಸಿಕೊಂಡು ನ್ಯಾಯಬೆಲೆ ಅಂಗಡಿಗಳನ್ನು ನಡೆಸುತ್ತಿರುವವರು ಶೇ.60 ರಷ್ಟು ಬಿಪಿಎಲ್ ಪಡಿತರ ಚೀಟಿದಾರರು ಅಥವಾ ಅವರ ಕುಟುಂಬ ಸದಸ್ಯರನ್ನು ಸದಸ್ಯರನ್ನಾಗಿ ನೇಮಕಮಾಡಿಕೊಳ್ಳಬೇಕು ಎಂದು ಹೊಸಕೋಟೆ ಆಹಾರ ಇಲಾಖೆ ಶಿರೆಸ್ತೇದಾರ್ ಸಿದ್ದರಾಜು ತಿಳಿಸಿದ್ದಾರೆ.
ಕಾರು ಪಲ್ಟಿ: ಯುವಕ ಸಾವು
ಸೂಲಿಬೆಲೆ: ಇಲ್ಲಿನ ಜಂಗಮಕೋಟೆ-ಹೊಸಕೋಟೆ ರಸ್ತೆಯಲ್ಲಿ ಚಲಿಸುತ್ತಿದ್ದ ಕಾರೊಂದು ಪಲ್ಟಿ ಹೊಡೆದ ಒಬ್ಬ ಸಾವನ್ನಪ್ಪಿ ಮತ್ತೊಬ್ಬ ಗಾಯಗೊಂಡಿರುವ ಘಟನೆ ನಡೆದಿದೆ. ಮೃತ ಯುವಕನನ್ನು ಹೊಸಕೋಟೆ ತಾಲೂಕಿನ ಪರಮನಹಳ್ಳಿ ನಿವಾಸಿ ನಂದೀಶ್ (29) ಎಂದು ಗುರುತಿಸಲಾಗಿದೆ. ಸೂಲಿಬೆಲೆ ಪೊಲೀಸ್ ಠಾಣೆ ವ್ಯಾಪ್ತಿಯ ಇ.ಮುತ್ಸಂದ್ರ ಬಳಿ ನಂದೀಶ್ ತನ್ನ ಸ್ನೇಹಿತನೊಂದಿಗೆ ಮುತ್ತಕದಹಳ್ಳಿಯ ತನ್ನ ಸಂಬಂಧಿಕರ ಮನೆಗೆ ಕಾರಿನಲ್ಲಿ ತೆರೆಳಿ ವಾಪಸ್ ಮನೆಗೆ ಹೋಗುತ್ತಿದ್ದಾಗ ಘಟನೆ ನಡೆದಿದೆ. ಚಲಿಸುತ್ತಿದ್ದ ಕಾರಿನ ಬ್ರೇಕ್ ಹಠಾತ್ತನೆ ಹಾಕಿದ್ದೇ ಪಲ್ಟಿಗೆ ಕಾರಣ ಎನ್ನಲಾಗುತ್ತಿದೆ. ಸಿನಿಮಾದ ರೀತಿಯಲ್ಲಿ ನಾಲ್ಕೈದು ಬಾರಿ ಪಲ್ಟಿ ಹೊಡೆದ ಕಾರಿನಲ್ಲಿದ್ದ ನಂದೀಶ್ ಸ್ಥಳದಲ್ಲಿಯೇ ಸಾವನ್ನಪ್ಪಿದರೆ, ಕಾರಿನಲ್ಲಿದ್ದ ಮತ್ತೊಬ್ಬ ನಾಗೇಶ್ ಗಾಯಗೊಂಡಿದ್ದಾರೆ. ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸೂಲಿಬೆಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.