ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಸ್ಪಷ್ಟ ಬಹುಮತ
ಕನಕಪುರ:ಬಿಜೆಪಿ ಸರ್ಕಾರದ ದುರಾಡಳಿತದಿಂದ ಬೇಸತ್ತಿರುವ ರಾಜ್ಯದ ಜನತೆ ಬದಲಾವಣೆ ಬಯಸಿದ್ದು, ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಪಕ್ಷದ ಮುಖಂಡ ಡಿ.ಕೆ.ಸುರೇಶ್ ವಿಶ್ವಾಸ ವ್ಯಕ್ತಪಡಿಸಿದರು.
ಹಾರೋಹಳ್ಳಿ ಹೋಬಳಿಯ ದೊಡ್ಡಮುದವಾಡಿಯಲ್ಲಿ ನಡೆದ ನಮ್ಮ ನಡೆ ಕಾಂಗ್ರೆಸ್ ಕಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದ ಸರ್ವಾಂಗೀಣ ಅಭಿವೃದ್ಧಿಯ ಗುರಿ ಈಡೇರಿಕೆ ಕಾಂಗ್ರೆಸ್ನಿಂದ ಮಾತ್ರ ಸಾಧ್ಯವೇ ಹೊರತು ಬೇರೆ ಪಕ್ಷಗಳಿಂದ ಆಗದು ಎಂದರು.
ಈ ಜಿಲ್ಲೆಯನ್ನು 3 ವರ್ಷದಿಂದ ಸತತ ಬರ ಕಾಡುತ್ತಿದೆ. ಜನರು ಕುಡಿಯುವ ನೀರಿಗೂ ತತ್ವಾರ ಎದುರಿಸುತ್ತಿದ್ದು, ಈ ಸಂಬಂಧ ಸ್ಥಳೀಯ ಶಾಸಕರು ಮತ್ತು ಸಂಸದರು ನಿರ್ಲಕ್ಷ್ಯ ವಹಿಸಿದ್ದಾರೆ. ಬೇಜವಬ್ದಾರಿ ಜನಪ್ರತಿನಿಧಿಗಳಿಗೆ ತಕ್ಕಪಾಠ ಕಲಿಸಬೇಕು ಎಂದು ಅವರು ಕರೆ ನೀಡಿದರು.
ಕೇಂದ್ರದಿಂದ ಬರುವ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಲು ರಾಜ್ಯ ಸರ್ಕಾರ ವಿಫಲವಾಗಿದೆ. ಇದರಿಂದ ಅನುದಾನ ವಾಪಸ್ಸಾಗಿದೆ. ಸಂಸದರಾಗಿ ಆಯ್ಕೆಯಾದ ಬಳಿಕ ಎಚ್.ಡಿ.ಕುಮಾರಸ್ವಾಮಿ ಅವರು ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸದೆ, ಸ್ವಾರ್ಥ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಎಚ್ಡಿಕೆ ಗಿಮಿಕ್: ಚುನಾವಣೆ ಸಂದರ್ಭದಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರು ಮತ ನೀಡದಿದ್ದರೆ ವಿಷ ಕುಡಿಯುವುದಾಗಿ ಕಣ್ಣೀರಿಡುತ್ತಾ ಗಿಮಿಕ್ ಮಾಡಿಕೊಂಡೇ ಬಂದಿದ್ದಾರೆ. ಈ ಬಾರಿ ರಾಮನಗರ ಕ್ಷೇತ್ರದ ಮತದಾರರು ಅವರ ಗಿಮಿಕ್ಗೆ ಮಣಿಯುವುದಿಲ್ಲ ಎಂದು ಸುರೇಶ್ ಹೇಳಿದರು.
ಜೆಡಿಎಸ್ 35ಕ್ಕೂ ಹೆಚ್ಚು ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆಗೊಂಡರು. ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ಪ್ರ್ಧಾನ ಕಾರ್ಯದರ್ಶಿ ಮರಿದೇವರು, ಮುಖಂಡರಾದ ಪುರುಷೋತ್ತಮ, ದುಂಡು ಹುಚ್ಚಯ್ಯ, ಶಿವಲಿಂಗೇಗೌಡ, ದಿನೇಶ್, ವೆಂಕಟಲಕ್ಷ್ಮಮ್ಮ ಪುಟ್ಟಸ್ವಾಮಿ, ಪರಮೇಶ್, ಅಶೋಕ್, ಕುಮಾರ್ ಇದ್ದರು.