ರಾಜ್ಯದಲ್ಲಿ ತೆಂಗು ಉತ್ಪಾದಕರ ಸಾವಿರ ಸಹಕಾರ ಸಂಘ
ರಾಮನಗರ: ರಾಜ್ಯದಲ್ಲಿ ತೆಂಗು ಉತ್ಪಾದಕರ ಒಂದು ಸಾವಿರ ಸಹಕಾರ ಸಂಘಗಳ ಸ್ಥಾಪನೆ ಗುರಿ ಹೊಂದಿದ್ದು, ಈಗಾಗಲೇ 50 ಸಂಘಗಳನ್ನು ಅಸ್ತಿತ್ವಕ್ಕೆ ತರಲಾಗಿದೆ ಎಂದು ತೆಂಗು ಅಭಿವೃದ್ಧಿ ಮಂಡಳಿಯ ಬೆಂಗಳೂರು ಪ್ರಾಂತೀಯ ಉಪ ನಿರ್ದೇಶಕ ವಿಜಯಕುಮಾರ್ ಹಳ್ಳಿಕೇರಿ ಹೇಳಿದರು.
ತಾಲೂಕಿನ ಇಟ್ಟಮಡು ಗ್ರಾಮದಲ್ಲಿ ಮಂಗಳವಾರ ತೆಂಗು ಅಭಿವೃದ್ಧಿ ಮಂಡಳಿ ಮತ್ತು ಬೆಂಗಳೂರಿನ ಪೆಸ್ಟ್ ಕಂಟ್ರೋಲ್ ಇಂಡಿಯಾ ಸಂಸ್ಥೆಯಿಂದ ನಡೆದ ಲಿಂಗಾಕರ್ಷಕಗಳ ಬಳಕೆಯಿಂದ ತೆಂಗಿನ ಕಪ್ಪುತಲೆ ಕಂಬಳಿ ಹುಳುವಿನ ನಿರ್ವಹಣೆ ಕುರಿತು ಕ್ಷೇತ್ರೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಐದು ಸಾವಿರ ತೆಂಗಿನ ಮರಗಳನ್ನು ಹೊಂದಿರುವ ಒಟ್ಟಾರೆ 40 ರಿಂದ 50 ರೈತರನ್ನು ಒಂದೆಡೆ ಸೇರಿಸಿ, ಉತ್ಪಾದಕರ ಸಹಕಾರ ಸಂಘ ಸ್ಥಾಪಿಸಲಾಗುತ್ತಿದೆ. ಮಧ್ಯವರ್ತಿಗಳ ಹಾವಳಿ ತಪ್ಪಿಸಿ, ತೆಂಗು ಹಾಗೂ ಉಪ ಉತ್ಪನ್ನಗಳನ್ನು ರೈತರೇ ನೇರ ಮಾರಾಟ ಮಾಡುವಂತಹ ವ್ಯವಸ್ಥೆ ಕಲ್ಪಿಸುವ ಗುರಿಯನ್ನು ಮಂಡಳಿ ಹೊಂದಿದೆ ಎಂದರು.
ರೈತರಿಗೆ ಬೆಲೆ ಹೆಚ್ಚಳದ ನೇರ ಲಾಭ ಸಿಗುವಂತಾಗಬೇಕು. ಸಂಘಗಳ ಮೂಲಕ ಕೀಟ ಬಾಧೆ ನಿಯಂತ್ರಣ, ಉತ್ತಮ ಬೆಳೆ ಮಾಹಿತಿ ಒದಗಿಸಲಾಗುವುದು. ಮಂಡಳಿಯ ಧನ ಸಹಾಯ ಇತ್ಯಾದಿ ಸೌಲಭ್ಯಗಳನ್ನು ಸಂಘದ ಮೂಲಕವೇ ರೈತರಿಗೆ ತಲುಪಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.
ಕಪ್ಪತಲೆ ಹುಳುಬಾಧೆ: ತೆಂಗು ಅಭಿವೃದ್ಧಿ ಮಂಡಳಿಯು ಜಿಲ್ಲೆಯಲ್ಲಿ ತೆಂಗಿನ ಬೆಳೆ ಅಭಿವೃದ್ಧಿಗಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಬಿಡದಿ ಹೋಬಳಿಯಲ್ಲಿ ಕಪ್ಪು ತಲೆ ಹುಳುವಿನ ಬಾಧೆ ಹೆಚ್ಚಿದ್ದು, ಬಾಧೆ ಪೀಡಿತ 600 ಎಕರೆ ಪ್ರದೇಶದ ಪೈಕಿ ಸುಮಾರು 500 ಎಕರೆಯಲ್ಲಿ ನಿಯಂತ್ರಣ ಸಾಧಿಸಲಾಗಿದೆ ಎಂದು ವಿಜಯಕುಮಾರ್ ಹಳ್ಳಿಕೇರಿ ತಿಳಿಸಿದರು.
ಬಾಧೆಗೆ ಒಳಗಾದ ಮರದಲ್ಲಿ ಇಳುವರಿ ಕುಂಟಿತವಾಗುತ್ತದೆ. ಪೆಸ್ಟ್‌ಕಂಟ್ರೋಲ್ ಸಂಸ್ಥೆ ಮೂಲಕ ಈ ಭಾಗದಲ್ಲಿ ಹುಳುವಿನ ನಿಯಂತ್ರಣಕ್ಕೆ ಸಂಶೋಧನೆ ನಡೆಸಲಾಗುತ್ತಿದೆ. ಎರಡು ವರ್ಷಗಳ ಪ್ರಯೋಗದ ನಂತರ ಲಿಂಗಾಕರ್ಷಕಗಳ ಬಳಕೆಯಿಂದ ಹುಳುವಿನ ನಿಯಂತ್ರಣ ಸಾಧ್ಯ ಎಂಬುದು ಸಾಬೀತಾಗಿದ್ದು, ರೈತರು ಈ ಕ್ರಮಕ್ಕೆ ಮುಂದಾಗಬೇಕು ಎಂದರು.
ಸಮಗ್ರ ಕೃಷಿ ಪದ್ಧತಿ: ರಾಮನಗರ ಜಿಲ್ಲೆಯ 11 ಸಾವಿರ ಹೆಕ್ಟೇರ್‌ನಲ್ಲಿ ತೆಂಗು ಬೆಳೆಯಿದ್ದು, ಶೇಕಡ 50ಕ್ಕೂ ಹೆಚ್ಚು ಪ್ರದೇಶ ರೋಗಪೀಡಿತವಾಗಿದೆ. ಸಮಗ್ರ ಕೃಷಿ ಪದ್ಧತಿ ಅಳವಡಿಕೆ ಮೂಲಕ ರೋಗ ನಿಯಂತ್ರಣಕ್ಕೆ ಮತ್ತು ಅಧಿಕ ಇಳುವರಿಕೆ ಕ್ರಮ ಕೈಗೊಳ್ಳಬೇಕಿದೆ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಡಾ.ಬಿ.ಕೃಷ್ಣ ಸಲಹೆ ನೀಡಿದರು.
ತಮಿಳುನಾಡಿನಲ್ಲಿ ಒಂದು ಎಕರೆ ಪ್ರದೇಶದಲ್ಲಿ 15 ಸಾವಿರ ತೆಂಗಿನ ಕಾಯಿ ಇಳುವರಿ ಬರುತ್ತಿದ್ದು, ನಮ್ಮ ರಾಜ್ಯದಲ್ಲಿ ಗರಿಷ್ಠ 5 ಸಾವಿರ ತೆಂಗಿನ ಕಾಯಿ ಉತ್ಪಾದನೆಯಿದೆ. ಆ ರಾಜ್ಯದಲ್ಲಿ ದೊರಕುತ್ತಿರುವಷ್ಟು ಆದಾಯ ನಮ್ಮ ರೈತರಿಗೆ ಸಿಗುತ್ತಿಲ್ಲ. ಸಮಗ್ರ ಕೃಷಿ ಪದ್ಧತಿ ಮತ್ತು ಹನಿ ನೀರಾವರಿ ಅಳವಡಿಕೆಯಿಂದ ಮರಗಳು ರೋಗ ಮುಕ್ತವಾಗುವ ಜತೆಗೆ ಇಳುವರಿಕೆಯಲ್ಲೂ ಸುಧಾರಣೆ ಕಾಣಬಹುದಾಗಿದೆ ಎಂದು ಅವರು ಹೇಳಿದರು.
ಇಸ್ರೇಲ್ ಕೃಷಿ ಸೂಕ್ತ: ಇಸ್ರೇಲ್ ದೇಶದ ಕೃಷಿಕರು ಸಾವಯವ ಮತ್ತು ಪರತಂತು ಪದ್ಧತಿಯೊಂದಿಗೆ ಸಮಗ್ರ ಕೃಷಿಯನ್ನು ನಿರ್ವಹಿಸುತ್ತಿದ್ದಾರೆ. ಇದೇ ಪದ್ದತಿಯನ್ನು ಇಲ್ಲಿಯೂ ಅಳವಡಿಸಿ, ವ್ಯವಸ್ಥಿತವಾಗಿ ಕೃಷಿ ಕೈಗೊಂಡಲ್ಲಿ ಪರಿಣಾಮಕಾರಿಯಾಗಲಿದೆ ಎಂದು ಕೃಷ್ಣ ತಿಳಿಸಿದರು.
ಲಿಂಗಾಕರ್ಷಕಗಳ ಬಲೆಗಳನ್ನು ಬಳಕೆ ಮಾಡಿ ಕಪ್ಪು ತಲೆ ಹುಳುವಿನ ನಿಯಂತ್ರಣ ಕ್ಷೇತ್ರೋತ್ಸವವು ಪರಿಣಾಮಕಾರಿಯಾದಲ್ಲಿ ಇದೇ ಪದ್ಧತಿಯನ್ನು ಜಿಲ್ಲೆಯ ಇತರೆಡೆ ಅಳವಡಿಸಲು ಎಲ್ಲಾ ಬಗೆಯ ಸಹಕಾರವನ್ನು ತೋಟಗಾರಿಕಾ ಇಲಾಖೆಯಿಂದ ಒದಗಿಸಲಾಗುವುದು ಎಂದರು.
ನಿರಂತರ ಸಂಶೋಧನೆ: ಒಂದು ಲಿಂಗಾಕರ್ಷಕ ಬಲೆಗೆ ರು.60 ಖರ್ಚಾಗಲಿದ್ದು, ಪ್ರತಿ ಎಕರೆಗೆ 60 ರಿಂದ 70 ಬಲೆಗಳ ಅವಶ್ಯಕತೆ ಇರುತ್ತದೆ. ಬಲೆಗಳ ಬೆಲೆ ಕಡಿಮೆ ಮಾಡುವ ನಿಟ್ಟಿನಲ್ಲಿ ಚಿಂತನೆ ನಡೆದಿದೆ ಎಂದು ಬೆಂಗಳೂರು ಕೃಷಿ ವಿವಿ ಕೀಟ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಎ.ಕೆ.ಚಕ್ರವರ್ತಿ ತಿಳಿಸಿದರು.
ಕಾರ್ಯಕ್ರಮದಲ್ಲಿ ತೆಂಗಿನ ಬೆಳೆಯಲ್ಲಿ ಸಮಗ್ರ ಕೀಟ ನಿರ್ವಹಣೆ ಕುರಿತು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕ ಡಾ.ಬಿ.ಮಲ್ಲಿಕ್, ಜಿಕೆವಿಕೆ ವಿಷಯ ತಜ್ಞ ಡಾ.ಕೆ.ಮುರಳಿಮೋಹನ್, ತೆಂಗಿನ ಕಪ್ಪು ಕಂಬಳಿ ಹುಳುವಿನ ನಿರ್ವಹಣೆಯಲ್ಲಿ ಲಿಂಗಾಕರ್ಷಕಗಳ ಪಾತ್ರ ಕುರಿತು ಪಿಸಿಐನ ಡಾ.ಕೆ.ಆರ್.ಎಂ.ಭಾನು, ಎಂ.ಎಸ್. ಪ್ರಭಾಕರ್ ಉಪನ್ಯಾಸ ನೀಡಿದರು.