'ಸರ್ಕಾರದ ಕಾರ್ಯಕ್ರಮ ಬಳಕೆಯಾಗಲಿ'
ಕನಕಪುರ: ಮಹಿಳೆಯರ ಸಬಲೀಕರಣ ಹಾಗೂ ಉನ್ನತಿಗಾಗಿ ಕೇಂದ್ರ ಸರ್ಕಾರ ಹಲವಾರು ಬಗೆಯ ತರಬೇತಿ ಶಿಬಿರಗಳು, ಉತ್ತೇಜನಾ ಕಾರ್ಯಾಗಾರಗಳನ್ನು ಎಂಎಸ್‌ಎಂಇ ಸಂಸ್ಥೆ ಮೂಲಕ ನಡೆಸುತ್ತಿದ್ದು ಮಹಿಳೆಯರು ಸರ್ಕಾರದ ಕಾರ್ಯಕ್ರಮಗಳ ಸದುಪಯೋಗ ಪಡೆಯಬೇಕು ಎಂದು ಕೇಂದ್ರಸರ್ಕಾರದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಂಸ್ಥೆಯ ಉಪನಿರ್ದೇಶಕಿ ಸುಮನ್ ರಾಜ್ ಹೇಳಿದ್ದಾರೆ.
ಅವರು ಕನಕಪುರ ತಾಲೂಕು ಹೊಸಕಬ್ಬಾಳು ಗ್ರಾಮದಲ್ಲಿ ಕನಕಾಂಬರಿ ಮಹಿಳಾ ಒಕ್ಕೂಟ ಆಯೋಜಿಸಿದ್ದ ಒಂದು ದಿನದ ಕೈಗಾರಿಕಾ ಪ್ರೇರಣಾ ಅಭಿಯಾನದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ವ್ಯವಸ್ಥಾಪಕ ನಿರ್ದೇಶಕ ಎಸ್.ಎನ್.ರಾಜ ಶೇಖರ್ ಉದ್ಘಾಟನೆಯನ್ನು ನೆರವೇರಿಸಿದರು. ಕಾರ್ಯಕ್ರಮದಲ್ಲಿ ಒಕ್ಕೂಟದ ಮೂಲಕ ತರಬೇತಿ ಪಡೆದ 50 ಮಂದಿ ಮಹಿಳೆಯರಿಗೆ ತರಬೇತಿ ಪ್ರಮಾಣ ಪತ್ರಗಳನ್ನು ಸಹಾಯಕ ನಿರ್ದೇಶಕಿ ವಿಜಯಲಕ್ಷ್ಮಿ ವಿತರಿಸಿದರು.
ಕನಕಾಂಬರಿ ಮಹಿಳಾ ಒಕ್ಕೂಟದ ಮೂಲಕ ಪ್ರತಿ ತಿಂಗಳು 50 ಮಂದಿ ಮಹಿಳೆಯರಿಗೆ ಉಚಿತ ತರಬೇತಿ ನೀಡಿ,ದಾನಿಗಳ ನೆರವಿನೊಂದಿಗೆ ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರಗಳನ್ನು ವಿತರಿಸುವ ಯೋಜನೆಯಿದೆ ಎಂದು ರಾಜಶೇಖರ್ ತಿಳಿಸಿದರು.
ಮುಖ್ಯ ಅತಿಥಿಗಳಾಗಿ ತಾಪಂ ಅಧ್ಯಕ್ಷೆ ನಾಗರತ್ನಮ್ಮ ಆಗಮಿಸಿದ್ದರು. ಕ್ಷೇತ್ರ ವ್ಯವಸ್ಥಾಪಕಿ ಕಲಾವತಿ ಸ್ವಾಗತಿಸಿದರು. ಸುಕನ್ಯಾ ನಿರೂಪಿಸಿದರು. ನಾಗರತ್ನ ವಂದಿಸಿದರು.