ಭಾರತ ಸಂವಿಧಾನ ಜಗತ್ತಿನಲ್ಲೇ ಸರ್ವಶ್ರೇಷ್ಠ
ರಾಮನಗರ: ಭಾರತ ಸಂವಿಧಾನವು ಜಗತ್ತಿನಲ್ಲೇ ಸರ್ವಶ್ರೇಷ್ಠ ಎನಿಸಿದೆ. ಸಂವಿಧಾನದ ಹಿನ್ನೆಲೆ, ಆಶಯ, ಮಹತ್ವನ್ನರಿತು ಅದನ್ನು ಪಾಲಿಸಲು ಪ್ರತಿಯೊಬ್ಬರೂ ಮುಂದಾಗಬೇಕು ಎಂದು ನಗರಾಭಿವೃದ್ಧಿ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಎಸ್. ಸುರೇಶ್ಕುಮಾರ್ ಕರೆ ನೀಡಿದರು.
ಜಿಲ್ಲಾಡಳಿತ ಮತ್ತು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ನಡೆದ 64ನೇ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಪ್ರಜಾತಂತ್ರ ವ್ಯವಸ್ಥೆಯ ಆಶಯಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ನಾವೆಲ್ಲರೂ ಕಟಿಬದ್ಧವಾಗಿ ಕೆಲಸ ಮಾಡಬೇಕಿದೆ ಎಂದರು. ಜಗತ್ತಿನ ಶಕ್ತಿಶಾಲಿ ರಾಷ್ಟ್ರಗಳಲ್ಲಿ ಒಂದಾಗಿರುವ ಭಾರತದ ಪ್ರಜಾತಂತ್ರ ವ್ಯವಸ್ಥೆ ಎಲ್ಲ ರಾಷ್ಟ್ರಗಳ ಪ್ರಶಂಸೆಗೆ ಪಾತ್ರವಾಗಿದೆ. ದೇಶದ ಪ್ರತಿಯೊಬ್ಬರೂ ರಾಷ್ಟ್ರಪ್ರೇಮ, ರಾಷ್ಟ್ರಭಕ್ತಿಯನ್ನು ಮೈಗೂಡಿಸಿಕೊಳ್ಳುವ ಮೂಲಕ ಜಗತ್ತಿನ ಎಲ್ಲ ದೇಶಗಳು ಭಾರತವನ್ನು ಗೌರವದಿಂದ ನೋಡುವಂತೆ ಮಾಡಲು ಪ್ರತಿಜ್ಞೆ ಸ್ವೀಕರಿಸಬೇಕು ಎಂದು ಅವರು ಹೇಳಿದರು.
ಅನುಷ್ಠಾನ: ವಿಭಿನ್ನ ಸಂಸ್ಕೃತಿ, ಜಾತಿ ಮತ್ತು ಮತಗಳ ಸಂಗಮವಾದ ಭಾರತಕ್ಕೆ ಸಂವಿಧಾನ ಜಾರಿಗೆ ಬಂದ ಸುದಿನವನ್ನು ನೆನೆಯುವ ಈ ರಾಷ್ಟ್ರೀಯ ಹಬ್ಬ ಮಹತ್ವದ್ದಾಗಿದೆ. ನಾಲ್ಕೂವರೆ ವರ್ಷ ಪೂರೈಸಿರುವ ನಮ್ಮ ಸರ್ಕಾರವು ಪೂರ್ಣ ಸ್ವರಾಜ್ಯದ ಆಶಯಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಹಲವು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದೆ ಎಂದು ತಿಳಿಸಿದರು.
ಜಿಲ್ಲೆಗೆ ಅಪಾರ ಕೊಡುಗೆ: ರಾಮನಗರವು ಜಿಲ್ಲೆಯಾಗಿ ರಚನೆಗೊಂಡ ಬಳಿಕ 6ನೇ ಗಣರಾಜ್ಯೋತ್ಸವ ಆಚರಿಸುತ್ತಿದೆ.
ನಮ್ಮ ಸರ್ಕಾರವು ಅಪಾರ ಕೊಡುಗೆಗಳನ್ನು ನೀಡುವ ಮೂಲಕ ಈ ನೂತನ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಕಾಳಜಿ ವಹಿಸಿದೆ ಎಂದು ಅಂಕಿ-ಅಂಶಗಳೊಂದಿಗೆ ಸುರೇಶ್ಕುಮಾರ್ ವಿವರಣೆ ನೀಡಿದರು.
ಪ್ರಸಕ್ತ ಸಾಲಿನಲ್ಲಿ ಜಿ.ಪಂ.ಗೆ ಯೋಜನಾ ಕಾರ್ಯಕ್ರಮಗಳಿಗೆ ರು.103.23 ಕೋಟಿ ಅನುದಾನ ನೀಡಿದ್ದು, ಈ ಪೈಕಿ ರು.64.16 ಕೋಟಿ ವೆಚ್ಚವಾಗಿದೆ. ಕುಡಿಯುವ ನೀರಿನ ಯೋಜನೆಗಳಿಗೆ ಬಿಡುಗಡೆ ಮಾಡಿರುವ ರು.44.24 ಕೋಟಿಯಲ್ಲಿ ರು.32.29 ಕೋಟಿ ವೆಚ್ಚ ಮಾಡಲಾಗಿದೆ ಎಂದು ಹೇಳಿದರು. ರಾಜೀವ್ಗಾಂಧಿ ಸಬ್ಮಿಷನ್ ಯೋಜನೆಯಡಿ ಮಾಗಡಿಗೆ ರು.10.85 ಲಕ್ಷ ಮತ್ತು ಕನಕಪುರಕ್ಕೆ ರು.5 ಕೋಟಿ ಮಂಜೂರಾಗಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ರು.29.26 ಕೋಟಿ ನೀಡಿದ್ದು, ಸಣ್ಣ ನೀರಾವರಿ ಇಲಾಖೆಯಿಂದ ಕೆರೆಗಳ ಪುನಶ್ಚೇತನಕ್ಕೆ ರು.20 ಕೋಟಿ ಬಿಡುಗಡೆಯಾಗಿದೆ ಎಂದರು.
8 ಸಾವಿರ ಫಲಾನುಭವಿಗಳು: ಬಸವ ವಸತಿ ಯೋಜನೆಯಲ್ಲಿ 8220 ಫಲಾನುಭವಿಗಳು ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ. 12325 ಮನೆಗಳ ನಿರ್ಮಾಣ ಪ್ರಗತಿಯಲ್ಲಿದೆ. ಆಶ್ರಯ, ಅಂಬೇಡ್ಕರ್, ಇಂದಿರಾ ಆವಾಸ್ ಯೋಜನೆಯಲ್ಲಿ ಹಂತ-ಹಂತವಾಗಿ ಸೂರು ಕಲ್ಪಿಸುವ ಕಾರ್ಯವನ್ನು ಮುಂದುವರೆಸಲಾಗಿದೆ ಎಂದು ಸುರೇಶ್ ಕುಮಾರ್ ತಿಳಿಸಿದರು.
ವಿಶೇಷ ಅಭಿವೃದ್ಧಿ ಯೋಜನೆ: ಹಿಂದುಳಿದ ತಾಲೂಕುಗಳಿಗೆ ಪ್ರಸಕ್ತ ಸಾಲಿನಲ್ಲಿ ವಿಶೇಷ ಅಭಿವೃದ್ಧಿ ಯೋಜನೆಯಡಿ ರು.74.47 ಕೋಟಿ ನಿಗದಿಯಾಗಿದ್ದು, ಈವರೆಗೆ ರು.3.67 ಕೋಟಿ ವೆಚ್ಚವಾಗಿದೆ. ಸಂಪೂರ್ಣ ಸ್ವಚ್ಚತಾ ಆಂದೋಲನದಲ್ಲಿ 5434 ಶೌಚಾಲಯಗಳ ನಿರ್ಮಾಣ, ಗ್ರಾಮ ಸ್ವರಾಜಜ್ಯೋಜನೆಯಲ್ಲಿ ರು.27.97 ಕೋಟಿಯಿಂದ 3631 ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗು ತ್ತಿದೆ ಎಂದು ಹೇಳಿದರು.
ಭಾಗ್ಯಲಕ್ಷ್ಮಿ ಯೋಜನೆಯಲ್ಲಿ 39176 ಫಲಾನುಭವಿಗಳಿಗೆ ಬಾಂಡ್ ವಿತರಿಸಿದ್ದು, ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಲ್ಲಿ 70 ಸಾವಿರ ಫಲಾನುಭವಿಗಳಿಗೆ ಸೌಲಭ್ಯ ಒದಗಿಸಲಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಾರ್ಯಕ್ರಮಗಳಿಗೆ ರು.7.18 ಕೋಟಿ ನಿಗದಿಪಡಿಸಿದ್ದು, ರು.5.33 ಕೋಟಿ ವಿನಿಯೋಗಿಸಲಾಗಿದೆ ಎಂದರು.
ಸುವರ್ಣ ಭೂಮಿ ಯೋಜನೆಯಲ್ಲಿ ಕೃಷಿ ಇಲಾಖೆಯಿಂದ 4990 ಫಲಾನುಭವಿಗಳಿಗೆ ರು.2.65 ಕೋಟಿ, ತೋಟಗಾರಿಕೆ ಇಲಾಖೆಯಿಂದ 2489 ಫಲಾನುಭವಿಗಳಿಗೆ ರು.1.83 ಕೋಟಿ ನೀಡಲಾಗಿದೆ. ರೇಷ್ಮೆ ಅಭಿವೃದ್ಧಿ ಕಾರ್ಯಕ್ರಮಗಳಿಗೆ ರು.6.04 ಕೋಟಿ ವೆಚ್ಚ ಮಾಡಲಾಗಿದೆ. ಭೂತಚೇತನ ಯೋಜನೆಯಲ್ಲಿ 24419 ಫಲಾನುಭವಿಗಳಿಗೆ 2407 ಮೆಟ್ರಿಕ್ ಟನ್ ಪರಿಕರಗಳನ್ನು ವಿತರಿಸಲಾಗಿದೆ.
ಹತ್ತು ಸಾವಿರ ಬೈಸಿಕಲ್: ಪ್ರಸಕ್ತ ಸಾಲಿನಲ್ಲಿ 10185 ವಿದ್ಯಾರ್ಥಿಗಳಿಗೆ ಬೈಸಿಕಲ್ ವಿತರಿಸಲಾಗಿದೆ. ಅಕ್ಷರ ದಾಸೋಹದಡಿ 1.15 ಲಕ್ಷ ವಿದ್ಯಾರ್ಥಿಗಳಿಗೆ ರು.8.57 ಕೋಟಿ ವೆಚ್ಚದಲ್ಲಿ ಮಧ್ಯಾಹ್ನದ ಬಿಸಿಯೂಟ ನೀಡಲಾಗುತ್ತಿದೆ. ಪಂಚ ಸೌಲಭ್ಯ ಯೋಜನೆಯಡಿ ಶಾಲೆಗಳಿಗೆ ರು.21.22 ಲಕ್ಷ ವೆಚ್ಚ ಮಾಡಲಾಗಿದೆ ಎಂದು ಸುರೇಶ್ಕುಮಾರ್ ವಿವರಿಸಿದರು.
ಶಾಸಕ ಕೆ.ರಾಜು ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಅಧ್ಯಕ್ಷ ಸಾಬಾನ್ಸಾಬ್, ಉಪಾಧ್ಯಕ್ಷ ಬಿ.ಉಮೇಶ್, ರಾ-ಚ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಶೇಷಾದ್ರಿ, ಜಿ.ಪಂ. ಅಧ್ಯಕ್ಷ ಮುದ್ದರಾಜ ಯಾದವ್, ಉಪಾಧ್ಯಕ್ಷೆ ಗೌರಮ್ಮ, ಸಿಇಒ ಡಾ.ಸಿದ್ದರಾಮಯ್ಯ, ಜಿಲ್ಲಾಧಿಕಾರಿ ಶ್ರೀರಾಮರೆಡ್ಡಿ, ಅಪರ ಡಿಸಿ ಅರ್ಚನಾ, ಎಸ್ಪಿ ಅನುಪಮ್ ಅಗ್ರವಾಲ್, ಉಪ ವಿಭಾಗಾಧಿಕಾರಿ ಸ್ನೇಹ, ತೋಟಗಾರಿಕೆ ಉಪ ನಿರ್ದೇಶಕ ಡಾ.ಬಿ.ಕೃಷ್ಣ ಭಾಗವಹಿಸಿದ್ದರು. ಸನ್ಮಾನ: ಅಂಧರ ವಿಶ್ವ ಕಪ್ ಕ್ರಿಕೆಟ್ನಲ್ಲಿ ಭಾರತಕ್ಕೆ ಪ್ರಶಸ್ತಿ ಲಭಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಚನ್ನಪಟ್ಟಣದ ಪ್ರಕಾಶ್ ಜಯರಾಮಯ್ಯ, ಪತ್ರಕರ್ತ ಸೂರ್ಯಪ್ರಕಾಶ್, ಅಧಿಕಾರಿ ಎಸ್.ಎಂ.ಚಂದ್ರ, ಅವರನ್ನು ಸನ್ಮಾನಿಸಲಾಯಿತು. ಹಾಸನ ರಘು ನೇತೃತ್ವದ ತಂಡದಿಂದ ಸಾಹಸ ಕಲೆ ಮತ್ತು ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಪ್ರಸ್ತುತ ಪಡಿಸಲಾಯಿತು.
ಧ್ವಜಾರೋಹಣಕ್ಕೆ ಬಾರದ ಉಸ್ತುವಾರಿ ಸಚಿವ ರೇಣು
-ಮತ್ತೀಕೆರೆ ಜಯರಾಮ್
ರಾಮನಗರ: ಬಿಜೆಪಿ ಸರ್ಕಾರದಲ್ಲಿ ಅಧಿಕಾರದ ಸವಿಯುತ್ತಲೇ ಕೆಜೆಪಿ ಮತ್ತು ಯಡಿಯೂರಪ್ಪ ಹೆಸರನ್ನು ಜಪಿಸುತ್ತಿರುವ ಜಿಲ್ಲಾ ಉಸ್ತುವಾರಿ ಸಚಿವ ಎಂ.ಪಿ.ರೇಣುಕಾಚಾರ್ಯ ಇಲ್ಲಿನ ಗಣರಾಜ್ಯೋತ್ಸವ ಸಮಾರಂಭಕ್ಕೆ ಬೆನ್ನು ತೋರಿದ್ದಾರೆ. ಅವರ ಗೈರುವಿನಲ್ಲಿ ಧ್ವಜಾರೋಹಣ ಜವಬ್ದಾರಿ ನಿರ್ವಹಿಸಿದ ಸಚಿವ ಸುರೇಶ್ಕುಮಾರ್ ಅಧಿಕಾರಿಗಳು ಸಿದ್ಧಪಡಿಸಿದ್ದ ಅಂಕಿ-ಸಂಖ್ಯೆಗಳಿಂದ ಕೂಡಿದ ನೀರಸ ಭಾಷಣ ವಾಚಿಸಿದರು.
ಎರಡು ದೋಣಿ ಪಯಣಿಗ ಮಂತ್ರಿ ರೇಣುಕಾಚಾರ್ಯ ಈಗ ರಾಜಕೀಯ ಜಂಜಾಟಕ್ಕೆ ಸಿಲುಕಿದ್ದು, ರಾಮನಗರ ಜಿಲ್ಲೆ ಉಸ್ತುವಾರಿ ಹೊಣೆಯನ್ನೇ ಮರೆತಿದ್ದಾರೆ. ಯೋಗೇಶ್ವರ್ ಎತ್ತಂಗಡಿಯಾದಾಗ ಈ ಜಿಲ್ಲೆ ಉಸ್ತುವಾರಿ ವಹಿಸಿಕೊಂಡ ರೇಣುಕಾಚಾರ್ಯ ಆರಂಭ ಶೂರತ್ವ ತೋರಿದ್ದರು. ಬಳಿಕ ರಾಮನಗರ ಜಿಲ್ಲೆಯನ್ನು ಕಡೆಗಣಿಸಿದ್ದಾರೆ. ಅವರ ತಾತ್ಸಾರ ಎಷ್ಟರ ಮಟ್ಟಿಗಿದೆ ಎನ್ನುವುದಕ್ಕೆ ಗಣರಾಜ್ಯೋತ್ಸಕ್ಕೂ ಗೈರಾಗಿರುವುದೇ ಸಾಕ್ಷಿ.
ರಾಮನಗರದಲ್ಲಿ ನಡೆದ ಕಳೆದ ಸ್ವಾತಂತ್ರ್ಯ ದಿನಾಚರಣೆ, ಕನ್ನಡ ರಾಜ್ಯೋತ್ಸವದಲ್ಲಿ ರೇಣುಕಾಚಾರ್ಯ ಪಾಲ್ಗೊಂಡರು. ಗಣರಾಜ್ಯೋತ್ಸವಕ್ಕಾಗಿ ಅಧಿಕಾರಿಗಳಿಂದ ಭಾಷಣ ಸಿದ್ಧ ಮಾಡಿಸಿದ್ದರು. ಆಹ್ವಾನ ಪತ್ರಿಕೆಯಲ್ಲೂ ಅವರದೇ ಹೆಸರಿತ್ತು. ಕಡೆ ಗಳಿಗೆಯಲ್ಲಿ ಪಾಲ್ಗೊಳ್ಳದ ಬಗ್ಗೆ ಅವರು ಸರ್ಕಾರಕ್ಕೆ ಪತ್ರ ಸಲ್ಲಿಸಿದ್ದರು. ಬದಲಿಯಾಗಿ ಸುರೇಶ್ಕುಮಾರ್ ಹೆಗಲಿಗೆ ಸರ್ಕಾರ ಜವಬ್ದಾರಿ ವಹಿಸಿತ್ತು. ರೇಣುಕಾಚಾರ್ಯ ಸಿದ್ಧ ಮಾಡಿಸಿಕೊಂಡಿದ್ದ ಭಾಷಣವನ್ನೇ ಸುರೇಶ್ ಕುಮಾರ್ ವಾಚಿಸಿದರು.
ಸ್ವಂತದ್ದು ಒಂದೇ ಪದ: ಸಚಿವ ಸುರೇಶ್ ಕುಮಾರ್ ಅವರು ನೀಡಿದ ಗಣರಾಜ್ಯೋತ್ಸವ ಸಂದೇಶದ ಪೂರ್ಣ ಪಾಠವು ಅಧಿಕಾರಿಗಳು ಸಲ್ಲಿಸಿದ ನಾಲ್ಕು ಪುಟಗಳನ್ನೊಳಗೊಂಡ ಪ್ರತಿಯಲ್ಲಿತ್ತು. ಇದರ ಹೊರತಾಗಿ ಸಚಿವರು ಜೈ ರಾಮನಗರ ಎನ್ನುವ ಒಂದೇ ಒಂದು ಪದವನ್ನು ಮಾತ್ರವೇ ಸೇರಿಸಿಕೊಂಡರು. ಸಂದೇಶವು ಥೇಟ್ ಚುನಾವಣಾ ಭಾಷಣವಾಗಿತ್ತು. ಸಂವಿಧಾನದ ಆಶಯ, ಮಹನೀಯರು ಮತ್ತು ದೇಶದ ಬಗ್ಗೆ ಇದ್ದದ್ದು ಮೂರು-ನಾಲ್ಕು ಸಾಲು ಅಷ್ಟೇ. ಬಿಜೆಪಿ ಸರ್ಕಾರದಲ್ಲಿರುವ ವಾಗ್ಮಿ, ವಿಚಾರವಂತ ಮತ್ತು ಬುದ್ಧಿವಂತ ಸಚಿವರೆಂದೇ ಹೆಸರಾಗಿರುವ ಸುರೇಶ್ ಕುಮಾರ್ ತಮಗೆ ರಾಮನಗರ ಗಣರಾಜ್ಯೋತ್ಸವದಲ್ಲಿ ಜವಾಬ್ದಾರಿಯನ್ನು ಸರ್ಕಾರ ವಹಿಸಿರುವುದು ಒಂದು ದಿನ ಮುಂಚೆಯೇ ತಿಳಿದಿತ್ತು. ಇಷ್ಟಾಗಿಯೂ ಅವರು ತಮ್ಮದೇ ಭಾಷಣ ಸಿದ್ಧಪಡಿಸಿಕೊಳ್ಳುವ ಗೋಜಿಗೆ ಹೋಗಲಿಲ್ಲ. ಅವರೂ ಕಾಟಾಚಾರದ ಕೆಲಸ ಮುಗಿಸಿ ಹೋಗಿದ್ದಾರೆ.
ವರ್ಷಕ್ಕೊಬ್ಬರು ಬದಲು: ರಾಮನಗರ ಜಿಲ್ಲೆ ರಚನೆಯಾಗಿ ಐದು ವರ್ಷ ಮುಗಿದಿದೆ. ಅಲ್ಪಾವಧಿಗೆ ಯೋಗೇಶ್ವರ್ ಹೊರತಾಗಿ ದೀರ್ಘಾವಧಿ ಜಿಲ್ಲೆಯ ಉಸ್ತುವಾರಿ ಹೊರಗಿನವರ ಹೆಗಲಿಗೆ ಬಿದ್ದಿದೆ. ಹೊರಗಿನಿಂದ ಬಂದ ಸಚಿವರಿಗೆ ಇಲ್ಲಿನ ಜನರ ಮತ, ಹಿತ ಮುಖ್ಯವಾಗಿಲ್ಲ. ಇಲ್ಲಿ ಲಭ್ಯವಾಗುವ ಸಂಪನ್ಮೂಲದ ಮೇಲೆಯೇ ಕಣ್ಣು ಬಿದ್ದಿರುತ್ತದೆ. ಹೀಗಾಗಿ ಒಂದರ್ಥದಲ್ಲಿ ರಾಮನಗರ ನತದೃಷ್ಟ ಜಿಲ್ಲೆಯಾಗಿದೆ.
2007ರಲ್ಲಿ ರಚನೆಯಾದ ಜಿಲ್ಲೆಯಲ್ಲಿ ರಾಷ್ಟ್ರೀಯ ಹಬ್ಬಗಳ ಧ್ವಜಾರೋಹಣ ನೆರವೇರಿಸುವವರು ವರ್ಷಕ್ಕೊಬ್ಬರು ಬದಲಾಗುತ್ತಿದ್ದಾರೆ. 6 ಸ್ವಾತಂತ್ರ್ಯ ದಿನಾಚಣೆಗಳಲ್ಲಿ ಯಾರೊಬ್ಬರೂ ಮರಳಿ ಧ್ವಜ ಸ್ಥಂಭ ಏರಲಿಲ್ಲ.
ಶಿಷ್ಟಾಚಾರಕ್ಕೆ ತಿಲಾಂಜಲಿ: ರಾಮನಗರ ಜಿಲ್ಲೆಯಲ್ಲಿ ನಾಡಹಬ್ಬ, ರಾಷ್ಟ್ರೀಯ ಹಬ್ಬಗಳ ಆಚರಣೆಯಲ್ಲಿ ಶಿಷ್ಟಾಚಾರ ಪಾಲನೆಯಾಗುತ್ತಲೇ ಇಲ್ಲ. ಶಿಷ್ಟಾಚಾರ ಪಾಲಿಸಿದ ನಡೆಸಿದ ಒಂದೇ ಒಂದು ಕಾರ್ಯಕ್ರಮದ ನಿದರ್ಶನ ಇಲ್ಲಿಲ್ಲ. ರಾಷ್ಟ್ರೀಯ ಹಬ್ಬಗಳ ಆಚರಣೆಯಲ್ಲಿ ಧ್ವಜಾರೋಹಣ ವೇಳೆ ಸಚಿವರೊಂದಿಗೆ ಡಿಸಿ ಮತ್ತು ಎಸ್ಪಿ ಹೊರತಾಗಿ ಮತ್ತಿನ್ಯಾರೂ ಏರುವುದು ಸಂಪ್ರದಾಯವಲ್ಲ. ಅದನ್ನು ಇಲ್ಲಿ ಪಾಲಿಸುವುದೇ ಇಲ್ಲ.
ವೇದಿಕೆಯಲ್ಲಿ ಶಿಷ್ಟಾಚಾರದಡಿ ಆಹ್ವಾನಿತರಾದ ಜನಪ್ರತಿನಿಧಿಗಳು, ಗಣ್ಯರಲ್ಲದವರು ಆಸೀನರಾಗುವುದು ಇಲ್ಲಿ ವಾಡಿಕೆಯಾಗಿದೆ. ಸಮಾರಂಭವು ಜಿಲ್ಲಾಡಳಿತದಿಂದಲೇ ಆಯೋಜನೆಗೊಂಡು, ಪ್ರಾರಂಭವಾಗುತ್ತದೆ. ಅದು ಹಂತ ಹಂತವಾಗಿ ಸಾಗುತ್ತಾ ಸಮಾರೋಪ ಕಾಣುವಷ್ಟರಲ್ಲಿ ಮತ್ತಿನ್ಯಾರದೋ ಮುಷ್ಟಿಗೆ ಸಿಲುಕಿರುತ್ತದೆ. ಅಧಿಕಾರಿಗಳಿಗೆ ಶಿಷ್ಟಾಚಾರ, ಶಿಸ್ತಿನ ಅರಿವೇ ಇಲ್ಲವೋ ಅಥವಾ ಈ ನೆಲದ ಮಹಿಮೆಯೇ ಹಾಗಿದೆಯೋ ಎನ್ನುವ ಅನುಮಾನ ಕಾಡುತ್ತದೆ.