ಗ್ರಾಪಂಗಳ ಸ್ವತಂತ್ರ ನಿರ್ವಹಣೆಗಾಗಿ ಆರ್ಥಿಕ ಬಲ ತುಂಬಬೇಕಿದೆ
ಆನೇಕಲ್: ಗಾಂಧೀಜಿಯವರ ಗ್ರಾಮ ಸ್ವರಾಜ್ಯ ಕನಸು ಈಡೇರಬೇಕಾದಲ್ಲಿ ಗ್ರಾಮ ಪಂಚಾಯ್ತಿಗಳ ಸ್ವತಂತ್ರ ನಿರ್ವಹಣೆಗಾಗಿ ಆರ್ಥಿಕ ಬಲ ತುಂಬಬೇಕಿದೆ. ಆ ನಿಟ್ಟಿನಲ್ಲಿ ತಾಲೂಕಿನ 8 ಗ್ರಾಮಗಳನ್ನು ಸುವರ್ಣ ಗ್ರಾಮ ಯೋಜನೆಗೆ ಆಯ್ಕೆ ಮಾಡಿದ್ದು ತಲಾ 1 ಕೋಟಿ ರು.ಗಳ ಮೊತ್ತ ನಿಗದಿಯಾಗಿದೆ ಎಂದು ಸಮಾಜ ಕಲ್ಯಾಣ ಹಾಗೂ ಬಂದೀಖಾನೆ ಸಚಿವ ಎ. ನಾರಾಯಣಸ್ವಾಮಿ ತಿಳಿಸಿದ್ದಾರೆ.
ಅವರು ತಾಲೂಕಿನ ಬಳ್ಳೂರಿನಲ್ಲಿ ಮಂಗಳವಾರ 1.5 ಕೋಟಿ ರೂ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿ ಮುಂದಿನ ಬಜೆಟ್ನಲ್ಲಿ ಗ್ರಾಮಗಳ ಅಭಿವೃದ್ಧಿಗೆ ಹೆಚ್ಚಿನ ಮೊತ್ತ ನಿಗದಿಯಾಗಲಿದ್ದು ಪಂಚಾಯ್ತಿಗಳು ಗ್ರಾಮಗಳ ಮೂಲಭೂತ ಸೌಕರ್ಯಗಳಿಗೆ ಅನುದಾನವನ್ನು ಬಳಸಬೇಕೆಂದು ತಿಳಿಸಿದರು. ಬಿಜೆಪಿ ಮುಖಂಡ ಮಧುಕುಮಾರ್ ಮಾತನಾಡಿ ಸಚಿವರ ಮಾರ್ಗದರ್ಶನದಲ್ಲಿ ಗಡಿ ಭಾಗವಾದ ಬಳ್ಳೂರಿನ ಸರ್ವತೋಮುಖ ಅಭಿವೃದ್ಧಿಗೆ ವಿಶೇಷ ಅನುದಾನ ಪಡೆಯಲಾಗಿದೆ. ಹಾಲಿ ರು. 1.20 ಕೋಟಿ ಅನುದಾನದಲ್ಲಿ ಓವರ್ ಹೆಡ್ ಟ್ಯಾಂಕ್ ನಿರ್ಮಾಣ, ಶಾಲಾ ಕೊಠಡಿಗಳು, ಚರಂಡಿ, ಕಾಂಕ್ರಿಟ್ ರಸ್ತೆಗಳು ಕಾಮಗಾರಿ ಪ್ರಗತಿಯಲ್ಲಿದೆ. ನಿಗದಿತ ಸಮಯದಲ್ಲಿ ಕಾಮಗಾರಿ ಪೂರ್ಣಗೊಳಿಸಿ ಜನತೆಗೆ ಸಮರ್ಪಿಸಲಾಗುವುದು ಎಂದರು.
ಗ್ರಾಪಂ ಅಧ್ಯಕ್ಷೆ ಮಂಜುಳಾ ವಿ. ರೆಡ್ಡಿ, ಮಾಜಿ ಅಧ್ಯಕ್ಷ ಪೂರ್ಣಿಮಾ ಮಧುಕುಮಾರ್, ಜಿಪಂ ಸದಸ್ಯ ಅರುಣಾ ನಾರಾಯಣಸ್ವಾಮಿ, ತಾಪಂ ಸದಸ್ಯೆ ಸರಸ್ವತಿ ಮುರಳಿ, ಉಪಾಧ್ಯಕ್ಷ ಗಜೇಂದ್ರ ಇದ್ದರು.