ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಸರ್ಕಾರಿ ಶಾಲೆಗಳಿಗೆ ಅಲ್ಮೇರಾ: ಶಂಕರಯ್ಯ

Srinivasa Murthy VN
Updated On : 1 Feb 2013, 2:26 am

ರಾಮನಗರ: ಶಾಲೆಗಳಲ್ಲಿನ ಅಮೂಲ್ಯ ದಾಖಲೆಗಳನ್ನು ಸಂರಕ್ಷಿಸಿಡುವ ಸದುದ್ದೇಶದಿಂದ ಸರ್ಕಾರಿ ಶಾಲೆಗಳಿಗೆ ಅಲ್ಮೇರಾಗಳನ್ನು ನೀಡಲಾಗುತ್ತಿದೆ ಎಂದು ಬಸವನಪುರ ಕ್ಷೇತ್ರದ ತಾ.ಪಂ. ಸದಸ್ಯ ಶಂಕರಯ್ಯ ತಿಳಿಸಿದರು.
ತಾಲೂಕಿನ ಪಾಲಾಬೋವಿ ದೊಡ್ಡಿಯ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿಗೆ ಅಲ್ಮೆರಾ ಹಸ್ತಾಂತರಿಸಿ ಮಾತನಾಡಿದ ಅವರು, ಬಸವನಪುರ ತಾ.ಪಂ.ವ್ಯಾಪ್ತಿಯ 12 ಶಾಲೆಗಳಿಗೆ ತಲಾ ಒಂದು ಸ್ಟೀಲ್ ಅಲ್ಮೇರಾವನ್ನು ನೀಡಲಾಗಿದೆ ಎಂದು ತಿಳಿಸಿದರು.  13ನೇ ಹಣಕಾಸು ಅನುದಾನದಿಂದ ಶೈಕ್ಷಣಿಕ ಉಪಕರಣಗಳನ್ನು ನೀಡಲಾಗುತ್ತಿದೆ. ಈಗಾಗಲೇ ವಿಜ್ಞಾನ ಉಪಕರಣ, ಅವುಗಳನ್ನಿಡಲು ಅಲ್ಮೆರಾಗಳನ್ನು ಒದಗಿಸಲಾಗಿದೆ. ಜೊತೆಗೆ ಶಾಲಾ ಗ್ರಂಥಾಲಯದಲ್ಲಿ ಪುಸ್ತಗಳನ್ನಿಡಲು ರ್ಯಾಕ್‌ಗಳನ್ನೂ ನೀಡಲಾಗಿದೆ. ಶೈಕ್ಷಣಿಕ ಸಮಸ್ಯೆಗಳ ನಿವಾರಣೆಗೂ ಒತ್ತು ನೀಡಲಾಗಿದೆ ಎಂದು ಶಂಕರಯ್ಯ ತಿಳಿಸಿದರು. ಸಮಾರಂಭದಲ್ಲಿ ಮುಖ್ಯ ಶಿಕ್ಷಕಿ ನಾಗರತ್ನಮ್ಮ, ಬಿಆರ್‌ಸಿ ಡಿ.ಪಿ. ಮೃತ್ಯಂಜಯ, ಶಿಕ್ಷಕರಾದ ನಾಗರಾಜು, ಪಾರ್ವತಮ್ಮ, ಮಂಜುನಾಥ ಮತ್ತಿತರಿದ್ದರು.

ಗೌಡಗೆರೆಯಲ್ಲಿ ಕಳಸ ಪ್ರತಿಷ್ಠಾಪನಾ ಕಾರ್ಯ
ಚನ್ನಪಟ್ಟಣ: ತಾಲೂಕಿನ ಗೌಡಗೆರೆ ಗ್ರಾಮದ ಚಾಮುಂಡೇಶ್ವರಿ ಬಸಪ್ಪನ ದೇವಾಲಯದಲ್ಲಿ ನವಚಂಡಿಕಾ ಯಾಗ ಮತ್ತು ಹತ್ತುಸಾವಿರ ಕಳಸ ಪ್ರತಿಷ್ಠಾಪನಾ ಕಾರ್ಯ ಇಂದಿನಿಂದ ಮೂರು ದಿನಗಳ ಕಾಲ ನಡೆಯಲಿದೆ. ಸಿದ್ದಗಂಗಾ ಮಠಾಧೀಶ ಡಾ.ಶಿವಕುಮಾರ ಸ್ವಾಮೀಜಿ, ವಿಶ್ವ ಒಕ್ಕಲಿಗರ ಮಠದ ಚಂದ್ರಶೇಖರ ನಾಥ ಸ್ವಾಮೀಜಿ, ಮೈಸೂರು ಸಂಸ್ಥಾನದ ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್, ಬೇವೂರು ಮಠದ ಮೃತ್ಯುಂಜಯ ಶಿವಾಚಾರ್ಯ ಸ್ವಾಮೀಜಿ, ಧರ್ಮದರ್ಶಿ ಜಿ.ಬಿ ಮಲ್ಲೇಶ್, ಕಬ್ಬು ಮತ್ತು ಸಕ್ಕರೆ ಅಭಿವೃದ್ಧಿ ಮಂಡಲಿ ಅಧ್ಯಕ್ಷ ಕೆ.ಎಸ್.ಸತ್ಯಮೂರ್ತಿ ಪಾಲ್ಗೊಳ್ಳಲಿದ್ದಾರೆ.

9ರಂದು ಹಳೆ ವಿದ್ಯಾರ್ಥಿ ಸಂಘದ ಸಭೆ
ಚನ್ನಪಟ್ಟಣ: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಸರ್ವ ಸದಸ್ಯರ ಸಭೆಯನ್ನು 9ರಂದು ಮಧ್ಯಾಹ್ನ 2 ಘಂಟೆಗೆ ಕಾಲೇಜು ಆವರಣದಲ್ಲಿ ಕರೆಯಲಾಗಿದೆ. ಸಭೆಗೆ ಕಾಲೇಜಿನ ಎಲ್ಲಾ ಹಳೆ ವಿದ್ಯಾರ್ಥಿಗಳು ಪಾಲ್ಗೊಂಡು ಸಭೆಯನ್ನು ಯಶಸ್ವಿ ಗೊಳಿಸುವಂತೆ ಪ್ರಾಂಶುಪಾಲ ಶಂಕರಪ್ಪ ಮನವಿ ಮಾಡಿದ್ದಾರೆ.

ಜಿಲ್ಲಾಮಟ್ಟದ ಕಾಲ್ನಡಿಗೆ ಜಾಥಾ
ಕನಕಪುರ: ಕನಕಪುರದ ಸ್ತ್ರೀಶಕ್ತಿ ಸ್ವಸಹಾಯ ಗುಂಪುಗಳ ಒಕ್ಕೂಟವಾದ ಧಾನ್‌ಫೌಂಡೇಷನ್ ವತಿಯಿಂದ ಕೃಷಿಜೀವ ವೈವಿಧ್ಯತೆ, ಪೌಷ್ಟಿಕಾಂಶ ಭದ್ರತೆಯ ಅರಿವು ಮೂಡಿಸುವ ಸಲುವಾಗಿ ರಾಮನಗರ ಜಿಲ್ಲಾಮಟ್ಟದ ವಾಕಥಾನ್-ಕಾಲ್ನಡಿಗೆ ಜಾಥಾ ಕಾರ್ಯಕ್ರಮವನ್ನು ಫೆ.2 ರಂದು ರಾಮನಗರದ ಮಿನಿ ವಿಧಾನಸೌಧ ಆವರಣದಿಂದ ಮಾಗಡಿ ರಸ್ತೆಯ ಮಂಜುನಾಥ ಕನ್ವೆಷನ್‌ಹಾಲ್‌ವರೆಗೆ ಏರ್ಪಡಿಸಲಾಗಿದೆ. ವಾಕಥಾನ್‌ನಲ್ಲಿ ನಬಾರ್ಡ್, ಗ್ರೀನ್‌ಫೌಂಡೇಷನ್, ಜೀವವೈವಿಧ್ಯ ಪ್ರಾಧಿಕಾರ, ಜನಧಾನ್ಯ ರೈತಒಕ್ಕೂಟ, ಆತ್ಮಯೋಜನೆ, ಕೃಷಿ ಇಲಾಖೆ ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳು ಪಾಲ್ಗೊಳ್ಳಲಿವೆ. ಸಾವಿರಾರು ಸ್ವಯಂಸೇವಕರು ಕಾಲ್ನಡಿಗೆ ಮೂಲಕ ಘೋಷಣೆಗಳನ್ನು ಕೂಗುತ್ತಾ ಜಾಗೃತಿ ಮೂಡಿಸಲಿದ್ದಾರೆ. ಈ ವಿನೂತನ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಯೋಜನಾಧಿಕಾರಿ ಸುಜಯ್ ಹಾಗೂ ಸಂಚಾಲಕ ಸತೀಶ್ ಕೋರಿದ್ದಾರೆ.

ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ
ಸೂಲಿಬೆಲೆ: ಇಲ್ಲಿಗೆ ಸಮೀಪದ ನಂದಗುಡಿ ಪೊಲೀಸ್ ಠಾಣೆ ವ್ಯಾಪ್ತಿಯ ನೆಲವಾಗಿಲು ಗ್ರಾಮದಲ್ಲಿ ವ್ಯಕ್ತಿಯೊಬ್ಬ ನಿಗೂಢವಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಭೀಮೇಶ್ವರ(25) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ನೆಲವಾಗಿಲು ಗ್ರಾಮದ ನಿವಾಸಿಯಾದ ಈತ ಕಳೆದ ಎರಡು ದಿನಗಳ ಹಿಂದೆ ದೆಹಲಿಯಿಂದ ಸ್ವಗ್ರಾಮಕ್ಕೆ ವಾಪಸಾಗಿದ್ದ ಎನ್ನಲಾಗಿದೆ. ಬಂದ ದಿನವೇ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈತ ಯಾವ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡ ಎಂಬುದು ತಿಳಿದು ಬಂದಿಲ್ಲ. ಮೃತನ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ. ಘಟನೆ ಸ್ಥಳವನ್ನು ಪರಿಶೀಲಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ನಂದಗುಡಿ ಪಿಎಸ್‌ಐ ಪ್ರಕಾಶ ತಿಳಿಸಿದ್ದಾರೆ. ನಂದಗುಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

ರೌಡಿಯಿಂದ ವ್ಯಕ್ತಿ ತಲೆಗೆ ಏಟು
ಮಾಗಡಿ: ಸೈಯದ್  ಹುಮಾಯನ್  ಎಂಬ  ರೌಡಿಯೊಬ್ಬ  ಆಗಲಕೋಟೆ ಗ್ರಾಮದ ನಪ್ರೂಲ್ಲಾ ಎಂಬುವನ  ತಲೆಗೆ ದೊಣ್ಣೆಯಿಂದ ಹೊಡೆದ ಪರಿಣಾಮ ನಪ್ರೂಲ್ಲಾ ತೀವ್ರವಾಗಿ ಗಾಯಗೊಂಡ ಘಟನೆ ಗುರುವಾರ ನಡೆದಿದೆ.
  ರೌಡಿ ಚಟುವಟಿಕೆ ನಡೆಸಿಕೊಂಡು ಅನೇಕ ಬಾರಿ ಜೈಲು ಶಿಕ್ಷೆ ಅನುಭವಿಸಿ ಬಂದಿರುವ ಸೈಯದ್   ಹುಮಾಯನ್ ಮಾಗಡಿ ಕಳೆದ ತಿಂಗಳಿನಿಂದ ಮಾಗಡಿ ತಾಲೂಕಿನಲ್ಲಿ ವಾಸವಾಗಿದ್ದುಕೊಂಡಿದ್ದ, ಆದರೆ ಹಣಕ್ಕಾಗಿ ಪೀಡಿಸಿ ನಪ್ರೂಲ್ಲಾ ಎಂಬವನಿಗೆ ದೊಣ್ಣೆಯಿಂದ ಹೊಡೆದು ಥಳಿಸಿದ ಎನ್ನಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಮಾಗಡಿ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಧರ್ಮೇಗೌಡ  ಆರೋಪಿ ಸೈಯದ್  ಹುಮಾಯನ್‌ನನ್ನು ಬಂಧಿಸಿ, ನ್ಯಾಯಾಂಗ ವಶಕ್ಕೆ ಒಪ್ಪಿಸಿರುವುದಾಗಿ ತಿಳಿಸಿದ್ದಾರೆ.

ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಭೆ ಇಂದು
ರಾಮನಗರ: ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆಯನ್ನು ಚನ್ನಪಟ್ಟಣ ತಾ.ಪಂ. ಕಚೇರಿ ಸಭಾಂಗಣದಲ್ಲಿ ನಾಳೆ (ಫೆ.1) ಬೆಳಗ್ಗೆ 11ಕ್ಕೆ ಸಚಿವ ಯೋಗೇಶ್ವರ್ ಅಧ್ಯಕ್ಷತೆಯಲ್ಲಿ ಕರೆಯಲಾಗಿದೆ.

ನಾಳೆ ದತ್ತಿ ಉಪನ್ಯಾಸ
ಚನ್ನಪಟ್ಟಣ: ಜಿಲ್ಲಾ ಮತ್ತು ತಾಲೂಕು ಕಸಾಪ ವತಿಯಿಂದ ಯಶೋದಮ್ಮ ಪಿ.ವೆಂಕಟಪ್ಪ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಪಟ್ಟಣದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ 2 ರಂದು ಹಮ್ಮಿಕೊಳ್ಳಲಾಗಿದೆ. ಪ್ರಾಂಶುಪಾಲ ಸಿದ್ದರಾಜೇಗೌಡ ಉದ್ಘಾಟಿಸಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement