ಸಾಮಾಜಿಕ ಸ್ವಾಸ್ಥ್ಯವೇ ತತ್ವಪದಗಳ ಜೀವಾಳ
ದೊಡ್ಡಬಳ್ಳಾಪುರ: ಸಾಮಾಜಿಕ ಸ್ವಾಸ್ಥ್ಯವೇ ತತ್ವಪದಗಳ ಜೀವಾಳ. ಸಮಾಜದ ಉನ್ನತಿಗೆ ಬೇಕಾದ ಮಾರ್ಗದರ್ಶನವನ್ನು ತತ್ವಪದಕಾರರು ಯಶಸ್ವಿಯಾಗಿ ನೀಡುತ್ತಾರೆ ಎಂದು ಇಲ್ಲಿನ ಕೊಂಗಾಡಿಯಪ್ಪ ಕಾಲೇಜಿನ ಪ್ರಾಧ್ಯಾಪಕ ಪ್ರೊ.ಚಂದ್ರಪ್ಪ ಹೇಳಿದರು.
ತಾಲೂಕಿನ ದೊಡ್ಡಹೆಜ್ಜಾಜಿ ಗ್ರಾಮದ ಕೀರ್ತನಕಾರ ನಾರಾಯಣಶರ್ಮ ಅವರ ಕವಿಮನೆಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ಮನೆಯಂಗಳದಲ್ಲಿ ತಿಂಗಳ ಸಾಹಿತ್ಯ ಸಂಜೆ ಕಾರ್ಯಕ್ರಮದಲ್ಲಿ ತತ್ವಪದಗಳ ಕುರಿತು ಅವರು ಮಾತನಾಡಿದರು.
ತತ್ವಪದಗಳು ಎಲ್ಲ ಸಂದರ್ಭಗಳಲ್ಲಿಯೂ ಎಲ್ಲ ಸಾಮಾಜಿಕ ವಲಯಗಳಿಗೂ ಹತ್ತಿರವಾಗುವ ಆತ್ಮೀಯತೆಯನ್ನು ಹೊಂದಿರುತ್ತವೆ. ದೈವ ಮತ್ತು ಮನುಷ್ಯ ಸಂಬಂಧಗಳ ತಾಳಮೇಳಗಳಿಗೆ ಭಕ್ತಿಯ ಹೊದಿಕೆ ಕಟ್ಟಿಕೊಡುವುದು ತತ್ವಪದ. ಇಹಪರದ ಆಲೋಚನೆಗಳಲ್ಲೇ ಬೇಕು ಬೇಡಗಳ ಕುರಿತ ಆತ್ಮಸಂವೇದನೆಯನ್ನು ಸಹ ಅವು ಪರಿಚಯಿಸುತ್ತವೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ನಾರಾಯಣಶರ್ಮ ಸಂಸ್ಕೃತಿ ಕೇಂದ್ರದ ಡಾ.ನಾ.ಗೀತಾಚಾರ್ಯ ಮಾತನಾಡಿ, ಸರ್ವದೈವಸ್ತುತಿ, ಆತ್ಮನಿವೇದನೆ, ಸಾಮಾಜಿಕತೆ, ತಾತ್ವಿಕತೆ, ಕ್ಷೇತ್ರದರ್ಶನ ಸೇರಿದಂತೆ ತತ್ವಪದ ಸಮಗ್ರ ಆಲೋಚನೆಗಳಿಂದ ವಿಶೇಷವೆನಿಸುತ್ತದೆ. ಬಹುಮುಖ್ಯವಾಗಿ ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಹೆಜ್ಜಾಜಿ ಗ್ರಾಮ ತತ್ವಪದಕಾರರ ತವರು. ಇಲ್ಲಿನ ನಾರಾಯಣಶರ್ಮರು, ಶಾಮಶರ್ಮರು ಅನೇಕ ತತ್ವಪದಗಳನ್ನು ರಚಿಸಿ ತತ್ವಪದಕಾರರ ಪರಂಪರೆಯನ್ನು ಬೆಳೆಸಿದ್ದಾರೆ ಎಂದರು.
ರಸಾನುಭವ ಮುಖ್ಯ: ಅಧ್ಯಕ್ಷತೆ ವಹಿಸಿದ್ದ ತಾ.ಕಸಾಪ ಅಧ್ಯಕ್ಷ ಕೆ.ಆರ್.ರವಿಕಿರಣ್ ಮಾತನಾಡಿ, ಭಜನೆ ಪರಂಪರೆ ದೊಡ್ಡಬಳ್ಳಾಪುರದಲ್ಲಿ ಗಾಢವಾಗಿ ಬೇರೂರಿದೆ. ತತ್ವಪದಗಳು ಕನ್ನಡ ಸಾಹಿತ್ಯದ ಬಹುಮೂಲ್ಯ ಕೃತಿಗಳು. ಕಸಾಪ ಜನರ ಬದುಕಿನ ನಾಡಿಮಿಡಿತದ ದನಿಯಾಗಬೇಕು ಎಂಬ ವಾದಕ್ಕೆ ಈ ಕಾರ್ಯಕ್ರಮ ಸಾರ್ಥಕತೆ ತಂದುಕೊಟ್ಟಿದೆ. ಅರಮನೆ ಸಾಹಿತ್ಯ ಮತ್ತು ಜೋಪಡಿ ಸಾಹಿತ್ಯಗಳ ಮೌಲ್ಯಸಾಮ್ಯತೆ ಭಿನ್ನನೆಲೆಗಳನ್ನು ಗುರುತಿಸುವಲ್ಲಿ ಸಾಹಿತ್ಯದ ವೈಚಾರಿಕತೆ ಇನ್ನೂ ಬೆಳೆಯಬೇಕಿದೆ.ಎಂದರು