'ತೋಟಗಾರಿಕೆ ಬೆಳೆಗಾರರಿಗೆ ಸಹಾಯಧನ'
ಕ.ಪ್ರ.ವಾರ್ತೆ ರಾಮನಗರ ಜು.3
ತೋಟಗಾರಿಕೆ ಬೆಳೆಗಾರರಿಗೆ ಇಲಾಖೆಯಿಂದ ಹಲವಾರು ಯೋಜನೆಗಳ ಮೂಲಕ ಸಹಾಯಧನ ನೀಡಲಾಗುತ್ತಿದೆ. ಬೆಳೆಗಾರರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಡಾ.ಬಿ.ಕೃಷ್ಣ ತಿಳಿಸಿದರು.
ರೈತರು ತಮ್ಮ ತೋಟದ ಬೆಳೆಗಳಿಗೆ ಹನಿ ನೀರಾವರಿ ಅಳವಡಿಸಿಕೊಳ್ಳಲು 1 ಎಕರೆಗೆ ರು.15 ರಿಂದ 78 ಸಾವಿರ ಸಹಾಯ ಧನ ನೀಡಲಾಗುವುದು. 5 ಎಕರೆವರೆಗೆ ಶೇಕಡಾ 80ರಷ್ಟು ಹಾಗೂ 12 ಎಕರೆವರೆಗೆ ಶೇಕಡಾ 50ರಷ್ಟು ಸಹಾಯಧನ ನೀಡಲಾಗುವುದು ಎಂದು ಬುಧವಾರ ತಮ್ಮ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.
ಹನಿ ನೀರಾವರಿ ಅಳವಡಿಸಿಕೊಳ್ಳುವುದರಿಂದ ಅಮೂಲ್ಯವಾದ ನೀರಿನ ಉಳಿತಾಯದ ಜತೆಗೆ ಉತ್ತಮ ಇಳುವರಿಯನ್ನೂ ಪಡೆಯಬಹುದು. ಸಾಮಾನ್ಯವಾಗಿ ರೈತರು ಬೇಸಿಗೆಯಲ್ಲಿ ನೀರಿನ ಕೊರತೆ ಉಂಟಾದಾಗ ಹನಿ ನೀರಾವರಿ ಅಳವಡಿಸಿಕೊಳ್ಳಲು ಇಚ್ಛಿಸುತ್ತಾರೆ. ಆದರೆ ಮಳೆಗಾಲದಲ್ಲೇ ಅಳವಡಿಸಿಕೊಂಡಲ್ಲಿ ಮರಗಳು ಇದಕ್ಕೆ ಒಗ್ಗಿಕೊಂಡು ಬೇಸಿಗೆಯಲ್ಲಿ ಉತ್ತಮ ಫಸಲು ನೀಡುತ್ತವೆ ಎಂದು ಹೇಳಿದರು.
ಯಾಂತ್ರೀಕರಣ ಯೋಜನೆಯಡಿ ಕೊಯ್ಲು ಮತ್ತು ಕೊಯ್ಲೋತ್ತರ ನಿರ್ವಹಣೆ ಕಾರ್ಯಗಳಿಗಾಗಿ ವಿವಿಧ ಯಂತ್ರೋಪಕರಣಗಳಿಗೆ ನಿಗದಿತ ದರಕ್ಕನುಗುಣವಾಗಿ ಸಾಮಾನ್ಯ ವರ್ಗದವರಿಗೆ ಶೇಕಡಾ 50ರಷ್ಟು (ಗರಿಷ್ಠ ರು.50 ಸಾವಿರ) ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಶೇಕಡಾ 75ರಷ್ಟು (ಗರಿಷ್ಠ ರು.75 ಸಾವಿರ) ಇಲಾಖೆಯಿಂದ ನೀಡಲಾಗುವುದು ಎಂದರು.
ಬಾಳೆ ಮತ್ತು ತರಕಾರಿ ಬೆಳೆಗಳನ್ನು ಬೆಳೆಯುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ ವೈಜ್ಞಾನಿಕ ಬೆಳೆ ಬೆಳೆಯಲು ಬಾಳೆ ಬೆಳೆಗೆ ಪ್ರತಿ ಎಕರೆಗೆ ರು.45 ಸಾವಿರ ಮತ್ತು ತರಕಾರಿ ಬೆಳೆಗೆ ಪ್ರತಿ ಎಕರೆಗೆ ರು.25 ಸಾವಿರ ಸಹಾಯಧನ ನೀಡಲಾಗುವುದು ಎಂದರು.
ಹೂವು ಮತ್ತು ತರಕಾರಿಗಳ ಸಂರಕ್ಷಿತ ಬೇಸಾಯ ಯೋಜನೆಯಡಿ ಪ್ರತಿ ಫಲಾನುಭವಿ ರೈತನಿಗೆ ಕನಿಷ್ಠ 1 ಸಾವಿರ ಚದರ್ ಮೀ. ವಿಸ್ತೀರ್ಣದಿಂದ ಗರಿಷ್ಠ 4 ಸಾವಿರ ಚದರ ಮೀ.ವಿಸ್ತೀರ್ಣದಲ್ಲಿ ವಾಣಿಜ್ಯ ಹೂ ಮತ್ತು ತರಕಾರಿ ಬೆಳೆಯಲು ಪಾಲಿ ಮನೆ ನಿರ್ಮಾಣ ಮಾಡಲು ಪ್ರತಿ ಚದರ ಮೀಟರ್‌ಗೆ ರು.41 ಸಹಾಯಧನ ನೀಡಲಾಗುವುದು ಎಂದು ಕೃಷ್ಣ ಹೇಳಿದರು.
ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಸಣ್ಣ ಹಾಗೂ ದೊಡ್ಡ ಪ್ರಮಾಣದ ಸಗಟು ಮಾರುಕಟ್ಟೆ ನಿರ್ಮಾಣ ಮಾಡಲು ಖಾಸಗಿ ಸಂಘ ಸಂಸ್ಥೆಗಳಿಗೆ ಹಾಗೂ ಸರ್ಕಾರಿ ಸಂಸ್ಥೆಗಳಿಗೆ ಶೇ. 25ರಷ್ಟು ಸಹಾಯಧನ ವಿತರಿಸಲಾಗುವುದು ಎಂದರು.
ಈ ಎಲ್ಲಾ ಯೋಜನೆಗಳಡಿ ಸಹಾಯಧನ ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸಲು ಮತ್ತು ಹೆಚ್ಚಿನ ವಿವರಗಳಿಗೆ ಆಯಾ ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರನ್ನು ಸಂಪರ್ಕಿಸುವಂತೆ ಕೃಷ್ಣ ಅವರು ಮನವಿ ಮಾಡಿದರು. ಗೋಷ್ಠಿಯಲ್ಲಿ ಸಹಾಯಕ ತೋಟಗಾರಿಕೆ ನಿರ್ದೇಶಕರಾದ ರೂಪಶ್ರೀ, ಸುಮಾ, ಲತಾ, ಶಂಕರ್, ಮಂಜುನಾಥ್ ಹಾಜರಿದ್ದರು.