ಆಗಸ್ಟ್‌ನಲ್ಲಿ ಫಲಾನುಭವಿಗಳಿಗೆ 1800 ಮನೆಗಳ ವಿತರಣೆ: ಎಚ್ಡಿಕೆ
ರಾಮನಗರ: ಆಗಸ್ಟ್ ತಿಂಗಳ ಮೊದಲ ವಾರದಲ್ಲಿ ಫಲಾನುಭವಿಗಳಿಗೆ 1800 ಮನೆಗಳನ್ನು ವಿತರಿಸಲಾಗುವುದು ಎಂದು ವಿರೋಧ ಪಕ್ಷದ ನಾಯಕ ಹಾಗೂ ಕ್ಷೇತ್ರದ ಶಾಸಕ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು, 2006-07ರಲ್ಲಿ ನಗರಸಭಾ ವ್ಯಾಪ್ತಿಯ ವಸತಿ ರಹಿತರಿಗೆ ನೀಡುವ ಉದ್ದೇಶದಿಂದ ರು.30 ಕೋಟಿ ವೆಚ್ಚದಲ್ಲಿ 1800 ಮನೆ ನಿರ್ಮಿಸುವ ಯೋಜನೆ ಆರಂಭಿಸಲಾಗಿತ್ತು. ಹಲವಾರು ಸಮಸ್ಯೆಗಳು ಎದುರಾದ ಹಿನ್ನೆಲೆಯಲ್ಲಿ ನಿರ್ಮಾಣ ಹಾಗೂ ಫಲಾನುಭವಿಗಳಿಗೆ ವಿತರಿಸಲು ಇದುವರೆಗೂ ಸಾಧ್ಯವಾಗಿಲ್ಲ. ಎಲ್ಲ ಸಮಸ್ಯೆಗಳನ್ನು ನಿವಾರಿಸಿ ಆಗಸ್ಟ್ ಮೊದಲನೆ ವಾರದೊಳಗೆ ಫಲಾನುಭವಿಗಳಿಗೆ ಮನೆ ವಿತರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಪ್ರಸ್ತುತ ನಗರಸಭಾ ವ್ಯಾಪ್ತಿಯ ಸೂರಿಲ್ಲದವರಿಗೆ 3 ಸಾವಿರ ಮನೆಗಳ ಅವಶ್ಯಕತೆ ಇದೆ. ಇನ್ನು ಒಂದು ವರ್ಷದಲ್ಲಿ ಇವರಿಗೂ ಕೂಡ ಮನೆ ವಿತರಿಸಲಾಗುವುದು. ಈ ಸಂಬಂಧ ನಗರಸಭೆಯಿಂದ ಈಗಾಗಲೇ ಕೊತ್ತೀಪುರ ಬಳಿ 7 ಎಕರೆ ಜಮೀನು ಖರೀದಿಸಲಾಗಿದೆ. ಗೆಜ್ಜಲುಗುಡ್ಡೆ ಬಳಿ 4 ಎಕರೆ ಜಮೀನು ಖರೀದಿಸಲಾಗುವುದು. ಇಲ್ಲಿ 800 ಮನೆ ನಿರ್ಮಾಣಕ್ಕೆ ಯೋಜನೆ ತಯಾರಿಸಿದರೆ ವಸತಿ ಸಚಿವರನ್ನು ಖುದ್ದು ತಾವೇ ಭೇಟಿ ಮಾಡಿ, ಮಂಜೂರು ಮಾಡಿಸುವುದಾಗಿ ಹೇಳಿದರು.
ವಿಶ್ರಮಿಸುವುದಿಲ್ಲ: ರಾಜೀವ್ ಗಾಂಧಿ ಆರೋಗ್ಯ ವಿಶ್ವ ವಿದ್ಯಾಲಯ ನಿರ್ಮಾಣ ಆಗದ ಹೊರತು ನಾನು ವಿಶ್ರಮಿಸುವುದಿಲ್ಲ. ಕಾಮಗಾರಿಗೆ ಶೀಘ್ರ ಚಾಲನೆ ನೀಡುವಂತೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಒತ್ತಾಯಿಸಲಾಗುವುದು. ರಾಮನಗರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಕ್ಷಿಪ್ರಗತಿಯಲ್ಲಿ ಕಾರ್ಯ ಯೋಜನೆ ಕೈಗೊಳ್ಳಲಾಗುವುದು. ತಾಲೂಕಿನ ಎಲ್ಲಾ ಹಳ್ಳಿಗಳಿಗೂ ಭೇಟಿ ನೀಡಿ ಸಮಸ್ಯೆ ಆಲಿಸಿ ಬಗೆಹರಿಸುವುದಾಗಿ ತಿಳಿಸಿದರು.
ಅಧಿಕಾರಿಗಳು ಯಾವುದೇ ಯೋಜನೆಗಳನ್ನು ತಯಾರಿಸಿದರೂ ಶಾಶ್ವತ ಯೋಜನೆಯನ್ನು ತಯಾರಿಸಬೇಕು. ಅಭಿವೃದ್ಧಿ ಯೋಜನೆಗಳಲ್ಲಿ ಹಣವನ್ನು ದುರುಪಯೋಗ ಮಾಡಿಕೊಳ್ಳಬಾರದು. ದುರುಪಯೋಗ ಆಗಿರುವುದು ಸಾಬೀತಾದಲ್ಲಿ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದರು.
ಜಿಲ್ಲಾಧಿಕಾರಿ ವಿ.ಶ್ರೀರಾಮರೆಡ್ಡಿ, ಜಿ.ಪಂ. ಸಿಇಒ ಡಾ.ಎಂ.ವಿ.ವೆಂಕಟೇಶ್, ಉಪ ವಿಭಾಗಾಧಿಕಾರಿ ಡಾ.ಎಂ.ಎನ್. ರಾಜೇಂದ್ರಪ್ರಸಾದ್, ತಹಸೀಲ್ದಾರ್ ಹನುಮಂತರಾಯಪ್ಪ, ಎಸ್‌ಪಿ ಅನುಪಮ್ ಅಗ್ರವಾಲ್ ಹಾಜರಿದ್ದರು.