ಎಸ್‌ಎಲ್‌ಎಸ್ ಶಾಲೆಯಿಂದ ಬರ ಪರಿಹಾರ ನಿಧಿಗೆ ರು. 65 ಸಾವಿರ
ಕ.ಪ್ರ.ವಾರ್ತೆ ದೇವನಹಳ್ಳಿ ಜು. 4
ಇತ್ತೀಚೆಗೆ ಉತ್ತರ ಭಾರತದ ಪವಿತ್ರ ಯಾತ್ರಾಸ್ಥಳಗಳಲ್ಲಿ ಸುರಿದ ಮಳೆಯಿಂದಾಗಿ ಸಾವಿರಾರು ಮಂದಿ ಸಾವನ್ನಪ್ಪಿದ್ದು ಕೋಟ್ಯಂತರ ರು. ಆಸ್ತಿ ಪಾಸ್ತಿ ನಷ್ಟವಾಗಿರುವ ಹಿನ್ನೆಲೆಯಲ್ಲಿ ಇಲ್ಲಿನ ಎಸ್‌ಎಲ್‌ಎಸ್ ರೆಸಿಡೆನ್ಷಿಯಲ್ ಶಾಲೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಮತ್ತು ಆಡಳಿತ ಮಂಡಳಿಯವರು ಸೇರಿ ಒಟ್ಟು 65 ಸಾವಿರ ರು.ಗಳ ಡಿಡಿಯನ್ನು ತಹಸೀಲ್ದಾರ್ ಡಾ.ವೆಂಕಟರಾಜುರವರಿಗೆ ನೀಡಿದರು.
ಪರಿಹಾರದ ಹಣದ ಡಿಡಿ ಸ್ವೀಕರಿಸಿದ ತಹಸೀಲ್ದಾರ್ ಡಾ.ವೆಂಕಟರಾಜು ಮಾತನಾಡಿ ಈ ಶಾಲೆಯಲ್ಲಿ ನೊಂದವರಿಗಾಗಿ ಸೇವಾಮನೋಭಾವದ ಬಗ್ಗೆ ಮಕ್ಕಳಿಗೆ ತಿಳಿಹೇಳಿ ಧನ ಸಹಾಯ ಮಾಡುವಂತೆ ಪ್ರೇರೇಪಣೆ ಮಾಡಿದ ಶಾಲಾ ಆಡಳಿತ ಮಂಡಳಿಯವರಿಗೆ ತಾಲೂಕು ಆಡಳಿತ ಪರವಾಗಿ ಅಭಿನಂದಿಸಿದರು. ಇಲ್ಲಿನ ವಿದ್ಯಾರ್ಥಿಗಳು ಮಾನವೀಯತೆ ತೋರಿಸಿದ್ದಾರೆ ಎಂದರಲ್ಲದೆ ಇತರ ಶಾಲೆಗಳಿಗೆ ಮಾದರಿಯಾಗಿದ್ದಾರೆ ಎಂದರು.
ಬಿಇಒ ಮುನಿರಾಜು ಮಾತನಾಡಿ ಪ್ರಕತಿ ವಿಕೋಪವನ್ನು ತಡೆಯುವ ಶಕ್ತಿ ನಮ್ಮಲ್ಲಿ ಇಲ್ಲವಾಗಿದೆ, ಯಾತ್ರಾರ್ಥಿಗಳ ಪ್ರವಾಸ ಸಂದರ್ಭದಲ್ಲಿ ಆಗಿರುವ ಅನಾಹುತಕ್ಕೆ ಸ್ಪಂದಿಸಿರುವ ಈ ಶಾಲೆಯ ಮಕ್ಕಳಿಗೆ ಪ್ರೇರೇಪಣೆ ನೀಡಿದ ಆಡಳಿತ ಮಂಡಳಿಯವರಿಗೆ ಕೃತಜ್ಞತೆ ಸಲ್ಲಿಸಿದರು.
ಡಿಕ್ಕಿ; ಸ್ಥಳದಲ್ಲೇ ಇಬ್ಬರ ಸಾವು
ನೆಲಮಂಗಲ: ಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿ 4ರ ಬೊಮ್ಮನಹಳ್ಳಿ ಮತ್ತು ಬೂದಿಹಾಲ್ ಮಧ್ಯೆ ತುಮಕೂರು ಕಡೆ ಬರುತ್ತಿದ್ದ ಕಾರಿಗೆ ವೇಗವಾಗಿ ಬಂದು ಇನ್ನೊಂದು ಕಾರು ಡಿಕ್ಕಿ ಹೊಡೆದ ಪರಿಣಾಮ ಸ್ವೀಪ್ಟ್ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೆ ಮೃತಪಟ್ಟು, ಉಳಿದ ನಾಲ್ಕು ಮಂದಿ ತೀವ್ರ ಗಾಯಗೊಂಡಿರುವ ಘಟನೆ ಗುರುವಾರ ಪಟ್ಟಣದ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮೃತರನ್ನು ಬಳ್ಳಾರಿ ಸಮೀಪದ ಹಟ್ಟಿ ಗ್ರಾಮದ ನಾರಾಯಣ್ (57) ಮತ್ತು ರುದ್ರಯ್ಯ ಹಿರೀಮಠ್ (37) ಎಂದು ಗುರುತಿಸಲಾಗಿದೆ. ತೀವ್ರ ಗಾಯಗೊಂಡವರು ನೆಲಮಂಗಲ ಮತ್ತು ಬೆಂಗಳೂರಿನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಬಗ್ಗೆ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.