ಪ್ರತಿಭಾ ಪುರಸ್ಕಾರ
ನೆಲಮಂಗಲ: ಅಖಿಲ ಭಾರತ ವೀರಶೈವ ಮಹಾ ಸಭಾದ ವತಿಯಿಂದ 2012-13ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿ.ಯು.ಸಿಯಲ್ಲಿ ಅತ್ಯಧಿಕ ಅಂಕಗಳನ್ನು ಪಡೆದ ತಾಲೂಕಿನ ವೀರಶೈವ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಸಲಾಗುವುದು. ಮಾಹಿತಿಗೆ ದಯಾಶಂಕರ್- 9342467492 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ಕೀರಣಗೆರೆ ಚಾಕಿ ಸೆಂಟರ್ಗೆ ಕೇಂದ್ರ ರೇಷ್ಮೆ ಸಚಿವ ಕೆ. ಸಾಂಬಶಿವರಾವ್ ಭೇಟಿ
ಕನಕಪುರ: ಭಾರತದ ಅತಿದೊಡ್ಡ ರೇಷ್ಮೆಚಾಕಿ ಉತ್ಪಾದನಾ ಕೇಂದ್ರವಾದ ಕನಕಪುರ ತಾಲೂಕಿನ ಕೀರಣಗೆರೆ ಚಾಕಿಸೆಂಟರ್ಗೆ ಕೇಂದ್ರ ರೇಷ್ಮೆ ಹಾಗೂ ಜವಳಿ ಖಾತೆ ಸಚಿವ ಕೆ.ಸಾಂಬಶಿವರಾವ್ ಭೇಟಿ ನೀಡಿ ಕಾರ್ಯ ಚಟುವಟಿಕೆ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ರೇಷ್ಮೆ ಉದ್ಯಮ ಎದುರಿಸುತ್ತಿರುವ ಸಂಕಷ್ಟಗಳು, ತೊಂದರೆಗಳನ್ನು ಸ್ವಯಂ ಪರಿಶೀಲಿಸಲು, ಸರ್ಕಾರದಿಂದ ರೈತರಿಗೆ ಹಾಗೂ ಚಾಕಿ ಉತ್ಪಾದಕರಿಗೆ ಅಗತ್ಯ ನೆರವು ಕಲ್ಪಿಸಲು, ರೇಷ್ಮೆ ನೂಲಿನ ರಫ್ತನ್ನು ಉತ್ತೇಜಿಸಲು ತಾವು ಭೇಟಿ ನೀಡಿ ಅಧ್ಯಯನ ನಡೆಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದಾಗಿ ಹೇಳಿದರು. ಕೀರಣಗೆರೆ ಚಾಕಿಸೆಂಟರ್ಮಾಲೀಕ ಡಾ.ಜಗದೀಶ್ ಮಾತನಾಡುತ್ತಾ, ಕಳೆದ ಎರಡು ದಶಕಗಳಿಂದ ಹಳೇಮೈಸೂರು ಪ್ರಾಂತ್ಯದ ಹತ್ತಾರು ಜಿಲ್ಲೆಗಳಿಗೆ ವಾರ್ಷಿಕ ಸುಮಾರು 80 ಲಕ್ಷ ಉತ್ತಮ ಗುಣಮಟ್ಟದ ದ್ವಿತಳಿ ರೇಷ್ಮೆ ಹುಳುಗಳನ್ನು ಉತ್ಪಾದಿಸಿ ನೀಡಲಾಗುತ್ತಿದೆ. 10 ಲಕ್ಷ ಬೈವೋಲ್ಟೈನ್ ಮೊಟ್ಟೆಗಳನ್ನು ಉತ್ಪಾದಿಸಲಾಗುತ್ತಿದ್ದು ಏಷ್ಯಾಖಂಡದಲ್ಲಿಯೇ ಬೃಹತ್ ಚಾಕಿ ಕೇಂದ್ರವಾಗಿ ಪ್ರಸಿದ್ಧಿ ಪಡೆದಿದೆ ಎಂದರು. ಕೇಂದ್ರ ರೇಷ್ಮೆಮಂಡಳಿ ಕಾರ್ಯದರ್ಶಿ ಇಷಿತಾ, ಡಾ.ಶಿವಪ್ರಸಾದ್, ಡಾ.ಅಂಗಡಿ, ಡಾ.ಸೋಮಿರೆಡ್ಡಿ, ಜಿಲ್ಲಾಉಪನಿರ್ದೇಶಕ ಡಾ.ಲಕ್ಷ್ಮೀಪತಿರೆಡ್ಡಿ, ಸಹಾಯಕ ನಿರ್ದೇಶಕ ಡಾ.ಪ್ರಕಾಶ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಸಾರಿಗೆ ವಾಹನಗಳಿಗೆ ಶಾಸಕರಿಂದ ಚಾಲನೆ
ದೇವನಹಳ್ಳಿ: ದೇವನಹಳ್ಳಿ ಹಾಗೂ ವಿಜಯಪುರ ವಿದ್ಯಾರ್ಥಿಗಳಿಗೆ, ರೈತರಿಗೆ ಮತ್ತು ನಾಗರಿಕ ಪ್ರಯಾಣಿಕರಿಗೆ ಅನುಕೂಲವಾಗುವಂತೆ ನಾಲ್ಕು ರಾಜ್ಯ ರಸ್ತೆ ಸಾರಿಗೆಯ ಸಂಪರ್ಕ ಸಾರಿಗೆ ವಾಹನಗಳಿಗೆ ಶಾಸಕ ಪಿಳ್ಳಮುನಿಶಾಮಪ್ಪ ಗುರುವಾರ ಚಾಲನೆ ನೀಡಿದರು. ವಿಜಯಪುರದಿಂದ ದೇವನಹಳ್ಳಿ ಮಾರ್ಗವಾಗಿ ಸಿಟಿ ಮಾರ್ಕೆಟ್ಗೆ ಎರಡು ವಾಹನ, ದೇವನಹಳ್ಳಿಯಿಂದ ವಿಜಯಪುರ ಮಾರ್ಗವಾಗಿ ಶಿಡ್ಲಘಟ್ಟಕ್ಕೆ ಎರಡು ವಾಹನಗಳು ಸಂಚರಿಸಲಿವೆ ಎಂದು ಸಾರಿಗೆ ಇಲಾಖೆಯ ಮಾರ್ಗಾಧಿಕಾರಿಗಳಾದ ಎಸ್.ವಾಜಿದ್ ತಿಳಿಸಿದರು. ಸಮಾರಂಭದಲ್ಲಿ ತಾಲೂಕು ಜೆಡಿಎಸ್ ಅಧ್ಯಕ್ಷರಾದ ಮುನಿಶಾಮಯ್ಯ, ಪುರಸಭಾ ಸದಸ್ಯರುಗಳಾದ ಜಿ.ಎ.ರವೀಂದ್ರ, ಶಶಿಕುಮಾರ್, ಕುಮಾರ್, ವಿ.ಗೋಪಾಲಕೃಷ್ಣ, ಮುನಿನಂಜಪ್ಪ, ಬಿ.ವಿ.ಕೃಷ್ಣಾರೆಡ್ಡಿ, ಸಂಚಾರಿ ವ್ಯವಸ್ಥಾಪಕರಾದ ರವೀಂದ್ರಕುಮಾರ್ ಹಾಗೂ ಬಿ.ವೆಂಕಟೇಶ್ ಉಪಸ್ಥಿತರಿದ್ದರು.
ತಾ.ಪಂ.ಅಧ್ಯಕ್ಷ ರಾಜಿನಾಮೆ
ನೆಲಮಂಗಲ: ತಾ.ಪಂ.ಅಧ್ಯಕ್ಷ ಪುಟ್ಟಗಂಗಯ್ಯ ರವರು ಗುರುವಾರ ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ಪತ್ರವನ್ನು ಜಿಲ್ಲಾಧಿಕಾರಿಗಳಿಗೆ ನೀಡಿರುವುದಾಗಿ ತಿಳಿಸಿದ್ದಾರೆ. ತಾಲೂಕಿನ ಶಿವಗಂಗೆ ತಾ.ಪಂ.ಕ್ಷೇತ್ರದಿಂದ ಸದಸ್ಯರಾಗಿ ಆಯ್ಕೆಯಾಗಿದ್ದರು. 2ನೇ ಅವಧಿಗೆ 7 ತಿಂಗಳ ಅಧ್ಯಕ್ಷ ಅವಧಿಗೆ ತಾ.ಪಂ. ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗಿದ್ದರು. ಪಕ್ಷದ ಮುಖಂಡರಿಗೆ ನೀಡಿದ್ದ ವಾಗ್ದಾನದಂತೆ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿರುವುದಾಗಿ ಹೇಳಿದ್ದಾರೆ.
ಅಂಗಡಿ ಮಾಲೀಕ ಆತ್ಮಹತ್ಯೆ
ನೆಲಮಂಗಲ: ಅಂಗಡಿ ಮಾಲೀಕನೊಬ್ಬ ತನ್ನ ಅಂಗಡಿಯಲ್ಲೇ ಸಾವಿಗೆ ಶರಣಾಗಿರುವ ಘಟನೆ ಪಟ್ಟಣದ ಚನ್ನಪ್ಪ ಬಡಾವಣೆ ಸೂರ್ಯ ಹಾರ್ಡ್ವೇರ್ನಲ್ಲಿ ಗುರುವಾರ ನಡೆದಿದೆ.ಮೃತನನ್ನು ನೆಲಮಂಗಲ ಪಟ್ಟಣದ ಸುಭಾಷ್ ನಗರದ ವಾಸಿ ಅನಿಲ್(23) ಎಂದು ಗುರುತಿಸಲಾಗಿದೆ. ಈತ ಪ್ರತಿನಿತ್ಯದಂತೆ ತನ್ನ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿದ್ದನು. ಗುರುವಾರ ಸಂಜೆ ಅಂಗಡಿಯಲ್ಲಿ ವೈರ್ನಿಂದ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾನೆ. ಸಾವಿಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಇಂದು ನೂತನ ಕಚೇರಿ ಉದ್ಘಾಟನೆ
ನೆಲಮಂಗಲ: ತಾಲೂಕಿನ ವಿ.ವಿ.ಪುರದಲ್ಲಿ ಜು. 5ರ ಶುಕ್ರವಾರ ಬೆಳಿಗ್ಗೆ 10-00 ಗಂಟೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನೂತನ ಕಚೇರಿಯ ಗಣಹೋಮ ಮತ್ತು ಉದ್ಘಾಟನಾ ಸಮಾರಂಭವನ್ನು ಏರ್ಪಡಿಸಲಾಗಿದೆ ಎಂದು ಯೋಜನಾಧಿಕಾರಿ ಎ.ಎಸ್. ಸುಖೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.