ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಅತ್ಯುನ್ನತ ವಿಧಿ ವಿಜ್ಞಾನ ಪ್ರಯೋಗಾಲಯ ಸ್ಥಾಪನೆ

Srinivasa Murthy VN
Updated On : 6 Jul 2013, 12:41 pm

ಕ.ಪ್ರ. ವಾರ್ತೆ ಚನ್ನಪಟ್ಟಣ ಜು.5
ಪೊಲೀಸ್ ಇಲಾಖೆಯನ್ನು ಸದೃಢಗೊಳಿಸುವ ಜತೆಗೆ, ತಾಂತ್ರಿಕ ಮತ್ತು ವೈಜ್ಞಾನಿಕ ಸೌಲಭ್ಯಗಳನ್ನು ಇಲಾಖೆಗೆ ಅಳವಡಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ ಎಂದು ಗೃಹ ಸಚಿವ ಕೆ.ಜೆ.ಜಾರ್ಜ್ ತಿಳಿಸಿದರು.
ಇಲ್ಲಿನ ಪೊಲೀಸ್ ತರಬೇತಿ ಶಾಲೆಯಲ್ಲಿ ತರಭೇತಿ ಪೂರ್ಣ ಗೊಳಿಸಿದ ರಾಜ್ಯ ಸಶಸ್ತ್ರ ಮೀಸಲು ಪಡೆ ಪೊಲೀಸರ ನಿರ್ಗಮನ ಪಥ ಸಂಚಲನದಲ್ಲಿ ಗೌರವ ರಕ್ಷೆ ಸ್ವೀಕರಿಸಿ ಅವರು ಮಾತನಾಡಿದರು.  
ರಾಜ್ಯದಲ್ಲಿ ಅತ್ಯುನ್ನತ ವಿಧಿ ವಿಜ್ಞಾನ ಪ್ರಯೋಗಾಲಯ ಸ್ಥಾಪನೆ ಮಾಡಲು ಸರ್ಕಾರ ಮುಂದಾಗಿದೆ ಎಂದರು.
ಬೆಂಗಳೂರಿನಲ್ಲಿ ಪ್ರಯೋಗಾಲಯ: ಡಿಎನ್‌ಎ ಸೇರಿದಂತೆ ಅಪರಾಧ ವಿಭಾಗಕ್ಕೆ ಸಂಬಂಧಿಸಿದ ಎಲ್ಲಾ ರೀತಿಯ ವೈಜ್ಞಾನಿಕ ತನಿಖೆಗೆ ಅನುಕೂಲ ವಾಗುವಂತೆ ಬೆಂಗಳೂರಿನಲ್ಲಿ ಪ್ರಯೋಗಾಲಯ ಸ್ಥಾಪಿಸಲಿದ್ದು, ಪೊಲೀಸರಿಗೆ ಪ್ರತ್ಯೇಕ ಕ್ಯಾಂಟಿನ್, ವಿಮೆ, ವೈದ್ಯಕೀಯ ಸೇವೆ, ವಸತಿ  ಸೇರಿದಂತೆ ಪೊಲೀಸರಿಗೆ ಅಗತ್ಯವಿರುವ ಎಲ್ಲಾರೀತಿಯ ಸೌಲಭ್ಯಗಳನ್ನು ಕಲ್ಪಿಸಲು ಸರ್ಕಾರ ಸಿದ್ದವಾಗಿದೆ ಎಂದರು.
ನೇಮಾಕಾತಿಗೆ ಚಾಲನೆ: ರಾಜ್ಯದಲ್ಲಿ 12 ಸಾವಿರ ಪೊಲೀಸರ ಕೊರತೆ ಇದ್ದು ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಹಂತ ಹಂತವಾಗಿ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡುವುದಾಗಿ ಸಚಿವರು ತಿಳಿಸಿದರು.
ಮೊದಲ ಹಂತವಾಗಿ 8 ಸಾವಿರ ಹುದ್ದೆಗಳನ್ನು ತುಂಬಲು ಸರ್ಕಾರ ಮುಂದಾಗಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ತೀರ್ಮಾನ ತೆಗೆದು ಕೊಳ್ಳಲಿರುವುದಾಗಿ ಮಾಹಿತಿ ನೀಡಿದರು.
ನಕ್ಸಲ್ ನಿಗ್ರಹ: ರಾಜ್ಯದಲ್ಲಿ ನಕ್ಸಲೀಯರನ್ನು ನಿಗ್ರಹ ಮಾಡಲು ಇಲಾಖೆ ಸಶಕ್ತವಾಗಿದ್ದು, ಈಗಾಗಲೇ ನಕ್ಸಲ್ ನಿಗ್ರಹ ಪಡೆಯ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ ನಕ್ಸಲ್  ಸಮಸ್ಯೆ ನಿವಾರಿಸಲು ಪೊಲೀಸ್‌ಪಡೆ ಸನ್ನದ್ದವಾಗಿದೆ ಎಂದರು.
ನಕ್ಸಲ್ ಸಮಸ್ಯೆ ಜತೆಗೆ ಭಯೋತ್ಪಾದಕತೆ ವಿರುದ್ಧ ಸಮರ ಸಾರಲು ನಮ್ಮ ಪೊಲೀಸರು ಸಿದ್ದರಾಗಿದ್ದು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ನೋಡಿಕೊಳ್ಳಲು ನಮ್ಮ ಇಲಾಖೆ ಮುಂದಾಗಿದೆ ಎಂದು ತಿಳಿಸಿದರು.
ಮಹಿಳಾ ರಕ್ಷಣೆಗೆ ಮುಂದಾಗಿ: ಮಹಿಳೆಯರು ಮತ್ತು ಮಕ್ಕಳಿಗೆ ಸಂಬಂಧಿಸಿದ ಪ್ರಕರಣಗಳ ಬಗ್ಗೆ ವಿಶೇಷ ಕಾಳಜಿ ತೋರುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದು, ಅವರ ಹಕ್ಕುಗಳ ರಕ್ಷಣೆಗೆ ನಮ್ಮ ಇಲಾಖೆ ಆದ್ಯ ಕರ್ತವ್ಯ ವಾಗಿದೆ ಎಂದರು.
ಆರ್‌ಟಿಎ ಕಾರ್ಯಕರ್ತರಿಗೆ ರಕ್ಷಣೆ: ಇತ್ತೀಚಿನ ದಿನಗಳಲ್ಲಿ ಆರ್‌ಟಿಎ ಮತ್ತು ಸಾಮಾಜಿಕ ಕಾರ್ಯಕರ್ತರ ಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿದ್ದು ಇವರಿಗೆ ಸೂಕ್ತ ರಕ್ಷಣೆ ಕಲ್ಪಿಸಲು ಸರ್ಕಾರ ಮುಂದಾಗಿದೆ ಎಂದರು. ಪೊಲೀಸ್ ಮಹಾನಿರ್ದೇಶಕ ಲಾಲ್ ರುಕುಮಾ ಪಚಾವೋ, ತರಬೇತಿ ವಿಭಾಗದ ಮಹಾ ನಿರ್ದೇಶಕ ಸುಶಾಂತ ಮಹಾಪಾತ್ರ, ಆಂತರಿಕ ಭದ್ರತಾ ವಿಭಾಗದ ಪೊಲೀಸ್ ಮಹಾ  ನಿರೀಕ್ಷಕ ಭಾಸ್ಕರ್ ರಾವ್, ತರಬೇತಿ ಶಾಲೆ ಪ್ರಾಂಶುಪಾಲ ಇಂದುಶೇಖರ್ ಮುಂತಾದವರು ಉಪಸ್ಥಿತರಿದ್ದರು.

ಹೊಸ ಪೊಲೀಸ್ ಠಾಣೆ ಸ್ಥಾಪನೆಗೆ ಚಿಂತನೆ
ಚನ್ನಪಟ್ಟಣ:
ರಾಜ್ಯದಲ್ಲಿ ಹೊಸ ಪೊಲೀಸ್ ಠಾಣೆಗಳ ಸ್ಥಾಪನೆ ಬಗ್ಗೆ ಸರ್ಕಾರ ಚಿಂತನೆ ನಡೆಸಿದ್ದು ಅಗತ್ಯವಿರುವೆಡೆಯಲ್ಲಿ ಠಾಣೆಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುವುದೆಂದು ಗೃಹ ಸಚಿವ ಕೆ.ಜೆ.ಜಾರ್ಜ್ ತಿಳಿಸಿದರು. ಪಟ್ಟಣದ ಪೊಲೀಸ್ ತರಬೇತಿ ಶಾಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚನ್ನಪಟ್ಟಣದಲ್ಲಿ ಟ್ರಾಫಿಕ್ ಪೊಲೀಸ್ ಠಾಣೆ ಸೇರಿದಂತೆ ಹೊಸ ಠಾಣೆಗಳ ಸ್ಥಾಪನೆ ಬಗ್ಗೆ ಇಲಾಖೆಯ ಹಿರಿಯ ಅಧಿಕಾರಿಗಳು ವರದಿ ನೀಡಿದ ಬಳಿಕ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಹಸ್ತಕ್ಷೇಪ ಇಲ್ಲ: ಪೊಲೀಸ್ ಅಧಿಕಾರಿಗಳ ವರ್ಗಾವಣೆಯಲ್ಲಿ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಮುಖಂಡರು ಹಸ್ತಕ್ಷೇಪ ಮಾಡುತ್ತಿಲ್ಲ. ನಮ್ಮ ಸರ್ಕಾರ ನಿಯಮಾನುಸಾರವೇ ವರ್ಗಾವಣೆ ಮಾಡುತ್ತಿದ್ದು ಅನ್ಯಪಕ್ಷದ ಮುಖಂಡರು ಹುರುಳಿಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದರು. ಯಾವುದೇ ಮಾಹಿತಿ ಇಲ್ಲ: ಕನಕಪುರದಲ್ಲಿ ಅಲ್ಲಿನ ಶಾಸಕರು ಪೊಲೀಸ್ ಇಲಾಖೆಯನ್ನು ದುರ್ಬಳಕೆ ಮಾಡಿ ಕೊಳ್ಳುತ್ತಿರುವ ಬಗ್ಗೆ ನನಗೆ ಯಾವುದೇ ಮಾಹಿತಿ ಬಂದಿಲ್ಲ. ಆದರೆ, ಇಲಾಖೆ ಸಾರ್ವಜನಿಕ ಸ್ನೇಹಿಯಾಗಿ ಕರ್ತವ್ಯ ನಿರ್ವಹಿಸುತ್ತದೆ ಎಂದು ಪ್ರತಿಕ್ರಿಯೆ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement