ಕಮ್ಮಸಂದ್ರ: ಸಾಂಕ್ರಾಮಿಕ ರೋಗದ ಗುಮ್ಮ...
ಕ.ಪ್ರ. ವಾರ್ತೆ ಸೂಲಿಬೆಲೆ ಜು.5
ಇಲ್ಲಿಗೆ ಸಮೀಪದ ಕಮ್ಮಸಂದ್ರ ಗ್ರಾಮದಲ್ಲಿ ಜನವಸತಿ ಮನೆಗಳ ಮಧ್ಯೆ ಹರಿಯುವ ಕೊಳಚೆ ನೀರು ಕಾಲುವೆಯಿಂದ ಸುತ್ತಮುತ್ತಲ್ಲಿನ ಜನರಿಗೆ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಈ ನಿಟ್ಟಿನಲ್ಲಿ ಈ ಕೂಡಲೇ ಚಂರಡಿ ಕಾಲುವೆ ನಿರ್ಮಾಣ ಮಾಡುವಂತೆ ಒತ್ತಾಯಿಸಿದ್ದಾರೆ.
ಸೂಲಿಬೆಲೆಯಿಂದ ಹೊಸಕೋಟೆ ಮಾರ್ಗದ ರಾ.ಹೆ.207ರ ಬದಿಯಲ್ಲಿರುವ ಕಮ್ಮಸಂದ್ರ ಗ್ರಾಮದಲ್ಲಿ ಸೂಕ್ತ ಚರಂಡಿ ವ್ಯವಸ್ಥೆಯಿಲ್ಲದೆ ಜನ ಪರದಾಡುವಂತಾಗಿದೆ. ಕಮ್ಮಸಂದ್ರ ಗ್ರಾಮ ಲಕ್ಕೊಂಡಹಳ್ಳಿ ಗ್ರಾಪಂಗೆ ಒಳಪಟ್ಟಿದ್ದು, ಸುಮಾರು 400 ಮನೆಗಳನ್ನು ಹೊಂದಿದೆ.ಬಹುತೇಕ ರೈತಾಪಿ ವರ್ಗದವರೇ ಹೆಚ್ಚಾಗಿರುವ ಈ ಗ್ರಾಮದಲ್ಲಿ ಹೈನುಗಾರಿಕೆ ಮೂಲ ಕಸುಬಾಗಿದೆ. ಗ್ರಾಮದ ಮಧ್ಯೆ ಭಾಗದಿಂದ ಹೊರ ಭಾಗಕ್ಕೆ ಕಲ್ಪಿಸಿರುವ ಚರಂಡಿ ಕಾಮಗಾರಿ ಅರ್ಥಕ್ಕೆ ನಿಲ್ಲಿಸಿದ್ದು,ಒಳ ಭಾಗದಿಂದ ಹರಿದು ಬರುವ ಕೊಳಚೆ ನೀರು ಹೆದ್ದಾರಿ ಬದಿಯ ಭಾಗಕ್ಕೆ ಬಂದು ನಿಲ್ಲುತ್ತಿದೆ. ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಲ್ಲಿ ಗ್ರಾಮದ ಒಳ ಭಾಗದಲ್ಲಿ ನಿರ್ಮಾಣ ಮಾಡಿರುವ ಕಾಲೊವೆಯನ್ನು ಹೆದ್ದಾರಿ ಬದಿಯಲ್ಲಿ ಮುಂದುವರಿಸದೆ ಬಿಟ್ಟಿದ್ದು, ಕೊಳಚೆ ನೀರು ಒಂದಡೆ ಶೇಖರಣಿಯಾಗಿ ಸೊಳ್ಳೆ ಉತ್ಪತಿಯಿಂದ ನಾನಾ ರೋಗಗಳು ಹರಡಲು ಕಾರಣವಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಕೊಳಚೆ ನೀರು ತುಂಬಿದ ಪ್ರದೇಶದಲ್ಲಿ ಕಾಲೊವೆ ನಿರ್ಮಾಣಕ್ಕೆ ಅಗೆದು ಆಗೇ ಬಿಟ್ಟಿರುವ ಮಣ್ಣಿನಲ್ಲಿ ನೀರು ತುಂಬಿ ಮುಂದೆ ಹರಿಯದೆ ನಿಂತಿದೆ. ಇದರಲ್ಲಿ ಸೊಳ್ಳೆ, ನೊಣ ಇತ್ಯಾದಿ ಕೀಟಗಳ ವಾಸ ಸ್ಥಾನಕ್ಕೆ ಯೋಗ್ಯವಾಗಿ ಡೆಂಘೀ ಮಲೇರಿಯಾ ಇತ್ಯಾದಿ ರೋಗಗಳು ಹರಡಲು ಕಾರಣವಾಗುತ್ತಿದೆ. ಚುನಾಯಿತ ಪ್ರತಿನಿಧಿಗಳು ಇತ್ತ ಗಮನಹರಿಸಿ ಜನರಿಗೆ ಕಂಟಕವಾಗಿರುವ ಕೊಳಚೆ ನೀರು ಹೊರಗೆ ಹರದು ಹೋಗುವಂತೆ ಸೂಕ್ತ ಚರಂಡಿಯನ್ನು ನಿರ್ಮಾಣ ಮಾಡುವಂತೆ ಒತ್ತಾಯಿಸಿದ್ದಾರೆ.