ಮೊದಲು ಡೆಂಘೀ ಭೀತಿ ನಿವಾರಿಸಿ
ಕ.ಪ್ರ. ವಾರ್ತೆ ಚನ್ನಪಟ್ಟಣ ಜು.5
ತಾಲೂಕಿನಲ್ಲಿ ಡೆಂಘೀ ಭೀತಿ ಆವರಿಸಿದ್ದು ಆರೋಗ್ಯ ಇಲಾಖೆ ಹೆಚ್ಚಿನ ಹೊಣೆಗಾರಿಕೆಯಿಂದ ಕೆಲಸ ಮಾಡಿ ತಾಲೂಕನ್ನು ಡೆಂಘೀ ಮುಕ್ತ ಗೊಳಿಸಬೇಕು ಎಂದು ಶಾಸಕ ಸಿ.ಪಿ.ಯೋಗೇಶ್ವರ್ ತಾಕೀತು ಮಾಡಿದರು.
ತಾಲೂಕಿನ ಬೇವೂರು ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ತಾಲೂಕಿನಲ್ಲಿ ಕಂಡು ಬಂದಿರುವ ಡೆಂಘೀ ಸೋಂಕಿನಿಂದಾಗಿ ಬಡವರು ಸಮಸ್ಯೆಗೆ ಸಿಲುಕಿದ್ದು, ತಾಲೂಕಿನ ಜನತೆಯ ಆರೋಗ್ಯ ರಕ್ಷಣೆಗೆ ಸಂಬಂಧಿಸಿದಂತೆ ಇಲಾಖೆ ಹೆಚ್ಚಿನ ಜವಾಬ್ದಾರಿ ಹೊರಬೇಕಿದೆ ಎಂದರು.
ಡೆಂಘೀ ಜ್ವರಕ್ಕೆ ತುತ್ತಾಗುವ ಮಕ್ಕಳಿಗೆ ಚಿಕಿತ್ಸೆ ಕೊಡಿಸಲು ಸಾಕಷ್ಟು ಹಣದ ಅಗತ್ಯತೆ ಇದ್ದು ಹಲವಾರು ಮಂದಿ ನನ್ನ ಬಳಿ ತಮ್ಮ ಸಮಸ್ಯೆಯನ್ನು ಅಲವತ್ತುಕೊಂಡಿದ್ದಾರೆ. ಆರೋಗ್ಯ ಇಲಾಖೆ ಗ್ರಾಮ ಮಟ್ಟದಲ್ಲಿ ಡೆಂಘಿ ನಿರ್ಮೂಲನೆಗೆ ಪಣ ತೊಡುವಂತೆ ಕರೆ ನೀಡಿದರು.
ನೀರಾವರಿ ವರ್ಷದಲ್ಲಿ ಪೂರ್ಣ: ತಾಲೂಕನ್ನು ಶಾಶ್ವತವಾಗಿ ಬರದಿಂದ ಮುಕ್ತವಾಗಿಸುವ ಉದ್ದೇಶದಿಂದ ಕೈಗೊಂಡಿರುವ ಕಣ್ವ-ಶಿಂಷಾ ನದಿ ಜೋಡಣಾ ಕಾರ್ಯ ಪ್ರಗತಿಯಲ್ಲಿದ್ದು ವರ್ಷದೊಳಗೆ ಬೇವೂರು ಭಾಗಕ್ಕೆ ನೀರು ಪೂರೈಕೆ ಮಾಡುವುದಾಗಿ ತಿಳಿಸಿದರು.
ಕಾಮಗಾರಿಗೆ ಅಗತ್ಯವಿರುವ ವಿದ್ಯುತ್ ವ್ಯವಸ್ಥೆ,ಪೈಪ್ಗಳ ನಿರ್ಮಾಣ ಹಾಗೂ ಭೂ ಸ್ವಾಧೀನ ಕಾರ್ಯ ಕ್ಷಿಪ್ರಗತಿಯಲ್ಲಿ ಸಾಗಿದ್ದು, ಕೊಟ್ಟ ಮಾತಿನಂತೆ ವರ್ಷದೊಳಗೆ ನೀರು ಪೂರೈಕೆ ಮಾಡುವುದಾಗಿ ಶಾಸಕರು ವಾಗ್ದಾನ ವಿತ್ತರು.
ನಿರಂತರ ಜ್ಯೋತಿ: ತಾಲೂಕಿನ ಎಲ್ಲಾ ಗ್ರಾಮಗಳನ್ನು ನಿರಂತರ ಜ್ಯೋತಿ ಯೋಜನೆಗೆ ಒಳ ಪಡಿಸಿದ್ದು, ಈ ಕಾಮಗಾರಿಗೆ ಅದಾಗಲೇ ಭೂಮಿ ಪೂಜೆ ನೆರವೇರಿಸಲಾಗಿದೆ. ಮುಂದಿನ 8 ತಿಂಗಳಲ್ಲಿ ಕಾಮಗಾರಿ ಪೂರ್ಣ ಗೊಂಡು ಎಲ್ಲಾ ಗ್ರಾಮಗಳಿಗೆ ದಿನದ 24 ತಾಸು ವಿದ್ಯುತ್ ಪೂರೈಕೆ ಯಾಗಲಿದೆ ಎಂದವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರಾಥಮಿಕ ಆರೋಗ್ಯಕೇಂದ್ರಕ್ಕೆ ನಿವೇಶನ ನೀಡಿದ ದಾನಿ ಬಸವೇಗೌಡರನ್ನು ಸನ್ಮಾನಿಸಲಾಯಿತು. ಜಿ.ಪಂ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ರಘುಕುಮಾರ್, ತಾಪಂ ಅಧ್ಯಕ್ಷೆ ಶಾಂತಮ್ಮ ಮಹೇಶ್, ತಾಪಂ ಸದಸ್ಯ ಗುರುಕುಮಾರ್, ಗ್ರಾಪಂ ಅಧ್ಯಕ್ಷ ಮಹೇಶ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಘುನಾಥ್, ತಾಲೂಕು ಆರೋಗ್ಯಾಧಿಕಾರಿ ಡಾ.ರಾಜು, ಪ್ರಾಥಮಿಕ ಕೇಂದ್ರದ ವೈದ್ಯಾಧಿಕಾರಿ ಡಾ.ಶಶಿಕಿರಣ್, ಸಮಾಜವಾದಿ ಪಕ್ಷದ ಮುಖಂಡರಾದ ಸಿಂಗರಾಜಪಪುರ ರಾಜಣ್ಣ, ಶಾರದಾ ಚಂದ್ರಶೇಖರ್, ರಾಂಪುರ ಮಲವೇಗೌಡ ಮುಂತಾದವರು ಉಪಸ್ಥಿತರಿದ್ದರು.