ಆಯುಧ ಒಪ್ಪಿಸಲುಜಿಲ್ಲಾಧಿಕಾರಿ ಸೂಚನೆ
ರಾಮನಗರ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಮರು ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣಕ್ಕೆ ಪರವಾನಗಿ ಹೊಂದಿದವರು ತಮ್ಮಲ್ಲಿರುವ ಆಯುಧಗಳನ್ನು ಕೂಡಲೇ ತಮ್ಮ ವ್ಯಾಪ್ತಿ ಪೊಲೀಸ್ ಠಾಣೆಗಳಲ್ಲಿ ಡೆಪಾಸಿಟ್ ಮಾಡಿ ಸ್ವೀಕೃತಿ ಪಡೆಯುವಂತೆ ಜಿಲ್ಲಾಧಿಕಾರಿ ವಿ. ಶ್ರೀರಾಮರೆಡ್ಡಿ ಆದೇಶ ಹೊರಡಿಸಿದ್ದಾರೆ. ಜಿಲ್ಲಾ ಪೊಲೀಸ್ ಅಧೀಕ್ಷಕರು ಜಿಲ್ಲಾ ವ್ಯಾಪ್ತಿಯ ಎಲ್ಲಾ ಪೊಲೀಸ್ ಠಾಣಾಧಿಕಾರಿಗಳಿಗೆ ಕೂಡಲೇ ತಮ್ಮ ವ್ಯಾಪ್ತಿಯಲ್ಲಿ ಆಯುಧಗಳನ್ನು ಹೊಂದಿರುವ ಎಲ್ಲಾ ಪರವಾನಗಿದಾರರಿಂದ ಎಲ್ಲಾ ರೀತಿಯ ಪರವಾನಗಿ ಹೊಂದಿರುವ ಆಯುಧಗಳನ್ನು ಪಡೆದು ಡೆಪಾಸಿಟ್ ಮಾಡಿಕೊಂಡು, ಸ್ವೀಕೃತಿ ನೀಡಿ ಚುನಾವಣಾ ಪ್ರಕ್ರಿಯೆ ಮುಗಿದ ನಂತರ ಸಂಬಂಧಪಟ್ಟವರಿಗೆ ವಾಪಸ್ ನೀಡಲು ಕ್ರಮ ಕೈಗೊಳ್ಳುವಂತೆ ಅವರು ಆದೇಶದಲ್ಲಿ ತಿಳಿಸಿದ್ದಾರೆ.
ಪೂರ್ವಭಾವಿ ಸಭೆ ಇಂದು
ದೊಡ್ಡಬಳ್ಳಾಪುರ: ಆ.19ರಂದು ನಡೆಯಲಿರುವ ತಾಲೂಕು 8ನೇ ಕನ್ನಡ ಸಾಹಿತ್ಯ ಸಮ್ಮೇಳನ ಕುರಿತು ಪೂರ್ವಭಾವಿಯಾಗಿ ಚರ್ಚಿಸಲು ಶಾಸಕ ಟಿ.ವೆಂಕಟರಮಣಯ್ಯ ನೇತೃತ್ವದಲ್ಲಿ ಸಮ್ಮೇಳನ ಪೂರ್ವಭಾವಿ ಸಭೆ ಜು. 23ರ ಮಂಗಳವಾರ ಮಧ್ಯಾಹ್ನ 2.30ಕ್ಕೆ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಕರೆಯಲಾಗಿದೆ. ಸಭೆಯಲ್ಲಿ ತಾಲೂಕಿನ ವಿವಿಧ ಸಂಘಟನೆಗಳ ಮುಖಂಡರು, ಕನ್ನಡಪರ ಹೋರಾಟಗಾರರು, ಸಾಹಿತಿಗಳು, ಅಧಿಕಾರಿಗಳು, ಜನಪ್ರತಿನಿಧಿಗಳು, ಸಾಹಿತ್ಯಾಸಕ್ತರು ಭಾಗವಹಿಸುವಂತೆ ತಾಲೂಕು ಕಸಾಪ ಪ್ರಕಟಣೆ ತಿಳಿಸಿದೆ.
25ರಂದು ಕ್ರೀಡಾಕೂಟ
ಮಾಗಡಿ: ಜಿಲ್ಲಾ ಪದವಿಪೂರ್ವ ಶಿಕ್ಷಣ ಇಲಾಖೆ ವತಿಯಿಂದ ತಾಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟದ ಉದ್ಘಾಟನಾ ಸಮಾರಂಭ ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜು ಮತ್ತು ಬಿಜೆಎಸ್ ಕಾಲೇಜು ಮೈದಾನದಲ್ಲಿ ಜು. 25ರಂದು ಗುರುವಾರ ಬೆಳಗ್ಗೆ 10 ಗಂಟೆಗೆ ಏರ್ಪಡಿಸಲಾಗಿದೆ ಎಂದು ಬಿಜಿಎಸ್ ಕಾಲೇಜು ಪ್ರಾಂಶುಪಾಲ ಕೆ. ಉಮೇಶ್ ತಿಳಿಸಿದ್ದಾರೆ. ಆದಿಚುಂಚನಗಿರಿಯ ನಿರ್ಮಲಾನಂದನಾಥ ಮಾಹಾಸ್ವಾಮಿಗಳ ಆಶೀರ್ವಾದದೊಂದಿಗೆ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ಆದಿಚುಂಚನಗಿರಿ ಮಹಾ ಸಂಸ್ಥಾನ ಬೆಂಗಳೂರಿನ ವಿಜಯನಗರ ಮಠದ ಸೌಮ್ಯನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಶಾಸಕ ಎಚ್.ಸಿ. ಬಾಲಕೃಷ್ಣ ಅಧ್ಯಕ್ಷತೆ ವಹಿಸಲಿದ್ದು, ಸಮಾಜ ಸೇವಕ ಜೋಡಗಟ್ಟೆ ಕೆ. ಬಾಗೇಗೌಡ ಉದ್ಘಾಟಿಸಲಿದ್ದಾರೆ. ಜಿಲ್ಲಾ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಚ್.ಡಿ. ಲಿಂಗರಾಜು ಧ್ವಜಾರೋಹಣ ನೆರವೇರಿಸಲಿದ್ದಾರೆ. ಕೆಪಿಸಿಸಿ ಸದಸ್ಯ ಎ.ಮಂಜು ಕ್ರೀಡಾ ಜೋತಿ ಸ್ವೀಕಾರ ಮಾಡಲಿದ್ದು, ಶ್ರೀರಂಗ ಸೇವಾ ಟ್ರಸ್ಟ್ ಅಧ್ಯಕ್ಷ ಟಿ.ಎಸ್. ಸತೀಶ್ ಪಥಸಂಚಲನ ಗೌರವ ಸ್ವೀಕಾರ ಮಾಡಲಿದ್ದಾರೆ. ಶ್ರೀರಂಗನಾಥಸ್ವಾಮಿ ದೇವಾಲಯದ ಅರ್ಚಕ ಕೃಷ್ಣ ಅಯ್ಯಂಗಾರ್ ವಿಜೇತರಿಗೆ ಬಹುಮಾನ ವಿತರಣೆ ಮಾಡಲಿದ್ದಾರೆ ಎಂದು ಕ್ರೀಡಾ ಕಾರ್ಯದರ್ಶಿ ಎಸ್. ಸೋಮಶೇಖರ್ ತಿಳಿಸಿದ್ದಾರೆ.
ರಿಪೇರಿ ತರಬೇತಿ
ಸೂಲಿಬೆಲೆ: ಇಲ್ಲಿಗೆ ಸಮೀಪದ ಸೊಣ್ಣಳ್ಳಿಪುರ ಗ್ರಾಮದಲ್ಲಿರುವ ಕೆನರಾ ಬ್ಯಾಂಕ್ ಟ್ರೈನಿಂಗ್ ಇನ್ಸ್ಟಿಟ್ಯೂಟ್ ಫಾರ್ ಮೈಕ್ರೋ ಪೈನಾನ್ಸ್ ವತಿಯಿಂದ 30 ದಿನ ಮೊಬೈಲ್ ರಿಪೇರಿ ಉಚಿತ ತರಬೇತಿಗೆ ನಿರುದ್ಯೋಗಿ ಯುವಕರಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತಿಯುಳ್ಳ ಅಭ್ಯರ್ಥಿಗಳು ಜು. 26ರಂದು ಬೆಳಗ್ಗೆ 11 ಗಂಟೆಗೆ ಕೆನರಾ ಬ್ಯಾಂಕ್ ಟ್ರೈನಿಂಗ್ ಇನ್ಸ್ಟಿಟ್ಯೂಟ್, ಸೊಣ್ಣಳ್ಳಿಪುರ ಇಲ್ಲಿ ನಡೆಯಲಿರುವ ನೇರ ಸಂದರ್ಶನಕ್ಕೆ ವಿದ್ಯಾರ್ಹತೆ ಮತ್ತು ವಿಳಾಸ ದಾಖಲಾತಿಗಳೊಂದಿಗೆ ಹಾಜರಾಗಬಹುದು. ಹೆಚ್ಚಿನ ಮಾಹಿತಿಗೆ ಮೊ. 9900047146 ಸಂಪರ್ಕಿಸಲು ಕೋರಿದೆ.
ಕೆರೆ ಅಭಿವೃದ್ಧಿಗೆ ಶಾಸಕರಿಂದ ಚಾಲನೆ
ಚಾಮರಾಜನಗರ: ತಾಲೂಕಿನ ಹೊಂಡರಬಾಳು ಕೆರೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಸಿ. ಪುಟ್ಟರಂಗಶೆಟ್ಟಿ ಗುದ್ದಲಿಪೂಜೆ ನೆರವೇರಿಸಿದರು.ನಂತರ ಮಾತನಾಡಿ, 13ನೇ ಹಣಕಾಸು ಯೋಜನೆಯಡಿಯಲ್ಲಿ ಕೆರೆ ಅಭಿವೃದ್ಧಿಗಾಗಿ 45 ಲಕ್ಷ ವೆಚ್ಚದ ಕಾಮಗಾರಿಗೆ ಚಾಲನೆ ದೊರೆತಿದ್ದು, ಕೆರೆ ಏರಿ, ತೂಗು, ಗೇಟುಗಳ ರಿಪೇರಿ, ಕಾಲುವೆ, ಪೋಡಿ, ಹಾಗೂ ಹೂಳನ್ನು ತೆಗೆಸುವ ಕಾರ್ಯಕ್ರಮಗಳು ನಡೆಯಲಿದೆ. ಗ್ರಾಮಗಳಲ್ಲಿ ಕೆರೆ ಕಟ್ಟೆಗಳು ತುಂಬಿದರೆ ಸಾಕಷ್ಟು ಅನುಕೂಲವಾಗುವುದರೊಂದಿಗೆ ಅಂತರ್ಜಲ ಮಟ್ಟವೂ ಹೆಚ್ಚುತ್ತದೆ ಎಂದರು. ತಾಪಂ ಮಾಜಿ ಅಧ್ಯಕ್ಷ ಬಸವಣ್ಣ, ಗ್ರಾಪಂ ಸದಸ್ಯ ಶ್ರೀಕಂಠ, ವೀರಭದ್ರಸ್ವಾಮಿ, ನಾಗಯ್ಯ, ರಂಗಸ್ವಾಮಿ, ಪಟೇಲ್ಕುಮಾರ್, ಕಮಲೇಶ್, ಪರಮೇಶ್ ಇದ್ದರು.
ಪರಿಸರ ಕಾಳಜಿ ಬೆಳೆಸಿಕೊಳ್ಳಿ
ಕೊಳ್ಳೇಗಾಲ: ಪ್ರತಿಯೊಬ್ಬರೂ ಪರಿಸರ ಕಾಳಜಿ ಬೆಳೆಸಿಕೊಂಡು ಗಿಡಮರ ಸಂರಕ್ಷಿಸಲು ಮುಂದಾಗಬೇಕು ಎಂದು ಜಿಪಂ ಸದಸ್ಯೆ ಯಶೋಧ ಪ್ರಭುಸ್ವಾಮಿ ಕರೆ ನೀಡಿದರು. ತಾಲೂಕಿನ ಮುಳ್ಳೂರು ಪ್ರೌಢಶಾಲೆಯಲ್ಲಿ ವಿಜ್ಞಾನ ಪರಿಷತ್ ಆಶ್ರಯದಲ್ಲಿ ನಡೆದ ಜೀವವೈವಿಧ್ಯ ಸಂರಕ್ಷಣೆ ಬಗ್ಗೆ ವಿದ್ಯಾರ್ಥಿಗಳಿಗೆ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಮೈಸೂರಿನ ಮ್ಯಾನ್ ಸಂಸ್ಥೆಯ ಪರಿಸರವಾದಿ ಮನು ಮಾತನಾಡಿ, ಅಮೂಲ್ಯ ಜೀವಸಂಕುಲ, ಸಸ್ಯ ಸಂಕುಲವನ್ನು ಕಡೆಗಣಿಸಿದ್ದರಿಂದ ಇಂದು ಪರಿಣಾಮ ಎದುರಿಸಬೇಕಾಗಿದೆ ಎಂದರು. ಗ್ರಾಪಂ ಅಧ್ಯಕ್ಷೆ ನಂಜುಂಡಸ್ವಾಮಿ ಮಾತನಾಡಿದರು.ವಿಜ್ಞಾನ ವರಿಷತ್ ಕಾರ್ಯದರ್ಶಿ ಶಿವಶಂಕರ್, ಮುಳ್ಳೂರು ನಾಡಗೌಡ ಪ್ರಭುಸ್ವಾಮಿ, ಉಪನ್ಯಾಸಕ ಕಾಂತರಾಜು, ರೈತ ಮುಖಂಡ ಷಣ್ಮುಖಪ್ಪ, ಶಿಕ್ಷಕ ಲಿಂಗರಾಜು, ಪುರುಷೋತ್ತಮ ಇದ್ದರು.
ಇ ಹ್ಯಾಕಿಂಗ್
ಮೈಸೂರು: ರೋಟರಿ ಮೈಸೂರು ಮಿಡ್ಟೌನ್ ಜು.27ರ ಬೆಳಗ್ಗೆ 9ಕ್ಕೆ ಗಂಗೋತ್ರಿಯ ರಾಣಿಬಹದ್ದೂರ್ ಸಭಾಂಗಣದಲ್ಲಿ ವೆಬಿನಾರ್ ಇ ಹ್ಯಾಕಿಂಗ್ ಕುರಿತು ಕಾರ್ಯಾಗಾರ ಏರ್ಪಡಿಸಿದೆ. ಆಸಕ್ತರು ಜು.24 ರೊಳಗೆ ಹೆಸರು ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ 9845514833 ಸಂಪರ್ಕಿಸಬಹುದು.
ಕಣ್ಣಿನ ತಪಾಸಣೆ
ಮೈಸೂರು: ಜೆಎಸ್ಎಸ್ ಹಿರಿಯ ನಾಗರಿಕರ ಸಹಾಯವಾಣಿಯು ಜು.24ರ ಬೆಳಗ್ಗೆ 9 ರಿಂದ ಮಧ್ಯಾಹ್ನ 1ರವರೆಗೆ ಹಿರಿಯ ನಾಗರಿಕರಿಗೆ ಉಚಿತ ಕಣ್ಣಿನ ಪೊರೆ ತಪಾಸಣೆ ಮತ್ತು ಚಿಕಿತ್ಸಾ ಶಿಬಿರವನ್ನು ಆಯೋಜಿಸಿದೆ. ಹೆಚ್ಚಿನ ವಿವರಕ್ಕೆ ದೂ.0821- 2448138 ಸಂಪರ್ಕಿಸಬಹುದು.
ಮಕ್ಕಳ ಕಾರ್ಯಕ್ರಮ
ಮೈಸೂರು: ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ವತಿಯಿಂದ ಟೊಯೊಟಾ ಸುರಕ್ಷಾ ಶಿಕ್ಷಣ ಕಾರ್ಯಕ್ರಮವನ್ನು (ಟಿಎಸ್ಇಪಿ) ನಗರದ ಎಕ್ಸೆಲ್ ಪಬ್ಲಿಕ್ ಸ್ಕೂಲ್ನಲ್ಲಿ ಆರಂಭಿಸಲಾಯಿತು. ಈ ಕಾರ್ಯಕ್ರಮವನ್ನು ರಸ್ತೆ ಸುರಕ್ಷತೆ ಹಾಗೂ 10 ರಿಂದ 15 ವರ್ಷದೊಳಗಿನ ವಿದ್ಯಾರ್ಥಿಗಳಿಗಾಗಿ ವಿನ್ಯಾಸಗೊಳಿಸಲಾಗಿದೆ. ಡಾ.ರಾಮೇಗೌಡ ಚಾಲನೆ ನೀಡಿದರು. ಪೊಲೀಸ್ ಆಯುಕ್ತ ಡಾ.ಸಲೀಂ, ಶಾಲಾ ಮುಖ್ಯಸ್ಥ ಮ್ಯಾಥ್ಯೂ ಇದ್ದರು.
ಅಧಿಕಾರ ಸ್ವೀಕಾರ
ಮೈಸೂರು: ರೌಂಡ್ ಟೇಬಲ್ ಇಂಡಿಯಾ (ಆರ್ಟಿಐ) ಸಂಸ್ಥೆಗೆ 2013-14ನೇ ಸಾಲಿಗೆ ಆಯ್ಕೆಯಾದ ಪದಾಧಿಕಾರಿಗಳು ಇತ್ತೀಚೆಗೆ ಅಧಿಕಾರ ಸ್ವೀಕರಿಸಿದರು. ನೂತನ ಅಧ್ಯಕ್ಷ ಹರೀಶ್ ಶೆಣೈ ಅವರಿಗೆ ನಿರ್ಗಮಿತ ಅಧ್ಯಕ್ಷ ವಿನೀತ್ ಪ್ರಕಾಶ್ ಅಧಿಕಾರ ಹಸ್ತಾಂತರಿಸಿದರು. ಹರೀಶ್ ಶೆಣೈ ಮಾತನಾಡಿ, ಆರ್ಟಿಐ ನೀಡುತ್ತಿರುವ ಸೇವೆಯನ್ನು ಮತ್ತಷ್ಟು ವಿಸ್ತರಿಸುವುದೇ ನನ್ನ ಗುರಿಯಾಗಿದೆ ಎಂದರು. ಉತ್ತರಾಖಂಡ್ ನೆರೆ ಸಂತ್ರಸ್ತರಿಗೆ 40 ಲಕ್ಷ ದೇಣಿಗೆ ನೀಡಲಾಯಿತು.
ಅಂತಿಮ ಆಯ್ಕೆ ಪಟ್ಟಿ ಪ್ರಕಟ
ರಾಮನಗರ: 2013- 14ನೇ ಸಾಲಿನ ಡಿಇಡಿ ಪ್ರಥಮ ವರ್ಷದ ಕೋರ್ಸಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳ ಅಂತಿಮ ಆಯ್ಕೆ ಪಟ್ಟಿ ಪ್ರಕಟಗೊಂಡಿದೆ. ರಾಮನಗರದ ಡಯಟ್ಗೆ ಆಯ್ಕೆಯಾಗಿರುವ ಅಭ್ಯರ್ಥಿಗಳು ಜು. 25ರೊಳಗೆ ಮೂಲ ದಾಖಲೆಗಳೊಂದಿಗೆ ಹಾಜರಾಗಿ ದಾಖಲಾತಿ ಪಡೆದುಕೊಳ್ಳುವುದು.ಈ ಬಾರಿ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸದೇ ಇರುವ ಅಭ್ಯರ್ಥಿಗಳು ಸಹ ಪ್ರಥಮ ಡಿಇಡಿ ಕೋರ್ಸ್ಗೆ ಅಗತ್ಯ ವಿದ್ಯಾರ್ಹತೆ ಹೊಂದಿದ್ದಲ್ಲಿ ಜು. 25ರೊಳಗೆ ದಾಖಲಾತಿ ಪಡೆದುಕೊಳ್ಳಬಹುದೆಂದು ಡಯಟ್ನ ಉಪ ನಿರ್ದೇಶಕರು(ಅಭಿವೃದ್ಧಿ) ತಿಳಿಸಿದ್ದಾರೆ.
ಯಂತ್ರೋಪಕರಣ ದಾಸ್ತಾನು
ರಾಮನಗರ: ಮಾಗಡಿ ತಾಲೂಕಿನಲ್ಲಿ ಕೃಷಿ ಯಂತ್ರೋಪಕರಣಗಳನ್ನು ಶೇ. 50ರ ಸಹಾಯಧನದಲ್ಲಿ ರೈತರಿಗೆ ವಿತರಿಸಲು ದಾಸ್ತಾನು ಮಾಡಲಾಗಿದೆ. ಟ್ರ್ಯಾಕ್ಟರ್ ಚಾಲಿತ ಕಲ್ಟಿವೇಟರ್(5 ತಾಳಿನದು)-18, ಟ್ರ್ಯಾಕ್ಟರ್ ಚಾಲಿತ ಕಲ್ಟಿವೇಟರ್(9 ತಾಳಿನದು)-15, ಬ್ರಷ್ ಕಟ್ಟರ್-7, ಡೀಸೆಲ್ ಪಂಪ್ಸೆಟ್(3 ಎಚ್ಪಿ)-1 ಸಂಖ್ಯೆಯಲ್ಲಿ ಲಭ್ಯವಿದ್ದು, ಸದರಿ ಉಪಕರಣಗಳ ಅವಶ್ಯಕತೆ ಇರುವ ರೈತರು ಮಾಗಡಿಯ ಸಹಾಯಕ ಕೃಷಿ ನಿರ್ದೇಶಕರನ್ನು ಸಂಪರ್ಕಿಸುವಂತೆ ಜಿಲ್ಲಾ ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.