ಇಂದು ಚಾಮುಂಡೇಶ್ವರಿ ಅಮ್ಮನ ಕರಗ ಮಹೋತ್ಸವ
ಕ.ಪ್ರ. ವಾರ್ತೆ ರಾಮನಗರ ಜು.22
ನಗರದ ಶಕ್ತಿ ದೇವತೆ ಚಾಮುಂಡೇಶ್ವರಿ ಅಮ್ಮನವರ ಕರಗ ಮಹೋತ್ಸವ ಜು. 23ರಂದು ನಡೆಯಲಿದೆ. ನಗರವು ತಳಿರು, ತೋರಣ, ಸ್ವಾಗತ ಕೋರುವ ಕಮಾನುಗಳಿಂದ ಕಂಗೊಳಿಸುವ ಜತೆಗೆ ವಿದ್ಯುತ್ ದೀಪಾಲಂಕಾರದಿಂದ ಜಗಮಗಿಸುತ್ತಿದೆ.
ರಾಮನಗರದ ಮಟ್ಟಿಗೆ ಈ ಕರಗ ಮಹೋತ್ಸವವು ಮೈಸೂರು ದಸರೆಯಷ್ಟೇ ಮಹತ್ವ ಪಡೆದುಕೊಂಡಿದೆ. ಮಂಗಳವಾರ(ಜು.23) ರಾತ್ರಿ ಕರಗ ಉತ್ಸವ ಹೊರಡಲಿದ್ದು, ಬುಧವಾರ(ಜು.24) ಬೆಳಗ್ಗೆ ಕೊಂಡೋತ್ಸವ ನೆರವೇರಲಿದೆ.
ಕರಗ ಮಹೋತ್ಸವದ ಪ್ರಯುಕ್ತ ಎಲ್ಲೆಡೆ ರಾಜಕೀಯ ಮುಖಂಡರು ಮತ್ತು ಕರಗ ಸಮಿಯ ಪದಾಧಿಕಾರಿಗಳನ್ನು ಒಳಗೊಂಡ ಫ್ಲೆಕ್ಸ್ಗಳು ರಾರಾಜಿಸುತ್ತಿವೆ. ಆರೇಳು ವರ್ಷದಿಂದ ಪಕ್ಷಾತೀತವಾಗಿ ನಡೆಯುತ್ತಿದ್ದ ಉತ್ಸವಕ್ಕೆ ಈಚೆಗೆ ರಾಜಕೀಯ ಲೇಪನವಾಗಿದೆ. ಅಂತೆಯೇ ವಿಜೃಂಭಣೆಯೂ ಹೆಚ್ಚಿದೆ.
ಮನರಂಜನಾ ಕಾರ್ಯಕ್ರಮಕ್ಕಾಗಿ ಸುಮಾರು 480 ಚದರ ಅಡಿ ವಿಸ್ತಾರದಲ್ಲಿ ಟೈಟಾನಿಕ್ ಹಡಗು ಹೋಲುವ ಬೃಹತ್ ವೇದಿಕೆ ಸಿದ್ಧವಾಗಿದೆ. ಗಾಯಕ ರಾಜ್ ಸಾರಥ್ಯದಲ್ಲಿ ಹೇಮಂತ್, ಡಾ.ಶಮಿತಾ ಮಲ್ನಾಡ್, ಸುಪ್ರಿಯಾ ತಂಡದಿಂದ ಸಂಗೀತ ರಸಸಂಜೆ ನಡೆಯಲಿದೆ.
ಖ್ಯಾತ ನೃತ್ಯ ಕಲಾವಿದೆ ಬೇಬಿ ವರ್ಷಿಣಿ, ಚೇತನ್, ಎಸ್.ಕೆ. ಗ್ರೂಪ್ ಕಲಾವಿದರು, ಜೂನಿಯರ್ ಮೈಕೆಲ್ ಜಾಕ್ಸನ್ ಎಂದೇ ಪ್ರಸಿದ್ಧಿಯಾಗಿರುವ ಚೆನ್ನೈನ ಡೇವಿಡ್ ನೃತ್ಯ ಪ್ರದರ್ಶನ ಈ ಬಾರಿ ಗಮನ ಸೆಳೆಯಲಿದೆ. ಬಿಗ್ ಬಾಸ್ ಖ್ಯಾತಿಯ ಅನುಶ್ರೀ ನಿರೂಪಿಸಲಿದ್ದಾರೆ.
ವೇದಿಕೆ ಕಾರ್ಯಕ್ರಮ: ವಿಧಾನಸಭೆಯ ಪ್ರತಿಪಕ್ಷದ ನಾಯಕ ಹಾಗೂ ಮಾಜಿ ಮುಖ್ಯ ಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿ, ಮಾಜಿ ಸಚಿವ ಪಿಜಿಆರ್ ಸಿಂಧ್ಯಾ, ಶಾಸಕರಾದ ಎಚ್.ಸಿ. ಬಾಲಕೃಷ್ಣ, ಜಮೀರ್ ಅಹಮದ್, ವಿಧಾನ ಪರಿಷತ್ ಸದಸ್ಯರಾದ ಅಪ್ಸರ್ ಆಗಾ, ಇ.ಕೃಷ್ಣಪ್ಪ, ಪುಟ್ಟಣ್ಣ ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.
ಗುರುಪೂರ್ಣಿಮೆ: ವಿಶೇಷ ಪೂಜೆ
ರಾಮನಗರ: ಗುರುಪೂರ್ಣಿಮೆ ಪ್ರಯಕ್ತ ನಗರದಲ್ಲಿರುವ ಶಿರಡಿ ಸಾಯಿ ಬಾಬಾ ಮಂದಿರದಲ್ಲಿ ಸೋಮವಾರ ವಿಶೇಷಾ ಪೂಜಾ ಕಾರ್ಯಕ್ರಮಗಳು ಜರುಗಿದವು.
ಭವ್ಯ ದೇಗುಲ ಮತ್ತು ಸಾಯಿ ಬಾಬಾ ಮೂರ್ತಿಗೆ ವಿವಿಧ ಬಗೆಯ ಪುಷ್ಪಗಳಿಂದ ಅಲಂಕರಿಸಲಾಗಿತ್ತು. ಸಾವಿರಾರು ಭಕ್ತರು ಸರತಿಯಲ್ಲಿ ನಿಂತು ಬಾಬಾ ದರ್ಶನ ಪಡೆದರು. ದೇವಸ್ಥಾನ ಆಡಳಿತ ಮಂಡಳಿಯು ಭಕ್ತರಿಗೆ ಪ್ರಸಾದ ವಿನಿಯೋಗ ಏರ್ಪಡಿಸಿತ್ತು.
ಸಾಯಿಬಾಬಾ ಭಜನಾ ಮಂಡಳಿ ಬಾಬಾ ಕುರಿತ ಭಜನೆ ಮೂಲಕ ನೆರದಿದ್ದ ಭಕ್ತರನ್ನು ಭಾವಪರವಶರಾಗುವಂತೆ ಮಾಡಿತು. ರಾಜಕೀಯ ಮುಖಂಡರು ಸೇರಿದಂತೆ ಸಾಕಷ್ಟು ಗಣ್ಯರು ಈ ವಿಶೇಷ ಪೂಜೆಯಲ್ಲಿ ಭಾಗವಹಿಸಿದ್ದರು.
ನೌಕರರ ಸಂಘದಲ್ಲಿ ಮತದಾನ
ಚನ್ನಪಟ್ಟಣ: ತಾಲೂಕು ಸರ್ಕಾರಿ ನೌಕರರ ಸಂಘದ ನಿರ್ದೇಶಕ ಸ್ಥಾನಕ್ಕೆ ಶಿಕ್ಷಣ ಇಲಾಖೆಯ ಪ್ರತಿನಿಧಿಗಳ ಆಯ್ಕೆಗೆ ಸೋಮವಾರ ಚುನಾವಣೆ ನಡೆಸಲಾಯಿತು.
ತಾಲೂಕಿನ ವಿವಿಧ ಇಲಾಖೆಗಳಿಂದ 35 ಸರ್ಕಾರಿ ನೌಕರರ ಸಂಘದ ಸ್ಥಾನಕ್ಕೆ ಆಯ್ಕೆಯಾಗಬೇಕಿದ್ದು ಇತರ ಇಲಾಖೆಗಳಿಂದ 30 ಮಂದಿ ಅವಿರೋಧ ಆಯ್ಕೆಗೊಂಡಿದ್ದು, ಪ್ರಾಥಮಿಕ ಶಿಕ್ಷಣ ಇಲಾಖೆಯಿಂದ ನಾಲ್ಕು ಮಂದಿ ಪ್ರೌಢ ಶಿಕ್ಷಣ ಇಲಾಖೆಯ ಒಂದು ಸ್ಥಾನಕ್ಕೆ ಒಮ್ಮತ ಮೂಡದ ಹಿನ್ನೆಲೆಯಲ್ಲಿ ಚುನಾವಣೆ ನಡೆಸಲಾಯಿತು.
ಪ್ರಾಥಮಿಕ ಶಿಕ್ಷಣ ಇಲಾಖೆಯಿಂದ 10 ಮಂದಿ, ಪ್ರೌಢ ಶಿಕ್ಷಣ ಇಲಾಖೆಯಿಂದ ಇಬ್ಬರು ಅಭ್ಯರ್ಥಿಗಳು ಕಣದಲ್ಲಿದ್ದು, ತಾಪಂ ಕಚೇರಿಯಂಗಳದ ಸಾಮರ್ಥ್ಯ ಸೌಧದಲ್ಲಿ ಚುನಾವಣೆ ನಡೆಸಲಾಯಿತು.
ಚುನಾವಣಾ ಪ್ರಕ್ರಿಯೆಯಲ್ಲಿ ಶಿಕ್ಷಕರು ಅತ್ಯುತ್ಸಾಹದಿಂದ ಪಾಲ್ಗೊಂಡಿದ್ದರು. ಪ್ರೌಢ ಶಿಕ್ಷಣ ಇಲಾಖೆಯ 245 ಮಂದಿ ನೌಕರರ ಪೈಕಿ 232 ಮತಗಳು ಚಲಾವಣೆಗೊಂಡಿದ್ದು, ಪ್ರಾಥಮಿಕ ಶಿಕ್ಷಣ ಇಲಾಖೆಯ 849 ಮತಗಳ ಪೈಕಿ 812 ಮತಗಳು ಚಲಾವಣೆಗೊಂಡಿವೆ.
ಫಲಿತಾಂಶ ಪ್ರಕಟ: ಪ್ರೌಢ ಶಿಕ್ಷಣ ಇಲಾಖೆಯ ಚುನಾವಣಾ ಫಲಿತಾಂಶ ಹೊರ ಬಿದ್ದಿದ್ದು, ಅರಳಾಳು ಸಂದ್ರ ಪ್ರೌಢಶಾಲೆಯ ಶಿಕ್ಷಕ ಶಿವಸ್ವಾಮಿ ತಮ್ಮ ಎದುರಾಳಿ ಚಿಕ್ಕೇಗೌಡರನ್ನು 26 ಮತಗಳ ಅಂತರದಿಂದ ಪರಾಭವಗೊಳಿಸಿದ್ದಾರೆ.
ಚಲಾವಣೆಗೊಂಡಿದ್ದ 232 ಮತಗಳ ಪೈಕಿ ಶಿವಸ್ವಾಮಿ 228 ಮತ ಪಡೆದರೆ, ಚಿಕ್ಕೇಗೌಡ 102 ಮತಗಳಿಗೆ ತೃಪ್ತರಾದರು. ಎರಡು ಮತಗಳು ತಿರಸ್ಕೃತಗೊಂಡಿವೆ.
ಪ್ರಾಥಮಿಕ ಶಿಕ್ಷಣ ಇಲಾಖೆಯ ಮತಗಳ ಏಣಿಕೆ ಕಾರ್ಯ ಆರಂಭ ಗೊಂಡಿದ್ದು, ಹೆಚ್ಚಿನ ಮತಗಳು ಚಲಾವಣೆಗೊಂಡಿರುವ ಹಿನ್ನೆಲೆಯಲ್ಲಿ ಮತ ಏಣಿಕೆ ಕಾರ್ಯ ತಡರಾತ್ರಿಯವರೆಗೆ ನಡೆಯುವ ಸಾಧ್ಯತೆ ಇದೆ ಎಂದು ಚುನಾವಣಾಧಿಕಾರಿಗಳು ಪತ್ರಿಕೆಗೆ ತಿಳಿಸಿದ್ದಾರೆ.
ಅಭಿನಂಧನೆ: ಸರ್ಕಾರಿ ನೌಕರರ ಸಂಘದ ಚುನಾವಣೆ ಶಾಂತಿಯುತವಾಗಿ ನಡೆಯಲು ಸಹಕರಿಸಿದ ಎಲ್ಲಾ ಸರ್ಕಾರಿ ನೌಕರರಿಗೆ ನೌಕರರ ಸಂಘದ ತಾಲೂಕು ಅಧ್ಯಕ್ಷ ಎಸ್.ಟಿ. ನಾರಾಯಣಗೌಡ ಅಭಿನಂದನೆ ಸಲ್ಲಿಸಿದ್ದಾರೆ.