ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಕೆರೆಯಂಗಳದಲ್ಲಿ ಕಾಡಾನೆ ಪ್ರತ್ಯಕ್ಷ

Srinivasa Murthy VN
Updated On : 23 Jul 2013, 12:19 pm

ಚನ್ನಪಟ್ಟಣ: ಅರಣ್ಯದಂಚಿನ ಗ್ರಾಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಗಜಪಡೆ ಇದೀಗ ತಾಲೂಕಿನ ಮಧ್ಯಭಾಗದಲ್ಲಿ ಕಾಣಿಸಿಕೊಳ್ಳುವ ಮೂಲಕ ಜನತೆಯಲ್ಲಿ ಆತಂಕ ಮೂಡಿಸಿವೆ.
ಸೋಮುವಾರ ಮುಂಜಾನೆ ತಾಲೂಕಿನ ಅಕ್ಕೂರು ಹೊಸಹಳ್ಳಿ ಗ್ರಾಮದ ಕೆರೆಯಂಗಳದಲ್ಲಿ ಎರಡು ಆನೆಗಳು ಬೀಡುಬಿಟ್ಟಿದ್ದು, ಸುತ್ತಮುತ್ತಲ ಗ್ರಾಮಸ್ಥರನ್ನು ಭಯಭೀತಗೊಳಿಸಿವೆ.
ಈ ಆನೆಗಳು ಬಸವನಬೆಟ್ಟ ಅರಣ್ಯ ಪ್ರದೇಶಕ್ಕೆ ಸೇರಿದ್ದು, ಆಹಾರ ಅರಸಿ ನಾಡಿನತ್ತ ಬಂದಿವೆ. ಕಳೆದ ಮೂರು ದಿನಗಳ ಹಿಂದೆ ಶಾನುಭೋಗನಹಳ್ಳಿ ಭಾಗದಲ್ಲಿ ಕಾಣಿಸಿಕೊಂಡಿದ್ದ ಆನೆಗಳು ಕೋಡಂಬಹಳ್ಳಿ ಮೂಲಕ ಅಕ್ಕೂರು ಹೊಸಹಳ್ಳಿ ಕೆರೆಗೆ ಬಂದಿದ್ದು, ಭಾನುವಾರ ರಾತ್ರಿ ಎಸ್.ಎಂ.ದೊಡ್ಡಿ ಗ್ರಾಮದ ಕೆಂಪೇಗೌಡ ಎಂಬುವರ ತೋಟದಲ್ಲಿ ಇದ್ದಿದ್ದಾಗಿ ಗ್ರಾಮಸ್ಥರು ಪತ್ರಿಕೆಗೆ ತಿಳಿಸಿದ್ದಾರೆ.
ರಾತ್ರಿ ಕಾರ್ಯಾಚಚರಣೆ: ಕಾಡಾನೆಗಳನ್ನು ಮತ್ತೆ ಕಾಡಿಗೆ ಕಳುಹಿಸಲು ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ಆರಂಭಿಸಿದ್ದು, ರಾತ್ರಿ ವೇಳೆ ಆನೆಗಳನ್ನು ಸುರಕ್ಷಿತವಾಗಿ ಕಾಡಿಗೆ ಕಳುಹಿಸುವುದಾಗಿ ವಲಯ ಅರಣ್ಯಾಧಿಕಾರಿ ಗಿರೀಶ್ ತಿಳಿಸಿದ್ದಾರೆ.
ಕಾಡಾನೆಗಳಿಂದ ಯಾವುದೇ ಹಾನಿಯಾಗಿರುವ ಬಗ್ಗೆ ಇದುವರೆಗೆ ಮಾಹಿತಿ ಲಭ್ಯವಿಲ್ಲದಿದ್ದು, ಆನೆ ದಾಳಿಯಿಂದಾಗಿ ಬೆಳೆ ನಷ್ಟವಾಗಿದ್ದಲ್ಲಿ ರೈತರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದಲ್ಲಿ ಸೂಕ್ತ ಪರಿಹಾರ ಕಲ್ಪಿಸುವುದಾಗಿ ಅವರು ತಿಳಿಸಿದ್ದಾರೆ.
ಕಿಕ್ಕಿರಿದ ಜನ: ಅಕ್ಕೂರು ಹೊಸಹಳ್ಳಿ ಗ್ರಾಮದಲ್ಲಿ ಆನೆಗಳ ಹಿಂಡು ಕಾಣಿಸಿ ಕೊಂಡಿರುವ ಸುದ್ದಿ ತಿಳಿಯುತ್ತಿದ್ದಂತೆ ಸುತ್ತಮುತ್ತಲ ಗ್ರಾಮದ ಜನತೆ ಕೆರೆಯಂಗಳದತ್ತ ದೌಡಾಯಿಸಿದರು, ಜನ ಹೆಚ್ಚಾದಲ್ಲಿ ಆನೆಗಳು ಕೆರಳಿ ದಾಂದಲೆ ಎಬ್ಬಿಸಬಹುದೆಂಬ ಕಾರಣಕ್ಕೆ ಅರಣ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆ ಸಿಬ್ಬಂದಿ ಸಾರ್ವಜನಿಕರನ್ನು ಅಲ್ಲಿಂದ ಹೊರಗೆ ಕಳುಹಿಸಲು ಹರಸಾಹಸ ನಡೆಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement