ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಮಕ್ಕಳಿಂದ ಶೌಚಾಲಯ ಶುಚಿ ಪ್ರಕರಣ: ತನಿಖೆಗೆ ಆದೇಶ

ನಗರದ ಕೊತ್ತೀಪುರ ಬಡಾವಣೆಯ ಶಾಲಾ ಶೌಚಾಲಯ ಶುಚಿಗೊಳಿಸಲು ಮಕ್ಕಳನ್ನು ಬಳಸಿಕೊಂಡ ಪ್ರಕರಣ ಶಿಕ್ಷಣ ಇಲಾಖೆ ಮತ್ತು ಮಕ್ಕಳ ಕಲ್ಯಾಣ ಸಮಿತಿಯಿಂದ ಪ್ರತ್ಯೇಕ ತನಿಖೆ ಕೈಗೆತ್ತಿಕೊಳ್ಳಲಾಗಿದೆ.

Srinivasa Murthy VN
Updated On : 24 Jul 2013, 12:04 pm

ಕ.ಪ್ರ.ವಾರ್ತೆ, ರಾಮನಗರ, ಜು.23-
ನಗರದ ಕೊತ್ತೀಪುರ ಬಡಾವಣೆಯ ಶಾಲಾ ಶೌಚಾಲಯ ಶುಚಿಗೊಳಿಸಲು ಮಕ್ಕಳನ್ನು ಬಳಸಿಕೊಂಡ ಪ್ರಕರಣ ಶಿಕ್ಷಣ ಇಲಾಖೆ ಮತ್ತು ಮಕ್ಕಳ ಕಲ್ಯಾಣ ಸಮಿತಿಯಿಂದ ಪ್ರತ್ಯೇಕ ತನಿಖೆ ಕೈಗೆತ್ತಿಕೊಳ್ಳಲಾಗಿದೆ.
'ಮಕ್ಕಳಿಂದ ಶೌಚಾಲಯ ಸ್ವಚ್ಛಗೊಳಿಸಿದ ಶಿಕ್ಷಕರು' ಶೀರ್ಷಿಕೆಯಡಿ ಕನ್ನಡಪ್ರಭದ ಜು. 23ರ ಸಂಚಿಕೆಯಲ್ಲಿ ಪ್ರಕಟವಾದ ಸುದ್ದಿಯ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಆಯುಕ್ತರು ಡಿಡಿಪಿಐ ಅವರಿಂದ ವಿವರಣೆ ಕೇಳಿದ್ದಾರೆ.
ಪ್ರಕರಣ ಕುರಿತು ಡಿಡಿಪಿಐ ಪ್ರಹ್ಲಾದಗೌಡ ಅವರು ಬಿಇಒ ಮುನಿಕೆಂಪೇಗೌಡ ಜತೆ ಚರ್ಚಿಸಿದ್ದಾರೆ. ಬಿಇಒ ಅವರನ್ನು ಲೋಕಸಭೆ ಮರು ಚುನಾವಣೆ ಕರ್ತವ್ಯಕ್ಕೆ ನಿಯೋಜಿಸಿರುವ ಹಿನ್ನೆಲೆಯಲ್ಲಿ ಶಿಕ್ಷಣ ಸಂಯೋಜಕಿ ರುಕ್ಮಿಣಮ್ಮಗೆ ತನಿಖೆ ಜವಬ್ದಾರಿ ವಹಿಸಲಾಗಿದೆ.  ಏತನ್ಮಧ್ಯೆ, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಮಕ್ಕಳ ಕಲ್ಯಾಣ ಸಮಿತಿಯು ರಾಜ್ಯ ಮಕ್ಕಳ ಹಕ್ಕುಗಳ ಆಯೋಗಕ್ಕೆ ದೂರು ನೀಡಿದೆ. ಉಭಯ ಸಂಸ್ಥೆಗಳ ತಂಡವು ಜು.24ರಂದು ಶಾಲೆಗೆ ಭೇಟಿ ನೀಡಲಿದೆ.

ಶಾಲೆಗಿಂದು ರಜೆ: ರಾಮನಗರದಲ್ಲಿ ನಡೆಯುತ್ತಿರುವ ಚಾಮುಂಡೇಶ್ವರಿ ಕರಗ ಮಹೋತ್ಸವದ ಪ್ರಯುಕ್ತ ನಗರದಾದ್ಯಂತ ಎಲ್ಲ ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು. ಹೀಗಾಗಿ ತನಿಖೆ ಪ್ರಾರಂಭ ಪ್ರಕ್ರಿಯೆ ಒಂದು ದಿನ ಮುಂದೂಡಲ್ಪಟ್ಟಿದೆ. ಶಿಕ್ಷಣ ಇಲಾಖೆ, ಮಕ್ಕಳ ಕಲ್ಯಾಣ ಸಮಿತಿ ಹಾಗೂ ಮಕ್ಕಳ ಹಕ್ಕುಗಳ ಆಯೋಗದ ತಂಡಗಳು ಬುಧವಾರ ಶಾಲೆಗೆ ತೆರಳಿ ಪ್ರಕರಣ ಸಂಬಂಧ ಮುಖ್ಯ ಶಿಕ್ಷಕಿ, ಶಿಕ್ಷಕರು ಮತ್ತು ಸ್ವಚ್ಛತಾ ಕೆಲಸದಲ್ಲಿ ನಿರತರಾಗಿದ್ದ ಮಕ್ಕಳನ್ನು ವಿಚಾರಣೆಗೆ ಒಳಪಡಿಸಲಿವೆ.

ಪೋಷಕರ ಆಕ್ರೋಶ: ಕನ್ನಡಪ್ರಭದಲ್ಲಿ ಚಿತ್ರ ಸಹಿತ ವರದಿ ಪ್ರಕಟವಾದ ಬೆನ್ನಲ್ಲೇ ಕೊತ್ತೀಪುರ ಶಾಲಾ ಮಕ್ಕಳ ಪೋಷಕರು ಆಕ್ರೋಶಗೊಂಡಿದ್ದಾರೆ. ಈ ಕುರಿತು ಪ್ರತಿಭಟನೆ ಹಾದಿ ಹಿಡಿಯುವ ನಿರ್ಧಾರ ತೆಗೆದುಕೊಂಡಿದ್ದಾರೆ. ಶೌಚಾಲಯ ಸ್ವಚ್ಛತಾ, ಅಲ್ಲಿನ ಮೂಲ ಸೌಲಭ್ಯಗಳಿಗೆ ಸರ್ಕಾರದಿಂದ ಬಂದ ಅನುದಾನ ದುರ್ಬಳಕೆ ಮಾಡಿಕೊಂಡ ಶಿಕ್ಷಕರು, ಮಕ್ಕಳನ್ನೇ ಶೌಚಾಲಯ ಸ್ವಚ್ಛತೆಗೆ ಇಳಿಸಿದ ಬಗ್ಗೆ ಸಮಗ್ರ ತನಿಖೆ ಆಗಬೇಕು. ಸಂಬಂಧಿಸಿದವರನ್ನು ಅಮಾನತುಪಡಿಸಬೇಕು ಎನ್ನುವ ಕೂಗು ಎದ್ದಿದೆ.

ಮಕ್ಕಳಿಂದ ಶೌಚಾಲಯ ಸ್ವಚ್ಛಗೊಳಿಸಿರುವ ಪ್ರಕರಣ ಕುರಿತು ಇಲಾಖೆ ಸೂಚನೆ ಮೇರೆಗೆ ಬಿಇಒ ಮಟ್ಟದಲ್ಲಿ ತನಿಖೆಗೆ ಆದೇಶಿಸಲಾಗಿದೆ. ತಪ್ಪಿತಸ್ಥರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು.
- ಪ್ರಹ್ಲಾದಗೌಡ, ಡಿಡಿಪಿಐ

ಅನುದಾನ ತಿಂದು ತೇಗಿ, ಮಕ್ಕಳನ್ನು ಶೌಚಾಲಯ ಸ್ವಚ್ಛತಾ ಕೆಲಸಕ್ಕೆ ಬಳಸಿಕೊಂಡಿರುವ ಶಿಕ್ಷಕರನ್ನು ಅಮಾನತುಪಡಿಸುವಂತೆ ಒತ್ತಾಯಿಸಿ ಹೋರಾಟ ನಡೆಸಲಾಗುವುದು.
- ಪಿ.ರವಿಕುಮಾರ್, ಕೊತ್ತೀಪುರ ವಾರ್ಡ್‌ನ ನಗರಸಭೆ ಸದಸ್ಯ

- ಮತ್ತೀಕೆರೆ ಜಯರಾಮ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement